ಕನ್ನಡ ವಾರ್ತೆಗಳು

ಮಕ್ಕಳೊಂದಿಗೆ ವಯೋಸಹಜ ಪ್ರಶ್ನೆಗಳಿಗೆ ಉತ್ತರಿಸಿ

Pinterest LinkedIn Tumblr

bhec28ankura new

– ಡಾ. ಎಸ್.ಎಸ್. ವಾಸನ್ ಆ್ಯಂಡ್ರೊಲಜಿಸ್ಟ್‌
ಮಕ್ಕಳ ಆತಂಕಗಳಿಗೆ ಹಾರಿಕೆಯ ಉತ್ತರ ನೀಡಿದರೆ  ಮಿತ್ರರೊಂದಿಗೆ ಈ ವಿಷಯ್ನು ಚರ್ಚಿಸುತ್ತಾರೆ.  ತಮ್ಮ ಕುತೂಹಲ ತಣಿಸಿಕೊಳ್ಳಲು ಇನ್ನಿತರ ಮಾಹಿತಿ ಮೂಲ ಅರಸುತ್ತಾರೆ. ಅದರ ಬದಲಿಗೆ ವಯೋಸಹಜ ಪ್ರಶ್ನೆಗಳಿಗೆ ಪಾಲಕರೇ ಉತ್ತರಿಸಿದರೆ ಮಕ್ಕಳೊಂದಿಗೆ ಬಾಂಧವ್ಯವೂ ಗಟ್ಟಿಯಾಗುತ್ತದೆ. ಅವರೂ ಸುರಕ್ಷಿತವಾಗಿರುತ್ತಾರೆ.

ಕೆಲವು ವಿಷಯಗಳನ್ನು ಚರ್ಚಿಸದಷ್ಟು ಮುಕ್ತ ವಾತಾವರಣವನ್ನು ಮಕ್ಕಳಿಗೆ ನೀಡದಿದ್ದರೆ ಅವರು ಅಪಾಯಕ್ಕೆ ಸಿಲುಕುವ ಸಾಧ್ಯತೆ ಇದ್ದೇ ಇರುತ್ತದೆ.  ಯುವಕರ ಆತಂಕ ಹಾಗೂ ಕುತೂಹಲ ತಣಿಸುವಷ್ಟು ಸಾಮಾನ್ಯ ಜ್ಞಾನ ಪೋಷಕರಿಗೆ ಇರಬೇಕಾದುದು ಅತ್ಯಗತ್ಯ. ಇಲ್ಲಿವೆ ಅಂಥ ಇನ್ನಷ್ಟು ಪ್ರಶ್ನೋತ್ತರಗಳು

* ಜನನಾಂಗದಿಂದ ಸ್ರಾವ ಕಂಡುಬರುತ್ತದ್ದಲ್ಲ ಏನದು?
ವೀರ್ಯ ಅಥವಾ ಮೂತ್ರವಲ್ಲದ ಯಾವುದೇ ಬಗೆಯ ದ್ರವದಂಥ ಸ್ರಾವ ಕಂಡು ಬಂದರೆ ಅದಕ್ಕೆ ಪಿನೈಲ್‌ ಡಿಸ್ಚಾರ್ಜ್‌ ಎನ್ನಲಾಗುತ್ತದೆ. ಇದು ಕೆಲವೊಮ್ಮೆ ಸ್ವಚ್ಛ ಬಣ್ಣದ್ದಾಗಿರಬಹುದು. ಅಥವಾ ಹಳದಿಮಿಶ್ರಿತ ಹಸಿರು ಬಣ್ಣದಿಂದ ಕೂಡಿರಬಹುದು. ಕೆಲವೊಮ್ಮೆ ವಾಸನೆಯಿಂದ ಕೂಡಿರಬಹುದು. ವಾಸನಾರಹಿತವೂ ಆಗಿರಬಹುದು. ಇವೆಲ್ಲವೂ ಸ್ರಾವದ ಕಾರಣವನ್ನು ಅವಲಂಬಿಸಿರುತ್ತವೆ. ಸಾಮಾನ್ಯವಾಗಿ ಈ ಸ್ರಾವವು ಲೈಂಗಿಕ ಸೋಂಕು ರೋಗವನ್ನು ಸಂಕೇತಿಸುತ್ತದೆ. ಈ ಬಗೆಯ ಸ್ರಾವ ಕಾಣಿಸಿಕೊಂಡರೆ ವೈದ್ಯರನ್ನು ಕಾಣುವುದು ಒಳಿತು.

