ಬೆಂಗಳೂರು,ಮಾರ್ಚ್.28 : ನಗರದ ಕೆಪಿ ಅಗ್ರಹಾರದಲ್ಲಿರುವ ಹಂದಿಗೂಡು ಸ್ಲಂನಲ್ಲಿ ಬೀದಿ ಬದಿ ಆಟವಾಡುತ್ತಿದ್ದ 5 ವರ್ಷದ ಮಗುವಿನ ಮೇಲೆ ಬೀದಿ ನಾಯಿ ದಾಳಿ ನಡೆಸಿದ್ದು, ತೀವ್ರ ಗಾಯಗೊಂಡಿರುವ ಮಗುವಿಗೆ ಕಿಮ್ಸ್ ನ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ದಾಳಿಗೊಳಗಾದ ಬಾಲಕ ಜೀವನ್, ಕುಮಾರ್ ಹಾಗೂ ರತ್ನಾ ದಂಪತಿಯ ಪುತ್ರ. ಸಂಜೆ 6.30ರ ಸುಮಾರಿಗೆ ಮನೆ ಮುಂದೆ ಜೀವನ್ ಆಟ ಆಡುತ್ತಿದ್ದ, ಆಗ ತಾಯಿ ರತ್ನಾ ನೀರು ತರಲು ಹೊರಹೋಗಿದ್ದಾರೆ. ಈ ವೇಳೆ, ಬೀದಿನಾಯಿಯೊಂದು ಮಗುವಿನ ಮೇಲೆ ದಾಳಿ ನಡೆಸಿ, ಕಚ್ಚಿ ಎಳೆದಾಡಿದೆ. ಆಗ ಬಾಲಕನ ಕೂಗಿಗೆ ಓಡಿಬಂದ ಅಕ್ಕಪಕ್ಕದವರು ನಾಯಿಯನ್ನು ಕಲ್ಲಿನಿಂದ ಹೊಡೆದು ಓಡಿಸಿದ್ದಾರೆ. ಸುದ್ದಿ ತಿಳಿದ ಜೀವನ್ ಪೋಷಕರೂ ಬಂದಿದ್ದಾರೆ. ತಕ್ಷಣ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಕಿಮ್ಸ್ ಗೆ ದಾಖಲಿಸಲಾಗಿದೆ.
ವಿಷಯ ತಿಳಿದ ನಗರ ಪಾಲಿಕೆ ಸದಸ್ಯ ಹಾಗೂ ವೈದ್ಯ ಡಾ. ರಾಜು ಸಹ ಆಸ್ಪತ್ರೆಗೆ ಆಗಮಿಸಿದ್ದಾರೆ. ಬಾಲಕನಿಗೆ ಚುಚ್ಚುಮದ್ದು ನೀಡಲು ಬೆಂಗಳೂರಿನ ಯಾವ ಆಸ್ಪತ್ರೆಯಲ್ಲೂ ಟೆಸ್ಟ್‍ಡೋಸ್ ಸಿಗದೆ ತೀವ್ರ ಪರದಾಡುವಂತಾಯಿತು. ಬಳಿಕ ಡಾ. ರಾಜು ಅವರ ಪರಿಶ್ರಮದಿಂದ ಪಾಲಿಕೆ ಕೇಂದ್ರ ಕಚೇರಿಯಲ್ಲಿದ್ದ 2 ಚುಚ್ಚುಮದ್ದನ್ನು ಆ್ಯಂಬುಲೆನ್ಸ್ ಮೂಲಕ ತರಿಸಿ ನೀಡಲಾಗಿದೆ. ವಿಷಯ ತಿಳಿದ ಮೇಯರ್ ಶಾಂತಕುಮಾರಿ ಸಹ ಆಸ್ಪತ್ರೆಗೆ ಆಗಮಿಸಿ ಅಗತ್ಯ ಸಹಕಾರವನ್ನು ನೀಡಿ, ಚಿಕಿತ್ಸೆ ಆಗುವವರೆಗೂ ಸ್ಥಳದಲ್ಲಿದ್ದರು. ಮಗುವಿಗೆ ಶುಗರ್ ಇದೆ ಎಂದು ತಿಳಿದುಬಂದಿದೆ.