ಕನ್ನಡ ವಾರ್ತೆಗಳು

ಶೀಘ್ರದಲ್ಲೇ ಐಎಸ್‌ಪಿಆರ್‌ಎಲ್ ಘಟಕ ಸ್ಥಾಪನೆ -ಕಚ್ಚಾ ತೈಲ ಸಂಗ್ರಹಕ್ಕೆ ಕ್ರಮ :ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್

Pinterest LinkedIn Tumblr

Darmendr_Pradhan_1

ಮಂಗಳೂರು: ದೇಶದಲ್ಲಿ ಸುರಂಗ ಮೂಲಕ ತೈಲ ಸಂಗ್ರಹ ಮಾಡುವ ಐಎಸ್‌ಪಿಆರ್‌ಎಲ್ ಘಟಕಗಳು ಅಕ್ಟೋಬರ್ ವೇಳೆಗೆ ಸಿದ್ಧಗೊಳ್ಳಲಿದ್ದು, ತೈಲ ಬೆಲೆ ಇಳಿಕೆ ಹಿನ್ನೆಲೆಯಲ್ಲಿ ಶೀಘ್ರ ಕಚ್ಚಾ ತೈಲ ಸಂಗ್ರಹಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ವಿಶಾಖಪಟ್ಟಣ, ಮಂಗಳೂರು ಮತ್ತು ಪಾದೂರಿನಲ್ಲಿ ಐಎಸ್‌ಪಿಆರ್‌ಎಲ್ ಘಟಕ ನಿರ್ಮಾಣ ಕೊನೆಯ ಹಂತದಲ್ಲಿವೆ. ಈ ಹಣಕಾಸು ವರ್ಷದಲ್ಲೇ ಅವುಗಳನ್ನು ತುಂಬಿಸಿ, ತೈಲ ಶೇಖರಣೆ ಮಾಡುತ್ತೇವೆ ಎಂದರು.

ಕೌಶಲ್ಯ ನಗರ: ದೇಶದ ಪ್ರಮುಖ ತೈಲ ಸಂಸ್ಕರಣ ಘಟಕ ಎಂಆರ್‌ಪಿಎಲ್, ಒಎಂಪಿಎಲ್, ಐಎಸ್‌ಪಿಆರ್‌ಎಲ್, ಎಂಎಸ್‌ಇಝೆಡ್‌ಗಳಿರುವ ಮಂಗಳೂರು ನಗರಕ್ಕೆ ಪ್ರಧಾನಿ ಕನಸಿನ ಮೇಕ್ ಇನ್ ಇಂಡಿಯಾ, ಸ್ಕಿಲ್ ಇಂಡಿಯಾ ಪ್ರಯೋಗ ಮೂಲಕ ಕೌಶಲ್ಯ ನಗರವಾಗಿ ಸಂಪರ್ಕ ಕಲ್ಪಿಸಲಾಗುವುದು ಎಂದು ಸಚಿವರು ಹೇಳಿದರು.

ಮೇಕ್ ಇನ್ ಇಂಡಿಯಾ ಎಂಬುದು ಯುವಜನತೆಗೆ ಉದ್ಯೋಗ ಮೂಲಕ ಕ್ರಾಂತಿ ಮಾಡುವುದು ಕೇಂದ್ರ ಸರಕಾರದ ಹೊಸ ಪ್ರಯೋಗ. ಅದಕ್ಕಾಗಿ ಯುವಜನತೆಯಲ್ಲಿ ಸ್ಕಿಲ್ ಇಂಡಿಯಾ ಯೋಜನೆ ಮೂಲಕ ಕೌಶಲ್ಯ ವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದರು.

Darmendr_Pradhan_2 Darmendr_Pradhan_3 Darmendr_Pradhan_4

ಮಂಗಳೂರು ವಿಶೇಷ ಆರ್ಥಿಕ ವಲಯದಲ್ಲಿರುವ ಉದ್ಯಮಗಳ ಹೂಡಿಕೆದಾರರನ್ನು ಭಾನುವಾರ ಭೇಟಿ ಮಾಡಲಿದ್ದೇನೆ. ಎಂಆರ್‌ಪಿಎಲ್ ಪ್ರಗತಿ ಪರಿಶೀಲನೆ ನಡೆಸುತ್ತೇನೆ. ಸ್ಥಳೀಯ ಸಮಸ್ಯೆಗಳು, ಬೇಡಿಕೆಗಳ ಅಧ್ಯಯನ ನಡೆಸುತ್ತೇನೆ ಎಂದು ಅವರು ಹೇಳಿದರು.

ಮಂಗಳೂರಿನ ಎಂಆರ್‌ಪಿಎಲ್‌ನ ಸಲ್ಫರ್ ಮತ್ತು ಕೋಕ್ ಘಟಕದಿಂದ ಪರಿಸರ ಮಾಲಿನ್ಯ ಆಗುತ್ತಿರುವ ವಿಚಾರ ಗಮನಕ್ಕೆ ಬಂದಿದೆ. ನಾನು ಅಲ್ಲಿಗೆ ಭೇಟಿ ನೀಡಿದ ಬಳಿಕ ಸಂತ್ರಸ್ತರ ಪ್ರತಿನಿಧಿಗಳು ಮತ್ತು ಅಧಿಕಾರಿಗಳ ಜತೆ ಚರ್ಚಿಸಿ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸುತ್ತೇನೆ ಎಂದು ಅವರು ಹೇಳಿದರು.

