ಕನ್ನಡ ವಾರ್ತೆಗಳು

ಸಂಯೋಜಿತ ಚಿಕಿತ್ಸಾ ಪದ್ಧತಿಗೆ ವಿಶಾಲ ಅವಕಾಶವಿದೆ: ಪದ್ಮಭೂಷಣ ಡಾ| ವಿ.ಎಲ್.ಚೋಪ್ರಾ

Pinterest LinkedIn Tumblr

National_Coluium_Day_1

ಮಂಗಳೂರು/ ಕಾಸರಗೋಡು,ಎ.16: “ಆಧುನಿಕ ಜಗತ್ತಿನಲ್ಲಿ ಅಪಾರವಾಗಿ ಬಳಕೆಯಾಗುತ್ತಿರುವ ಅಲೋಪತಿಯ ಜೊತೆಗೆ ಭಾರತೀಯ ಚಿಕಿತ್ಸಾ ಪದ್ಧತಿಗಳಾದ ಆಯುರ್ವೇದ, ಸಿದ್ಧ, ಯುನಾನಿ ಮತ್ತು ಹೋಮಿಯೋಪತಿಗಳ ಗುಣಾಂಶಗಳನ್ನು ಸಂಯೋಜಿಸಿ ವಿಶಾಲವಾದ ಅವಕಾಶಗಳನ್ನು ಒಳಗೊಂಡ ಸಂಯೋಜಿತ ಚಿಕಿತ್ಸಾ ಪದ್ಧತಿಗಳನ್ನು ರೂಪಿಸಬೇಕಾದ ಕಾಲ ಸನ್ನಿಹಿತವಾಗಿದೆ. ಡಾ| ಎಸ್.ಆರ್. ನರಹರಿಯವರ ನೇತೃತ್ವದಲ್ಲಿ ಕಾಸರಗೋಡಿನ ಇನ್ಸ್‌ಟಿಟ್ಯೂಟ್ ಓಫ್ ಅಪ್ಲೈಡ್ ಡರ್ಮಟೋಲಜಿಯು ಈಗಾಗಲೇ ಚರ್ಮರೋಗಗಳಿಗೆ ಸಂಬಂಧಿಸಿ ಇಂತಹ ಚಿಕಿತ್ಸಾ ಪದ್ಧತಿಯನ್ನು ಅಳವಡಿಸಿರುವುದು ಈ ನಿಟ್ಟಿನಲ್ಲಿ ಉತ್ತಮ ಬೆಳವಣಿಗೆಯಾಗಿದೆ. ಭಾರತೀಯ ಚಿಕಿತ್ಸಾ ಪದ್ಧತಿಗಳು ಅನಾರೋಗ್ಯವನ್ನು ಗುಣಪಡಿಸುವುದರ ಜೊತೆಗೆ ವ್ಯಕ್ತಿಯ ಜೀವನ ಕ್ರಮದ ಬದಲಾವಣೆಯ ಕಡೆಗೂ ಗಮನ ಹರಿಸುವುದರಿಂದ ಉತ್ತಮ ಫಲಿತಾಂಶ ದೊರೆಯುತ್ತದೆ. ಆದ್ದರಿಂದ ಎಲ್ಲ ಚಿಕಿತ್ಸಾ ಪದ್ಧತಿಗಳ, ಪಾರ್ಶ್ವ ಪರಿಣಾಮಗಳನ್ನೂ ಪರಿಶೀಲಿಸಿ ರೂಪಿಸುವ ಸಂಯೋಜಿತ ಚಿಕಿತ್ಸಾ ಪದ್ಧತಿಗೆ ವಿಶಾಲ ಅವಕಾಶಗಳಿವೆ ಎಂದು ಕೇರಳದ ಕೇಂದ್ರೀಯ ವಿಶ್ವವಿದ್ಯಾಲಯದ ಗೌರವಾನ್ವಿತ ಕುಲಸಚಿವ, ಪದ್ಮಭೂಷಣ ಡಾ|ವಿ.ಎಲ್.ಚೋಪ್ರಾ ಅಭಿಪ್ರಾಯ ಪಟ್ಟರು.

ಅವರು ಆಯುರ್ವೇದ, ಅಲೋಪತಿ, ಹೋಮಿಯೋಪತಿ, ಯೋಗಾಸನಗಳ ಗುಣಾಂಶಗಳನ್ನು ಅಳವಡಿಸಿ ರೂಪಿಸಲಾದ `ಸಂಯೋಜಿತ ಚಿಕಿತ್ಸೆ’ಯ ಮೂಲಕ ಔಷಧಿ ಇಲ್ಲದ ಖಾಯಿಲೆ ಎಂದು ಪರಿಗಣಿಸಲ್ಪಡುತ್ತಿದ್ದ ಲಿಂಫೇಟಿಕ್ ಫೈಲೇರಿಯಾಸಿಸ್ (ಆನೆಕಾಲು) ರೋಗದ ಚಿಕಿತ್ಸೆಯಲ್ಲಿ ಅನನ್ಯ ಸಾಧನೆ ಮಾಡಿರುವ ಇನ್ಸ್‌ಟಿಟ್ಯೂಟ್ ಓಫ್ ಅಪ್ಲೈಡ್ ಡರ್ಮಟೋಲಜಿ (ಐ‌ಎಡಿ) ಯು ಕಾಸರಗೋಡಿಗೆ ಸನಿಹದ ಉಳಿಯತ್ತಡ್ಕದ ಕೇಂದ್ರದಲ್ಲಿ ಆಯೋಜಿಸಿರುವ ಏಳನೇ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

