ಕನ್ನಡ ವಾರ್ತೆಗಳು

ಮಗನ ಜನನಾಂಗಕ್ಕೆ ಏಟು ತಾಕಿದರೆ…

Pinterest LinkedIn Tumblr

bhec11ankura

-ಡಾ. ಎಸ್.ಎಸ್. ವಾಸನ್
ಬಹುತೇಕ ಅಮ್ಮಂದಿರ ಸಾಮಾನ್ಯ ಪ್ರಶ್ನೆ ಅಥವಾ ಆತಂಕವಿದು. ಆಟವಾಡುವಾಗ ಮಗನ ವೃಷಣ ಅಥವಾ ಜನನಾಂಗಕ್ಕೆ ಏಟು ತಾಕಿದರೆ ಏನು ಮಾಡಬೇಕು? ಅದು ಗಂಭೀರ ಸಮಸ್ಯೆಯಾಗಿ ಪರಿಗಣಿಸಬೇಕೆ? ವೈದ್ಯರನ್ನು ಯಾವಾಗ ಕಾಣಬೇಕು? ಗಾಯದ ಸ್ವರೂಪ ನಿರ್ಧರಿಸುವುದು ಹೇಗೆ? ಇವು ಸಾಮಾನ್ಯ ಪ್ರಶ್ನೆಗಳು.

ಮಗನ ಡೈರಿ ಪುಟದಿಂದ: ಇವೊತ್ತು ಕ್ರಿಕೆಟ್‌ ಆಡುವಾಗ ಚೆಂಡು ಬಂದು ಜನನಾಂಗದ ಬಳಿ ತಾಕಿತು. ಅಸಾಧ್ಯ ನೋವು. ಎರಡುದಿನಗಳ ವರೆಗೂ ನೋವಿತ್ತು. ಅಮ್ಮ ಅಪ್ಪನಿಗೂ ಹೇಳಲಿಲ್ಲ. ವೈದ್ಯರ ಬಳಿಯೂ ಹೋಗಲಿಲ್ಲ. ಆದರೆ ನನಗೀಗಲೂ ಒಂದು ಸಂಶಯವಿದೆ… ಇದು ಆತಂಕ ಪಡುವ ವಿಷಯವೇ?

ಇಂಥ ಹಲವಾರು ಸನ್ನಿವೇಶಗಳು ನಿಮ್ಮಲ್ಲಿ ಕೆಲವರಿಗಾದರೂ ಎದುರಾಗಿರುತ್ತದೆ. ಆದರೆ ಕೆಲವೊಮ್ಮೆ ಈ ಗಾಯ ಅಥವಾ ಹೊಡೆತ ವೃಷಣಗಳಿಗೆ ಬಿದ್ದರಂತೂ ದೇಹದಿಂದ ಉಸಿರನ್ನೇ ಹೊರಹಾಕುವಂತೆ ಮಾಡುತ್ತದೆ. ನೋವು ಇಮ್ಮಡಿಗೊಳಿಸುತ್ತದೆ. ಅಸ್ವಸ್ಥರಾದಂತೆ ಎನಿಸುತ್ತದೆ. ಕೆಲವೊಮ್ಮೆ ವಾಂತಿಯೂ ಆಗಬಹುದು. ಕೆಲವೊಮ್ಮೆ ಕೂಡಲೇ ಆಸ್ಪತ್ರೆಗೆ ಸೇರಿಸಬೇಕಾದ ಅಗತ್ಯವೂ ಕಾಣಿಸಿಕೊಳ್ಳಬಹುದು. ಆದರೆ  ಎಲ್ಲ ಏಟುಗಳೂ ಇಷ್ಟು ಗಂಭೀರ ಸ್ವರೂಪದ್ದಾಗಿರುವುದಿಲ್ಲ.

