ಕನ್ನಡ ವಾರ್ತೆಗಳು

ಏ.1ರಿಂದ ವೆನ್ಲಾಕ್ ಆಸ್ಪತ್ರೆಯಲ್ಲಿ ಮೀನು ಊಟಕ್ಕೆ ನಿಷೇಧ

Pinterest LinkedIn Tumblr

wenlock_fish_notuse

ಮಂಗಳೂರು: ಸಮುದ್ರದ ತಾಜಾ ಮೀನಿಗೆ ಮಂಗಳೂರು ಪ್ರಸಿದ್ಧ. ಆದರೆ ಹಲವು ಜಿಲ್ಲೆಗಳಿಂದ ರೋಗಿ ಗಳು ಆಗಮಿಸುವ ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಏ.1ರಿಂದ ಮೀನು ಊಟಕ್ಕೆ ನಿಷೇಧ. ಇನ್ನೇನಿದ್ದರೂ ಸಸ್ಯಾಹಾರಿ ಭೋಜನ ಮಾತ್ರ.

ಕುಟುಂಬ ಕಲ್ಯಾಣ ಇಲಾಖೆ ವ್ಯಾಪ್ತಿಯ ಸರಕಾರಿ ಆಸ್ಪತ್ರೆಗಳಲ್ಲಿ 2015-16ನೇ ಸಾಲಿನಲ್ಲಿ ಒಳರೋಗಿಗಳ ಪಥ್ಯಾಹಾರದ ಸಲುವಾಗಿ ಆಹಾರ ಪದಾರ್ಥಗಳು, ಪ್ರಥಮ ದರ್ಜೆ ಬ್ರೆಡ್ ಹಾಗೂ ಆಸ್ಪತ್ರೆ ಅಗತ್ಯ ವಸ್ತುಗಳನ್ನು ಟೆಂಡರ್ ಮೂಲಕ ಖರೀದಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತರು ಕಳುಹಿಸಿರುವ ಸುತ್ತೋಲೆಯಲ್ಲಿ ಸಸ್ಯಾಹಾರ ನೀಡಲು ಆದೇಶಿಸಲಾಗಿದೆ. ಅದರಂತೆಯೇ ಈಗಾಗಲೇ ಟೆಂಡರ್ ಕರೆಯಲಾಗಿದೆ. ಹಿಂದೆ ಮಧ್ಯಾಹ್ನದ ಊಟದ ಜತೆಗೆ ನೀಡುತ್ತಿದ್ದ ಬಂಗುಡೆ, ಬೂತಾಯಿ ಅಥವಾ ಕಲ್ಲೂರು ಮೀನುಗಳ ಪದಾರ್ಥವನ್ನು ಹೊಸ ಆರ್ಥಿಕ ವರ್ಷಕ್ಕೆ ಸ್ಥಗಿತಗೊಳಿಸಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ.90ರಷ್ಟು ಜನರು ಮೀನು ಸೇವಿಸುವವರು. ಸರಕಾರಿ ಆಸ್ಪತ್ರೆಗೆ ಬರುವ ಬಡವರಿಗೆ ಮೀನು ಊಟ ನಿಲ್ಲಿಸುವುದು ಸರಿಯಲ್ಲ. ಇಂಥ ನಿರ್ಧಾರ ಕೈಗೊಳ್ಳುವ ಮೊದಲು ಚರ್ಚೆ ಮಾಡಬಹುದಿತ್ತು. ಮೀನು ಪದಾರ್ಥ ಕೊಡುವ ಬಗ್ಗೆ ಇನ್ನೊಮ್ಮೆ ಇಲಾಖೆಗೆ ಪತ್ರ ಬರೆಯಿರಿ ಎಂದು ಆಸ್ಪತ್ರೆ ಅಧೀಕ್ಷರಿಗೆ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಸೂಚಿಸಿದರು.

