ಕನ್ನಡ ವಾರ್ತೆಗಳು

ನಿಮ್ಮ ನಿಖರ ತೂಕ ಗೊತ್ತೆ?

Pinterest LinkedIn Tumblr

j

‘ನಿಮ್ಮ ತೂಕ ನಿಖರವಾಗಿ ಎಷ್ಟು’ ಎಂಬ ಪ್ರಶ್ನೆಗೆ ಉತ್ತರಿಸುವುದು ತುಂಬಾ ಕಷ್ಟ ಎಂದರೆ ನಂಬಲಾರಿರಿ ಅಲ್ಲವೇ? ತೂಕ ಯಂತ್ರದ ಮೇಲೆ ನಿಂತುಕೊಂಡರೆ ಆಯಿತು, ನಿಖರವಾದ ತೂಕ ತಿಳಿಯುತ್ತದೆ ಎಂದುಕೊಂಡರೆ ಅದು ತಪ್ಪು. ಏಕೆಂದರೆ ನಮ್ಮ ತೂಕ ಪ್ರತಿ 10 ನಿಮಿಷಕ್ಕೊಮ್ಮೆ ಬದಲಾವಣೆ ಆಗುತ್ತಲೇ ಇರುತ್ತದೆ.

ಇದು ಅಚ್ಚರಿ ಎನಿಸಿದರೂ ನಿಜ. ಊಟ ಮಾಡಿದ ನಂತರ ತೂಕ ನೋಡಿಕೊಂಡರೆ ಸ್ವಲ್ಪಮಟ್ಟಿಗೆ ಹೆಚ್ಚು ತೂಗುತ್ತೇವೆ ಎನ್ನುವುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದ ವಿಷಯ. ಆದರೆ ಅದಕ್ಕಿಂತಲೂ ಭಿನ್ನವಾದ ಕಾರಣಗಳಿಂದ ತೂಕದಲ್ಲಿ ವ್ಯತ್ಯಾಸವಾಗುತ್ತಲೇ ಇರುತ್ತದೆ. ಬೇರೆ ಬೇರೆ ಕಾರಣಗಳಿಂದ ದಿನನಿತ್ಯ ತೂಕದಲ್ಲಿ ವ್ಯತ್ಯಾಸ ಆಗುತ್ತಿರುತ್ತದೆ.

24 ಗಂಟೆಗಳಲ್ಲಿ ಹೊರಹೋಗುವ ಕಾರ್ಬನ್ ಡೈಆಕ್ಸೈಡ್‌ನಿಂದ 75ರಿಂದ 85 ಗ್ರಾಂ ತೂಕ ಇಳಿಯುತ್ತದೆ. ಶ್ವಾಸಕೋಶದ ಮೂಲಕ ನಷ್ಟವಾಗುವ ನೀರಿನ ಪ್ರಮಾಣದ ಮುಂದೆ ಇದು ತೀರಾ ಅಲ್ಪ. ಅಲ್ಲಿ 150 ರಿಂದ 500ಗ್ರಾಮಿನಷ್ಟು ನೀರು 24 ಗಂಟೆ ಅವಧಿಯಲ್ಲಿ ನಷ್ಟವಾಗುತ್ತದೆ. ಬೆವರಿನ ಮೂಲಕ ಕಳೆದುಹೋಗುವ ಪ್ರಮಾಣ ಇನ್ನೂ ಹೆಚ್ಚು. ಬೆವರು ದೇಹದಿಂದ ದೊಡ್ಡ ದೊಡ್ಡ ಹನಿಗಳಾಗಿ ಇಳಿದು ಬರದಿದ್ದರೂ ಮನುಷ್ಯ ಸದಾ ಬೆವರುತ್ತಿರುತ್ತಾನೆ.

