ಕನ್ನಡ ವಾರ್ತೆಗಳು

ಕುಕ್ಕೆ ಸುಬ್ರಹ್ಮಣ್ಯದ ಸಮಗ್ರ ಅಭಿವೃದ್ದಿ ಹಿನ್ನೆಲೆ ಎ.20ರಂದು ಮಹತ್ವದ ಸಭೆ : ಜಿಲ್ಲಾಧಿಕಾರಿ

Pinterest LinkedIn Tumblr

Dc_visit_sbrhamanya

ಸುಬ್ರಹ್ಮಣ್ಯ, ಎ.16: ಕುಕ್ಕೆ ಸುಬ್ರಹ್ಮಣ್ಯದ ಸಮಗ್ರ ಅಭಿವೃದ್ಧ್ದಿ ದೃಷ್ಟಿಯಿಂದ ಹಮ್ಮಿಕೊಳ್ಳುವ ಎರಡನೆ ಹಂತದ ಅಭಿವೃದ್ಧಿ ಕಾಮಗಾರಿಗೆ ಚಾಲನೆ ಸಿಗಲಿದೆ. ಮಾಸ್ಟರ್ ಪ್ಲಾನ್ ಯೋಜನೆಯಡಿ ಕುಮಾರಧಾರೆಯಿಂದ ದೇವಳದವರೆಗಿನ ರಸ್ತೆ ಅಗಲೀಕರಣ ಕಾಮಗಾರಿ ಶೀಘ್ರವೇ ಆರಂಭಿ ಸಲಾಗುವುದು. ಈ ಕುರಿತಂತೆ ಎ.20ರಂದು ಮಹತ್ವದ ಸಭೆ ಕರೆಯಲಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ಹೇಳಿದರು.

ಕುಕ್ಕೆ ಸುಬ್ರಹ್ಮಣ್ಯಕ್ಕೆ ಬುಧವಾರ ದಿಢೀರ್ ಭೇಟಿ ನೀಡಿ, ಕಾಮಗಾರಿಗೆ ಸಂಬಂಧಪಟ್ಟಂತೆ ಕೆಲವು ಸ್ಥಳಗಳನ್ನು ಪರಿಶೀಲಿಸಿದ ಬಳಿಕ ಪತ್ರಕರ್ತರ ಜೊತೆ ಮಾತನಾಡಿದ ಅವರು, ಸುಬ್ರಹ್ಮಣ್ಯ ದೇವಳದ ಎದುರಿನ ರಥಬೀದಿಯನ್ನು ವಾಹನ ಪಾರ್ಕಿಂಗ್ ನಿರ್ಬಂಧ ಸಂಬಂಧ ಸರಕಾರದ ಅಧಿಸೂಚನೆಯಂತೆ ರಥಬೀದಿಯಲ್ಲಿ ವಾಹನ ನಿಲುಗಡೆಗೆ ಮುಕ್ತಗೊಳಿಸಿ ಶೀಘ್ರ ಕ್ರಮಗೊಳ್ಳಲಾಗುವುದು. ತಕ್ಷಣದಿಂದ ಈ ಆದೇಶ ಪಾಲನೆ ಮಾಡಲಾಗುವುದು. ಸುಬ್ರಹ್ಮಣ್ಯ ರಥಬೀದಿಯಲ್ಲಿ ವಾಹನ ಸಂಚಾರ ಮುಕ್ತಗೊಳಿಸಬೇಕೆಂಬ ಬೇಡಿಕೆ ಹಲವಾರು ವರ್ಷಗಳಿಂದ ಕೇಳಿಬಂದಿದೆ.

