ಕುಂದಾಪುರ: ಒಂದು ಸಿನಿಮಾ ಸಕ್ಸಸ್ ಆದ್ಮೇಲೆ ಆ ಚಿತ್ರದ ನಾಯಕ, ನಾಯಕಿ ಅಷ್ಟೇ ಯಾಕೆ ನಿರ್ದೇಶಕರು, ತಂತ್ರಜ್ಞರು ಸಿಕ್ಕಾಪಟ್ಟೆ ಬಿಜಿ ಆಗೋದು ಕಾಮನ್. ಹೀಗೆಯೇ ಪ್ರತಿಭಾನ್ವಂತ ಯುವ ನಿರ್ದೇಶಕ ಸುನಿ ಅವರು ಕೂಡ ಈಗ ತನ್ನ ಹೊಸ ಲವ್ ಸ್ಟೋರಿಯನ್ನು ತೆರೆ ಮೇಲೆ ತರುವಲ್ಲಿ ಫುಲ್ ಬ್ಯುಸಿಯಾಗಿದ್ದು ಇವರ ಹೊಸ ಚಿತ್ರದ ಹೆಸರು ಏನು ಅಂದುಕೊಂಡಿದ್ದೀರಾ..? “ಸಿಂಪಲ್ಲಾಗಿ ಇನ್ನೊಂದ್ ಲವ್‌ಸ್ಟೋರಿ” ಹೆಸರಿನ ಈ ಸಿನಿಮಾದ ಚಿತ್ರೀಕರಣವೀಗ ಕುಂದಾಪುರ ತಾಲೂಕಿನ ಹಲವೆಡೆ ಸದ್ದಿಲ್ಲದೇ ನಡೆಯುತ್ತಿದ್ದು ಈ ಬಗ್ಗೆ ಒಂದು ಸ್ಟೋರಿ ಇಲ್ಲಿದೆ ನೋಡಿ.
ಹೌದು…ಇದೇ ನಿರ್ದೇಶಕ ಸುನಿ ಅವರು ಮಾಡಿದ್ದ ‘ಸಿಂಪಲ್ಲಾಗಿ ಒಂದ್ ಲವ್ ಸ್ಟೋರಿ’ ಚಿತ್ರ ಅದೆಷ್ಟೋ ಪ್ರೇಮಿಗಳನ್ನು ರಂಜಿಸೋ ಜೊತೆಗೆ ಎಲ್ಲರ ಮನಸ್ಸನ್ನು ತಲುಪಿ ಹಿಟ್ ಆಗಿತ್ತು. ಅದರ ಹೆಸರಿನ ಜೊತೆಗೆ ಸೇರಿಸಿಕೊಂಡು ಸುನಿ ನಿರ್ದೇಶಿಸಹೊರಟಿದ್ದು ‘ಸಿಂಪಲ್ಲಾಗಿ ಇನ್ನೊಂದ್ ಲವ್ ಸ್ಟೋರಿ’ ಅಂತಾ ಹೊಸ ಚಿತ್ರ.
‘ಜೀ ಕನ್ನಡ’ ವಾಹಿನಿಯಲ್ಲಿ ಕಳೆದ ಮೂರುವರೆ ವರ್ಷಗಳಿಂದ ‘ರಾಧಾ ಕಲ್ಯಾಣ’ ಧಾರಾವಾಹಿಯನ್ನು ಪ್ರೇಕ್ಷಕರೆಡೆಗೆ ತಲುಪುವ ಯಶಸ್ಸಿಗೆ ಕಾರಣರಾದ ಆಶುಬೆದ್ರ ಅವರೇ ಈ ‘ಸಿಂಪಲ್ಲಾಗಿ ಇನ್ನೊಂದ್ ಲವ್‌ಸ್ಟೋರಿ’ ನಿರ್ಮಿಸುತ್ತಿದ್ದಾರೆ. ಈ ಚಿತ್ರದ ಚಿತ್ರೀಕರಣವೀಗ ಕುಂದಾಪುರದ ಹಲವಡೆ ನಡೆಯುತ್ತಿದ್ದು ಈಗಾಗಲೇ ಬೈಂದೂರು ಒತ್ತಿನೆಣೆ ಕ್ಷಿತಿಜ ನೇಸರಧಾಮ ಪರಿಸರ, ಕುಂದಾಪುರದ ಕೋಟಿಯ ಆಸುಪಾಸು, ಕೋಟಿ ಚಕ್ರೇಶ್ವರಿ ದೇವಸ್ಥಾನದಲ್ಲಿ ನಡೆಯುತ್ತಿದೆ.
