ಪುತ್ತೂರು, ಮಾ.25: ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಭಾಗವಹಿಸಿ ಮಂಗಳೂರಿನ ಒಮೇಗಾ ಆಸ್ಪತ್ರೆಯಲ್ಲಿ ಹೃದಯ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿರುವ ಇಬ್ಬರು ಮೃತಪಟ್ಟಿದ್ದು, ಶಸ್ತ್ರ ಚಿಕಿತ್ಸೆಗೆ ಒಳಗಾದ ಓರ್ವ ಮಹಿಳೆಯ ಸ್ಥಿತಿ ಗಂಭೀರವಾಗಿದ್ದು, ವೈದ್ಯರ ನಿರ್ಲಕ್ಷ್ಯವನ್ನು ವಿರೋಧಿಸಿ ಪುತ್ತೂರು ತಾಲೂಕಿನ ಪಾಣಾಜೆಯಲ್ಲಿ ಭಾರೀ ಪ್ರತಿಭಟನೆ, ಜಿಲ್ಲಾ ವೈದ್ಯಾಧಿಕಾರಿಗೆ ದಿಗ್ಬಂಧನ ಹಾಗೂ ಒಮೇಗಾ ಆಸ್ಪತ್ರೆಯ ವೈದ್ಯರೊಬ್ಬರಿಗೆ ಸ್ಥಳೀಯರು ಹಲ್ಲೆ ನಡೆಸಿದ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ಸುಮಾರು 1ಸಾವಿರಕ್ಕೂ ಅಧಿಕ ಮಂದಿ ಪ್ರತಿಭಟನೆ ನಡೆಸಿದ್ದು, ಪ್ರತಿಭಟನ ನಿರತರನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ. ಪಾಣಾಜೆಯಲ್ಲಿ ಮಾ.10ರಂದು ನಡೆದಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಭಾಗವಹಿಸಿ ಬಳಿಕ ಮಂಗಳೂರಿನ ಒಮೇಗಾ ಆಸ್ಪತ್ರೆಯಲ್ಲಿ ಹೃದಯದ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದ ಎಂಡೋ ಸಂತ್ರಸ್ತೆ ಆರ್ಲಪದವು ನಿವಾಸಿ ಮಮ್ಮುಂಞಿ ಎಂಬವರ ಪುತ್ರಿ ಇಲ್ಲಿನ ಸರಕಾರಿ ಪ್ರಾಥಮಿಕ ಶಾಲಾ 4ನೆ ತರಗತಿಯ ವಿದ್ಯಾರ್ಥಿನಿ ಆಯಿಷತ್ ಹಸೀನಾ (9) ಮತ್ತು ಪಾಣಾಜೆ ಬೊಳ್ಳಿಂಬಳ ನಿವಾಸಿ ಕಿಟ್ಟಣ್ಣ ರೈ ಎಂಬವರ ಪತ್ನಿ ಪೂವಕ್ಕ (69) ಮೃತಪಟ್ಟವರು. ಶಸ್ತ್ರಚಿಕಿತ್ಸೆಗೆ ಒಳಗಾದ ಚೆಂಬರಕಟ್ಟೆ ನಿವಾಸಿ ಚನಿಯ ಮಡಿವಾಳ ಎಂಬವರ ಪತ್ನಿ ಸುಂದರಿ(45) ಸ್ಥಿತಿ ಗಂಭೀರವಾಗಿದೆ.
ಘಟನೆಯ ವಿವರ:
ವಾಜಪೇಯಿ ಆರೋಗ್ಯ ಶ್ರೀ ಯೋಜನೆಯಡಿ ಬಿಪಿಎಲ್ ಕಾರ್ಡ್‌ದಾರರಿಗೆ ಮಾ.10ರಂದು ಪಾಣಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾಗಿತ್ತು. ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಆಶ್ರಯದಲ್ಲಿ ಮಂಗಳೂರು ಒಮೇಗಾ ಆಸ್ಪತ್ರೆ ಶಿಬಿರ ನಡೆಸಿ ಸುಮಾರು 30 ಮಂದಿ ಫಲಾನುಭವಿಗಳನ್ನು ಗುರುತಿಸಿತ್ತು. ಅದರಂತೆ ಮಾ. 11ರಂದು ಪುತ್ತೂರು ಸರಕಾರಿ ಆಸ್ಪತ್ರೆಯ ಆರೋಗ್ಯ ಮಿತ್ರ ಹರೀಶ್ ಎಂಬವರ ಸಹಾಯದಿಂದ 28 ಮಂದಿಯನ್ನು ಮಂಗಳೂರಿಗೆ ಕರೆದೊಯ್ಯಲಾಗಿತ್ತು. ಮಾ.18ರಂದು 13 ಮಂದಿಯನ್ನು ಶಸ್ತ್ರಚಿಕಿತ್ಸೆಗಾಗಿ ದಾಖಲು ಮಾಡಲಾಯಿತು. ಉಳಿದವರಿಗೆ ಔಷಧಿ ವಿತರಿಸಿ ಮನೆಗೆ ಕಳುಹಿಸಲಾಗಿತ್ತು.