ಮಂಗಳೂರು- ಕೊಚ್ಚಿನ್ ಗ್ಯಾಸ್ ಪೈಪ್‌ಲೈನ್ ಸಮಸ್ಯೆ ಕೂಡಾ ನಮ್ಮ ಗಮನದಲ್ಲಿದೆ. ಕೇರಳದಲ್ಲಿ ತೀವ್ರ ವಿರೋಧವಿದ್ದು, ಅಲ್ಲಿಯ ಸರಕಾರದ ಜತೆ ಮಾತುಕತೆ ನಡೆಸುತ್ತೇನೆ. ಪಾದೂರು- ಮಂಗಳೂರು ಮಧ್ಯೆ ಕೂಡಾ ಪೈಪ್‌ಲೈನ್ ಹಾಕುವ ಬಗ್ಗೆಯೂ ವಿವಾದವಿದ್ದು, ಅದನ್ನು ಸ್ಥಳೀಯ ಸಂಸದರ ಮೂಲಕ ಪರಿಹರಿಸುತ್ತೇವೆ ಎಂದರು.

ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಸುನಿಲ್ ಕುಮಾರ್, ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಸುಲೋಚನಾ ಭಟ್, ಜಿಲ್ಲಾಧ್ಯಕ್ಷ ಪ್ರತಾಪಸಿಂಹ ನಾಯಕ್, ಮಾಜಿ ಶಾಸಕರಾದ ಲಾಲಾಜಿ ಮೆಂಡನ್, ಯೋಗೀಶ್ ಭಟ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Darmendr_Pradhan_5 Darmendr_Pradhan_6 Darmendr_Pradhan_9

ಗ್ಯಾಸ್ ಸಬ್ಸಿಡಿ ಕೈಬಿಡಲು ಮನವಿ: ಅಡುಗೆ ಅನಿಲಕ್ಕೆ ಸರಕಾರ ನೀಡುವ ಸಬ್ಸಿಡಿಯನ್ನು ಅನುಕೂಲ ಇದ್ದವರು ಬಿಟ್ಟು ಕೊಡಿ ಎಂಬ ಪ್ರಧಾನಿ ಕರೆಯನ್ನು ರಾಜಕೀಯಕ್ಕೆ ಬಳಸುವ ಅಗತ್ಯವಿಲ್ಲ. ಮಹಾರಾಷ್ಟ್ರ ಕಾಂಗ್ರೆಸ್ ಮುಖ್ಯಸ್ಥ ಅಶೋಕ್ ಚೌಹಾಣ್ ಸೇರಿದಂತೆ ಹಲವು ಈ ಆಂದೋಲನದಲ್ಲಿ ಕೈ ಜೋಡಿಸಿದ್ದಾರೆ ಎಂದು ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದರು.

ವಿತ್ತ ಸಚಿವರು, ನಾನು ಸೇರಿದಂತೆ ಹಲವು ಮಂದಿ ಸಬ್ಸಿಡಿ ಬಿಟ್ಟಿದ್ದೇವೆ. ಟಾಟಾ ಸಮೂಹ, ಕೋಟಕ್ ಮಹೇಂದ್ರದಂಥ ಕಂಪನಿಗಳು ಸಬ್ಸಿಡಿ ಕೈಬಿಟ್ಟಿವೆ. ಬೆಂಗಳೂರಿನಲ್ಲಿ ನಿನ್ನೆ ಪ್ರೇಮಕುಮಾರಿ ಎಂಬ ನಿವೃತ್ತ ಶಿಕ್ಷಕಿ ಬಂದು ತಮಗೆ ಸಬ್ಸಿಡಿ ಬೇಡ ಎಂಬ ಪತ್ರವನ್ನು ನನ್ನ ಕೈಗಿತ್ತಿದ್ದಾರೆ. ಇದನ್ನು ಒಂದು ಕೋಟಿಗೆ ತಲುಪಿಸುವುದು ನಮ್ಮ ಗುರಿ ಎಂದರು.

ವರ್ಷಕ್ಕೆ ನೀಡುವ ಏಳು ಅಡುಗೆ ಸಿಲಿಂಡರ್‌ನ ತಲಾ 200 ರೂ.ನಂತೆ 1400 ರೂ. ಮೊತ್ತವಾಗಲಿದೆ. ಇಂದಿನ ಕಾಲದಲ್ಲಿ ಒಮ್ಮೆ ಹೋಟೆಲ್‌ಗೆ ಹೋದರೆ 1500 ಖರ್ಚು ಮಾಡುವ ಜನರು, ಸಬ್ಸಿಡಿ ಕೈಬಿಟ್ಟರೆ ದೊಡ್ಡ ವಿಷಯ ಆಗದು. ಜನಸಾಮಾನ್ಯರು ಮುಂದೆ ಬರುತ್ತಿದ್ದಾರೆ ಎಂದು ಸಚಿವರು ಹೇಳಿದರು.

Write A Comment