ಕುಂದಾಪುರ: ಆರ್‌ಟಿಐ ಕಾರ್ಯಕರ್ತ ವಂಡಾರು ವಾಸುದೇವ ಅಡಿಗ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ವಂಡಾರು ರಮೇಶ ಬಾಯರಿಯವರಿಗೆ ಕುಂದಾಪುರ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಜಾಮೀನು ನೀಡಿದೆ. ಕಳೆದ 2 ವರ್ಷ 3 ತಿಂಗಳು ನ್ಯಾಯಾಂಗ ಬಂಧನದಲ್ಲಿದ್ದ ಬಾಯರಿ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶ ರಾಜಶೇಖರ ವಿ.ಪಾಟೀಲ್ ಶರ್ತಬದ್ಧ ಜಾಮೀನು ನೀಡಿದ್ದು, ವಿಚಾರಣೆ ಸಂದರ್ಭ ನ್ಯಾಯಾಲಯಕ್ಕೆ ತಪ್ಪದೆ ಹಾಜರಾಗುವಂತೆ ತಾಕೀತು ಮಾಡಲಾಗಿದೆ.
(ರಮೇಶ ಬಾಯರಿ)
ಮಾಹಿತಿ ಹಕ್ಕು ಕಾಯಿದೆ ಕಾರ್ಯಕರ್ತರಾಗಿದ್ದ ವಂಡಾರು ವಾಸುದೇವ ಅಡಿಗ ಎಂದಿನಂತೆ ಕರ್ತವ್ಯ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ 2013ರ, ಜ.7ರಂದು ಸಂಜೆ ವೇಳೆ ನಿಗೂಢವಾಗಿ ಕಣ್ಮರೆಯಾಗಿದ್ದರು. ಜ.12ರಂದು ಅವರ ಮತದೇಹ ಚಿಕ್ಕಮಗಳೂರು ಜಿಲ್ಲೆಯ ಕಡೂರು ಗ್ರಾಮದ ಎಮ್ಮೆದೊಡ್ಡಿ ಎಂಬಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಅಡಿಗ ನಿಗೂಢ ಸಾವಿನ ಪ್ರಕರಣ ಜಿಲ್ಲೆಯಾದ್ಯಂತ ಜನಾಕ್ರೋಶಕ್ಕೆ ಕಾರಣವಾಗಿತ್ತು. ಪ್ರಕರಣದ ಬೆನ್ನುಹತ್ತಿದ್ದ ಅಂದಿನ ಎಸ್ಪಿ ಬೋರಲಿಂಗಯ್ಯ ನೇತತ್ವದ ಪೊಲೀಸ್ ಪಡೆ 2013ರ ಜ.24ರಂದು ಬೆಂಗಳೂರಿನಲ್ಲಿ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ವಿಚಾರಣೆ ವೇಳೆ ಜ್ಯೋತಿಷ್ ವಿದ್ವಾನ್ ವಂಡಾರು ರಮೇಶ ಬಾಯರಿ ಕೃತ್ಯದ ಹಿನ್ನೆಲೆಯಲ್ಲಿರುವದು ಗಮನಕ್ಕೆ ಬಂದಾಗ ಅವರನ್ನು ಮುಂಬೈಯಲ್ಲಿ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ವಂಡಾರು ರಮೇಶ ಬಾಯರಿ ಮತ್ತು ಅಡಿಗ ನಡುವೆ ಭೂಮಿಗೆ ಸಂಬಂಧಿಸಿದ ವ್ಯಾಜ್ಯವಿದ್ದು ಹತ್ಯೆಗೆ ಇದೇ ಕಾರಣ ಎಂಬುದು ತನಿಖೆ ವೇಳೆ ತಿಳಿದಿತ್ತು.