ಹಸೀನಾ ಅವರ ಹೃದಯ ಶಸ್ತ್ರ ಚಿಕಿತ್ಸೆಯು ಮಾ.19ರಂದು ನಡೆದಿತ್ತು. ಅದೇ ದಿನ ರಾತ್ರಿ ಅವರು ಮೃತಪಟ್ಟಿದ್ದರು. ಪೂವಕ್ಕ ಇಂದು ಮೃತಪಟ್ಟಿದ್ದ್ದು, ಅವರ ಮೃತದೇಹವನ್ನು ಪಾಣಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿಟ್ಟು ಸಾರ್ವಜನಿಕರು ಪ್ರತಿಭಟನೆ ನಡೆಸಿದರು.
ಡಿಎಚ್‌ಒ ಹಾಗೂ ಚಿಕಿತ್ಸೆ ನೀಡಿದ್ದ ಒಮೇಗಾ ಆಸ್ಪತ್ರೆಯ ವೈದ್ಯಾಧಿಕಾರಿಗಳು ಸ್ಥಳಕ್ಕೆ ಆಗಮಿಸದೇ ಹಿಂದೆ ಕದಲುವುದಿಲ್ಲ ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದರು. ಪಾಣಾಜೆ ಸುತ್ತಮುತ್ತಲಿನ ನಿವಾಸಿಗಳಾದ ಕಿಟ್ಟಣ್ಣ, ಕಲ್ಯಾಣಿ, ಬಾಲಕೃಷ್ಣ ರೈ, ಹಸೈನಾರ್, ಮುದರ, ಮಾಣಿ, ಪೂವಕ್ಕ, ಸುಂದರಿ, ಆಯಿಷತ್ ಹಸೀನಾ ಸೇರಿದಂತೆ 13 ಜನರು ಒಮೇಗಾ ಆಸ್ಪತ್ರೆಯಲ್ಲಿ ದಾಖಲಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.
ಶಸ್ತ್ರಚಿಕಿತ್ಸೆ ನಡೆದ ದಿನವೇ ರಾತ್ರಿ ಆಸ್ಪತ್ರೆಯಲ್ಲಿ ಎಂಡೋ ಸಂತ್ರಸ್ತೆ ಆಯಿಷತ್ ಹಸೀನಾ ಮೃತಪಟ್ಟರೆ, ಶಸ್ತ್ರಚಿಕಿತ್ಸೆ ಮುಗಿಸಿಕೊಂಡು ಮಾ.23ರಂದು ಮನೆಗೆ ಆಗಮಿಸಿದ್ದ ಪೂವಕ್ಕ ಇಂದು ಬೆಳಗ್ಗೆ ವಾಂತಿ ಮಾಡಲಾರಂಭಿಸಿದ್ದರು. ತಕ್ಷಣವೇ ಮನೆಯವರು ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಮಧ್ಯಾಹ್ನದ ಹೊತ್ತಿಗೆ ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಗಂಭೀರ ಸ್ಥಿತಿಯಲ್ಲಿದ್ದ ಸುಂದರಿಯವರ ಕೈಗಳು ಊದಿಕೊಂಡಿದ್ದು, ಅವರನ್ನೂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಉಚಿತ ತಪಾಸಣಾ ಶಿಬಿರಕ್ಕೆ ಆಗಮಿಸಿದ 30 ಮಂದಿಯಲ್ಲಿ 12 ಮಂದಿಗೆ ಶಸ್ತ್ರ ಚಿಕಿತ್ಸೆ ನಡೆಸಿರುವ ಒಮೇಗಾ ಆಸ್ಪತ್ರೆಯ ವೈದ್ಯಾಧಿಕಾರಿಗಳ ಬಗ್ಗೆ ಸಾರ್ವಜನಿಕ ವಲಯದಿಂದ ಸಾಕಷ್ಟು ಆಕ್ರೋಶ ವ್ಯಕ್ತವಾಗಿದ್ದು, ಹಲವಾರು ಸಂಶಯಗಳಿಗೂ ಎಡೆ ಮಾಡಿಕೊಟ್ಟಿದೆ.
