ಮಂಗಳೂರು: ಉಳ್ಳಾಲ ನೇತ್ರಾವತಿ ನದಿಯಲ್ಲಿ ಸ್ನಾನಕ್ಕೆ ತೆರಳಿದ ಇಬ್ಬರು ವಿದ್ಯಾರ್ಥಿಗಳು ನೀರುಪಾಲಾಗಿರುವ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಕಲ್ಲಾಪು ಬಳಿ ಶನಿವಾರ ಮಧ್ಯಹ್ನ ಸಂಭವಿಸಿದೆ. ನೀರಿಗಿಳಿದು ನಾಪತ್ತೆಯಾದ ವಿದ್ಯಾರ್ಥಿಗಳನ್ನು ಮಾರ್ಗನ್ ಗೇಟ್ ಮಹಾಂಕಾಳಿಪಡ್ಪು ನಿವಾಸಿ ವಿನೋದ್ ನಾಯಕ್ ಎಂಬವರ ಪುತ್ರ ಆದಿತ್ಯ ನಾಯಕ್ (17) ಮತ್ತು ಮಾರ್ನಮಿಕಟ್ಟೆ ನಿವಾಸಿ ಯೋಗೇಂದ್ರ ಎಂಬವರ ಪುತ್ರ ಚಿರಾಗ್ ಬಂಗೇರ ಎನ್ನಲಾಗಿದ್ದು, ಇವರಿಬ್ಬರು ನಗರದ ಕೆನಾರ ಕಾಲೇಜಿನ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು. ಇವರ ಜೊತೆ ಸ್ನಾನಕ್ಕೆ ಬಂದಿದ್ದ ಇನ್ನಿಬ್ಬರು ವಿದ್ಯಾರ್ಥಿಗಳು ಅಪಾಯದಿಂದ ಪಾರಾಗಿದ್ದರೆ.
ನಗರದ ಕೆನರಾ ಪಿಯು ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಆದಿತ್ಯನ ಮಾರ್ಗನ್ ಗೇಟ್ ನಲ್ಲಿರುವ ಮನೆಯಲ್ಲಿ ಓದಲೆಂದು ಬಂದಿದ್ದ ಇದೇ ಕಾಲೇಜಿನ ವಿದ್ಯಾರ್ಥಿಗಳಾದ ಚಿರಾಗ್, ಪ್ರತೀಕ್ ಹಾಗೂ ಸಾತ್ವಿಕ್ ಇಂದು ಮದ್ಯಾಹ್ನ ಓದು ನಿಲ್ಲಿಸಿ ಪಕ್ಕದಲ್ಲೇ ಇರುವ ಉಳ್ಳಾಲ ನೇತ್ರಾವತಿ ನದಿಗೆ ಸ್ನಾನ ಮಾಡಲು ತೆರಳಿದ್ದರು.ಉಳ್ಳಾಲ ಸೇತುವೆ ಮೇಲೆ ಬಟ್ಟೆಗಳನ್ನು ಇಟ್ಟು ನೀರಿಗಿಳಿದಿದ್ದಾರೆ. ಈ ವೇಳೆ ಸ್ನೇಹಿತರಾದ ಆದಿತ್ಯ ಮತ್ತು ಚಿರಾಗ್ ಪ್ರವಾಹಕ್ಕೆ ಸಿಲುಕಿ ನೀರುಪಾಲಾಗಿದ್ದಾರೆ. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಸ್ಥಳೀಯರು ದೋಣಿ ಸಹಾಯದಿಂದ ನಾಪತ್ತೆಯಾಗಿರುವವರಿಗಾಗಿ ಶೋಧ ನಡೆಸಿದ್ದಾರೆ. ಪೊಲೀಸರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳದಲ್ಲಿ ಜಮಾವಣೆಗೊಂಡಿದ್ದಾರೆ.
