ಕನ್ನಡ ವಾರ್ತೆಗಳು

ಗೋಪಾಡಿ ಮಹಿಳೆ ಕೊಲೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆಯಾಗಲೀ ಇಲ್ಲವೇ ಆತನನ್ನು ನಮಗೆ ನೀಡಿ; ಮಹಿಳೆಯರಿಂದ ಪೊಲೀಸ್ ಠಾಣೆಗೆ ಮುತ್ತಿಗೆ; ಆರೋಪಿಗೆ ಎ.27ರವರೆಗೆ ನ್ಯಾಯಾಂಗ ಬಂಧನ

Pinterest LinkedIn Tumblr

ಕುಂದಾಪುರ: ಗೋಪಾಡಿಯಲ್ಲಿ ಶನಿವಾರ ಸಂಜೆ ಅತ್ಯಾಚಾರಕ್ಕೆ ಯತ್ನಿಸಿ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದ ಆರೋಪಿಯನ್ನು ಕುಂದಾಪುರ ಪೊಲೀಸರು ಅಧಿಕೃತವಾಗಿ ಬಂಧಿಸಿದ್ದರೂ ಕೊಲೆಯಾದ ಇಂದಿರಾಳ ಸಂಬಂಧಿಕರು ಹಾಗೂ ಸಾರ್ವಜನಿಕರ ಆಕ್ರೋಶ ಮುಂದುವರೆದಿದೆ.

Gopadi_Lady_Murder

ಎರಡೂವರೆ ವರ್ಷದ ಇಂದಿರಾಳ ಮಗ ಅನ್ವಿತ್ ತನಗೆ ತಾಯಿ ಬೇಕು, ತಂಗಿನ ತೋರಿಸಿ ಎಂದು ಹಠ ಹಿಡಿಯುತ್ತಿದ್ದಂತೆ ಕಳೆದ ಮೂರೂ ದಿನಗಳಿಂದ ಮನೆಯ ಮುಂದೆ ಸಂಬಂಧಿಕರು ಹಾಗೂ ಸ್ಥಳೀಯ ನಿವಾಸಿಗಳು ಬೀಡು ಬಿಟ್ಟಿದ್ದಾರೆ. ಮಗುವಿನ ಆಕ್ರಂದನ ಸಹಿಸಲಾಗದ ಮಹಿಳೆಯರು ಸೋಮವಾರ ಕುಂದಾಪುರ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಆರೋಪಿಯನ್ನು ನಮಗೊಪ್ಪಿಸಿ ಇಲ್ಲವೇ ಆತನಿಗೆ ಗಲ್ಲು ಶಿಕ್ಷೆ ನೀಡಿ ಎನ್ನುವ ಆಗ್ರಹ ವ್ಯಕ್ತಪಡಿಸಿದರು. ಜೊತೆಗೆ ಕಳೆದ ಮೂರು ದಿನಗಳಿಂದ ತಾಯಿಗಾಗಿ ಹಪಹಪಿಸುತ್ತಿರುವ ಮಗುವಿಗೆ ತಾಯಿಯನ್ನು ಕೊಡಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮುತ್ತಿಗೆಯ ನೇತೃತ್ವವನ್ನು ಮೂಕಾಂಬಿಕಾ ಮಹಿಳಾ ಮಂಡಲಗಳ ಒಕ್ಕೂಟದ ಅಧ್ಯಕ್ಷೆ ರಾಧಾದಾಸ್ ಕುಂಭಾಶಿ ವಹಿಸಿದ್ದರು.

Gopadi_Murder_Case Gopadi_Murder_Case (1) Gopadi_Murder_Case (2) Gopadi_Murder_Case (3)

ಆಕ್ರೋಷಿತರಿಂದ ಸ್ಥಳ ಮಹಜರಿಗೆ ಅಡ್ಡಿ:
ಸೋಮವಾರ ಪೊಲೀಸರು ಆತನನ್ನು ಘಟನಾ ಸ್ಥಳಕ್ಕೆ ಕರೆದೊಯ್ದಿದ್ದರು. ಆದರೆ ಅಲ್ಲಿ ಮೊದಲೇ ಜಮಾಯಿಸಿದ್ದ ಜನ ಆತನಿಗೆ ಹಲ್ಲೆ ನಡೆಸಲು ಮುಂದಾದ ಹಿನ್ನೆಲೆಯಲ್ಲಿ ಸ್ಥಳ ಮಹಜರು ನಡೆಸಲಾಗದ ಪೊಲೀಸರು ಆರೋಪಿಯನ್ನು ತಮ್ಮ ಜೀಪಿನಲ್ಲಿ ಕರೆತಂದು ನೇರವಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಹಿರಿಯಡಕ ಜೈಲಿಗೆ ಆರೋಪಿ: ಪೊಲೀಸರು ಆರೋಪಿ ಪ್ರಶಾಂತನನ್ನು ತುರ್ತಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಧೀಶರು 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದ್ದಾರೆ. ಆದರೆ ಅದಾಗಲೇ ಮಾಹಿತಿ ಪಡೆದ ಸಂಬಂಧೀಕರು ಹಾಗೂ ಮಹಿಳೆಯರು ನ್ಯಾಯಾಲಯದ ಮುಂದೆ ಜಮಾಯಿಸತೊಡಗಿದರು. ನ್ಯಾಯಾಲಯದ ಮುಂದೆಯೂ ಘರ್ಷಣೆ ನಡೆಯಬಹುದು ಎನ್ನುವ ಕಾರಣಕ್ಕೆ ನ್ಯಾಯಾಲಯದ ಹಿಂಬಾಗಿಲ ದಾರಿಯ ಮೂಲಕ ಆರೋಪಿಯನ್ನು ಹಿರಿಯಡಕ ಜೈಲಿಗೆ ಕರೆದೊಯ್ದರು.

