ಕುಂದಾಪುರ: ಮಾ.31 ಮಂಗಳವಾರ ಮುಂಜಾನೆ ಸಿಡಿಲು ಸಹಿತ ಮಳೆಯಾಗಿದ್ದು, ಸಿಡಿಲಿನ ಆರ್ಭಟಕ್ಕೆ ಹಲವೆಡೆ ಅನಾಹುತಗಳು ಸಂಭವಿಸಿದೆ. ಪ್ರತ್ಯೇಕ ಪ್ರಕರಣಗಳಲ್ಲಿ ಮಕ್ಕಳ ಸಮೇತ ನಾಲ್ವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕೊಡ್ಲಾಡಿ ವರದಿ: ಕುಂದಾಪುರ ತಾಲೂಕಿನ ಕೊಡ್ಲಾಡಿ ಗ್ರಾಮದ ಕೊಂಜವಳ್ಳಿ ಎಂಬಲ್ಲಿ ಪಂಜು ನಾಯ್ಕ ಎನ್ನುವವರ ಮನೆಗೆ ಸಿಡಿಲು ಬಡಿದ ಪರಿಣಾಮ ಮನೆಯಲ್ಲಿದ್ದ ಪಂಜು ನಾಯ್ಕ ಅವರ ತಾಯಿ ಗೌರಿ, ಪತ್ನಿ ರೇವತಿ ಮತ್ತು ಮಕ್ಕಳಾದ ಪ್ರಥ್ವಿ ಮತ್ತು ದೀಪ್ತಿ ಗಾಯಗೊಂಡು ಕುಂದಾಪುರದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಿಡಿಲಿನ ಪ್ರಖರತೆಗೆ ಕಳೆದ ವರ್ಷವಷ್ಟೇ ಕಟ್ಟಿಸಿದ್ದ ಹೆಂಚಿನ ಮನೆಗೆ ಸಂಪೂರ್ಣ ಹಾನಿಯಾಗಿದ್ದು, ವಿದ್ಯುತ್ ಉಪಕರಣಗಳು ಸೇರಿದಂತೆ ಸಂಪೂರ್ಣ ಮನೆ ಹಾಗೂ ಒಳಗಿದ್ದ ಸಾಮಾನು-ಸರಂಜಾಮುಗಳು ಜಖಂಗೊಂಡಿದೆ.
ಹಟ್ಟಿಯಂಗಡಿ ವರದಿ: ತಾಲೂಕಿನ ಹಟ್ಟಿಯಂಗಡಿ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿನ ಗೌರಿ ಪೂಜಾರ್ತಿ ಎನ್ನುವವರ ಮನೆಗೆ ಸಿಡಿಲು ಬಡಿದು ಹಾನಿ ಸಂಭವಿಸಿದ್ದು, ಇದೇ ಸಂದರ್ಭದಲ್ಲಿ ಮನೆ ಸಮೀಪದ ಕೊಟ್ಟಿಗೆಯಲ್ಲಿದ್ದ 2 ಜಾನುವಾರುಗಳು ಸಾವನ್ನಪ್ಪಿದೆ.
ಸಿಡಿಲಿನ ಅನಾಹುತ ನಡೆದ ಪ್ರದೇಶಗಳಿಗೆ ಈಗಾಗಲೇ ಅಧಿಕಾರಿಗಳು ತೆರಳಿ ಪರಿಶೀಲನೆ ನಡೆಸಿದ್ದು, ಪರಿಹಾರ ಸೇರಿದಂತೆ ಮುಂಜಾಗ್ರತ ಕ್ರಮಗಳನ್ನು ಮಾಡುತ್ತಿದ್ದಾರೆ ಎಂದು ಕುಂದಾಪುರ ತಹಶಿಲ್ದಾರ್ ಗಾಯತ್ರಿ ನಾಯಕ್ ಅವರು ‘ಕನ್ನಡಿಗ ವರ್ಲ್ಡ್’ಗೆ ತಿಳಿಸಿದ್ದಾರೆ.