* ಮೂತ್ರ ವಿಸರ್ಜಿಸುವಾಗ ಉರಿ ಕಂಡು ಬಂದರೆ ಏನರ್ಥ?
ಒಂದು ವೇಳೆ ಮೂತ್ರವಿಸರ್ಜಿಸುವಾಗ ಉರಿಯುವಂತಾದರೆ ನಿಮಗೆ ಸೋಂಕಿದೆ ಎಂದರ್ಥ. ಉರಿಮೂತ್ರದ ಸೋಂಕು ಅಥವಾ ಲೈಂಗಿಕ ರೋಗದ ಸೋಂಕು ಇರಬಹುದು ಎಂದೂ ಅರ್ಥೈಸಲಾಗುತ್ತದೆ.

ಈ ಸೋಂಕಿನ ಇನ್ನಿತರ ಲಕ್ಷಣಗಳೆಂದರೆ ಮೂತ್ರವಿಸರ್ಜಿಸಲೇಬೇಕು ಎಂದು ತೀವ್ರವಾಗಿ ಎನಿಸುವುದು, ಆದರೆ ವಿಸರ್ಜಿಸಲು ಹೋದಾಗ ಕೇವಲ ಕೆಲವೇ ಹನಿ ಆಚೆ ಬರುವುದು.
ಗುಲಾಬಿ ಬಣ್ಣದ ಉಚ್ಚೆ (ಉಚ್ಚೆಯೊಂದಿಗೆ ರಕ್ತ ಮಿಶ್ರವಾಗುವುದು).

ಬೆಳಗಿನ ಸಮಯದಲ್ಲಿ ಮೂತ್ರ ವಿಸರ್ಜಿಸುವಾಗ ದಟ್ಟವಾದ ಕೆಟ್ಟವಾಸನೆ ಬರುವುದು.
ವಿಸರ್ಜನೆಗೆ ಮುನ್ನ ಕಿಬ್ಬೊಟ್ಟೆಯ ಬಳಿ ನೋವು ಕಾಣಿಸಿಕೊಳ್ಳುವುದು…

ಈ ಲಕ್ಷಣಗಳಲ್ಲಿ ಯಾವುದೇ ಒಂದು ಲಕ್ಷಣ ನಿಮ್ಮಲ್ಲಿ ಇದ್ದರೆ ತಡ ಮಾಡದೆಯೇ ವೈದ್ಯರನ್ನು ಕಾಣಿರಿ. ಯಾವುದೇ ವಿಷಯಕ್ಕೂ ಹಿಂಜರಿಯದೇ ವೈದ್ಯರ ಬಳಿ ನಿಮ್ಮ ಸಮಸ್ಯೆಯನ್ನು ಚರ್ಚಿಸಿ. ಮೂತ್ರದ ಸೋಂಕು ಅಥವಾ ಲೈಂಗಿಕ ರೋಗಗಳನ್ನು ಮೊದಲ ಹಂತದಲ್ಲಿ ಔಷಧಿಗಳಿಂದಲೇ ನಿರ್ವಹಣೆ ಮಾಡಬಹುದು. ಒಂದುವೇಳೆ ಅಲಕ್ಷ್ಯ ಮಾಡಿದ್ದಲ್ಲಿ, ವೈದ್ಯರ ಬಳಿ ತೆರಳಲು ಹಿಂಜರೆದಲ್ಲಿ ಅಥವಾ ಮುಂದೂಡಿದ್ದಲ್ಲಿ ಗಂಭೀರ ಸ್ವರೂಪದ ಸಮಸ್ಯೆಯಾಗಿ ಬದಲಾಗುವ ಎಲ್ಲ ಸಾಧ್ಯತೆಗಳೂ ಇರುತ್ತವೆ.

