ಕನ್ನಡ ವಾರ್ತೆಗಳು

ಜನಾಕ್ರೋಶಕ್ಕೆ ಕಾರಣವಾದ ಪಾದೂರು ಪೈಪ್‌ಲೈನ್ ಕಾಮಗಾರಿ

Pinterest LinkedIn Tumblr

Mulky_news_photo_1

ಮೂಲ್ಕಿ,ಮಾರ್ಚ್.25 : ಉಡುಪಿ ಜಿಲ್ಲೆಯ ಪಾದೂರಿನ ಐ‌ಎಸ್‌ಪಿ‌ಆರ್‌ಎಲ್ ಯೋಜನೆಗಾಗಿ ತೋಕೂರಿನಿಂದ ಪಾದೂರಿನವರೆಗೆ ಭೂಗತ ಪೈಪ್‌ಲೈನ್ ಕಾಮಗಾರಿ ಮೂಲ್ಕಿಯ ಕಿಲ್ಪಾಡಿ ಪಂಚಾಯತಿ ವ್ಯಾಪ್ತಿಯ ಅತಿಕಾರಿಬೆಟ್ಟು ಸಮೀಪದ ಮೈಲೊಟ್ಟು ಬಳಿಯ ಪಂಜಿನಡ್ಕದಲ್ಲಿ ಕಾಮಗಾರಿ ಆರಂಭಿಸಿದ್ದನ್ನು ವಿರೋಧಿಸಿದ ಗ್ರಾಮಸ್ಥರು ಕಾಮಗಾರಿ ನಡೆಸುತ್ತಿದ್ದ ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡ ಘಟನೆ ಮಂಗಳವಾರ ನಡೆದಿದೆ.

ಈ ಯೋಜನೆಯನ್ನು ವಿರೋಧಿಸಲು ಬೆಳಿಗ್ಗೆ ಶಿಮಂತೂರು ಆದಿ ಜನಾರ್ಧನ ದೇವಸ್ಥಾನದಲ್ಲಿ ಕಳತ್ತೂರು ಜನಜಾಗೃತಿ ಸಮಿತಿಯ ನೇತೃತ್ವದಲ್ಲಿ ಸಭೆ ಸೇರಿದ ಗ್ರಾಮಸ್ಥರು ಹೋರಾಟದ ಬಗ್ಗೆ ನಿರ್ಧರಿಸಿಕೊಂಡು ಕಾಮಗಾರಿ ನಡೆಯುವ ಸ್ಥಳಕ್ಕೆ ತೆರಳಿದರು. ಗ್ರಾಮಸ್ಥರ ಪರವಾಗಿ ಜನಜಾಗೃತಿ ಸಮಿತಿಯ ಬೆಳಪು ದೇವಿಪ್ರಸಾದ್ ಶೆಟ್ಟಿ ಮಾತನಾಡಿ ಪೈಪ್‌ಲೈನ್ ಕಾಮಗಾರಿ ನಡೆಸುವಾಗ ಯಾವುದೇ ರೀತಿಯ ಅನುಮತಿಯನ್ನು ಜಮೀನುದಾರರಿಂದ ಪಡೆಯದೇ ಗುತ್ತಿಗೆದಾರರು ದಬ್ಬಾಳಿಕೆ ನಡೆಸುತ್ತಿದ್ದಾರೆ. ಸೂಕ್ತ ಪರಿಹಾರವಾಗಲಿ, ಸರ್ವೇಕಾರ್ಯವಾಗಲಿ ನಡದೇ ಇಲ್ಲ, ಜನರನ್ನು ಕತ್ತಲಲ್ಲಿಟ್ಟು ಗುತ್ತಿಗೆದಾರರು ಸ್ಥಳೀಯರಾಗಿದ್ದರು ಕೃಷಿಕರ ವಿರೋಧಿಯಾಗಿ ವರ್ತಿಸುತ್ತಿರುವುದು ಸರಿಯಲ್ಲ, ಗ್ರಾಮಸ್ಥರ ಎಲ್ಲಾ ಸಮಸ್ಯೆಗೂ ಪರಿಹಾರ ನೀಡಿದ ನಂತರ ಕಾಮಗಾರಿ ಆರಂಭಗೊಳ್ಳಲಿ ಎಂದು ಆಗ್ರಹಿಸಿದರು.

