ಬೆಂಗಳೂರು,ಮಾರ್ಚ್.27 : ವ್ಹೀಲಿಂಗ್ ಹಾವಳಿ ನಿಯಂತ್ರಣಕ್ಕೆ ವಿಶೇಷ ಕಾರ್ಯಾಚರಣೆ ಆರಂಭಿಸಿರುವ ನಗರ ಸಂಚಾರ ಪೊಲೀಸರು ರಾಜಾಜಿನಗರ ವ್ಯಾಪ್ತಿಯಲ್ಲೇ ಒಂದೇ ದಿನ ವ್ಹೀಲಿಂಗ್ ಮಾಡುತ್ತಿದ್ದ ನಾಲ್ವರನ್ನು ಬಂಧಿಸಿದ್ದಾರೆ. ಕುರುಬರಹಳ್ಳಿ ನಿವಾಸಿ ಬಾಬು(28), ಎಲ್.ಎನ್.ಪುರ ನಿವಾಸಿ ಆ್ಯಕ್ಟಿವಾ ಬೈಕ್‍ನಲ್ಲಿ ವ್ಹೀಲಿಂಗ್ ಮಾಡುತ್ತಿದ್ದ ಬಾಲಾಜಿ(19), ಲಗ್ಗೆರೆಯ ಆರೀಫ್(25) ಹಾಗೂ ಮಹಾಲಕ್ಷ್ಮೀಪುರ ನಿವಾಸಿ ಕೌಶಿಕ್ (23) ಬಂಧಿತರು.ಇವರ ವಿರುದ್ಧ ಸಾರ್ವಜನಿಕ ರಸ್ತೆಯಲ್ಲಿ ಅತಿವೇಗ ಮತ್ತು ಆಜಾಗರೂಕತೆ ಚಾಲನೆ, ಅಪಾಯಕಾರಿ ರೈಡಿಂಗ್, ಹೆಲ್ಮೆಟ್ ಧರಿಸದೆ ಚಾಲನೆ ಮುಂತಾದ ಸಂಚಾರ ನಿಯಮ ಉಲ್ಲಂಘನೆ ಪ್ರಕರಣ ದಾಖಲಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು.
ನ್ಯಾಯಾಲಯ ಆರೋಪಿಗಳನ್ನು ಏ.4ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ರಾಜಾಜಿನಗರ 17ನೇ ಮುಖ್ಯರಸ್ತೆ, ಕೆಎಲ್‍ಇ ಕಾಲೇಜು ಸುತ್ತಮುತ್ತ, ಬಸವೇಶ್ವರ ಶಾಲೆ ಸುತ್ತ ಮುತ್ತ ಪಶ್ಚಿಮ ಕಾರ್ಡ್ ರಸ್ತೆ, ಸರ್ವೀಸ್ ರಸ್ತೆಗಳಲ್ಲಿ ಯುವಕರು ವ್ಹೀಲಿಂಗ್ ಮಾಡುತ್ತಿರುವ ಬಗ್ಗೆ ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ರಾಜಾಜಿನಗರ ಸಂಚಾರ ಪೊಲೀಸರು ಮಾ.25ರಂದು ವಿಶೇಷ ಕಾರ್ಯಾಚರಣೆ ನಡೆಸಿ ವ್ಹೀಲಿಂಗ್ ನಡೆಸುತ್ತಿದ್ದ ನಾಲ್ವರ ವಿರುದಟಛಿ ಪ್ರಕರಣ ದಾಖಲಿಸಿದ್ದಾರೆ.