ನಮ್ಮ ಬದುಕು ಕಿತ್ತುಕೊಂಡ-ಆತನನ್ನು ನೇಣಿಗೇರಿಸಿ:
ಕೊಲೆ ಆರೋಪಿ ಪ್ರಶಾಂತ ಮೊಗವೀರನ ಮನೆಯಲ್ಲಿ ಈಗ ಅಕ್ಷರಶಃ ಸ್ಮಶಾನ ಮೌನ ಈ ಹಿಂದೆ ಎರಡು ಬಾರಿ ಕಳವು ಪ್ರಕರಣದಲ್ಲಿ ಭಾಗಿಯಾಗಿದ್ದ ಪ್ರಶಾಂತನಿಂದಾಗಿ ಕೃಷಿ ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದ ಚಿಕ್ಕಮ್ಮಂದಿರ ಮರ್ಯಾದೆ ಬೀದಿಗೆ ಬಿದ್ದಿದೆ. ಎದ್ದು ಓಡಾಡಲಾಗದ ಅಜ್ಜನ ಕಣ್ಣೀರು ಮನೆಯನ್ನು ತೊಳೆಯುತ್ತಿದೆ. ಆತ ನಮ್ಮ ಮನೆಗೆ ಹಿಡಿದ ಶನಿ. ಎಷ್ಟು ಹೇಳಿದರೂ ಕೇಳದಿರುವ ಆತನನ್ನು ಚಿಕ್ಕಮ್ಮಂದಿರೇ ಪೊಲೀಸರಿಗೊಪ್ಪಿಸಿದ್ದಾರೆ. ತಪ್ಪು ಯಾರು ಮಾಡಿದರೂ ತಪ್ಪೇ. ಆತ ಹೊರಗೆ ಬಂದರೆ ನಮ್ಮನ್ನು ಜೀವ ಸಹಿತ ಬಿಡುತ್ತಾನೆ ಎನ್ನುವ ಭರವಸೆ ನಮಗಿಲ್ಲ. ಆತನನ್ನು ನೇಣಿಗೇರಿಸಿ ಎಂದೂ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹತ್ಯೆಗೀಡಾದ ಮಹಿಳೆಯ ಕುಟುಂಬಕ್ಕೆ ಕಾನೂನು ಬೆಂಬಲ ನೀಡುವುದಾಗಿಯೂ ತಿಳಿಸಿದ್ದಾರೆ. ಗೇರುಬೀಜ ಸಿಪ್ಪೆ ತೆಗೆದು ಜೀವನ ನಡೆಸುತ್ತಿರುವ ಆತನ ಚಿಕ್ಕಮ್ಮಂದಿರು ಕಳೆದ ಮೂರು ದಿನಗಳಿಂದ ಕೆಲಸ ಮಾಡದೇ ಊಟಕ್ಕೆ ತಾತ್ವಾರ ತಂದುಕೊಂಡಿದ್ದು, ಯಾರು ನೋಡಿದರೂ ಕಣ್ಣೀರು ಬರುವಂತಿದೆ.

ಗುರುವಾರ ಮಹಿಳೆಯರಿಂದ ಪ್ರತಿಭಟನೆ
ಆರೋಪಿಯನ್ನು ಉಗ್ರ ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿ ಮೂಕಾಂಬಿಕಾ ಮಹಿಳಾ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಗುರುವಾರ ಬೆಳಿಗ್ಗೆ ಸಾವಿರ ಮಹಿಳೆಯರು ಪ್ರತಿಭಟನೆ ನಡೆಸಲಿದ್ದಾರೆ ಎಂಬುದಾಗಿ ಒಕ್ಕೂಟದ ಅಧ್ಯಕ್ಷೆ ರಾಧಾದಾಸ್ ತಿಳಿಸಿದ್ದಾರೆ.

Write A Comment