* ಸುನ್ನತಿ ಎಂದರೇನು?
ಎಲ್ಲ ಗಂಡುಮಕ್ಕಳೂ ಮುಂದೊಗಲಿನೊಂದಿಗೇ ಹುಟ್ಟುತ್ತಾರೆ. ಶಿಶ್ನದ ತುದಿಗಿರುವ ಚರ್ಮದ ಹೊದಿಕೆ ಇದಾಗಿದೆ. ಸುನ್ನತಿ ಎಂದರೆ ಶಿಶ್ನದ ಮುಂದೊಗಲನ್ನು ತೆಗೆಯುವ ಕ್ರಿಯೆಯಾಗಿದೆ. ಇದನ್ನು ವೈದ್ಯರು ಅಥವಾ ಧಾರ್ಮಿಕ ವ್ಯಕ್ತಿಗಳು ಮಾಡುತ್ತಾರೆ. ವಿವಿಧ ಕಾರಣಗಳಿಂದಾಗಿ ಪೋಷಕರು ತಮ್ಮ ಮಕ್ಕಳಿಗೆ ಸುನ್ನತಿ ಮಾಡಿಸುತ್ತಾರೆ.

ಸಾಂಸ್ಕೃತಿಕ ಕಾರಣ, ಧಾರ್ಮಿಕ ವಿಧಿ ಅಥವಾ ನೈರ್ಮಲ್ಯಕ್ಕೆ ಎಂದು ಹೇಳಲಾದರೂ ವೈದ್ಯಕೀಯವಾಗಿ ನೈರ್ಮಲ್ಯಕ್ಕಾಗಿ ಸುನ್ನತಿ ಮಾಡಿಸುವ ಅಗತ್ಯವಿಲ್ಲ.

* ಸುನ್ನತಿ ಮಾಡಿಸಿದರೇನು ವ್ಯತ್ಯಾಸವಾಗುತ್ತದೆ?
ಸುನ್ನತಿಯಾದವರಲ್ಲಿ ಮುಂದೊಗಲು ಇರುವುದಿಲ್ಲ. ಆಗದವರಲ್ಲಿ ಮುಂದೊಗಲು ಇರುತ್ತದೆ ಅಷ್ಟು ಮಾತ್ರ ವ್ಯತ್ಯಾಸ. ಉಳಿದಂತೆ ಸುನ್ನತಿ ಮಾಡಿಸುವುದರಿಂದ ಶಿಶ್ನದ ಕಾರ್ಯವೈಖರಿ ಹಾಗೂ ಲೈಂಗಿಕ ಕ್ರಿಯೆಯಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ.

* ಮುಂದೊಗಲಿನಿಂದ ಆಗುವ ಸಮಸ್ಯೆಯೇನು?
ಬಹುತೇಕ ಗಂಡು ಮಕ್ಕಳಿಗೆ ಮುಂದೊಗಲಿನಿಂದಾಗಿ ಯಾವುದೇ ಸಮಸ್ಯೆಯು ಕಂಡು ಬರುವುದಿಲ್ಲ. ಆದರೆ ಅತಿ ವಿರಳವಾಗಿ ಕೆಲವು ಹುಡುಗರಲ್ಲಿ ಮುಂದೊಗಲಿನಿಂದಾಗಿ ಈ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.