ವೃಷಣಗಳಿಗೆ ಗಾಯವಾದರೆ… ಎನ್ನುವುದನ್ನು ಅರಿಯುವ ಮೊದಲು ಒಮ್ಮೆ ವೃಷಣಗಳ ಕಾರ್ಯವೇನೆಂದು ತಿಳಿಯುವುದು ಅತ್ಯಗತ್ಯ.
ಇವು ಪುರುಷನ ಸಂತಾನೋತ್ಪತ್ತಿಯ ಮುಖ್ಯ ಅಂಗಗಳು. ವೀರ್ಯ ಉತ್ಪತ್ತಿಯಾಗುವುದು, ಪೌರುಷತನಕ್ಕೆ ಕಾರಣವಾಗುವ ಟೆಸ್ಟಸ್ಟೊರಾನ್‌ ಹಾರ್ಮೋನ್‌ ಉತ್ಪತ್ತಿ ಮಾಡುವುದು ಇದರ ಮುಖ್ಯ ಕಾರ್ಯವಾಗಿದೆ. ವೃಷಣಗಳಿರದಿದ್ದರೆ ಪುರುಷನು ಮಕ್ಕಳು ಪಡೆಯುವುದೇ ಅಸಾಧ್ಯವಾಗಿರುತ್ತಿತ್ತು. ಟೆಸ್ಟೊಸ್ಟರಾನ್‌ ಹಾರ್ಮೋನಿನಿಂದಲೇ ಪುರುಷರ ಲಕ್ಷಣಗಳು ದೇಹದಲ್ಲಿ ಕಾಣಿ ಸಿಕೊಳ್ಳುತ್ತವೆ.

ಸ್ತ್ರೀಯರಿಂದ ಭಿನ್ನರಾಗಿ ಕಾಣುತ್ತಾರೆ.  ದೇಹದ ಹೊರಭಾಗದಲ್ಲಿ ಶಿಶ್ನಕ್ಕೆ ಅಂಟಿಕೊಂಡಂತೆ ಇರುವ ಈ ಅಂಗಗಳಲ್ಲಿ ಯಾವುದೇ ಸ್ನಾಯು ಅಥವಾ ಮೂಳೆಗಳಿಲ್ಲ. ದೇಹದ ಇತರ ಅಂಗಗಳಿಗೆ ಸುರಕ್ಷೆಗಾಗಿ ಸ್ನಾಯು ಮತ್ತು ಮೂಳೆ, ಮಜ್ಜೆಗಳಿರುತ್ತವೆ. ವೃಷಣಗಳಲ್ಲಿ ಇದಾವುದೂ ಇಲ್ಲ. ಹಾಗಾಗಿ ಯಾವುದೇ ಆಘಾತಗಳು ಅಪ್ಪಳಿಸಿದಾಗ ಆ ಇಡೀ ವೇಗವನ್ನು ವೃಷಣಗಳೇ ಸಹಿಸಬೇಕಾಗುತ್ತದೆ. ಉಳಿದ ಅಂಗಗಳಿಗಿರುವಂತೆ ಸುರಕ್ಷಾ ಕವಚವಾಗಿ ಏನೂ ಇರುವುದಿಲ್ಲ. ಇದೇ ಕಾರಣದಿಂದಾಗಿ ನೋವು ಅಸಹನೀಯವೆನಿಸುತ್ತದೆ.

ಜೋರಾಗಿ ಏಟು ಬಿದ್ದರೆ ಏನಾಗುತ್ತದೆ?
ಮೊದಲು ಅತೀವ ನೋವು. ಅಸಹನೀಯ ನೋವು. ನಂತರ ಸುಸ್ತು ಕೆಲವೊಮ್ಮೆ ವಾಂತಿಯೂ ಆಗಬಹುದು. ಅದೃಷ್ಟಾವಶಾತ್‌ ವೃಷಣಗಳು ಸ್ಪಾಂಜಿನಂಥ ಅಂಗಗಳಾಗಿರುವುದರಿಂದ ಈ ಆಘಾತವನ್ನು ತಡೆಯಬಹುದಾಗಿರುತ್ತದೆ. ವೃಷಣದೊಳಗೆ ಕಠಿಣವಾದ ಟಿಶ್ಯು ಸಹ ಇರುತ್ತದೆ. ಸಾಮಾನ್ಯವಾದ ಏಟು ಬಿದ್ದಲ್ಲಿ ನೋವು ಹಾಗೂ ಸುಸ್ತು ಒಂದು ಗಂಟೆಯಲ್ಲಿ ಮಾಯವಾಗುತ್ತದೆ.

