ಮಂಗಳೂರು,ಎ.17 : ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಜೆ.ಆರ್. ಲೋಬೊ ರವರು ಶುಕ್ರವಾರ ತೋಟಗಾರಿಕಾ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳೊಂದಿಗೆ ಕದ್ರಿ ಪಾರ್ಕ್ ಉದ್ಯಾನವನಕ್ಕೆ ಭೇಟಿ ನೀಡಿ ಮುಂಬರುವ ಯೋಜನೆಗಳ ಬಗ್ಗೆ ಮಾತುಕತೆ ನಡೆಸಿದರು.
ಪುಟಾಣಿ ರೈಲು :
ಮಂಗಳೂರಿನ ಕದ್ರಿ ಪಾರ್ಕಿನಲ್ಲಿರುವ ಪುಟಾಣಿ ರೈಲು ಈ ಹಿಂದೆ ಉಪಯೋಗದಲ್ಲಿದ್ದು, ಅದು ಪೂರ್ತಿಯಾಗಿ ಹಾಳಾಗಿ ತುಕ್ಕು ಹಿಡಿದಿದೆ. ಈಗಾಗಲೇ ದಕ್ಷಿಣ ರೈಲ್ವೆಯವರು ಇದನ್ನು ಪರಿಶೀಲನೆ ನಡೆಸಿ ಇದು ಪೂರ್ಣವಾಗಿ ನಾದುರಸ್ತಿಯಲ್ಲಿದ್ದು ಇನ್ನು ಇದನ್ನು ಉಪಯೋಗಿಸಲು ಸಾಧ್ಯವಿಲ್ಲ ಎಂದು ವರದಿ ನೀಡಿರುತ್ತಾರೆ. ಹೊಸ ಪುಟಾಣಿ ರೈಲನ್ನು ಖರೀದಿಸಲು ರಾಜ್ಯ ಸರಕಾರವು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ರೂ. 37.00 ಲಕ್ಷ ಅನುದಾನವನ್ನು ಬಿಡುಗಡೆಗೊಳಿಸಿದೆ. ಈ ಪುಟಾಣಿ ರೈಲಿಗೆ ಅಂದಾಜು 45 ಲಕ್ಷ ರೂಪಾಯಿ ಬೇಕಾಗಬಹುದು. ಉಳಿದ ಮೊತ್ತವನ್ನು ಸ್ಥಳೀಯವಾಗಿ ಪ್ರಾಯೋಜಕತ್ವದ ಮೂಲಕ ಪಡೆಯಲು ಪ್ರಯತ್ನಿಸಲಾಗುವುದು ಎಂದು ಶಾಸಕರು ತಿಳಿಸಿದರು.
ಮುಖ್ಯ ದ್ವಾರ :
ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ಸುಮಾರು ರೂ.30.00ಲಕ್ಷ ವೆಚ್ಚದಲ್ಲಿ ವಿನೂತನ ಶೈಲಿಯಲ್ಲಿ ಮುಖ್ಯದ್ವಾರವನ್ನು ನಿರ್ಮಿಸಲಾಗುವುದು. ಈ ಕಾಮಗಾರಿ ಶೀಘ್ರದಲ್ಲೇ ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದರು ಹಾಗೂ ಭಿನ್ನ ಚೇತನ ಮಕ್ಕಳಿಗೆ ಆಟವಾಡಲು ವಿಶೇಷ ಪಾರ್ಕ್ ನಿರ್ಮಾಣದ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಶಾಸಕರು ದಾನಿಗಳ ಸಹಾಯ ಹಸ್ತದಿಂದ ಶೀಘ್ರದಲ್ಲೇ ಈ ಪಾರ್ಕ್‌ನ್ನು ನಿರ್ಮಿಸಲಾಗುವುದು ಹಾಗೂ ಸರ್ಕಿಟ್ ಹೌಸ್ ನಿಂದ ಕದ್ರಿ ಪಾರ್ಕಿನ ವರೆಗಿನ ರಸ್ತೆಯನ್ನು ಅಭಿವೃದ್ಧಿಗೊಳಿಸಲು ಮಂಗಳೂರು ಮಹಾನಗರ ಪಾಲಿಕೆಯಿಂದ ಅನುದಾನವನ್ನು ಕೋರಲಾಗಿದೆ. ಕದ್ರಿ ಪಾರ್ಕನ್ನು ಪಿಲಿಕುಳ ನಿಸರ್ಗ ಧಾಮ ಮಾದರಿಯಲ್ಲಿ ಅಭಿವೃದ್ಧಿಗೊಳಿಸಲಾಗುವುದು ಹಾಗೂ ಇಲ್ಲಿಗೆ ಬರುವ ಪ್ರವಾಸಿಗರಿಗೆ ಸೂಕ್ತವಾದ ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದು ಶಾಸಕರು ಮಾಧ್ಯಮದೊಂದಿಗೆ ಹೇಳಿದರು.
ಕದ್ರಿ ಪಾರ್ಕನ್ನು ಪರಿಶೀಲಿಸದ ಶಾಸಕರು ತೋಟಗಾರಿಕಾ ಇಲಾಖಾ ಅಧಿಕಾರಿಗಳಿಗೆ ಪಾರ್ಕಿನ ಸ್ವಚ್ಫತೆ ಹಾಗೂ ಹಸಿರೀಕರಣಗೊಳಿಸಲು ಪ್ರಾಮುಖ್ಯತೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಹಳೆ ಜಿಂಕೆ ಪಾರ್ಕಿನ ನೂತನವಾಗಿ ನಿರ್ಮಿಸುವ ಸಂಗೀತ ಕಾರಂಜಿಯ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಶಾಸಕರು 7 ತಿಂಗಳೊಳಗೆ ಸಂಗೀತ ಕಾರಂಜಿಯನ್ನು ರೂ.5.00 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುವುದು ಎಂದರು.