ಬಂಟ್ವಾಳ, ಮಾ.18: ಕೋಳಿಯನ್ನು ಬೇಟೆಯಾಡಲು ಬಂದ ಚಿರತೆಯೊಂದು ಆವರಣವಿಲ್ಲದ ಬಾವಿಗೆ ಬಿದ್ದ ಘಟನೆ ತುಂಬೆ- ಬ್ರಹ್ಮರಕೂಟ್ಲು ಬಳಿಯ ವಳವೂರು ಎಂಬಲ್ಲಿ ನಡೆದಿದೆ. ಇಲ್ಲಿನ ನಿವಾಸಿ ಲಿಂಗಪ್ಪಪೂಜಾರಿ ಎಂಬ ವರ ಮನೆ ಸಮೀಪದ ಬಾವಿಯಲ್ಲಿ ಚಿರತೆ ಬಿದ್ದಿದ್ದು, ಬುಧವಾರ ಬೆಳಗ್ಗೆ ಬೆಳಕಿಗೆ ಬಂದಿದೆ.
ಮಂಗಳವಾರ ತಡರಾತ್ರಿ ಆಹಾರ ಅರಸಿಕೊಂಡು ಲಿಂಗಪ್ಪರ ಮನೆಯಂಗಳಕ್ಕೆ ಬಂದಿದ್ದ ಚಿರತೆ ಅಲ್ಲಿ ಕಟ್ಟಿ ಹಾಕಿದ್ದ ಹುಂಜವನ್ನು ಬೇಟೆಯಾಡಿದೆ. ಬಳಿಕ ಅವರ ಸಾಕುನಾಯಿಯನ್ನು ಬೇಟೆಯಾಡುವ ಭರದಲ್ಲಿ ಮನೆ ಪಕ್ಕದಲ್ಲಿದ್ದ ಆವರಣ ಗೋಡೆ ಯಿಲ್ಲದ ಬಾವಿಯೊಳಗೆ ಬಿದ್ದಿದೆ. ಕೋಳಿ ಹಾಗೂ ನಾಯಿಯ ವಿಚಿತ್ರ ಕೂಗು ಕೇಳಿಸಿ ಕೊಂಡಿದ್ದ ಮನೆಮಂದಿ ಮುಂಜಾನೆ ಎದ್ದು ನೋಡಿದಾಗ ಕೋಳಿ ಅಂಗಳದಲ್ಲಿ ಸತ್ತು ಬಿದ್ದಿತ್ತು. ಬಳಿಕ ಮನೆ ಪಕ್ಕದ ಬಾವಿಯಲ್ಲಿ ಚಿರತೆ ಬಿದ್ದಿರುವುದು ಗಮನಕ್ಕೆ ಬಂದಿದೆ. ತಕ್ಷಣ ಬಂಟ್ವಾಳ ಅರಣ್ಯ ಇಲಾಖಾಧಿಕಾರಿ ಹಾಗೂ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಯಿತು.
ಅಗ್ನಿಶಾಮಕದಳ ಕಾರ್ಯಾಚರಣೆ…
ಬಾವಿಗೆ ಬಿದ್ದ ಚಿರತೆಯನ್ನು ಹೊರತೆಗೆಯಲು ಹರಸಾಹಸ ಪಡಬೇಕಾಯಿತು. ಚಿರತೆಗೆ ಅರಿವಳಿಕೆ ನೀಡಿ ಬಳಿಕ ಮೇಲೆತ್ತುವುದು ಎಂದು ಅರಣ್ಯ ಇಲಾಖೆಯವರು ನಿರ್ಧರಿಸಿದರಾದರೂ, ಅರಿವಳಿಕೆ ತಜ್ಞರು ಸಕಾಲಕ್ಕೆ ಆಗಮಿಸಲಿಲ್ಲ. ಈ ಹಿನ್ನೆಲೆ ಯಲ್ಲಿ ಅಗ್ನಿಶಾಮಕದಳ ಚಿರತೆ ಮೇಲೆತ್ತುವ ಕಾರ್ಯಾಚರಣೆಯನ್ನು ಕೈಗೆತ್ತಿಕೊಂಡಿತು.
ಬಾವಿಗೆ ಬಲೆಯನ್ನು ಹೊದಿಸಿದ ಸಿಬ್ಬಂದಿ ಬಾವಿಯ ಒಂದು ಪಾರ್ಶ್ವದಲ್ಲಿ ಬೋನನ್ನು ಇರಿಸಿದರು. ಬಳಿಕ ಬಾವಿಯೊಳಗೆ ಏಣಿಯನ್ನು ಇಳಿಸಿ ಚಿರತೆಯನ್ನು ಮೇಲೇರುವಂತೆ ಪ್ರಚೋದಿಸಿದಾಗ ಚಂಗನೆ ಹಾರಿ ಮೇಲೇರಿದ ಚಿರತೆ ಬೋನಿನೊಳಗೆ ಸೆರೆಯಾಯಿತು.ಪಶು ವೈದ್ಯರು ಅರವಳಿಕೆ ಚುಚ್ಚು ಮದ್ದು ನೀಡಿದ ಬಳಿಕ ಅರಣ್ಯಾಧಿಕಾರಿಗಳು ಚಿರತೆಯನ್ನು ಪಿಲಿಕುಳ ವನ್ಯಧಾಮಕ್ಕೆ ತೆಗೆದುಕೊಂಡು ಹೋದರು. ತುಂಬೆ ಪಂಚಾಯತ್ ಅಧ್ಯಕ್ಷ ಮಹಮ್ಮದ್ ವಳವೂರು ಸೇರಿದಂತೆ ಅನೇಕರು ಸ್ಥಳದಲ್ಲಿ ಹಾಜರಿದ್ದು ಚಿರತೆ ಸೆರೆಹಿಡಿಯುವ ಕಾರ್ಯಚರಣೆಗೆ ಸಹಕಾರ ನೀಡಿದರು.
ಸುಮಾರು ಒಂದೂವರೆ ವರ್ಷ ಪ್ರಾಯದ ಚಿರತೆ ಇದಾಗಿದ್ದು, ಅದನ್ನು ಪಿಲಿಕುಳ ನಿಸರ್ಗ ಧಾಮಕ್ಕೆ ಕಳುಹಿಸಿಕೊಡಲಾಗಿದೆ ಎಂದು ವಲಯ ಅರಣ್ಯಾಧಿಕಾರಿ ಸುಬ್ರಹ್ಮಣ್ಯ ರಾವ್ ತಿಳಿಸಿದ್ದಾರೆ.