National_Coluium_Day_3 National_Coluium_Day_2

ಕಾಸರಗೋಡು ವಿಧಾನಸಭಾ ಕ್ಷೇತ್ರದ ಸದಸ್ಯ ಎನ್.ಎ.ನೆಲ್ಲಿಕುನ್ನು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಕಾಸರಗೋಡು ಇನ್ಸ್‌ಟಿಟ್ಯೂಟ್ ಓಫ್ ಮೆಡಿಕಲ್ ಸಯನ್ಸ್ ಸಂಸ್ಥೆಯ ಸ್ಥಾಪಕರೂ ಕಾಸರಗೋಡಿನ ಜನಸಾಮಾನ್ಯರಿಗೆ ಆಧುನಿಕ ರೀತಿಯಲ್ಲಿ ಉತ್ತಮ ವೈದ್ಯಕೀಯ ಸೇವೆಯನ್ನು ಒದಗಿಸಿದ ಡಾ|ಬಿ.ಎಸ್ ರಾವ್ ಅವರನ್ನು ಗೌರವಿಸಲಾಯಿತು. ಐ‌ಎಡಿಯ ಅಧ್ಯಕ್ಷ ಡಾ|ಎಸ್. ಆರ್. ನರಹರಿ ಸನ್ಮಾನಿತರನ್ನು ಪರಿಚಯಿಸಿದರು.

ಕೇರಳದ ಕೇಂದ್ರೀಯ ವಿಶ್ವವಿದ್ಯಾಲಯದ ಉಪಕುಲಪತಿ ಡಾ|ಜಿ.ಗೋಪಕುಮಾರ್, ಅಮೇರಿಕಾದ `ಪ್ರೆಸಿಡೆನ್ಶಿಯಲ್ ಕಮಿಶನ್ ಫೋರ್ ದ ಸ್ಟಡಿ ಓಫ್ ಬಯೋ ಎಥಿಕಲ್ ಇಶ್ಯೂಸ್ ಸಂಸ್ಥೆಯ ಸದಸ್ಯೆ ಡಾ|ನಂದಿನಿ ಕೆ.ಕುಮಾರ್, ಕಾಸರಗೋಡು ಜಿಲ್ಲಾ ಪೋಲೀಸ್ ಮುಖ್ಯಸ್ಥ ಡಾ|ಎ. ಶ್ರೀನಿವಾಸ್, ಪೋಲೀಸ್ ವಿಚಕ್ಷಣಾ ದಳದ ನಿವೃತ್ತ ಎಸ್.ಪಿ ಹಬೀಬ್ ರಹಮಾನ್.ಪಿ, ಹರಿದ್ವಾರದ ಪತಂಜಲಿ ರಿಸರ್ಚ್ ಫೌಂಡೇಶನಿನ ನಿರ್ದೇಶಕಿ ಡಾ|ಶಿರ್ಲೆ ಟೆಲೆಸ್ ಶುಭಾಶಯಗಳನ್ನು ಸಮರ್ಪಿಸಿದರು. ಇಂಗ್ಲೆಂಡಿನ ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದ ಡರ್ಮಟೋಲಜಿ ವಿಭಾಗದ ಗೌರವ ಪ್ರಾಚಾರ್ಯ ಡಾ. ಟೆರೆನ್ಸ್ ಜೆ. ರಯಾನ್ ಮತ್ತು ದಕ್ಷಿಣ ಆಫ್ರಿಕಾದ ಕೇಪ್ ಟೌನ್ ವಿಶ್ವವಿದ್ಯಾನಿಲಯದ ಡರ್ಮಟೋಲಜಿ ವಿಭಾಗದ ಪ್ರಾಚಾರ್ಯ ಗೈಲ್ ಟೋಡ್ ಉಪಸ್ಥಿತರಿದ್ದರು.

National_Coluium_Day_4

ನಿವೃತ್ತ ಐ.ಎ.ಎಸ್ ಅಧಿಕಾರಿ, ಐ‌ಎಡಿಯ ನಿರ್ದೇಶಕ ಕೆ.ಶಶಿಧರ ಸ್ವಾಗತಿಸಿ, ಐ‌ಎಡಿಯ ಪ್ರಾಂಶುಪಾಲ ಡಾ|ಕೆ.ಎಸ್.ಬೋಸ್ ಧನ್ಯವಾದ ಸಮರ್ಪಿಸಿದರು. ಕೌಸ್ತುಭ ಕಾರ್ಯಕ್ರಮ ನಿರೂಪಿಸಿದರು.

ಹೆಚ್ಚಿನ ವಿವರಗಳಿಗೆ: ಐ‌ಎಡಿಯ ಸಂಪರ್ಕ ಸಂಖ್ಯೆ: 04994 240862, 240863.
Website: www.indiandermatology.org

Write A Comment