ಮಂಗಳೂರು, ಮಾ.24 : ಜೈಲಿನಲ್ಲಿರುವ ಖೈದಿಗಳ ಆರೋಗ್ಯವನ್ನು ವೈದ್ಯಕೀಯ ಕಾಲೇಜುಗಳ ಸಹಕಾರದೊಂದಿಗೆ ನಿಯಮಿತವಾಗಿ ನಡೆಸುವಂತೆ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಸೂಚಿಸಿದ್ದಾರೆ. ಅವರು ಮಂಗಳವಾರ ಜಿಲ್ಲಾ ಕಾರಾಗೃಹದಲ್ಲಿ ಸಂದರ್ಶಕ ಮಂಡಳಿಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇದಲ್ಲದೆ, ದಂತ ಕಾಲೇಜುಗಳ ನೆರವಿನೊಂದಿಗೆ ಕೈದಿಗಳ ದಂತ ಪರೀಕ್ಷೆಯನ್ನು ನಡೆಸಲು ಅವರು ತಿಳಿಸಿದರು.
ಮೊದಲ ಬಾರಿಗೆ ಸಣ್ಣ ಪುಟ್ಟ ಅಪರಾಧಗಳನ್ನು ಎಸಗಿ ಬಂಧನಕ್ಕೊಳಗಾಗಿ ಜೈಲಿಗೆ ಬರುವವರನ್ನು ಮತ್ತು ವಿದ್ಯಾರ್ಥಿ ಆರೋಪಿಗಳನ್ನು ಜೈಲಿನಲ್ಲಿ ಕುಖ್ಯಾತ ಆರೋಪಿಗಳಿರುವ ಸೆಲ್‌ನಲ್ಲಿರಿಸದೆ, ಅವರನ್ನು ಪ್ರತ್ಯೇಕ ಸೆಲ್‌ನಲ್ಲಿಡಬೇಕು. ಅಂತರ್ ಜಿಲ್ಲಾ ನ್ಯಾಯಾಲಯಗಳ ಪ್ರಕರಣಗಳಿಗೆ ಸಂಬಂಧಪಟ್ಟ ಆರೋಪಿಗಳನ್ನು ವಿಡಿಯೋ ಕಾನ್ಫೆರೆನ್ಸ್ ಮೂಲಕ ಹಾಜರುಪಡಿಸಿದರೆ, ಎಸ್ಕಾರ್ಟ್ ಕೊರತಯಿಂದ ಕೈದಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸದಿರುವ ಸಮಸ್ಯೆ ಬಗೆಹರಿಸಬಹುದು. ಈ ಬಗ್ಗೆ ಪರಿಶೀಲಿಸುವಂತೆ ಜಿಲ್ಲಾಧಿಕಾರಿಗಳು ಕಾರಾಗೃಹ ಅಧಿಕಾರಿಗಳಿಗೆ ಸೂಚಿಸಿದರು.
ಜೈಲಿನಲ್ಲಿ ಭದ್ರತೆಯನ್ನು ಇನ್ನಷ್ಟು ಬಿಗಿಗೊಳಿಸಲು ಸಿಬ್ಬಂದಿಗಳಿಗೆ ಬಂದೂಕುಗಳನ್ನು ಒದಗಿಸುವ ಸಂಬಂಧ ಪ್ರಸ್ತಾವನೆ ಸಲ್ಲಿಸುವಂತೆ ತಿಳಿಸಿದ ಜಿಲ್ಲಾಧಿಕಾರಿಗಳು, ಈ ಬಗ್ಗೆ ಪೊಲೀಸ್ ಆಯುಕ್ತರ ಅಭಿಪ್ರಾಯ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಪ್ರಧಾನ ಜಿಲ್ಲಾ ನ್ಯಾಯಾಧೀಶರಾದ ಎಂ.ಜಿ. ಉಮಾ ಮಾತನಾಡಿ, ಕೈದಿಗಳ ಮನಪರಿವರ್ತನೆಗೆ ಯೋಗಾಭ್ಯಾಸದಂತಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕು. ಇದಲ್ಲದೆ, ಅವರಿಗೆ ವೃತ್ತಿ ಕೌಶಲ್ಯ ತರಬೇತಿಗಳನ್ನು ಏರ್ಪಡಿಸುವಂತೆ ತಿಳಿಸಿದರು. ಜೈಲು ಪರಿಶೀಲನೆ: ಇದಕ್ಕೂ ಮೊದಲು ಜಿಲ್ಲಾಧಿಕಾರಿಗಳು ಮತ್ತು ಪ್ರಧಾನ ಜಿಲ್ಲಾ ನ್ಯಾಯಾಧೀಶರು ಜೈಲಿನ ಎಲ್ಲಾ ಸೆಲ್‌ಗಳಿಗೆ ಭೇಟಿ ನೀಡಿ, ಪರಿಶೀಲಿಸಿದರು. ಜೈಲಿನ ಅಡುಗೆ ಕೋಣೆ, ಉಗ್ರಾಣ ಮತ್ತು ಶೌಚಾಲಯ ಕೋಣೆಗಳಿಗೂ ಭೇಟಿ ನೀಡಿ ವೀಕ್ಷಿಸಿದರು. ಕೈದಿಗಳೊಂದಿಗೆ ಮಾತನಾಡಿ, ಅವರ ಆರೋಗ್ಯ ವಿಚಾರಿಸಿದರು. ಇದಲ್ಲದೆ, ಮಹಿಳಾ ಸೆಲ್ ಹಾಗೂ ಹಳೇ ಕಾರಾಗೃಹಕ್ಕೂ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಉಪ ಪೊಲೀಸ್ ಆಯುಕ್ತ ವಿಷ್ಣುವರ್ಧನ್, ಪಿಡಬ್ಯುಡಿ ಕಾರ್ಯಪಾಲಕ ಅಭಿಯಂತರ ಧರ್ಮರಾಜ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಕೃಷ್ಣ, ಎಎಸ್‌ಪಿ ಶೇಖರಪ್ಪ, ವೆನ್‌ಲಾಕ್ ಸರ್ಜನ್ ಡಾ.ರಾಜೇಶ್ವರಿ ದೇವಿ, ಕಾರಾಗೃಹ ಅಧೀಕ್ಷಕ ಓಬಳೇಶಪ್ಪ, ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.
