ಕನ್ನಡ ವಾರ್ತೆಗಳು

ನಿವೇಶನರಹಿತರಿಂದ ಮನಪಾ ಎದುರು ಧರಣಿ ಸತ್ಯಾಗ್ರಹ

Pinterest LinkedIn Tumblr

Cpim_protest_photo_1

ಮಂಗಳೂರು, ಎ.07  : ದೇಶದಲ್ಲಿ 48 ಕೋಟಿ ಕುಟುಂಬಗಳು ವಸತಿರಹಿತವಾಗಿದೆ ಎಂದು ಕೇಂದ್ರ ಸರಕಾರದ ದಾಖಲೆಗಳೇ ಹೇಳುತ್ತಿದ್ದು, ಆರೋಗ್ಯಕರ ಬದುಕಿಗೆ ಪೂರಕವಾದ ನಿವೇಶನ ನೀಡದೆ ಕೇಂದ್ರ ಸರಕಾರದ ಸ್ವಚ್ಛ ಭಾರತ ಅಭಿಯಾನ ಪರಿಪೂರ್ಣವಾಗಲು ಸಾಧ್ಯವೇ ಇಲ್ಲ ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಜಿ.ವಿ.ಶ್ರೀರಾಮ ರೆಡ್ಡಿ ಹೇಳಿದ್ದಾರೆ. ಮಂಗಳೂರು ಮಹಾನಗರ ಪಾಲಿಕೆಯ ಎದುರುಗಡೆ ಸೋಮವಾರ ಜಿಲ್ಲೆಯ ನಿವೇಶನರಹಿತರು ಸಿಐಟಿಯು ನೇತೃತ್ವದಲ್ಲಿ ಹಮ್ಮಿಕೊಂಡಿರುವ 24 ಗಂಟೆಗಳ ನಿರಂತರ ಧರಣಿ ಸತ್ಯಾಗ್ರಹವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಕರ್ನಾಟಕದಲ್ಲಿ 36 ಲಕ್ಷ ಕುಟುಂಬಗಳು ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿ 3 ವರ್ಷಗಳೇ ಕಳೆದರೂ ಯಾವುದೇ ಪ್ರಯೋಜನವಾಗಿಲ್ಲ. ಕಳೆದ ಅಕ್ಟೋಬರ್‌ನಲ್ಲಿ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಿದ ಸಂದರ್ಭ ಸ್ವತಃ ಮುಖ್ಯಮಂತ್ರಿಗಳ ಜೊತೆ ಭೂಮಿ ಪ್ರಶ್ನೆ ಬಗ್ಗೆ ಚರ್ಚಿಸಲಾಗಿದೆ. ಆದರೆ ಅವರಿಗೆ ನಿವೇಶನರ ರಹಿತರ ಬಗ್ಗೆ ಸಮರ್ಪಕ ಮಾಹಿತಿಯೇ ಇಲ್ಲ. ಬಜೆಟ್‌ನಲ್ಲಿಯೂ ಅನುದಾನ ಇರಿಸಲಾಗಿಲ್ಲ. ಎಕರೆಯೊಂದಕ್ಕೆ 3 ಲಕ್ಷ ರೂ.ನಲ್ಲಿ ಭೂಮಿ ಖರೀದಿಸಿ ನೀಡುವಂತೆ ಸೂಚಿಸಲಾಗಿದೆ ಎಂದು ಹೇಳಲಾಗುತ್ತಿದೆ. ಇದು ತೀರಾ ಬೇಜವಾಬ್ದಾರಿ ಯ ಹೇಳಿಕೆ ಎಂದವರು ಟೀಕಿಸಿದರು.

