ಮಂಗಳೂರು, ಮಾರ್ಚ್.30 : ಮಂಗಳೂರು ನಗರ ಪೊಲೀಸ್ ಆಯುಕ್ತಾಲಯ ವ್ಯಾಪ್ತಿಯ ಮಾಸಿಕ ಎಸ್ಸಿ-ಎಸ್ಟಿ ಸಭೆ ಪೊಲೀಸ್ ಆಯುಕ್ತಾಲಯ ಕಚೇರಿಯಲ್ಲಿ ಆಯುಕ್ತ ಎಸ್.ಮುರುಗನ್‌ರ ಅಧ್ಯಕ್ಷತೆಯಲ್ಲಿ ರವಿವಾರ ನಡೆಯಿತು. ಸಭೆಯಲ್ಲಿ ದಲಿತ ಸಂಘಟನೆ ಮುಖಂಡ ಮುಖೇಶ್ ಮಾತನಾಡಿ, ಕುಂಪಲದ ಬಿಲ್ಲವ ಸಮುದಾಯದ ಯುವಕನೊಬ್ಬ ಪರಿಸರದ ದಲಿತ ಯುವತಿಯನ್ನು 2012ರಲ್ಲಿ ಮದುವೆಯಾಗಿದ್ದು, ಬಳಿಕ ಯುವಕ ಬೆಳ್ತಂಗಡಿಯಲ್ಲಿ ನೆಲೆಸಿದ್ದ. ಇದೀಗ ಆತ ನಾಪತ್ತೆಯಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಬಗ್ಗೆ ಪತಿಯ ಮನೆಗೆ ತೆರಳಿ ಯುವತಿ ವಿಚಾರಿಸಿದಾಗ ಮನೆಯವರು ಜಾತಿನಿಂದನೆ ಮಾಡಿ ಅವಮಾನಿಸಿದ್ದಾರೆ. ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ದೂರು ನೀಡಲಾಗಿದೆ ಎಂದರು. ಈ ಬಗ್ಗೆ ಸಮಗ್ರ ತನಿಖೆಯಾಗಬೇಕು. ಯುವ ಕನ ಮನೆಯವರು ಉದ್ದೇಶಪೂರ್ವಕವಾಗಿ ಯುವಕ ನಾಪತ್ತೆಯಾಗುವಂತೆ ಮಾಡಿದ್ದಾರೆ ಎಂದು ನಾರಾಯಣ ಪುಂಚಮೆ ಒತ್ತಾಯಿ ಸಿದರು.
ತನ್ನ ಪತಿಯನ್ನು ಅವರ ಮನೆಯವರು ಅಪಹರಿಸಿಟ್ಟಿದ್ದಾರೆ. ಈ ಬಗ್ಗೆ ಅವರ ಮನೆಗೆ ತೆರಳಿ ವಿಚಾರಿಸಿದರೆ ಜಾತಿನಿಂದನೆ ಮಾಡಿದ್ದಾರೆ ಎಂದು ಅನ್ಯಾಯಕ್ಕೆ ಒಳಗಾಗಿದ್ದಾರೆ ಎನ್ನಲಾದ ಮಹಿಳೆ ದೂರಿದರು.ಈ ಬಗ್ಗೆ ಪ್ರತಿಕ್ರಿಯಿಸಿದ ಪೊಲೀಸ್ ಆಯುಕ್ತ ಎಸ್.ಮುರುಗನ್, ಇದೊಂದು ಕೌಟುಂಬಿಕ ಸಮಸ್ಯೆಯಾಗಿರುವ ಕಾರಣ ಪತಿ ಪತ್ನಿಯನ್ನು ಒಟ್ಟುಗೂಡಿಸುವ ಪ್ರಯತ್ನ ನಡೆಯಬೇಕಾಗಿದೆ. ಪೊಲೀಸ್ ಇಲಾಖೆ ಕಾನೂನು ಚೌಕಟ್ಟಿನಲ್ಲಿ ತನಿಖೆ ನಡೆಸಲಿದೆ ಎಂದು ಅಭಿಪ್ರಾಯಪಟ್ಟರು.