ಅಡಿಗ ಅವರನ್ನು ಅಪಹರಿಸಿ ಹತ್ಯೆಗೈದ ಆರೋಪದಡಿ ಈ ಮೊದಲು ಬಂಧಿಸಲ್ಪಟ್ಟಿದ್ದ ಬಾಯರಿಯವರ ಹತ್ತಿರದ ಸಂಬಂಧಿ ಸುಬ್ರಹ್ಮಣ್ಯ ಉಡುಪ, ಸುಪಾರಿ ಕಿಲ್ಲರ್‌ಗಳಾದ ಉಮೇಶ್, ನವೀನ್, ರವಿಚಂದ್ರ, ಮೋಹನ್, ವಿಜಯಸಾರಥಿ, ರಾಘವೇಂದ್ರ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾರೆ.
ಜ್ಯೋತಿಷ್ಯಶಾಸ್ತ್ರದ ಮೂಲಕ ಮನೆಮಾತಾಗಿದ್ದ ರಮೇಶ ಬಾಯರಿ ಬಂಧನದ ಬಳಿಕ ಕುಂದಾಪುರ ನ್ಯಾಯಾಲಯ, ಉಡುಪಿ ಸೆಶನ್ಸ್ ನ್ಯಾಯಾಲಯ, ಹೈಕೋರ್ಟ್ ಜಾಮೀನಿಗೋಸ್ಕರ ಅವರು ಅರ್ಜಿ ಸಲ್ಲಿಸಿದ್ದರೂ ಅರ್ಜಿ ತಿರಸ್ಕೃತಗೊಂಡಿತ್ತು. ಅಂತಿಮವಾಗಿ ಸುಪ್ರೀಂಕೋರ್ಟ್ ಮೊರೆಹೋದರೂ ಅಲ್ಲಿಯೂ ಪುರಸ್ಕಾರ ಸಿಕ್ಕಿರಲಿಲ್ಲ. ಕಳೆದ 2 ವರ್ಷದಿಂದ ಬಂಧನದಲ್ಲಿದ್ದ ರಮೇಶ ಬಾಯರಿಗೆ ಇದೀಗ ಜಾಮೀನು ದೊರೆತಿದೆ.
ಆರೋಪಿ ಪರ ಜಾಮೀನು ಕೋರಿ ನ್ಯಾಯವಾದಿಗಳಾದ ಕಾಳಾವರ ಪ್ರದೀಪಕುಮಾರ ಶೆಟ್ಟಿ ಮತ್ತು ವಿಕ್ರಮ್ ಹೆಗ್ಡೆ ವಾದಿಸಿದ್ದರು.
1 Comment
ಸಮಾಜದ ಮದ್ಯೆ ಇದ್ದುಕೊಂಡು ಜ್ಯೋತಿಷ್ಯ ಶಾಸ್ತ್ರದಂತ ಸಾತ್ವಿಕ ವಿದ್ಯೆಯನ್ನು ಸಮಾಜದ ಜನತೆಯನ್ನು ಮೂರ್ಖರನ್ನಾಗಿಸುವಲ್ಲಿ ಪ್ರಯೋಗಿಸುತ್ತಾ ತನ್ನನ್ನು ತಾನು ಜ್ಯೋತಿಷ್ಯ ವಿಶಾರದನೆಂದು ಬಿರುದಿರಿಸಿಕೊಂಡು ಕ್ಸುಲ್ಲಕ ಮಣ್ಣಿಗೋಸ್ಕರ ಅಮಾಯಕರೋರ್ವರನ್ನು
ಕೊಲೆಮಾಡಿಸಿದ ಇಂತಹ ಕೊಲೆಗಡುಕರನ್ನು ಹುಚ್ಚು ನಾಯಿಗೆ ಕಲ್ಲು ಎಸೆದು ಸಾಯಿಸುವಂತೆ ಮಾಡಬೇಕು. ಆಗಲೇ ಇವನಂತಿರುವ ಇತರ ಗೋಮುಖವ್ಯಾಘ್ರರಿಗೆ ಬುದ್ದಿಕಲಿಸಲು ಸಾದ್ಯ