ಶಿಶ್ನದ ತುದಿಯಲ್ಲಿ ಉರಿಯೂತ ಅಥವಾ ಸೋಂಕು ಮುಂದೊಗಲು ಅತಿ ಬಿಗಿಯಾಗಿದ್ದರೆ ಹಿಂದಕ್ಕೆಳೆಯಲು ಆಗದು.

ಬಲವಂತದಿಂದ ಹಿಂದಕ್ಕೆಳೆಯುವ ಮುಂದೊಗಲು ಶಿಶ್ನದ ತುದಿಯ ಮೇಲೆ ಹಿಮ್ಮುಖವಾಗಿ ಎಳೆದಂತಾದರೆ ಅದು ಮತ್ತೆ ಸುಲಭವಾಗಿ ಮುಂದೆ ಬಾರದು. ಈ ಸನ್ನಿವೇಶದಲ್ಲಿ ವೈದ್ಯರನ್ನು ಕಾಣುವುದು ಅಗತ್ಯವಾಗಿರುತ್ತದೆ. ಇದು ತುರ್ತು ಸಂದರ್ಭವಾಗಿರುವುದರಿಂದ ಕೂಡಲೇ ಕಾಣುವುದು ಒಳಿತು. ಇಲ್ಲದಿದ್ದರೆ ನಿಮ್ಮ ಜನನಾಂಗಕ್ಕೆ ಶಾಶ್ವತವಾಗಿ ಹಾನಿಯಾಗುವ ಸಾಧ್ಯತೆಯೂ ಇಲ್ಲದಿಲ್ಲ.
ಕೆಲವೊಮ್ಮೆ ಶಿಶ್ನದ ತುದಿಯಲ್ಲಿ ಬಿಗಿಯಾಗಿ ಮುಂದೊಗಲು ಅಂಟಿಕೊಳ್ಳುವುದರಿಂದ ಮುಂದೊಗಲಿನ ಚಲನೆ ಅಸಾಧ್ಯವೆಂಬಂತೆ ಆಗುತ್ತದೆ. ಈ ಸನ್ನಿವೇಶಕ್ಕೆ ‘ಫಿಮೋಸಿಸ್‌’ ಎಂದು ವೈದ್ಯಕೀಯ ಭಾಷೆಯಲ್ಲಿ ಕರೆಯಲಾಗುತ್ತದೆ.

ಇಂಥ ಯಾವುದೇ ಲಕ್ಷಣಗಳು ಕಂಡು ಬಂದಲ್ಲಿ ನಿಮ್ಮ ಮಗನೊಂದಿಗೆ ವೈದ್ಯರನ್ನು ಕಾಣುವುದು ಒಳಿತು. ಮಕ್ಕಳ ಆತಂಕಗಳಿಗೆ ಹಾರಿಕೆಯ ಉತ್ತರಗಳನ್ನು ನೀಡಿದರೆ ಅವರು ಸ್ನೇಹಿತರೊಂದಿಗೆ ಈ ವಿಷಯಗಳನ್ನು ಚರ್ಚಿಸಲಾರಂಭಿಸುತ್ತಾರೆ.  ತಮ್ಮ ಕುತೂಹಲ ತಣಿಸಿಕೊಳ್ಳಲು ಇನ್ನಿತರ ಸಂಪನ್ಮೂಲಗಳನ್ನು ಅರಸತೊಡಗುತ್ತಾರೆ. ಅದರ ಬದಲಿಗೆ ವಯೋಸಹಜ ಪ್ರಶ್ನೆಗಳನ್ನು ಪಾಲಕರೇ ಉತ್ತರಿಸಿದರೆ ಮಕ್ಕಳೊಂದಿಗೆ ಬಾಂಧವ್ಯವೂ ಗಟ್ಟಿಯಾಗುತ್ತದೆ. ಅವರೂ ಸುರಕ್ಷಿತವಾಗಿರುತ್ತಾರೆ.
ಮಾಹಿತಿಗೆ: 9611394477

Write A Comment