ಕನ್ನಡ ವಾರ್ತೆಗಳು

ಗಂಗೊಳ್ಳಿ ಅಳಿವೆಯಲ್ಲಿ ಹೂಳೆತ್ತುವ ಕಾರ್ಯಕ್ಕೆ ಕ್ಷಣಗಣನೆ; ಮುಗಿದ ಸರ್ವೇ ಕಾರ್ಯ; ಮೀನುಗಾರರ ಕನಸು ಆಗಲಿದೆ ನನಸು

Pinterest LinkedIn Tumblr

ವಿಶೇಷ ವರದಿ- ಯೋಗೀಶ್ ಕುಂಭಾಸಿ

ಕುಂದಾಪುರ : ಗಂಗೊಳ್ಳಿ ಹಾಗೂ ಸುತ್ತಮುತ್ತಲಿನ ಮೀನುಗಾರರ ಬಹುಕಾಲದ ಬೇಡಿಕೆಯಾಗಿರುವ ಅಳಿವೆ ಹೂಳೆತ್ತುವ ಕಾರ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ.

ಇಲಾಖೆಯ ಅಧಿಕಾರಿಗಳು ಹಾಗೂ ಸ್ಥಳೀಯರ ಮೀನುಗಾರರ ಸಮ್ಮುಖದಲ್ಲಿ ಇಂದು ಅಳಿವೆ, ಗಂಗೊಳ್ಳಿಯ ಹೊಸ ಜೆಟ್ಟಿ ಮತ್ತು ಕೋಡಿ ಜೆಟ್ಟಿ ಪ್ರದೇಶಗಳಲ್ಲಿ ಸರ್ವೆ ಕಾರ್ಯ ನಡೆಸಲಾಗಿದೆ. ಸರ್ವೆ ವರದಿ ನಾಳೆ ಇಲಾಖೆಯ ಕೈಸೇರಲಿದ್ದು ಶೇಖರಣೆಗೊಂಡಿರುವ ಹೂಳಿನ ಪ್ರಮಾಣ ತಿಳಿದು ಮತ್ತು ಹೂಳೆತ್ತುವ ಪ್ರದೇಶಗಳನ್ನು ನಿಗದಿಪಡಿಸಿ ಗುತ್ತಿಗೆದಾರರಿಗೆ ಡ್ರಜ್ಜಿಂಗ್ ಆರಂಭಿಸಲು ಸೂಚನೆ ನೀಡುವ ಸಾಧ್ಯತೆಗಳಿವೆ. ಸುಮಾರು 1.76 ಕೋಟಿ ರೂ. ವೆಚ್ಚದ ಹೂಳೆತ್ತುವ ಕಾರ್ಯ ಬಹುತೇಕ ಎ.10 ರಿಂದ ಆರಂಭಗೊಳ್ಳಲಿದೆ ಎನ್ನಲಾಗುತ್ತಿದೆ. ಸದ್ಯಕ್ಕೆ ಮೀನುಗಾರರು ಸೂಚಿಸಿದ ಗಂಗೊಳ್ಳಿ ಜೆಟ್ಟಿ ಮತ್ತು ಕೋಡಿ ಜೆಟ್ಟಿ ಪ್ರದೇಶದ ಆಯ್ದ ಭಾಗಗಳಲ್ಲಿ ಮತ್ತು ಅಳಿವೆ ಬಾಗಿಲಿನಲ್ಲಿ ಸ್ವಲ್ಪ ಭಾಗದಲ್ಲಿ ಹೂಳೆತ್ತುವ ಕಾರ್ಯ ನಡೆಸಲಾಗುತ್ತದೆ.

Gangolli_Alive_Drezzing (12) Gangolli_Alive_Drezzing (1) Gangolli_Alive_Drezzing (4) Gangolli_Alive_Drezzing (3) Gangolli_Alive_Drezzing (6) Gangolli_Alive_Drezzing (5) Gangolli_Alive_Drezzing (2) Gangolli_Alive_Drezzing (10) Gangolli_Alive_Drezzing (11) Gangolli_Alive_Drezzing (8) Gangolli_Alive_Drezzing (7) Gangolli_Alive_Drezzing (9) Gangolli_Alive_DrezzingGangolli_Alive_Drezzing (13)

