ಹೊಸದಿಲ್ಲಿ,ಮಾರ್ಚ್.21 : ಪ್ರತಿಪಕ್ಷಗಳ ಒಗ್ಗಟ್ಟನ್ನು ಮುರಿಯಲು ಯಶಸ್ವಿಯಾದ ಕೇಂದ್ರ ಸರಕಾರ, ಆರ್ಥಿಕ ಸುಧಾರಣೆಗೆ ಅತೀ ಅಗತ್ಯವಾಗಿದ್ದ ಗಣಿ ಮತ್ತು ಖನಿಜ(ಅಭಿವೃದ್ಧಿ ಮತ್ತು ನಿಯಂತ್ರಣ) ವಿಧೇಯಕ ಮತ್ತು ಕಲ್ಲಿದ್ದಲು ಗಣಿ ವಿಧೇಯಕಗಳಿಗೆ ರಾಜ್ಯಸಭೆ ಒಪ್ಪಿಗೆ ಪಡೆಯಲು ಸಫಲವಾಗಿದೆ.
ಇದರಿಂದ ಕಲ್ಲಿದ್ದಲು ನಿಕ್ಷೇಪ ಹರಾಜಿನ ಮಾದರಿಯಲ್ಲೇ ಇತರ ಖನಿಜಗಳ ಗಣಿಗಳನ್ನು ಹರಾಜು ಮೂಲಕ ವಿಕ್ರಯಿಸುವ ಹಾದಿ ಸುಗಮಗೊಂಡಿದೆ. ಹರಾಜು ಪ್ರಕ್ರಿಯೆ ಜೂನ್‌ನಲ್ಲಿ ಆರಂಭಗೊಳ್ಳುವ ಸಾಧ್ಯತೆ ಇದೆ.
ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೂ ವಿಧೇಯಕಗಳ ಪರವಾಗಿ 117 ಮತಗಳ ಬಿದ್ದವು. ವಿರೋಧವಾಗಿ ಕೇವಲ 69 ಮತಗಳು ಚಲಾವಣೆಗೊಂಡವು. ಟಿಎಂಸಿ, ಬಿಜೆಡಿ, ಎಸ್‌ಪಿ, ಬಿಎಸ್‌ಪಿ, ಎನ್‌ಸಿಪಿ, ಶಿವಸೇನೆ ಪಕ್ಷಗಳು ಕಾಂಗ್ರೆಸ್ ಮತ್ತು ಎಡಪಕ್ಷಗಳ ಗುಂಪನ್ನು ತೊರೆದು ವಿಧೇಯಕದ ಪರವಾಗಿ ಮತ ಚಲಾಯಿಸಿದ್ದು ಇದಕ್ಕೆ ಕಾರಣ. ಇದರಿಂದ ವಿಧೇಯಕವನ್ನು ಮತ್ತೆ ಸ್ಥಾಯಿ ಸಮಿತಿಯ ಪರಿಶೀಲನೆಗೆ ಕಳುಹಿಸಬೇಕೆಂದು ಪಟ್ಟುಹಿಡಿದು ಕುಳಿತಿದ್ದ ಕಾಂಗ್ರೆಸ್, ಎಡಪಕ್ಷಗಳ ಆಟ ನಡೆಯಲಿಲ್ಲ. ಇದಾದ 20 ನಿಮಿಷಗಳಲ್ಲಿ ಲೋಕಸಭೆಯಲ್ಲಿ ವಿಧೇಯಕ ಅನುಮೋದನೆ ಪಡೆಯಿತು. ಕಲ್ಲಿದ್ದಲು ವಿಧೇಯಕದ ಪರವಾಗಿ 107, ವಿರೋಧವಾಗಿ 62 ಮತಗಳು ಚಲಾವಣೆಯಾದವು.
ರಾಷ್ಟ್ರಪತಿ ಅಂಕಿತ ನೀಡಿದ ಬಳಿಕ ಗಣಿ ಮತ್ತು ಖನಿಜ (ಅಭಿವೃದ್ಧಿ ಮತ್ತು ನಿಯಂತ್ರಣ) ತಿದ್ದುಪಡಿ ವಿಧೇಯಕ 2015 ಬದಲು ನೂತನ ಕಾಯಿದೆ ಜಾರಿಯಾಗಲಿದೆ. ಗಣಿ ಮತ್ತು ಖನಿಜ ಹರಾಜು ಹಾಗೂ ವಿಮೆ ವಲಯದಲ್ಲಿ ವಿದೇಶಿ ಹೂಡಿಕೆಗೆ ಅನುವು ಮಾಡಿಕೊಡಲು ಸರಕಾರ ಜನವರಿಯಲ್ಲಿ ಸುಗ್ರೀವಾಜ್ಞೆ ಹೊರಡಿಸಿತ್ತು. ಮೂಲ ವಿಧೇಯಕವು ಮಾ.18ರಂದು ಲೋಕಸಭೆಯಲ್ಲಿ ಅಂಗೀಕಾರಗೊಂಡಿತ್ತು. ವಿಧೇಯಕ ರಾಜ್ಯಸಭೆ ತಿದ್ದುಪಡಿ ಸೂಚಿಸಿ ಆಯ್ಕೆ ಸಮಿತಿ ಪರಿಶೀಲನೆಗೆ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಹೊಸದಾಗಿ ಅನುಮೋದನೆಗೆಂದು ಲೋಕಸಭೆಗೆ ವಾಪಸ್ ಕಳಿಸಲಾಗಿತ್ತು.
