ಮಂಗಳೂರು, ಎ.17: ಇದೇ ಮೊದಲ ಬಾರಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಂಗಾಂಗ ದಾನದ ಮಹತ್ವದ ಕಾರ್ಯವೊಂದು ನಡೆದಿದೆ. ಜೀವನ್ ವಿಜಯ್ ಫೆರ್ನಾಂಡಿಸ್ ಅಂಗಾಂಗ ದಾನದ ಮಹತ್ವವನ್ನು ಸಮಾಜಕ್ಕೆ ಸಾರುವ ಮೂಲಕ ಸಮಾಜದಲ್ಲಿ ಸ್ಮರಣೀಯವಾಗಿದ್ದಾರೆ ಎಂದು ಎ.ಜೆ. ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಪ್ರಶಾಂತ್ ಮಾರ್ಲ ಹೇಳಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೀವನ್ ಬ್ರೈನ್ ಡೆಡ್ ಆಗಿ ಸಾವಿನಂಚಿಗೆ ತಲುಪಿದ್ದರು. ಈ ಸಂದರ್ಭ ಆತನ ಮನೆಯವರು ಅಂಗಾಂಗ ದಾನಕ್ಕೆ ಮುಂದಾಗಿದ್ದರು. ಇದು ಜೀವನ್ ಅವರ ಇಚ್ಛೆಯೂ ಆಗಿತ್ತು ಎಂದು ಆತನ ಮನೆಯವರೇ ಹೇಳಿದ್ದಾರೆ ಎಂದರು.
ಬೆಂಗಳೂರಿನಲ್ಲಿ ರೋಗಿಯೊಬ್ಬರಿಗೆ ಲಿವರ್‌ನ ಅಗತ್ಯವನ್ನು ಮನಗಂಡು ತಕ್ಷಣ ಜೀವನ್ ಅವರ ಲಿವರ್‌ನ್ನು ಶಸ್ತ್ರಚಿಕಿತ್ಸೆ ನಡೆಸಿ ರವಾನಿಸಲಾಯಿತು. ಲಿವರ್ ಜೋಡಣೆಗೊಂಡ ಆ ವ್ಯಕ್ತಿ ಈಗ ಚೇತರಿಸಿಕೊಂಡಿರುವುದು ಗಮನಕ್ಕೆ ಬಂದಿದೆ. ಜೀವನ್ ದೇಹದಿಂದ ಹಾರ್ಟ್‌ವಾಲ್ವ್, ಕಾರ್ನಿಯಾವನ್ನು ತೆಗೆಯಲಾಗಿದೆ ಎಂದವರು ವಿವರಿಸಿದರು.
ದೇಶದಲ್ಲಿ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವರ ಸಂಖ್ಯೆ ಹೆಚ್ಚು ಇದ್ದು ಅಂಗಾಗ ದಾನದ ಮಹತ್ವದ ಕುರಿತು ಜಾಗೃತಿ ಮೂಡಿಸುವ ಕೆಲಸವಾಗಬೇಕು. ಒಂದು ಮಿಲಿಯ ಜನ ಸಂಖ್ಯೆಯಲ್ಲಿ ಪ್ರತಿವರ್ಷ 160ರಷ್ಟು ಮಂದಿ ಕಿಡ್ನಿ ವೈಲ್ಯದಿಂದ ಸಾವನ್ನಪ್ಪುತ್ತಿದ್ದಾರೆ ಎಂದರು.
ಜೀವನ್ ಅಂಗಾಗ ದಾನಕ್ಕೆ ನೆರವಾದ ಆತನ ಕುಟುಂಬದವರಿಗೆ ಉತ್ತಮ ರೀತಿಯಲ್ಲಿ ಸಹಕರಿಸಿದ ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತಕ್ಕೆ ಡಾ. ಮಾರ್ಲ ಕೃತಜ್ಞತೆ ಸಲ್ಲಿಸಿದರು. ಪತ್ರಿಕಾಗೋಷ್ಠಿಯಲ್ಲಿ ಎ.ಜೆ. ಆಸ್ಪತ್ರೆಯ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಶಿವಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.