ವೆನ್ಲಾಕ್ ಆಸ್ಪತ್ರೆಯು ಹಿಂದೆ ವೈದ್ಯಕೀಯ ಶಿಕ್ಷಣ ಇಲಾಖೆ ಅಧೀನದಲ್ಲಿತ್ತು. ಆಗ ಸರಿಯಾಗಿ ಅನುದಾನಗಳು ಬರುತ್ತಿದ್ದವು. ಇದೀಗ ಆರೋಗ್ಯ ಇಲಾಖೆಗೆ ಅಧೀನಕ್ಕೆ ಬಂದು, ಅನುದಾನಗಳು ಬಾರದೇ ಮೀನು ಊಟ ನೀಡಲು ಸಮಸ್ಯೆಯಾಗಿದೆ ಎಂದು ಆಸ್ಪತ್ರೆ ಅಧಿಕಾರಿಗಳು ಹೇಳಿದರು.

ಆಸ್ಪತ್ರೆಯಲ್ಲಿ ಮೀನು ಸಹಿತ ಊಟ ನೀಡಲು 1.10 ಕೋಟಿ ರೂ. ಅನುದಾನ ಬೇಕು. ಇಲಾಖೆ ಮೀನು ಊಟ ಇಲ್ಲದ, 75 ಲಕ್ಷ ರೂ. ಪ್ರಸ್ತಾವನೆಗೆ ಅನುಮೋದನೆ ನೀಡಿದೆ. ಹಿಂದಿನ ಸಾಲಿನ 25 ಲಕ್ಷ ರೂ. ಬಾಕಿ ಇದೆ. ಹಿಂದಿನ ಬಾರಿ ಅನುದಾನ ಇಲ್ಲದೆ, ಹಾಲು ಸರಬರಾಜು ಕೂಡಾ ಸ್ಥಗಿತಗೊಂಡಿತ್ತು. ಅದನ್ನು ನಂತರ ಆರಂಭಿಸಿದ್ದೇವೆ. ಈ ಸಮಸ್ಯೆಯಿಂದ ಸಸ್ಯಾಹಾರ ಊಟ ಆರಂಭಿಸಿದ್ದೇವೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದರು.

ಇಲಾಖೆಯ ಸುತ್ತೋಲೆಯ ಎಂಟನೇ ಸೂಚನೆಯಲ್ಲಿ ಪೌಷ್ಟಿಕ ಪಥ್ಯಾಹಾರವು ಸ್ಥಳೀಯವಾಗಿ ರೂಢಿಯಲ್ಲಿರುವ (ಸಸ್ಯಾಹಾರ ಆಗಿರತಕ್ಕದ್ದು) ಹಾಗೂ ಯಾವ ಯಾವ ಪದಾರ್ಥಗಳು ನೀಡಬೇಕು ಎಂಬ ಪ್ರಮಾಣ ನಿಗದಿಪಡಿಸಿ ಅಧಿಸೂಚನೆಯಲ್ಲಿ ಕಡ್ಡಾಯವಾಗಿ ನಮೂದಿಸಬೇಕು ಎಂದು ಉಲ್ಲೇಖಿಸಲಾಗಿದೆ. ಸಸ್ಯಾಹಾರಕ್ಕೆ ಇದನ್ನೇ ಅಧಿಕಾರಿಗಳು ಆಧಾರವಾಗಿ ಪರಿಗಣಿಸಿದ್ದಾರೆ.

ಏಕಪ್ರಕಾರದ ಆಹಾರ – ಉದ್ದೇಶ

ಇಡೀ ರಾಜ್ಯದಲ್ಲಿ ಏಕಪ್ರಕಾರದ ಆಹಾರ ನೀಡುವ ದೃಷ್ಟಿಯಿಂದ ಎಲ್ಲ ಆಸ್ಪತ್ರೆಗಳಲ್ಲಿ ಸಸ್ಯಾಹಾರ ಊಟ ಆರಂಭಿಸಲಾಗಿದೆ. ಶುಚಿತ್ವ ಹಾಗೂ ಪೌಷ್ಟಿಕ ಆಹಾರಕ್ಕೆ ಆದ್ಯತೆ ನೀಡಲಾಗಿದೆ. ಮುಂದೆ ಶುಚಿತ್ವ ಕಾಪಾಡುವ ಮೂಲಕ ಎನ್‌ಜಿಒಗಳಿಂದ ಮೀನು ಊಟ ಸಿದ್ಧಪಡಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಅವರು ಸುದ್ಧಿಗಾರರಲ್ಲಿ ತಿಳಿಸಿದ್ದಾರೆ.

Write A Comment