ಏನಿದು ಡ್ರೆಜ್ಜಿಂಗ್ ಸಮಸ್ಯೆ: ಗಂಗೊಳ್ಳಿ ಅಳಿವೆಯಲ್ಲಿ ಡ್ರೆಜ್ಜಿಂಗ್ ಸಮಸ್ಯೆ ಇಂದು ನಿನ್ನೆಯದಲ್ಲ. 1972ರಲ್ಲಿ ಮ್ಯಾಂಗನೀಸ್ ಅದಿರನ್ನು ಸಾಗುಸುವ ಸಂದರ್ಭದಲ್ಲಿ ಹೂಳು ತೆಗೆಯಲಾಗಿತ್ತು. ಆನಂತರದಲ್ಲಿ ಹೂಳು ತೆಗೆಯಬೇಕೆಂಬ ಬೇಡಿಕೆಯನ್ನು ಹಲವು ಬಾರಿ ಸರಕಾರದ ಮುಂದೆ ಇಟ್ಟಿದ್ದರಾದರೂ ಸ್ಪಂದನವಿರಲಿಲ್ಲ. ಮೂರು ವರ್ಷಗಳ ಹಿಂದೆ ರಾಜ್ಯ ಹಾಗೂ ಕೇಂದ್ರ ಸರಕಾರದ ಅನುದಾನದಲ್ಲಿ ಬ್ರೇಕ್ ವಾಟರ್ ನಿರ್ಮಾಣದ ಯೋಜನೆ ಕೈಗೆತ್ತಿಕೊಂಡಿದ್ದರಿಂದ ಹೂಳೆತ್ತುವ ವಿಚಾರ ಮರೆಮಾಚುವಂತಾಗಿತ್ತು. ಆದರೆ ಬಂದರು ಹಾಗೂ ಅಳಿವೆ ಭಾಗದಲ್ಲಿ ಹೂಳು ವರ್ಷದಿಂದ ವರ್ಷಕ್ಕೆ ಜಾಸ್ತಿಯಾಗುತ್ತಿದ್ದ ಕಾರಣ ಬೋಟುಗಳು ಅಪಘಾತಕ್ಕೆ ತುತ್ತಾಗುತ್ತಿದ್ದವು. ಅದು ಕೆಲವು ಮೀನುಗಾರರು ಜೀವವನ್ನೂ ಬಲಿ ತೆಗೆದುಕೊಂಡಿತು. ಹೂಳೆತ್ತುವ ಮನವಿಗೆ ಸರಕಾರ ಸರಿಯಾದ ಸ್ಪಂದಿಸದಿದ್ದಾಗ ಮತ್ತೆ ಹೋರಾಟದ ಎಚ್ಚರಿಕೆಯನ್ನೂ ನೀಡಿದ್ದರು. ಎಲ್ಲದರ ಫಲವಾಗಿ 2012ರಲ್ಲಿ ಸರಕಾರ ಅನುಮೋದನೆ ನೀಡಿತ್ತಾದರೂ ಕಾಮಗಾರಿಯ ಗುತ್ತಿಗೆ ಪಡೆಯುತ್ತಿದ್ದ ಕಂಪೆನಿಗಳ ನಡುವಿನ ಕಿತ್ತಾಟದಿಂದ ಹೂಳು ಅಳಿವೆಯಲ್ಲಿಯೇ ಉಳಿಯುವಂತಾಗಿ ಬಂದರಿಗೆ ಬಂದಿದ್ದ ಯಂತ್ರಗಳು ಹಿಂದಿರುಗಿದ್ದವು..

ಇದೀಗ ಮತ್ತೆ ಹೂಳೆತ್ತುವ ಕಾರ್ಯಕ್ಕೆ ಚಾಲನೆ ದೊರೆತಿದೆ. ಸುಮಾರು 1.76 ಕೋಟಿ ರೂ. ವೆಚ್ಚದಲ್ಲಿ ಡ್ರೆಜ್ಜಿಂಗ್ ಕಾಮಗಾರಿಯನ್ನು ಗಂಗೊಳ್ಳಿ ಅಳಿವೆ, ಗಂಗೊಳ್ಳಿಯ ಹೊಸ ಮೀನುಗಾರಿಕಾ ಜೆಟ್ಟಿ ಪ್ರದೇಶ ಹಾಗೂ ಕೋಡಿಯ ಜೆಟ್ಟಿ ಪ್ರದೇಶದಲ್ಲಿ ಕೈಗೆತ್ತಿಕೊಂಡು ಪೂರ್ಣಗೊಳಿಸಿಕೊಡಲು ಸೀ ಈಗಲ್ ಕಂಪೆನಿಯು ಗುತ್ತಿಗೆ ಪಡೆದುಕೊಂಡಿದೆ. ಮೀನುಗಾರಿಕೆಯ ತೊಂದರೆಯಾಗದ ಹಾಗೆ ಹೂಳೆತ್ತುವ ಕೆಲಸವನ್ನು ನಡೆಯಲಿದ್ದು, ಈ ಬಗ್ಗೆ ಅಧಿಕಾರಿಗಳು ಮೀನುಗಾರ ಮುಖಂಡರುಗಳೊಂದಿಗೆ ಸಮಾಲೋಚಿಸಿ ಅವರ ಸಹಕಾರವನ್ನೂ ಕೋರಿದ್ದಾರೆ.

ಸರ್ವೇ ಕಾರ್ಯದ ಸಂದರ್ಭದಲ್ಲಿ ಬಂದರು ಮತ್ತು ಮೀನುಗಾರಿಕಾ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ನಾಗರಾಜ್, ಜ್ಯೂನಿಯರ್ ಇಂಜಿನಿಯರ್ ಲವೀಶ್, ಗಂಗೊಳ್ಳಿ ವಲಯ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಮಂಜು ಬಿಲ್ಲವ, ಟ್ರಾಲ್ ಬೋಟ್ ಯೂನಿಯನ್‌ನ ಮಂಜುನಾಥ ಖಾರ್ವಿ, ಮೀನುಗಾರ ಮುಖಂಡ ಕೃಷ್ಣ ಕೋಟಾನ್, ಗುತ್ತಿಗೆ ವಹಿಸಿಕೊಂಡ ಸೀ‌ಈಗಲ್ ಕಂಪೆನಿಯ ಭಗವಾನ್ ಮೊದಲಾದವರು ಉಪಸ್ಥಿತರಿದ್ದರು.

Write A Comment