ವೃಷಣಗಳಿಗೆ ಗಂಭೀರ ಗಾಯವಾದರೆ ಲೈಂಗಿಕ ಕ್ರಿಯೆ, ಉದ್ರೇಕದ ಮೇಲೆ ಪರಿಣಾಮ ಬೀರಬಹುದು. ಇಲ್ಲವೆ ಪೌರುಷತನದ ಲಕ್ಷಣಗಳು ಕಾಣಿಸಿಕೊಳ್ಳಲಿಕ್ಕಿಲ್ಲ. ಗಂಡಸುತನದ ಲಕ್ಷಣಗಳಿಗೆ ಕಾರಣವಾಗುವ ಹಾರ್ಮೋನ್‌ ಟೆಸ್ಟಸ್ಟೊರಾನ್‌ ಉತ್ಪತ್ತಿಯಾಗುವುದು ಇಲ್ಲಿಯೇ. ಹಾಗಾಗಿ ಗಾಯವನ್ನು ನಿರ್ಲಕ್ಷಿಸುವಂತಿಲ್ಲ. ಸಾಮಾನ್ಯವಾಗಿ ಕ್ರಿಕೆಟ್‌, ಸಾಕರ್‌, ಸೈಕ್ಲಿಂಗ್‌, ಬಾಸ್ಕೆಟ್‌ ಬಾಲ್‌, ಬೇಸ್‌ಬಾಲ್‌ ಆಟವಾಡುವಾಗ ವೃಷಣಗಳಿಗೆ ಗಂಭೀರ ಸ್ವರೂಪದ ಗಾಯಗಳಾಗುವ ಎಲ್ಲ ಸಾಧ್ಯತೆಗಳೂ ಇರುತ್ತವೆ. ದೇಹ ಹುರಿಗಟ್ಟಿಸಲು ಜಿಮ್‌ನಲ್ಲಿ ಅತಿಯಾದ ಶ್ರಮವಹಿಸುವು ಸಾಧ್ಯತೆಗಳಿರುತ್ತವೆ.

