ಕನ್ನಡ ವಾರ್ತೆಗಳು

ವಾಹನಗಳ ವೇಗಕ್ಕೆ ಕಡಿವಾಣ ಹಾಕಲು ಕಾಲೇಜು ವಿದ್ಯಾರ್ಥಿಗಳ ಆಗ್ರಹ

Pinterest LinkedIn Tumblr

kinnigoli_student_protest

ಮೂಲ್ಕಿ,ಮಾರ್ಚ್.17: ಕಿನ್ನಿಗೋಳಿ ಪಾಂಪೈ ಪದವಿ ಕಾಲೇಜಿನ ವಿದ್ಯಾರ್ಥಿಗಳಿಗೆ ಅಪರಿಚಿತ ಕಾರೊಂದು ಡಿಕ್ಕಿ ಹೊಡೆದು ಪರಾರಿಯಾದ ಘಟನೆಯಲ್ಲಿ ಅಪಘಾತಕ್ಕೆ ಕಾರಣವಾದ ಕಾರನ್ನು ಶೀಘ್ರವಾಗಿ ಪತ್ತೆ ಹಚ್ಚಬೇಕು ಹಾಗೂ ಕಾಲೇಜಿನ ಮುಂಭಾಗದಲ್ಲಿ ಸಂಚರಿಸುವ ವಾಹನಗಳ ವೇಗಕ್ಕೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿ ಮಂಗಳವಾರ ಕಾಲೇಜಿನ ವಿದ್ಯಾರ್ಥಿಗಳು ಪ್ರತಿಭಟನಾ ಜಾಥ ನಡೆಸಿದರು.

ಬೆಳಿಗ್ಗೆ ಪದವಿ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು ತರಗತಿಯನ್ನು ಬಹಿಷ್ಕರಿಸಿ ಮೊದಲು ಐಕಳ ಗ್ರಾಮ ಪಂಚಾಯಿತಿಗೆ ಮೆರವಣಿಗೆಯಲ್ಲಿ ತೆರಳಿ ಪಂಚಾಯಿತಿ ಅಧ್ಯಕ್ಷೆ ಪದ್ಮಿನಿಯವರಿಗೆ ಮನವಿಯೊಂದನ್ನು ನೀಡಿ ಕಾಲೇಜಿನ ಮುಂಭಾಗದ ರಸ್ತೆಯಲ್ಲಿ ವಾಹನಗಳು ಅಪರಿಮಿತ ವೇಗದಲ್ಲಿ ಸಂಚರಿಸುತ್ತಿದೆ. ಈ ಬಗ್ಗೆ ಈ ಹಿಂದೆ ಇದ್ದ ವೇಗತಡೆಯನ್ನು ಮರು ಡಾಮರೀಕರಣ ಆದ ನಂತರ ತೆಗೆಯಲಾಗಿದೆ. ರಸ್ತೆ ಉಬ್ಬುಗಳನ್ನು ಹಾಗೂ ಎಚ್ಚರಿಕೆಯ ಫಲಕವನ್ನು ಶೀಘ್ರವಾಗಿ ಅಳವಡಿಸಬೇಕು ಎಂದು ಆಗ್ರಹಿಸಿ ಎರಡು ವರ್ಷದ ಹಿಂದೆಯೂ ಇದೇ ರೀತಿಯ ಮನವಿಯನ್ನು ನೀಡಿದ್ದರು ಯಾವುದೇ ಪ್ರಯೋಜನ ಆಗಿಲ್ಲ ಎಂದು ವಿವರಿಸಿದರು.

ನಂತರ ವಿದ್ಯಾರ್ಥಿಗಳು ಐಕಳ ಗ್ರಾಮ ಪಂಚಾಯಿತಿಯಿಂದ ಬೆಳ್ಮಣ್ – ಕಿನ್ನಿಗೋಳಿ ರಸ್ತೆಯ ಮೂಲಕ ಮೂರುಕಾವೇರಿಯವರೆಗೆ ಪ್ರತಿಭಟನಾ ಜಾಥಾ ಮೆರವಣಿಗೆ ನಡೆಸಿದ ಜಂಕ್ಷನ್‌ನಲ್ಲಿ ಪ್ರತಿಭಟನಾ ಸಭೆಯನ್ನು ನಡೆಸಿದರು.

ಸಭೆಯನ್ನು ಉದ್ದೇಶಿಸಿ ಆಡಳಿತ ಮಂಡಳಿಯ ವಲೇರಿಯನ್ ಸಿಕ್ವೇರಾ ಮಾತನಾಡಿ ಘಟನೆ ನಡೆದು ವಾರ ಕಳೆದರು ಅಪಘಾತಕ್ಕೆ ಕಾರಣವಾದ ಕಾರನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ, ಸಿಸಿ ಕ್ಯಾಮರಾದ ದಾಖಲೆ ಇದ್ದರು ತನಿಖೆಯಲ್ಲಿ ಪ್ರಗತಿ ಕಂಡಿಲ್ಲ, ರಸ್ತೆ ತಡೆಗಳನ್ನು ರಚಿಸುವವರೆಗೆ ತಾತ್ಕಾಲಿಕವಾಗಿ ಬಾರಿಕೇಡ್‌ಗಳನ್ನು ಅಳವಡಿಸಬೇಕು. ಅಪರಿಮಿತ ವೇಗದಲ್ಲಿ ಸಾಗುವ ವಾಹನ ಸಂಚಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮವನ್ನು ಪೊಲೀಸ್ ಇಲಾಖೆ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪ್ರತಿಭಟನಾ ಜಾಥಾದಲ್ಲಿ ವಿವಿಧ ಘೋಷಣೆಗಳ ಫಲಕಗಳನ್ನು ವಿದ್ಯಾರ್ಥಿಗಳು ಹಿಡಿದಿದ್ದರು. ಮೂಲ್ಕಿ ಪೊಲೀಸರು ಬಂದೋಬಸ್ತನ್ನು ನೀಡಿದ್ದರು. ವಿದ್ಯಾರ್ಥಿ ನಾಯಕರುಗಳಾದ ಕೌಶಿಕ್ ಶೆಟ್ಟಿ ಹಾಗೂ ರಂಜಿತ್ ಪೂಜಾರಿ ಇನ್ನಿತರರು ಇದ್ದರು.

ನರೇಂದ್ರ ಕೆರೆಕಾಡು_

Write A Comment