ಘಟನೆ ವಿವರ :
ಸೋಮವಾರ ನಡೆಯಲಿರುವ ಕಂಪ್ಯೂಟರ್ ಸೈನ್ಸ್ ಪರೀಕ್ಷೆ ತಯಾರಿಯಲ್ಲಿದ್ದ ಸ್ನೇಹಿತರಾದ ಆದಿತ್ಯ ನಾಯಕ್, ಚಿರಾಗ್ ಬಂಗೇರ, ಸಾತ್ವಿಕ್, ಪ್ರತೀಕ್ ಇಮಾನ್ಯುವೆಲ್ ಮಂಗಳೂರಿಗೆ ಬಂದಿದ್ದರು. ವಿದ್ಯಾರ್ಥಿ ಸಾತ್ವಿಕ್‌ಗೆ ನೋಟ್ಸ್ ನ ಜೆರಾಕ್ಸ್ ಬೇಕಿದ್ದರಿಂದ ಮುಡಿಪುವಿನಂದ ಮಂಗಳೂರಿಗೆ ಬಂದಿದ್ದ ಆತನನ್ನು ಇತರ ಗೆಳೆಯರು ಭೇಟಿಯಾಗಿದ್ದರು. ಅಲ್ಲಿಂದ ಎಲ್ಲರೂ ಜತೆಯಾಗಿ ಮಹಾಂಕಾಳಿಪಟ್ಪು ಆದಿತ್ಯನ ಮನೆಗೆ ಜತೆಯಾಗಿ ಓದಲು ಸೇರಿದ್ದರು. ಅಲ್ಲಿಂದ ಮತ್ತೆ ನೇತ್ರಾವತಿ ಕಲ್ಲಾಪು ಸಮೀಪ ಕಿರುಸೇತುವೆ ಇದ್ದು, ಅಲ್ಲಿಯೇ ಓದೋಣ ಎಂದು ಮಹಾಂಕಾಳಿಪಡ್ಪುವಿನಿಂದ ರೈಲ್ವೇ ಹಳಿಯ ಮೂಲಕ ಕಲ್ಲಾಪು ನೇತ್ರಾವತಿ ಕಿನಾರೆಗೆ ಬಂದಿದ್ದರು.
ಅಲ್ಲಿರುವ ತಾತ್ಕಾಲಿಕ ಕಿರು ಸೇತುವೆ ಸಮೀಪ ಆದಿತ್ಯ ಮತ್ತು ಚಿರಾಗ್ ಈಜಲು ಗೊತ್ತಿದ್ದರಿಂದ ನದಿ ನೀರಿನಲ್ಲಿ ಸ್ನಾನಕ್ಕೆ ಇಳಿದಿದ್ದರು. ಆದರೆ ಮಧ್ಯಾಹ್ನ ಹೊತ್ತಾಗಿದ್ದರಿಂದ ನದಿ ನೀರಿನ ಉಬ್ಬರ ಜಾಸ್ತಿಯಿದ್ದರಿಂದ ಇಬ್ಬರೂ ನೀರಿನ ಸೆಳೆತಕ್ಕೆ ಈಜಲು ಸಾಧ್ಯವಾಗದೆ ನಾಪತ್ತೆಯಾಗಿದ್ದಾರೆ. ಇವರು ಮುಳುಗುತ್ತಿರುವುದನ್ನು ಕಂಡ ಪ್ರತೀಕ್ ಕೂಗಾಡಿದರೂ ಸ್ಥಳದಲ್ಲಿ ಯಾರೂ ಇಲ್ಲದೇ ಇದ್ದುದರಿಂದ ರಕ್ಷಿಸಲು ಅಸಾಧ್ಯವಾಯಿತು. ಸ್ಥಳಕ್ಕೆ ಉಳ್ಳಾಲ ಠಾಣಾ ಪೊಲೀಸರು ಮತ್ತು ಅಗ್ನಿ ಶಾಮಕ ದಳ ಭೇಟಿ ನೀಡಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.