ಈ ಸಿನೆಮಾದ ನಾಯಕ ಪ್ರವೀಣ್ ಶಿವಮೊಗ್ಗದ ಹೊಸನಗರದವರು. ಕೆಲವಾರು ಖಾಸಗಿ ವಾಹಿನಿಗಳಲ್ಲಿ ಕಾರ್ಯಕ್ರಮ ನಿರೂಪಕರಾಗಿಯೂ ಕೆಲಸ ಮಾಡಿದ ಅನುಭವ ಹೊಂದಿದ್ದ ಇವರು ರಾಧಾ ಕಲ್ಯಾಣ ಧಾರಾವಾಯಿ ನಟನೆಯಲ್ಲಿ ಜನಪ್ರಿಯಗೊಂಡ ಇವರು ಈ ಹಿಂದೆ ಕೆಲವು ಸಿನೆಮಾದಲ್ಲೂ ಸಹ ಕಲಾವಿದರಾಗಿ ನಟಿಸಿದ್ದಾರೆ. ಆದರೇ ಯುವನಟ ಪ್ರವೀಣ್‌ಗೆ ನಾಯಕನಾಗಿ ಇದು ಪ್ರಥಮ ಚಿತ್ರವಾಗಿದೆ. ವಿಭಿನ್ನ ಪ್ರೇಮ ಕಥೆ ಮೂಲಕ ಪ್ರೀತಿಯ ಒಂದೊಂದೆ ಹಂದರ ತೆರೆದುಕೊಳ್ಳುವ ಕಥೆಯಾಗಿರುವ ಕಾರಣ ಉತ್ತಮ ಭರವಸೆ ಹೊಂದಿದ್ದೇನೆ ಎನ್ನುತ್ತಾರೆ.
ಚಾರ್ಮಿನಾರ್ ಎಂಬ ಕನ್ನಡ ಚಿತ್ರದ ಮೂಲಕ ಫೆಮಸ್ ಆದ ಚಂದುಳ್ಳಿ ಚೆಲುವೆ ಮೇಘನಾ ಗಾಂವ್ಕರ್ ಈ ಚಿತ್ರದ ನಾಯಕಿ. ಈಕೆ ಮೂಲತಃ ಗುಲ್ಬರ್ಗಾದವರಾಗಿದ್ದಾರೆ. ಡಾನ್ಸ್‌ರ್ ಆಗಿರುವ ಇವರು ನೃತ್ಯ ಕಾರ್ಯಕ್ರಮದ ಮೂಲಕ ಗುರುತಿಸಿಕೊಂಡು ಬಳಿಕ ಟಿ.ವಿ ಕಾರ್ಯಕ್ರಮದ ಮೂಲಕ ಮಿಂಚಿದ್ದಾರೆ. ಚಾರ್ಮಿನಾರ್ ಸಿನೆಮಾ ಸೇರಿದಂತೆ ಈಗಾಗಲೇ ನಮ್ಮ ಎರಿಯಾದಲ್ಲಿ ಒಂದು ದಿನ, ತುಘಲಕ್ ಸೇರಿದಂತೆ ಐದು ಚಿತ್ರಗಳಲ್ಲಿ ನಟಿಸಿದ್ದಾರೆ. ‘ಕನ್ನಡಿಗ ವರ್ಲ್ಡ್’ ಜೊತೆಗೆ ಮಾತನಾಡಿದ ಅವರು, ಕಥೆಯ ಎಲ್ಲವನ್ನೂ ಹೇಳೊಕಾಗೊಲ್ಲ, ಆದರೇ ಪಕ್ಕಾ ಲವ್ ಸ್ಟೋರಿ ಬೇಸ್ ಇದೆ, ಕರಾವಳಿ ಭಾಗ ಈ ಸಿನೆಮಾಕ್ಕೆ ಅತ್ಯಗತ್ಯ. ಈಗಾಲೇ ಕರಾವಳಿ ಕೆಲವಡೆ ಸಿನೆಮಾ ಚಿತ್ರೀಕರಣ ಮಾಡಿದ್ದೇವೆ ಎಂದರು. ಕುಂದಾಪುರ ಹೇಗನ್ನಿಸುತ್ತೆ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, “ ನನಗೆ ಇಂತಾ ಬಿಸಿಲು ಸೆಕೆ ವಾತಾವರಣ ಹೊಸತು, ಆದ್ರೇ ಕುಂದಾಪುರದಲ್ಲಿ ಚಿತ್ರೀಕರಣಕ್ಕೆ ಪೂರಕವಾದ ಸ್ಥಳಗಳಿದೆ, ಈ ಹಿಂದೆಯೂ ಒಂದೆರಡೂ ಬಾರೀ ಈ ಭಾಗಕ್ಕೆ ಬಂದಿದ್ದೆ, ಕೊಲ್ಲೂರು ಮೂಕಾಂಬಿಕೆ ನನ್ನ ಇಷ್ಟದೇವಿ., ನಾನು ವೆಜ್ ತಿನ್ನೋದು ಆದ್ರೂ ಕೂಡ ಇಲ್ಲಿನ ಕೆಂಪಕ್ಕಿ ಅನ್ನ ಸೂಪರ್’ ಎಂದರು.