Cpim_protest_photo_2

ಭೂಗಳ್ಳರ ಕೈಯಲ್ಲಿ ಎಕರೆಗಟ್ಟಲೆ ಭೂಮಿ: 
ರಾಜ್ಯ ಸೇರಿದಂತೆ ಜಿಲ್ಲೆಯಲ್ಲೂ ಕೂಡ ಎಕರೆಗಟ್ಟಲೆ ಭೂಮಿ ಭೂಗಳ್ಳರ ಕೈಯಲ್ಲಿದೆ. ಈ ಬಗ್ಗೆ ಕಾಂಗ್ರೆಸ್, ಬಿಜೆಪಿ ಹಾಗೂ ಜನತಾದಳ ಸೇರಿದಂತೆ ಯಾವೊಂದು ಪಕ್ಷದ ಜನಪ್ರತಿನಿಧಿಗಳೂ ಧ್ವನಿ ಎತ್ತುವುದಿಲ್ಲ. ಬಹುರಾಷ್ಟ್ರೀಯ ಕಂಪೆನಿಗಳಿಗೆ ನೀಡಲು ನಮ್ಮಲ್ಲಿ ಭೂಮಿ ಇದೆಯಾದರೂ ನಿವೇಶನ ರಹಿತರಿಗೆ ನೀಡಲು ಭೂಮಿಯೇ ಇಲ್ಲ ಎಂದು ಸಬೂಬು ನೀಡಲಾಗುತ್ತದೆ. ರಾಜ್ಯದಲ್ಲಿ 34 ಸಾವಿರ ಎಕ್ರೆ ಭೂಮಿಯನ್ನು ಹುಡುಕಿ ಸರಕಾರದ ಗಮನಕ್ಕೆ ತರಲಾಗಿದ್ದರೂ ಅದನ್ನು ಸರಕಾರ ಸ್ವಾಧೀನ ಪಡಿಸಿಕೊಂಡಿಲ್ಲ. ಲಕ್ಷಾಂತರ ಎಕ್ರೆ ಅಕ್ರಮ ಭೂಸ್ವಾಧೀನದ ಹಿನ್ನೆಲೆಯಲ್ಲಿ ಕಟ್ಟಾಸುಬ್ರಹ್ಮಣ್ಯ ಮತ್ತು ಅವರ ಪುತ್ರ ಜೈಲಿಗೆ ಹೋಗಲು ಸಿಪಿಎಂ ಪಕ್ಷ ನೀಡಿದ ಮಾಹಿತಿಯೇ ಕಾರಣ. ಹಾಗಾಗಿ ಸಿದ್ದರಾಮಯ್ಯ ಸರಕಾರಕ್ಕೆ ಅಹಿಂದ, ಜನಸಾಮಾನ್ಯರ ಬಗ್ಗೆ ಕಾಳಜಿ ಇದೆ ಎಂದಾದರೆ ರಿಯಲ್ ಎಸ್ಟೇಟ್ ದಂಧೆಯಲ್ಲಿ ತೊಡಗಿಕೊಂಡಿರುವ ಭೂಗಳ್ಳರ ಬಳಿ ಅದೆಷ್ಟು ಭೂಮಿ ಇದೆ ಎಂಬುದನ್ನು ಸರಕಾರ ತಿಳಿಸಲಿ. ಅವರ ವಿರುದ್ಧ ಕ್ರಮ ಕೈಗೊಂಡಲ್ಲಿ ನಾಳೆ ಯಾರೂ ಶಾಸಕರಾಗಿ ಉಳಿಯುವುದಿಲ್ಲ ಎಂಬ ಅಂಜಿಕೆಯಿಂದಲೇ ಕ್ರಮ ಕೈಗೊಳ್ಳಲಾಗುತ್ತಿಲ್ಲ ಎಂದು ಶ್ರೀರಾಮ ರೆಡ್ಡಿ ಆರೋಪಿಸಿದರು.

28ರಂದು ವಿಧಾನಸೌಧಕ್ಕೆ ಮುತ್ತಿಗೆ: 
ನಿವೇಶನರಹಿತರ ಬೇಡಿಕೆಗಳನ್ನು ಮುಂದಿಟ್ಟು ಎ.28 ರಂದು ವಿಧಾನಸೌಧಕ್ಕೆ ಮುತ್ತಿಗೆ ಚಳವಳಿಯನ್ನು ಆಯೋಜಿ ಸಲಾಗಿದೆ ಎಂದು ಅವರು ಈ ಸಂದರ್ಭ ಅವರು ತಿಳಿಸಿದರು. ಮನಪಾ ಸದಸ್ಯ ದಯಾನಂದ ಶೆಟ್ಟಿ, ಸಿಪಿಎಂ ಮುಖಂಡ ವಸಂತ ಆಚಾರಿ, ಮನಪಾ ಮಾಜಿ ಸದಸ್ಯೆ ಜಯಂತಿ ಬಿ. ಶೆಟ್ಟಿ, ಯೋಗೀಶ್ ಜಪ್ಪಿನಮೊಗರು, ಅಶೋಕ್ ಶ್ರೀಯಾನ್, ಮಂಜುಳಾ ಶೆಟ್ಟಿ ಮತ್ತಿತರರು ಧರಣಿಯ ನೇತೃತ್ವ ವಹಿಸಿದ್ದರು. ಸಂತೋಷ್ ಶಕ್ತಿನಗರ ಧರಣಿ ಉದ್ಘಾಟನಾ ಕಾರ್ಯಕ್ರಮವನ್ನು ನಿರೂಪಿಸಿದರು.

ನಿವೇಶನರಹಿತರ ಪಟ್ಟಿಯಲ್ಲಿ ಹೆಸರಿಲ್ಲ: 
ಕಳೆದ 20 ವರ್ಷಗಳಿಂದ ಮನಪಾ ವ್ಯಾಪ್ತಿಯಲ್ಲಿ ಯಾರಿಗೂ ನಿವೇಶನ ನೀಡಲಾಗಿಲ್ಲ. ಸತತ ಅರ್ಜಿಗಳನ್ನು ಸಲ್ಲಿಸಿದ್ದರೂ ನಿವೇಶನರಹಿತರ ಪಟ್ಟಿಯಲ್ಲಿ ಅರ್ಜಿ ಸಲ್ಲಿಸಿದವರ ಹೆಸರೇ ಇಲ್ಲ. ಬಿಜೆಪಿ ಆಡಳಿತಾವಧಿಯ ವೇಳೆ ಸಲ್ಲಿಸಲಾಗಿದ್ದ ಅರ್ಜಿಗಳು ಮಾಜಿ ಶಾಸಕರ ದೇರೆಬೈಲ್ ಕೊಂಚಾಡಿಯ ನಿವೇಶನದ ಕಸದ ರಾಶಿಯಲ್ಲಿ ಪತ್ತೆಯಾಗಿತ್ತು. ಈ ಮೂಲಕ ನಿವೇಶನ ರಹಿತರಿಗೆ ಅವಮಾನ ಮಾಡಲಾಗಿತ್ತು ಎಂದು ಪ್ರಾಸ್ತಾವಿಕವಾಗಿ ಮಾತನಾಡಿದ ಸಿಪಿಎಂ ಮುಖಂಡ ಸುನೀಲ್ ಕುಮಾರ್ ಬಜಾಲ್ ಹೇಳಿದರು.

Write A Comment