ಮಂಗಳೂರು: ಭಾರತದ ನಾನಾ ಭಾಗಗಳಲ್ಲಿ ಕ್ರೈಸ್ತರು ಮತ್ತು ಕ್ರೈಸ್ತ ಸಂಸ್ಥೆಗಳ ಮೇಲೆ ಇತ್ತೀಚೆಗೆ ನಡೆಯುತ್ತಿರುವ ದಾಳಿ, ದೌರ್ಜನ್ಯ, ಧಾರ್ಮಿಕ ಕೇಂದ್ರಗಳಿಗೆ ಕಲ್ಲೆಸೆತ ಮತ್ತು ಹಾನಿ ಮಾಡುತ್ತಿರುವ ಘಟನೆಗಳನ್ನು ಖಂಡಿಸಿ ಮಂಗಳೂರು ಧರ್ಮ ಪ್ರಾಂತದ ಆಶ್ರಯದಲ್ಲಿ ಶುಕ್ರವಾರ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಯಿತು.
ಧರ್ಮ ಪ್ರಾಂತದ ಪ್ರಧಾನ ಗುರು ಮೊ.ಡೆನಿಸ್ ಮೊರಾಸ್ ಪ್ರಭು, ಸಿಒಡಿಪಿ ಸಂಸ್ಥೆಯ ನಿರ್ದೇಶಕ ಫಾ. ಓಸ್ವಾಲ್ಡ್ ಮೊಂತೇರೊ ಉಪಸ್ಥಿತಿಯಲ್ಲಿ ಪ್ರತಿಭಟನೆ ನಡೆಯಿತು.
2014 ಮತ್ತು 2015 ರಲ್ಲಿ ಇದುವರೆಗಿನ ಅವಧಿಯಲ್ಲಿ ದೇಶಾದ್ಯಂತ 7000 ಕ್ರೈಸ್ತರಿಗೆ ಅನ್ಯಾಯವಾಗಿದೆ. 396 ಧಾರ್ಮಿಕ ಮತ್ತು ಇತರ ಸಂಸ್ಥೆಗಳ ಮೇಲೆ ದಾಳಿ ನಡೆದು ಹಾನಿ ಮಾಡಲಾಗಿದೆ ಎಂದು ರೋಮನ್ ಲೋಬೊ ಹೇಳಿದರು.
ಇಂಟರ್‌ನೆಟ್‌ನಲ್ಲಿ ಯೇಸು ಕ್ರಿಸ್ತರ ಅವಹೇಳನ, ಮದರ್ ತೆರೇಸಾ ಅವರ ಮೇಲೆ ಮತಾಂತರದ ಆರೋಪ, ಚರ್ಚ್ ಮತ್ತು ಇತರ ಪ್ರಾರ್ಥನಾ ಮಂದಿರ ಮತ್ತು ಸಂಸ್ಥೆಗಳ ಮೇಲೆ ದಾಳಿ ಇದಕ್ಕೆ ನಿದರ್ಶನಗಳಾಗಿವೆ. ಇದೇ ರೀತಿಯ ದಾಳಿ, ದೌರ್ಜನ್ಯಗಳು ಮುಂದುವರಿದರೆ ಪ್ರತಿಭಟನೆ ತೀವ್ರಗೊಳಿಸಲಾಗುವುದು ಎಂದರು.
ಐಸಿವೈಎಂ ಮಾಜಿ ಅಧ್ಯಕ್ಷ ನೆಲ್ಸನ್ ಮೋನಿಸ್ ಮಾತನಾಡಿ, ‘ಸರ್ವೇ ಜನಾಃ ಸುಖಿನೋ ಭವಂತು’ ಎಂಬ ತತ್ವ ಸಿದ್ಧ್ದಾಂತಗಳನ್ನು ಸಾರುವ ದೇಶದಲ್ಲಿ ಈ ರೀತಿಯ ದಾಳಿ, ದೌರ್ಜನ್ಯಗಳೇಕೆ ನಡೆಯುತ್ತಿವೆ ಎಂದು ಪ್ರಶ್ನಿಸಿದರು.
ರೊಜಾರಿಯೋ ಕೆಥೆಡ್ರಲ್ ಚರ್ಚ್‌ನ ಪ್ರಧಾನ ಗುರು ಫಾ. ಜೆ.ಬಿ. ಕ್ರಾಸ್ತಾ ಸ್ವಾಗತಿಸಿದರು. ರವಿ ಕುಮಾರ್ ಕ್ರಾಸ್ತಾ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ಕ್ರೈಸ್ತರು ಮತ್ತು ಕ್ರೈಸ್ತ ಸಂಸ್ಥೆಗಳ ಮೇಲೆ ದಾಳಿ, ದೌರ್ಜನ್ಯ ನಡೆಸುತ್ತಿರುವವರ ಮನ ಪರಿವರ್ತನೆಯಾಗಲಿ ಎಂದು ದೇವರಿಗೆ ಪ್ರಾರ್ಥನೆ ಸಲ್ಲಿಸಲಾಯಿತು.