ಮಂಗಳೂರು, ಮಾ.27 ಖಚಿತ ಮಾಹಿತಿಯ ಮೇರೆಗೆ ಇಲ್ಲಿಯ ಮರೋಳಿಯಲ್ಲಿನ ಹೋಮ್ ಸ್ಟೇ ವೊಂದರಲ್ಲಿ ನಿನ್ನೆ ತಡರಾತ್ರಿ ನಡೆಯುತ್ತಿದ್ದ ಪಾರ್ಟಿಯ ಮೇಲೆ ದಾಳಿ ನಡೆಸಿದ ಪೊಲೀಸರು ಎಂಟು ಯುವಕರು ಮತ್ತು ನಾಲ್ವರು ಯುವತಿಯರನ್ನು ವಶಕ್ಕೆ ತೆಗೆದುಕೊಂಡಿರುವುದಾಗಿ ವಿಶ್ವಾಸನೀಯ ಮೂಲಗಳು ತಿಳಿಸಿವೆ.
ಬೆಂಗಳೂರು ನಿವಾಸಿಗಳೆನ್ನಲಾದ ಈ ಯುವಕ ಯುವತಿಯರ ತಂಡವು ಹೋಮ್ ಸ್ಟೇ ಬುಕ್ ಮಾಡಿಕೊಂಡು ವೆಬ್ ಸೈಟೊಂದರಲ್ಲಿ ಪಾರ್ಟಿಯ ಬಗ್ಗೆ ಪ್ರಕಟಣೆ ನೀಡಿತ್ತು. ಈ ತಂಡವು ಮಾ.25ರಂದು ರಾತ್ರಿಯೂ ಇದೇ ಹೋಮ್ ಸ್ಟೇಯಲ್ಲಿ ಪಾರ್ಟಿ ನಡೆಸಿದ್ದು, ಅದು ನಿನ್ನೆ ಬೆಳಗಿನ ಜಾವದವರೆಗೂ ಮುಂದುವರಿದಿತ್ತು. ನಿನ್ನೆ ರಾತ್ರಿಯೂ ಪಾರ್ಟಿ ತಡರಾತ್ರಿಯವರೆಗೂ ಮುಂದುವರಿದಿದ್ದು, ಇದರಿಂದ ತೊಂದರೆಗೊಳಗಾಗಿದ್ದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಸ್ಥಳಕ್ಕೆ ಪೊಲೀಸರು ದಾಳಿ ನಡೆಸಿದಾಗ ಹೋಮ್ ಸ್ಟೇ ಗೇಟಿಗೆ ಬೀಗ ಹಾಕಲಾಗಿತ್ತು. ಹೀಗಾಗಿ ಕಂಪೌಂಡ್ ಹಾರಿ ಒಳ ಪ್ರವೇಶಿಸಿ ಬಾಗಿಲು ಬಡಿದಾಗ ವಯಸ್ಸಾದ ವ್ಯಕ್ತಿಯೋರ್ವರು ಬಾಗಿಲು ತೆರೆದಿದ್ದರು. ಪರಿಶೀಲಿಸಿದಾಗ ಕಟ್ಟಡದ ಮೇಲಿನ ಅಂತಸ್ತಿನಲ್ಲಿ ಪಾರ್ಟಿ ನಡೆಯುತ್ತಿದ್ದುದು ಕಂಡು ಬಂದಿತ್ತು.
ಸ್ಥಳದಲ್ಲಿದ್ದ ಯುವಕ ಯುವತಿಯವರನ್ನು ಸುಮಾರು ಎರಡು ಗಂಟೆಗಳ ಕಾಲ ವಿಚಾರಣೆಗೊಳಪಡಿಸಿದ ಪೊಲೀಸರು ಬಳಿಕ ಅವರನ್ನು ಪ್ರತ್ಯೇಕವಾಗಿ ಠಾಣೆಗೆ ಕರೆದೊಯ್ದು ನಂತರ ಬಿಡುಗಡೆಗೊಳಿಸಿದ್ದಾರೆಂದು ತಿಳಿದು ಬಂದಿದೆ. ಬೆಳಗಿನ ಜಾವದವರೆಗೂ ಪಾರ್ಟಿ ಮುಂದುವರಿದುದರಿಂದ ಸ್ಥಳೀಯ ನಿವಾಸಿಗಳು ರೋಸಿಹೋಗಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ನೀಡಲಾಗಿತ್ತು. ಅದರಂತೆ ಬಂದ ಪೊಲೀಸರು ಸಾರ್ವಜನಿಕರಿಗೆ ತೊಂದರೆಯುಂಟುಮಾಡುವ ರೀತಿಯಲ್ಲಿ ಪಾರ್ಟಿ ನಡೆಸುವುದು ಸರಿಯಲ್ಲ ಎಂದು ಹೇಳಿದರಲ್ಲದೇ ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಂಡರು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.