ಮಂಗಳೂರು,ಮಾರ್ಚ್.19 : ಬಿಜೆಪಿ ಮಂಗಳೂರು ನಗರ ದಕ್ಷಿಣ ಮಹಿಳಾ ಮೋರ್ಚಾ ವತಿಯಿಂದ ನಗರದ ಬಿಜೈ ಕಾಪಿಕಾಡು ದ.ಕ.ಜಿ.ಪಂ.ಹಿ.ಪ್ರಾ.ಶಾಲೆಗೆ ಕುಡಿಯುವ ನೀರಿನ ಶೇಖರಣೆಗಾಗಿ ಸಿಂಟೆಕ್ ಟ್ಯಾಂಕ್ ಮತ್ತು ಕುಡಿಯುವ ನೀರಿನ ನಳ್ಳಿ ಜೋಡಣೆ ಮಾ.೧೮ ರಂದು ಜರಗಿದ ಸಮಾರಂಭವೊಂದರಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಡಾ|ಜ್ಯೋತಿ ಜಿ.ಕಾರ್ಣಿಕ್‌ರವರ ಮೂಲಕ ಹಸ್ತಾಂತರಿಸಲಾಯಿತು.
ಬಳಿಕ ಜರಗಿದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಡಾ| ಜ್ಯೋತಿ ಕಾರ್ಣಿಕ್ ಮಾತನಾಡುತ್ತಾ, ವಿಶ್ವ ಮಹಿಳಾ ದಿನಾಚರಣೆಯ ಸಂದರ್ಭದಲ್ಲೇ ನೀಡಲಾದ ಇಂತಹ ಉಪಯುಕ್ತ ನೀರು ಶೇಖರಣಾ ಟ್ಯಾಂಕ್ ನಂತಹ ಕೊಡುಗೆ ಮುಂದೆಯೂ ಶಾಲೆಗೆ ವಿಭಿನ್ನ ರೂಪದಲ್ಲಿ ಹರಿದು ಬರಲೆಂದು ಶುಭ ಹಾರೈಸಿದರು. ಮಂಡಲ ಅಧ್ಯಕ್ಷ ರವಿಶಂಕರ್ ಮಿಜಾರ್, ಯುಗಾದಿ ಶುಭಾಶಯಗಳೊಂದಿಗೆ ಶಾಲಾ ಮಕ್ಕಳಿಗೆ ಸಮಯೋಚಿತ ಕಿವಿ ಮಾತು ಹೇಳಿದರು.
ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪಾವನ ಸ್ವಾಗತಿಸಿದರು. ವೇದಿಕೆಯಲ್ಲಿ ಮಂಡಲ ಪ್ರಧಾನ ಕಾರ್ಯದರ್ಶಿ ಸುಧೀರ್ ಶೆಟ್ಟಿ ಕಣ್ಣೂರು, ಡಿ.ವೇದವ್ಯಾಸ ಕಾಮತ್, ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷೆ ಶ್ರೀಮತಿ ಕಾತ್ಯಾಯಿನಿ ಉಪಸ್ಥಿತರಿದ್ದರು. ಶಿಕ್ಷಕಿ ಅರುಣಾ ಕುಮಾರಿ ಕಾರ್ಯಕ್ರಮ ನಿರೂಪಿಸಿದರೆ, ಶಿಕ್ಷಕಿ ಶಿಶಿಲಿಯಾ ವಂದಿಸಿದರು. ಗುರುಚರಣ್, ಸುಜಾತಾ, ಅರುಣಾ ನಾಗರಾಜ್ ಮೊದಲಾದವರು ಉಪಸ್ಥಿತರಿದ್ದು ಸಹಕರಿಸಿದರು.