ವೈದ್ಯರನ್ನು ಯಾವಾಗ ಕಾಣಬೇಕು?
ಕೆಲವು ಸಂದರ್ಭಗಳಲ್ಲಿ ಜೋರಾದ ಹೊಡೆತ ಬಿದ್ದಲ್ಲಿ ಕೂಡಲೇ ವೈದ್ಯರನ್ನು ಕಾಣಬೇಕಾದ ಸಂದರ್ಭ ಒದಗಿಬರಬಹುದು. ಇಲ್ಲವೇ ಈ ಕೆಳಗಿನ ಲಕ್ಷಣಗಳಿದ್ದಲ್ಲಿ ಕೂಡಲೇ ವೈದ್ಯರನ್ನು ಕಾಣುವುದು ಒಳಿತು. ಒಂದು ವೇಳೆ ಜೋರಾದ ಹೊಡೆತವು ನೇರವಾಗಿ ಶಿಶ್ನಕ್ಕೆ ಬಿದ್ದಲ್ಲಿ
*ಒಂದು ಗಂಟೆಯ ನಂತರವೂ ನೋವು ಕಡಿಮೆಯಾಗದಿದ್ದರೆ
*ನಿರಂತರವಾಗಿ ಸುಸ್ತು ಎನಿಸುತ್ತಿದ್ದಲ್ಲಿ
*ಆಗಿಂದಾಗ ವಾಂತಿಗಳಾಗುತ್ತಿದ್ದಲ್ಲಿ
*ಜನನಾಂಗದಲ್ಲಿ ಊತ ಕಾಣಿಸಿಕೊಂಡರೆ
*ಜನನಾಂಗದೊಳಗೆ ದ್ರವದೊಂದಿಗೆ ತುಂಬಿಕೊಂಡಂತೆ ಎನಿಸಿದರೆ
*ಮೂತ್ರ ವಿಸರ್ಜಿಸುವಾಗ ಕಷ್ಟವೆನಿಸಿದರೆ,
*ಮೂತ್ರದೊಂದಿಗೆ ರಕ್ತವೂ ಬಂದರೆ
*ವೃಷಣಗಳಿಗೆ ಏಟು ತಾಕಿದ ನಂತರ ಜ್ವರ ಬಂದರೆ
*ಗಾಯವಾಗದಿದ್ದರೂ, ಏಟು ತಾಕಿ ಬಹುದಿನಗಳ ನಂತರವೂ ವೃಷಣಗಳಲ್ಲಿ ನೋವು ಕಂಡು ಬಂದರೆ
ಕೂಡಲೇ ಕುಟುಂಬದ ವೈದ್ಯರನ್ನು ಕಾಣಬೇಕು.

ಒಂದು ವೇಳೆ ಗಂಭೀರ ಸ್ವರೂಪದ ಗಾಯವಾಗದಿದ್ದರೆ ಸ್ವಯಂ ವೈದ್ಯಕೀಯ ಮಾಡಿಕೊಳ್ಳಬಹುದೆ?
ಸ್ವಯಂ ವೈದ್ಯಕೀಯ ಎನ್ನುವ ಬದಲು ನೋವು ಸಲೀಸಾಗಲು ಕೆಲವು ಕ್ರಮಗಳನ್ನು ತೆಗೆದುಕೊಳ್ಳಬಹುದು. ಒಂದು ವೇಳೆ ಏಟು ಮೊಣಕಾಲಿನಿಂದ ಮೇಲ್ಭಾಗದಲ್ಲಿ ತೊಡೆಸಂದಿನವರೆಗೆ ಎಲ್ಲಿಯೇ ಏಟು ತಾಕಿದರೂ ಈ ಕ್ರಮಗಳನ್ನು ಕೈಗೊಳ್ಳಬಹುದು.
*ನೋವು ನಿವಾರಕವನ್ನು ಸೇವಿಸಬಹುದು.
*ನೋವಾದಲ್ಲಿ ನೇರವಾಗಿ ಅಲ್ಲ, ಬಟ್ಟೆಯ ಮೇಲೆ ಐಸ್‌ಪ್ಯಾಕ್‌ ನೀಡಬಹುದು. ಇದರಿಂದ ಊತ ಮತ್ತು ನೋವು ಎರಡೂ ಕಡಿಮೆಯಾಗುತ್ತದೆ.
*ಮಲಗುವಾಗ ಟವಲ್‌ ಅನ್ನು ಸುತ್ತಿ, ವೃಷಣಗಳ ಕೆಳಭಾಗದಲ್ಲಿ ಇರಿಸಬಹುದು.
*ಕೆಲದಿನಗಳವರೆಗೆ ಯಾವುದೇ ಭಾರದ ಕೆಲಸಗಳನ್ನು ಮಾಡದೇ ವಿಶ್ರಮಿಸಬಹುದು.
ವೃಷಣಗಳಿಗೆ ಆಧಾರ ನೀಡುವಂಥ ಒಳ ಉಡುಪುಗಳನ್ನು ಕೆಲದಿನಗಳವರೆಗೆ ಧರಿಸಬೇಕು.

ಮಾಹಿತಿಗೆ: 9611394477

Write A Comment