ಈ ಶಿಬಿರದಲ್ಲಿ ಭಾಗವಹಿಸಿದ ಫಲಾನುಭವಿಗಳಿಗೆ ವಾಜಪೇಯಿ ಆರೋಗ್ಯಶ್ರೀ ಯೋಜನೆಯಡಿಯಲ್ಲಿ ಶಸ್ತ್ರ ಚಿಕಿತ್ಸಾ ವೆಚ್ಚವನ್ನು ಸರಕಾರ ಭರಿಸುತ್ತಿದ್ದು, ಈ ಹಣಕ್ಕಾಗಿ ಶಸ್ತ್ರ ಚಿಕಿತ್ಸೆ ನಡೆಸಲಾಗಿದ್ದು, ಸರಕಾರದ ಹಣವನ್ನು ಲೂಟಿಮಾಡುವ ಹುನ್ನಾರವಾಗಿ ಗ್ರಾಮೀಣ ಪ್ರದೇಶದ ಬಡ ಜನರ ಜೀವದೊಂದಿಗೆ ಆಸ್ಪತ್ರೆಯು ಚೆಲ್ಲಾಟವಾಡಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ನಡೆಯಬೇಕು ಹಾಗೂ ಆಸ್ಪತ್ರೆ ಮತ್ತು ವೈದ್ಯರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಮುಸ್ಸಂಜೆ ವೇಳೆಗೆ ಜಿಲ್ಲಾ ಆರೋಗ್ಯಾಧಿಕಾರಿ ಹಾಗೂ ಒಮೇಗಾ ಆಸ್ಪತ್ರೆ ವೈದ್ಯಾಧಿಕಾರಿ ಸ್ಥಳಕ್ಕೆ ಆಗಮಿಸಿದ್ದರು. ಈ ವೇಳೆ ಸ್ಥಳದಲ್ಲಿ ಸಾವಿರಕ್ಕೂ ಅಧಿಕ ಮಂದಿಯಿದ್ದು, ಮೃತದೇಹವನ್ನು ಮುಂದಿಟ್ಟು ಪ್ರತಿಭಟನೆ ನಡೆಸುತ್ತಿದ್ದರು. ಅಧಿಕಾರಿಗಳು ಹಾಗೂ ವೈದ್ಯರು ಆಗಮಿಸುತ್ತಿದ್ದಂತೆ ಗ್ರಾಮಸ್ಥರು ಗುಂಪು ಸೇರಿ ಪ್ರಶ್ನಿಸಲು ಆರಂಭಿಸಿದರು. ಈ ವೇಳೆಯಲ್ಲಿ ಸಮರ್ಪಕವಾದ ಉತ್ತರ ನೀಡುವಲ್ಲಿ ವಿಫಲರಾದ ಜಿಲ್ಲಾ ವೈದ್ಯಾಧಿಕಾರಿಗೆ ದಿಗ್ಬಂಧನ ಹಾಕಿದ ಪ್ರತಿಭಟನ ನಿರತರು. ಒಮೇಗಾ ಆಸ್ಪತ್ರೆಯ ವೈದ್ಯರ ಮೇಲೆ ಹಲ್ಲೆ ನಡೆಸಿದರು. ಇದನ್ನು ತಡೆಯಲು ಮುಂದಾದ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಹಾಗೂ ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆಯಿತು. ಬಳಿಕ ಆಕ್ರೋಶಿತ ಗುಂಪನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ಈ ಸಂದಭರ್ದಲ್ಲಿ ಸ್ಥಳೀಯರಾದ ಸುಬ್ಬ ಮೂಲ್ಯ ಎಂಬವರಿಗೆ ಗಾಯಗಳಾಗಿವೆ.