ಬೆಳ್ತಂಗಡಿ,ಎಪ್ರಿಲ್.07 : ಆಳ್ವಾಸ್ ಮೂಡಬಿದ್ರೆಯ ಪ್ರಥಮ ಬಿಕಾಂ ವಿದ್ಯಾರ್ಥಿನಿ ಭಾಗ್ಯಶ್ರೀ(18) ಎಂಬುವಳೇ ಮೃತಪಟ್ಟವರು. ಬೆಳ್ತಂಗಡಿ ಮರೋಡಿ ರಾಮಣ್ಣ ಸಾಲಿಯಾನ್ ಎಂಬವರ ಪುತ್ರಿ. ಇವರಿಗೆ ಇಬ್ಬರು ಮಕ್ಕಳು. ಭಾಗ್ಯಶ್ರೀಗೆ ಪರೀಕ್ಷೆಯ ರಜೆ ಇದ್ದ ಕಾರಣ ಮನೆಯಲ್ಲೇ ಇದ್ದಳು . ಬೇರೆ ಯಾರೂ ಕೂಡಾ ಮನೆಯಲ್ಲಿ ಇರಲಿಲ್ಲ. ಪೋಷಕರು ಕೆಲಸಕ್ಕೆ ಹೋಗಿದ್ದರು. ಬಡ ಕುಟುಂಬದವಳಾಗಿದ್ದ ಈಕೆ ಹತ್ತನೇ ತರಗತಿಯಲ್ಲಿ ಶೇ.99 ಅಂಕಗಳನ್ನು ಪಡೆದಿದ್ದಳು. ಬಡತನವನ್ನುಕಂಡವರೊಬ್ಬರು ಈಕೆಯನ್ನು ಮುಂದಿನ ವಿದ್ಯಾಭ್ಯಾಸಕ್ಕಾಗಿ ಆಳ್ವಾಸ್‍ಗೆ ಸೇರಿಸಿದ್ದರು.ಪ್ರಾಯೋಜಕತ್ವ ವಹಿಸಿದ್ದವರೇ ಬಾಲಕಿಯ ಎಲ್ಲಾ ಖರ್ಚುವೆಚ್ಚಗಳನ್ನು ವಹಿಸಿಕೊಂಡಿದ್ದರು.
ಮನೆ ಹಂಚಿನದ್ದಾಗಿದ್ದು ಮಹಡಿಯನ್ನು ಹೊಂದಿದೆ.ಮಹಡಿಯಲ್ಲಿದ್ದ ಬಾಲಕಿ ಬೆಂಕಿಯ ಪ್ರಭಾವಕ್ಕೆ ಸುಟ್ಟು ಕರಕಲಾಗಿದ್ದಾಳೆ.ಬೆಂಕಿಯ ಕೆನ್ನಾಲಗೆಗೆ ಮಹಡಿಯ ಹಂಚುಗಳು ತುಂಡಾಗಿ ಶವದ ಮೇಲೆ ಬಿದ್ದಿವೆ. ಮನೆಯೂ ಭಾಗಶಃ ಸುಟ್ಟು ಹೋಗಿದೆ.
ಬೆಂಕಿಯದುರಂತ ಆಕಸ್ಮಿಕವಾಗಿದೆಯೆಂದು ಒಂದೆಡೆ ಹೇಳಲಾಗುತ್ತಿದ್ದರೂ ಇನ್ನೊಂದೆಡೆ ಮನೆಯ ಒಳಗಿನಿಂದ ಬಾಗಿಲಿಗೆ ಚಿಲಕ ಹಾಕಲಾಗಿತ್ತು.ಹೀಗಾಗಿ ಇದು ಆತ್ಮಹತ್ಯೆಯಾಗಿರುವ ಶಂಕೆ ವ್ಯಕ್ತವಾಗುತ್ತಿದೆ.ಬೆಳ್ತಂಗಡಿ ವೃತ್ತ ನಿರೀಕ್ಷಕರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.