ಸಮಾಜದಲ್ಲಿ ಇಂದಿಗೂ ದಲಿತರಿಗೆ ಬಳಸಬಾರದ ಪದ ಬಳಸಲಾಗುತ್ತಿದೆ. ಇತ್ತೀಚೆಗೆ ನಡೆದ ತುಳು ಸಮ್ಮೇಳನ ಕಾರ್ಯಕ್ರಮ ಹಾಗೂ ಸ್ಥಳೀಯ ವಾಹಿನಿಯಲ್ಲಿ ಪ್ರಸಾರಗೊಂಡ ಹಾಡಿನಲ್ಲೂ ಈ ಪದ ಬಳಸಲಾಗಿದೆ. ಕಾನೂನಿನ ಭೀತಿ ಯಾರಿಗೂ ಇದ್ದಂತಿಲ್ಲ. ಪೊಲೀಸರು ಈ ಬಗ್ಗೆ ನಿರ್ದಾಕ್ಷಿಣ್ಯವಾಗಿ ಕ್ರಮ ಜರಗಿಸಬೇಕು ಎಂದು ಗಿರೀಶ್ ಕುಮಾರ್ ಆಗ್ರಹಿಸಿದರು.ಹುಡುಗಿಯೋರ್ವಳ ಜೊತೆ ಮಾತನಾಡಿದ ಕಾರಣಕ್ಕಾಗಿ ಮುಲ್ಕಿಯ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್‌ನಲ್ಲಿರುವ ದಲಿತ ವಿದ್ಯಾರ್ಥಿಯೋರ್ವನನ್ನು ಗುಂಪೊಂದು ಅಪಹರಿಸಿ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಎಲ್ಲ ಆರೋಪಿಗಳನ್ನು ಬಂಧಿಸಬೇಕು ಎಂದು ವಿಶುಕುಮಾರ್ ಮುಲ್ಕಿ ಒತ್ತಾಯಿಸಿದರು.
ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ 8 ಮಂದಿಯನ್ನು ಬಂಧಿಸಲಾಗಿದೆ. ಉಳಿದವರ ಬಗ್ಗೆ ಶೋಧನೆ ನಡೆಯುತ್ತಿದೆ ಎಂದು ಆಯುಕ್ತರು ತಿಳಿಸಿದರು.ನಾಗರಿಕ ಹಕ್ಕು ಮತ್ತು ಜಾರಿ ಘಟಕದ ಅಧಿಕಾರಿಗಳು ದಲಿತರ ದೂರುಗಳ ಬಗ್ಗೆ ನಿರ್ಲಕ್ಷ ತೋರುತ್ತಿದ್ದಾರೆ. ದಲಿತರ ಕುಂದು ಕೊರತೆ ನಿವಾರಣೆ ಸಭೆಯಲ್ಲೂ ಭಾಗವಹಿಸುತ್ತಿಲ್ಲ ಎಂದು ಸಭೆಯಲ್ಲಿದ್ದ ಓರ್ವರು ದೂರಿದರು.ಡಿಸಿಪಿ ವಿಷ್ಣುವರ್ಧನ್ ಉಪಸ್ಥಿತರಿದ್ದರು. ಎಸಿಪಿ ರವಿಕುಮಾರ್ ಕಳೆದ ಸಭೆಯ ನಡಾವಳಿ ವಾಚಿಸಿ, ವಂದಿಸಿದರು.
ಶಾಲಾ ಬಾಲಕಿಗೆ ಲೈಂಗಿಕ ದೌರ್ಜನ್ಯ: ಸಮಿತಿ ವರದಿ ಆಧರಿಸಿ ಕ್ರಮ;
ತೊಕ್ಕೊಟ್ಟಿನ ಶಾಲಾ ಬಾಲಕಿಯ ಮೇಲೆ ನಡೆದಿದೆ ಎನ್ನಲಾದ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ಶಿಕ್ಷಣ ಇಲಾಖೆ ಮೂಲಕ ರಚಿಸಿದ ಸಮಿತಿಯ ವರದಿ ಆಧರಿಸಿ ಶಾಲಾ ಆಡಳಿತ ಮಂಡಳಿ ಕರ್ತವ್ಯ ಲೋಪ ಎಸಗಿದೆಯೇ ಎಂಬುದರ ಬಗ್ಗೆ ತೀರ್ಮಾನಿಸಿ ಆ ಬಳಿಕ ಕ್ರಮ ಜರಗಿಸಲಾಗುವುದು ಎಂದು ಪೊಲೀಸ್ ಆಯುಕ್ತ ಎಸ್.ಮುರುಗನ್ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.