ವಾಹನಗಳು ಇಲ್ಲಿ ಪಾರ್ಕಿಂಗ್ ಮಾಡುವುದರಿಂದ ಕ್ಷೇತ್ರಕ್ಕೆ ಬರುವ ಯಾತ್ರಾರ್ಥಿಗಳಿಗೆ ಮತ್ತು ಭಕ್ತರಿಗೆ ಸಂಚರಿಸಲು ವೇಳೆ ಅನಾನುಕೂಲವಾಗುತ್ತಿತ್ತು. ಇದಕ್ಕೆ ಪರಿಹಾರ ಕಂಡುಕೊಳ್ಳಲು ಈ ಕ್ರಮ ಜಾರಿಯಲ್ಲಿರುತ್ತದೆ ಎಂದರು. ದೇವಳದ ಮುಂದಿನ ಜಂಕ್ಷನ್‌ನ ಗೇಟು ಬಳಿ ಕಟ್ಟುನಿಟ್ಟಿನ ಕ್ರಮ ಅಳವಡಿಸಿ ವಾಹನ ನಿಲುಗಡೆ ನಿರ್ಬಂಧಗೊಳಿಸಲಾಗುವುದು ಎಂದು ಅವರು ಹೇಳಿದರು. ಪಾರ್ಕಿಂಗ್ ಸಮಸ್ಯೆ ಕೂಡ ಇಲ್ಲಿನ ದೊಡ್ಡ ಸಮಸ್ಯೆಯಾಗಿದ್ದು, ಇದರ ಪರಿಹಾರಕ್ಕೂ ಸೂಕ್ತ ಕ್ರಮಕೈಗೊಳ್ಳಲಾಗುತ್ತದೆ. ಈಗಾಗಲೇ ನಿಗದಿಪಡಿಸಿದ ಪಾರ್ಕಿಂಗ್ ಸ್ಥಳಗಳಲ್ಲೇ ವಾಹನ ನಿಲುಗಡೆಗೆ ಎಲ್ಲಾ ಕ್ರಮ ವಹಿಸಲು ಸೂಚಿಸಲಾಗಿದೆ. ಕಟ್ಟುನಿಟ್ಟಿನಿಂದ ಇದನ್ನು ಜಾರಿಗೊಳಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಕುಲ್ಕುಂದ ಮಿಲಿಟ್ರಿ ಗ್ರೌಂಡ್ ಬಳಿ ಡಿಪೋ ತೆರೆಯಲು ಜಾಗ ಕಾಯ್ದಿರಿಸಲಾಗಿದೆ. ಈ ಜಾಗವನ್ನು ಪರಿಶೀಲಿಸಿದ್ದೇನೆೆ. ನಾವು ಜಾಗ ಮೀಸಲಿಟ್ಟು ಎಲ್ಲಾ ರೀತಿಯ ಸಹಕಾರ ನೀಡುತ್ತಿದ್ದೇವೆ, ಆದರೆ ಸಾರಿಗೆ ಸಂಸ್ಥೆಯವರು ಈ ಜಾಗದಲ್ಲಿ ಡಿಪೋ ತೆರೆಯುವ ಕುರಿತಂತೆ ಹೆಚ್ಚು ಆಸಕ್ತಿವಹಿಸುತ್ತಿಲ್ಲ ಎಂದವರು ಹೇಳಿದರು.

ಕಳಪೆ ಕಾಮಗಾರಿ: ನಡುಗಲ್ಲು-ಕೊಲ್ಲಮೊಗ್ರು ನಡುವಿನ ಗ್ರಾಮಸಡಕ್ ಕಾಮಗಾರಿ ಕಳಪೆ ಬಗ್ಗೆ ದೂರುಗಳಿವೆ ನಿಜ. ಆ ರಸ್ತೆಯಲ್ಲಿ ಸಂಚರಿಸಿ ಪರಿಶೀಲಿಸಿದ್ದೇನೆ ಮೇಲ್ನೋಟಕ್ಕೆ ಕಳಪೆ ಬಗ್ಗೆ ಹೇಳುವಂತಿಲ್ಲ. ಗುಣಮಟ್ಟ ಪರೀಕ್ಷೆ ನಡೆಸುವಂತೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಆ ಬಳಿಕ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಡಿಸಿ ಹೇಳಿದರು.

ಭೇಟಿ ವೇಳೆ ಕುಲ್ಕುಂದದ ಡಿಪೋಗೆ ಕಾಯ್ದಿರಿಸಿದ ಸ್ಥಳ, ಕುಮಾರಧಾರೆ, ದೇವಳದ ಎದುರಿನ ರಥಬೀದಿ ಮುಂತಾದ ಸ್ಥಳಗಳನ್ನು ಅವರು ವೀಕ್ಷಿಸಿದರು. ಕುಮಾರಧಾರೆ ನದಿ ಮಲಿನತೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಗಮನಹರಿಸುವಂತೆ ಸೂಚಿಸಿದರು.

ಈ ಸಂದರ್ಭ ದೇವಳದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ರವೀಂದ್ರ, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಎಚ್.ಆರ್. ನಂಜೇಗೌಡ, ಮಾಸ್ಟರ್ ಪ್ಲಾನ್ ಮೇಲುಸ್ತುವಾರಿ ಸದಸ್ಯ ಶಿವರಾಮ ರೈ, ಗ್ರಾಪಂ ಸದಸ್ಯ ಹರೀಶ್ ಇಂಜಾಡಿ, ಕೃಷ್ಣಮೂರ್ತಿ ಭಟ್, ಉದಯ ನೂಚಿಲ ಮತ್ತಿತರರು ಉಪಸ್ಥಿತರಿದ್ದರು.

Write A Comment