ಮಂಗಳೂರು: ಕಾಸರಗೋಡು- ಮಂಗಳೂರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಶನಿವಾರ ಪಂಪ್‌ವೆಲ್- ಜಪ್ಪಿನಮೊಗರು- ತೊಕ್ಕೊಟ್ಟು ಮಾರ್ಗದಲ್ಲಿ ಸಂಚಾರ ಅಸ್ತವ್ಯಸ್ತವಾಗಿದ್ದರಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮೂಲಕ ಶನಿವಾರ ಸಂಜೆ ದೋಹ ಮತ್ತು ಕತಾರ್‌ಗೆ ತೆರಳಲಿದ್ದ ಕಾಸರಗೋಡಿನ ಸುಮಾರು 20ಕ್ಕೂ ಹೆಚ್ಚು ಪ್ರಯಾಣಿಕರಿಗೆ ಫ್ಲೈಟ್ ಮಿಸ್ ಆಗಿದೆ.
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸಂಜೆ 6 ಗಂಟೆಗೆ ದೋಹಾ ಕತಾರ್‌ಗೆ ಏರ್‌ಇಂಡಿಯಾ ವಿಮಾನ ಹೊರಡುವುದಿತ್ತು. ಈ ವಿಮಾನದ ಪ್ರಯಾಣಿಕರು ನಿಗದಿತ ಅವಧಿಗಿಂತ 45 ನಿಮಿಷ ಮುಂಚಿತವಾಗಿ ನಿಲ್ದಾಣದಲ್ಲಿ ಹಾಜರಿರಬೇಕಿತ್ತು. ಆದರೆ ಹೆದ್ದಾರಿ ಸಂಚಾರ ವ್ಯತ್ಯಯವಾಗಿದ್ದರಿಂದ ಕಾಸರಗೋಡು ಹಾಗೂ ಸುತ್ತಮುತ್ತಲಿನ 20ಕ್ಕೂ ಹೆಚ್ಚು ಮಂದಿ ಪ್ರಯಾಣಿಕರು 15 ನಿಮಿಷ ತಡವಾಗಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ.
ಈ ಸಂದರ್ಭ ವಿಮಾನದ ಡೋರ್ ಕ್ಲೋಸ್ ಮಾಡಿ ವಿಮಾನ ಟೇಕ್ ಆಫ್‌ಗೆ ಸಿದ್ಧವಾಗಿತ್ತು. ಇದರಿಂದಾಗಿ ನಿಯಮ ಪ್ರಕಾರ ಅಷ್ಟೂ ಮಂದಿ ಪ್ರಯಾಣಿಕರ ಪ್ರಯಾಣಕ್ಕೆ ಅವಕಾಶ ನಿರಾಕರಿಸಲಾಯಿತು. ದೋಹಾ- ಕತಾರ್‌ಗೆ ವಾರಕ್ಕೆ ಎರಡೇ ವಿಮಾನ ಸೇವೆ ಇರುವುದರಿಂದ ಪ್ರಯಾಣ ಮಿಸ್ ಆದವರು ಮುಂದಿನ ವಾರದ ವರೆಗೆ ಕಾಯಬೇಕಾಗಿದೆ.
ಪ್ರಯಾಣಿಕರಲ್ಲಿ ಹಲವರು ಉದ್ಯೋಗಿಗಳಾಗಿದ್ದು, ಸೋಮವಾರ ಕರ್ತವ್ಯಕ್ಕೆ ಹಾಜರಾಗಬೇಕಿತ್ತು. ಆದರೆ ಪ್ರಯಾಣ ಕೈ ತಪ್ಪಿದ್ದರಿಂದ ಹಲವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇವರಲ್ಲಿ ಕೆಲವರು ಬೆಂಗಳೂರು ಮೂಲಕ ಬದಲೀ ಪ್ರಯಾಣಕ್ಕೆ ಸಿದ್ಧತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಹೆದ್ದಾರಿ ಕಮಗಾರಿ ಕಾರಣ: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮಂಗಳೂರಿನ ಪಂಪ್‌ವೆಲ್‌ನಿಂದ ತಲಪಾಡಿ ವರೆಗೆ ಅಲ್ಲಲ್ಲಿ ಕಾಮಗಾರಿ ನಡೆಸಲಾಗಿದೆ. ನೇತ್ರಾವತಿ ನದಿಯ ಹೊಸ ಸೇತುವೆ ಕಾಮಗಾರಿ ಪೂರ್ಣಗೊಂಡ ಬಳಿಕ ಕಾಮಗಾರಿಗಾಗಿ ಇತ್ತೀಚೆಗೆ ಹಳೆ ಸೇತುವೆಯನ್ನು ಬಂದ್ ಮಾಡಲಾಗಿತ್ತು. ಇದೇ ಕಾರಣದಿಂದ ಒಂದೇ ರಸ್ತೆಯಲ್ಲಿ ವಿಪರೀತ ವಾಹನ ದಟ್ಟಣೆಯಿಂದ ಹೆದ್ದಾರಿ ಸಂಚಾರ ಅಸ್ತವ್ಯಸ್ತವಾಗಿದೆ. ಹೆದ್ದಾರಿಯುದ್ದಕ್ಕೂ ಸುಮಾರು 10ಕಿ.ಮೀ. ಉದ್ದಕ್ಕೆ ವಾಹನಗಳು ಸರತಿ ಸಾಲಿನಲ್ಲಿ ನಿಂತಿದ್ದವು.
ಮಂಗಳೂರು ಗ್ರಾಮಾಂತರ ಠಾಣೆ ಪೊಲೀಸರು ಹಾಗೂ ಉಳ್ಳಾಲ ಠಾಣೆ ಪೊಲೀಸರು ಇಡೀ ದಿನ ಬಸವಳಿದು ಸಂಚಾರ ಸುಗಮಗೊಳಿಸಲು ಹರಸಾಹಸ ಪಟ್ಟರು. ಆದರೆ ಖಾಸಗಿ ಬಸ್ ಸೇರಿದಂತೆ ಕೆಲವು ವಾಹನಗಳ ಚಾಲಕರು ಸಿಕ್ಕ ಸಿಕ್ಕಲ್ಲಿ ವಾಹನಗಳನ್ನು ನುಗ್ಗಿಸಿದ್ದರಿಂದ ಸಂಚಾರ ಸಂಪೂರ್ಣ ಹದಗೆಟ್ಟಿತು.
ರಸ್ತೆ ಪ್ರಯಾಣಿಕರಿಗೂ ಸಂಕಷ್ಟ: ಮಂಗಳೂರು ಕಾಸರಗೋಡು ಹೆದ್ದಾರಿ ಸಂಚಾರ ಅಸ್ತವ್ಯಸ್ತವಾಗಿದ್ದರಿಂದ ಮಂಗಳೂರು- ತೊಕ್ಕೊಟ್ಟು- ಉಳ್ಳಾಲ-ಕಾಸರಗೋಡು ಬಸ್ ಹಾಗೂ ಇತರ ವಾಹನ ಪ್ರಯಾಣಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದರು. ಕೆಲವರು ವಾಹನದಲ್ಲೇ ಗಂಟೆಗಟ್ಟಲೆ ಬಾಕಿಯಾಗಿ ಸುಸ್ತಾಗಿದ್ದರೆ ಇನ್ನು ಕೆಲವರು ಹೆದ್ದಾರಿ ಬದಿಯಲ್ಲಿ ಬಸ್‌ಗಾಗಿ ಕಾದು ಸುಸ್ತಾದರು.