ಆಯ್ಕೆ ಸಮಿತಿಯು ಶಿಫಾರಸು ಮಾಡಿರುವ ಹಲವು ತಿದ್ದುಪಡಿಗಳೊಂದಿಗೆ ಉಕ್ಕು ಮತ್ತು ಗಣಿ ಸಚಿವ ನರೇಂದ್ರ ತೋಮರ್ ವಿಧೇಯಕವನ್ನು ಮಂಡಿಸಿದರು.
ಹರಾಜಿಗೆ ಸಂಬಂಧಿಸಿದಂತೆ ರಾಜ್ಯಗಳು ಅಭಿಪ್ರಾಯ ಸಲ್ಲಿಸಲು ಕಾಯಿದೆಯಲ್ಲಿ ಅವಕಾಶವಿದ್ದು, ಅದರಿಂದ ಬರುವ ಎಲ್ಲ ಆದಾಯ ಆಯಾ ರಾಜ್ಯಗಳಿಗೆ ಸೇರುತ್ತದೆ. ಒಟ್ಟು ದೇಶೀಯ ಉತ್ಪನ್ನದಲ್ಲಿ ಗಣಿ ಕೊಡುಗೆ ಶೇ 2ರಷ್ಟಿದರೂ ತೀವ್ರ ಬಿಕ್ಕಟ್ಟಿನಲ್ಲಿದೆ. ಈಗ ಪುನರುಜ್ಜೀವನಗೊಳ್ಳುವುದರಿಂದ ಯುವಕರಿಗೆ ಬೃಹತ್ ಉದ್ಯೋಗಾವಕಾಶ ತೆರೆದುಕೊಳ್ಳಲಿದೆ ಎಂದು ಸಚಿವರು ಹೇಳಿದರು.
ಖನಿಜ ಸಂಪನ್ಮೂಲ ಹೊಂದಿರುವ ರಾಜ್ಯಗಳು ಸೇರಿದಂತೆ ಭಾಗೀದಾರರ ಜತೆ ವಿಧೇಯಕ ರಚನೆ ಮತ್ತು ಆಯ್ಕೆ ಸಮಿತಿಯ ಪರಿಶೀಲನೆಗೆ ಸಲ್ಲಿಸುವ ಬಗ್ಗೆ ಚರ್ಚಿಸಲಾಗಿಲ್ಲ ಎಂದು ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳು ಗುರುವಾರ ವಿಧೇಯಕಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದವು. ಇದೇ ವಿಷಯ ಮುಂಡಿಟ್ಟುಕೊಂಡು ಸಿಪಿಐನ ಪಿ. ರಾಜೀವ್ ಗೊತ್ತುವಳಿ ಕೂಡ ಮಂಡಿಸಿದ್ದರು.ಸರಕಾರವು ಗಣಿ ಚಟುವಟಿಕೆಗಳು ಪರಿಸರದ ಮೇಲಾಗುವ ದುಷ್ಪರಿಣಾಮ, ಅಕ್ರಮ ಗಣಿಗಾರಿಕೆ, ವೈಜ್ಞಾನಿಕವಾಗಿ ಗಣಿಮುಚ್ಚುವಿಕೆಯಲ್ಲಿನ ಲೋಪ, ಭೂಸ್ವಾಧೀನ ಮತ್ತು ಪರಿಹಾರ, ಸ್ಥಳೀಯ ಮತ್ತು ಬುಡಕಟ್ಟು ಸಮುದಾಯಕ್ಕೆ ದಕ್ಕುವ ಲಾಭ ಮತ್ತಿರ ವಿಷಯಗಳನ್ನು ಸರಕಾರ ಪರಿಗಣಿಸಬೇಕು ಎಂದೂ ಆಯ್ಕೆ ಸಮಿತಿ ಸಲಹೆ ನೀಡಿತ್ತು. ಸರಕಾರವು ಈಗಾಗಲೇ 199ಗಣಿಗಳನ್ನು ಹರಾಜಿಗೆ ಗುರುತಿಸಿದೆ.