Mulky_news_photo_2

ಈ ಸಂದರ್ಭದಲ್ಲಿ ಗುತ್ತಿಗೆದಾರರಾದ ಹರೀಶ್ ಪುತ್ರನ್ ಹಾಗೂ ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆದು ಗೊಂದಲದ ವಾತಾವರಣ ಉಂಟುಮಾಡಿತ್ತು. ಕೃಷಿಕರೋರ್ವರು ತಮ್ಮ ಅತ್ಯಲ್ಪ ಜಮೀನು ಈ ಪೈಪ್‌ಲೈನ್‌ಗೆ ಆಹಾರ ಆಗುತ್ತಿದೆ ಅತ್ತ ಪರಿಹಾರವು ಇಲ್ಲ ಇತ್ತ ಜಮೀನು ನಿಷ್ಪ್ರಯೋಜಕವಾಗಲಿದೆ ಗುತ್ತಿಗೆದಾರರ ಹತ್ತಿರ ಕನಿಷ್ಠ ನಕ್ಷೆಯೂ ಇಲ್ಲ ಕೇಳಿದರೆ ದಬ್ಬಾಳಿಕೆ ನಡೆಸುತ್ತಾರೆ ಎಂದು ಮಾಧ್ಯಮದವರ ಮುಂದೆ ತಮ್ಮ ಅಸಹಾಯಕತೆಯನ್ನು ತೋಡಿಕೊಂಡ ಘಟನೆಯೂ ನಡೆಯಿತು.

ಸ್ಥಳೀಯರಾದ ಧನಂಜಯ ಕೋಟ್ಯಾನ್ ಮಟ್ಟು, ಕಿಶೋರ್ ಶೆಟ್ಟಿ ದೆಪ್ಪುಣಿಗುತ್ತು, ಜನಜಾಗೃತಿ ಸಮಿತಿಯ ಸಂಚಾಲಕ ಲಾರೆನ್ಸ್ ಫೆರ್ನಾಂಡೀಸ್, ಶಿವರಾಂ ಶೆಟ್ಟಿ, ಚಿತ್ತರಂಜನ್ ಭಂಡಾರಿ, ಶಂಕರ ಶೆಟ್ಟಿ, ಮುರಳೀಧರ ಭಂಡಾರಿ ಇನ್ನಿತರ ಗ್ರಾಮಸ್ಥರು ತಮ್ಮ ವಾದವನ್ನು ಮಂಡಿಸಿ ಕಾಮಗಾರಿಯನ್ನು ನಿಲ್ಲಿಸಬೇಕೆಂದು ತೀವ್ರವಾಗಿ ಆಗ್ರಹಿಸಿದರು.

ಪರಿಸ್ಥಿತಿ ವಿಕೋಪಕ್ಕೆ ತಿರುಗುವ ಹಂತಕ್ಕೆ ತಲುಪಿದಾಗ ಮೂಲ್ಕಿ ಇನ್ಸ್‌ಪೆಕ್ಟರ್ ರಾಮಚಂದ್ರ ನಾಯಕ್‌ರವರ ನೇತೃತ್ವದ ಪೊಲೀಸರು ಜನರನ್ನು ನಿಯಂತ್ರಿಸಲು ಸಾಕಷ್ಟು ಪರದಾಡಬೇಕಾಯಿತು. ಗ್ರಾಮಸ್ಥರು ಕಾಮಗಾರಿ ನಡೆಯುವ ಸ್ಥಳಕ್ಕೆ ಘೆರಾವ್ ಹಾಕಿ ಆಕ್ರೋಶ ವ್ಯಕ್ತಪಡಿಸಿದ ಬಳಿಕ ಪೊಲೀಸ್ ಮಧ್ಯಸ್ಥಿಕೆಯಲ್ಲಿ ಮಾತುಕತೆ ನಡೆದು ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ನಿರ್ವಸಿತರು ಮತ್ತು ಸ್ಥಳೀಯ ಸಚಿವ ಹಾಗೂ ಸಂಸದರ ನೇತೃತ್ವದಲ್ಲಿ ಮಾತುಕತೆ ನಡೆಸಿದ ನಂತರ ಕಾಮಗಾರಿ ನಡೆಸಬೇಕು. ಸ್ಥಳೀಯರಿಗೆ ಮಾಹಿತಿ ನೀಡದೆ ಖಾಸಗಿ ಜಮೀನಿನಲ್ಲಿ ಹಾಕಿರುವ ಬೃಹತ್ ಪೈಪ್‌ಗಳನ್ನು ತೆರವುಗೊಳಿಸಿ ಜಮೀನಿಗೆ ತಡೆಬೇಲಿಯನ್ನು ಗುತ್ತಿಗೆದಾರರೇ ಹಾಕಿಕೊಡಬೇಕೆಂದು ಸೂಚಿಸಿ ಕಾಮಗಾರಿಯನ್ನು ನಿಲ್ಲಿಸಲಾಯಿತು.

ನರೇಂದ್ರ ಕೆರೆಕಾಡು_

Write A Comment