ದೇಹದೆಲ್ಲೆಡೆ ವಿಪುಲ ಸಂಖ್ಯೆಯಲ್ಲಿ ಬೆವರು ಗ್ರಂಥಿಗಳು ಬಾಯ್ದೆರೆಯುತ್ತವೆ. ಅವುಗಳ ಮೂಲಕ ಹೊರ ಬರುವ ಬೆವರಿನ ತುಂತುರನ್ನು ಸೂಕ್ಷ್ಮದರ್ಶಕದ ಮೂಲಕ ಮಾತ್ರವೇ ಕಾಣಬಹುದು. ಹವಾಗುಣ ಶುಷ್ಕವಾಗಿದ್ದರೆ, ಹೊಸ ಹನಿಗಳು ಈ ಗ್ರಂಥಿಗಳಿಂದ ಹೊರಬರುವ ಮುನ್ನವೇ ಅವು ಆವಿಯಾಗಿ ಚರ್ಮ ಒಣಗುತ್ತವೆ. ತಂಪು ಹವಾಮಾನದಲ್ಲಿ 250ರಿಂದ 1700 ಗ್ರಾಂನಷ್ಟು ನೀರು ಚರ್ಮದಿಂದ ಆವಿಯಾಗುತ್ತದೆ. ಸುಡು ಬಿಸಿನಲ್ಲಿ ಹೆಚ್ಚು ಶ್ರಮದಾಯಕ ಕಾರ್ಯದಲ್ಲಿ ನಿರತನಾದ ವ್ಯಕ್ತಿಯು 10-15 ಲೀಟರ್ ಬೆವರನ್ನು 24 ಗಂಟೆಗಳಲ್ಲಿ ಸುರಿಸಬಲ್ಲ. ಕೆಲವು ಬಾರಿ ಗಂಟೆಗೆ ನಾಲ್ಕು ಲೀಟರ್ ಬೆವರು ನಷ್ಟವಾಗ ಬಲ್ಲದು. ಇಂತಹ ಸನ್ನಿವೇಶದಲ್ಲೂ ಚರ್ಮವು ಒಣಗಿರ ಬಹುದು.

ದಕ್ಷಿಣ ಪ್ರದೇಶಗಳಲ್ಲಿ ವಾಸಿಸುವ ಜನರು 70ರಿಂದ 150 ಟನ್ ಬೆವರನ್ನು 70 ವರ್ಷಗಳ ಜೀವಾವಧಿಯಲ್ಲಿ ಸುರಿಸುತ್ತಾರೆಂಬುದು ಸಾಧಾರಣ ಅಂದಾಜು. ಈ ಪ್ರಮಾಣವು ಮೂರು ದೊಡ್ಡ ರೈಲು ಟ್ಯಾಂಕು ವಾಗೀನುಗಳನ್ನು ತುಂಬಲು ಸಾಕಾಗುತ್ತದೆ!

ಒಂದು ಲೀಟರ್ ಬೆವರಲ್ಲಿ ಇರುವುದು 600 ಕ್ಯಾಲರಿಗಳು. ಈ ಶಾಖ ಮನುಷ್ಯನ ದೇಹದಿಂದ ಹೊರಹಾಕಿದರೆ ದೈಹಿಕ ಉಷ್ಣತೆ 10 ಡಿಗ್ರಿ ಕೆಳಕ್ಕಿಳಿಯುವುದು. ದುರದೃಷ್ಟವಶಾತ್ ನಮ್ಮ ದೇಹವು ಸ್ವಲ್ಪ ಪ್ರಮಾಣದಲ್ಲಷ್ಟೇ ತನ್ನ ಶಾಖವನ್ನು ಆವಿಯಾಗಲು ಬಳಸುವುದು.
ಆದ್ದರಿಂದ ಬೆವರುವಿಕೆ ದೇಹವನ್ನು ತಂಪುಗೊಳಿಸುವುದಿಲ್ಲ. ಅದು ಅಧಿಕ ಶಾಖದ ವಿರುದ್ಧ ಮಾತ್ರ ರಕ್ಷಣೆ ಕೊಡುವುದು. ಪರಿಸರದ ಉಷ್ಣತೆ 40 ಅಥವಾ 50 ಡಿಗ್ರಿ ಸೆಂಟಿಗ್ರೇಡ್‌ನಷ್ಟು ಹೆಚ್ಚು ಉಷ್ಣತೆಯನ್ನು ತೋರಿಸುತ್ತಿದ್ದರೂ ದೇಹದ ಸಹಜ ಉಷ್ಣತೆ ಸುಮಾರು 37 ಡಿಗ್ರಿ (ಕಂಕುಳಿನಲ್ಲಿ) ತೋರಿಸುತ್ತದೆ. ಇಂಥ ಸಂದರ್ಭಗಳಲ್ಲೂ ತೂಕದಲ್ಲಿ ಏರಿಳಿತವಾಗುತ್ತದೆ.

ಅಂದಹಾಗೆ ಇದು ಇಂದು, ನಿನ್ನೆಯ ಸಂಶೋಧನೆ ಅಲ್ಲ. ಇದನ್ನು 300 ವರ್ಷಗಳ ಹಿಂದೆಯೇ ಇಟಲಿಯ ವೈದ್ಯ ಸಾಂಕ್ಟೋರಿಯಸ್ ಕಂಡುಹಿಂಡಿದ್ದಾರೆ.

Write A Comment