ಮುಂಗಾರುಮಳೆ ಸೇರಿದಂತೆ ಹಲವು ಚಿತ್ರಗಳಲ್ಲಿ ಪೋಷಕ ನಟಿಯಾಗಿ ಅಭಿನಯಿಸಿದ ಹಿರಿಯ ಕಲಾವಿದೆ ಪದ್ಮಜಾ ರಾವ್, ಹಲವು ಚಿತ್ರದಲ್ಲಿ ಅಭಿನಯಿಸಿದ ಹಿರಿಯ ಕಲಾವಿದ ಸುರೇಶ್ ಮಂಗ್ಳೂರು, ರವಿ ಭಟ್, ಪ್ರೇಮಲತಾ, ಅರ್ಚನಾ ಗಾಯಕವಾಡ್, ಶಿವಮಂಜು, ಆಶಾ ಜೋಯಿಷ್ ಮೊದಲಾದವರು ಪ್ರಮುಖ ತಾರಾಂಗಣದಲ್ಲುದ್ದಾರೆ. ಭರತ್ ಮತ್ತು ಸಾಯಿ ಕಿರಣ್ ಸಂಗೀತ ಮತ್ತು ಸಾಹಿತ್ಯ ನೀಡಿದ್ದಾರೆ.
ಒಂದೆರಡು ಸಿನೆಮಾ ಮಾಡಲು ಹೊರಟು ಕೈಗೂಡದ ಬೇಸರದಲ್ಲಿದ್ದೇನೆ. ಸೋ, ಈ ಚಿತ್ರದ ಟ್ರೇಲರ್ ಬಿಡುಗಡೆ ಮಾಡುವವೆರೆಗೂ ಮಾಧ್ಯಮದೊಂದಿಗೆ ಮಾತಾಡೋಕೆ ಮುಜುಗರವೆನಿಸುತ್ತೇ ಎನ್ನುತ್ತಲೇ ಸೌಮ್ಯವಾಗಿ ಮಾತನಾಡಿದ ನಿರ್ದೇಶಕ ಸುನಿ ಈ ಚಿತ್ರದ ಕಥೆಯ ಗೌಪ್ಯತೆ ಬಿಟ್ಟುಕೊಡಲಿಲ್ಲ. ಆದರೇ ಸಿನಿಮಾದಲ್ಲಿ ಕರಾವಳಿಯ ಸಂಪೂರ್ಣ ಸೊಬಗಿಗೆ ಹೊಸ ಮೆರಗು ನೀಡಿ ತೆರೆಯ ಮೇಲೆ ತರಲಿದ್ದಾರೆ ಎಂಬುದು ಮಾತ್ರ ಸತ್ಯ. ಈಗಾಗಲೇ ಬೆಂಗಳೂರಿನಲ್ಲಿ ಒಂದು ಹಂತದ ಚಿತ್ರೀಕರಣ ಮುಗಿದಿದ್ದು ಕುಂದಾಪುರ,ಬೈಂದೂರು,ಮುರ್ಡೆಶ್ವರ,ಗೋಕರ್ಣಗಳಲ್ಲಿ ಚಿತ್ರೀಕರಣ ನಡೆಯಲಿದೆ.ಉಡುಪಿ ಭಾಗದಲ್ಲಿಯೂ ಚಿತ್ರೀಕರಣ ನಡೆಯಲಿದೆ.
ನಾಯಕ-ನಾಯಕಿಯ ಒಂದು ಜರ್ನಿಯ ಸುತ್ತ ಹೆಣೆದಿರುವ ಈ ಪ್ರೇಮ ಕಥೆಯಿದಾಗಿದ್ದು ಮೂರ್ನಾಲ್ಕು ಸಾಂಗುಗಳು, ಅಗತ್ಯವಿದ್ದಲ್ಲಿ ಆಕ್ಷನ್ ಇದೆಯಂತೆ. ಒಟ್ಟಿನಲ್ಲಿ ಎರಡೂವರೆ ಕೋಟಿಗೂ ಅಧಿಕ ಬಜೆಟ್‌ನಲ್ಲಿ ಸಿಂಪಲ್ಲಾಗಿ ಇನ್ನೊಂದ್ ಲವ್ ಸ್ಟೋರಿ ಸಿನಿಮಾ ನಿರ್ಮಾಣವಾಗುತ್ತಿದೆಯೆಂಬ ‘ಎಕ್ಸ್‌ಕ್ಲ್ಯೂಸಿವ್’ ಮಾಹಿತಿ ಇದೆ. ಸಂಪೂರ್ಣ ಚಿತ್ರತಂಡ ಸಂಪೂರ್ಣವಾಗಿ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದು ಯಶಸ್ಸು ಇವರಿಗೆ ಒಲಿಯಲಿ ಎಂಬ ಹಾರೈಕೆ ನಮ್ಮದು.
ವರದಿ- ಯೋಗೀಶ್ ಕುಂಭಾಸಿ