ಮಂಗಳೂರು, ಮಾರ್ಚ್.17: ಸಾರ್ವಜನಿಕರ ಹಾಗೂ ಪ್ರಯಾಣಿಕರ ಅಸಮಾಧಾನಕ್ಕೆ ಕಾರಣವಾಗಿರುವ ಸಿಟಿ ಬಸ್‍ಗಳ ಕರ್ಕಶ ಹಾರ್ನ್‍ನ ವಿರುದ್ಧ ಮಂಗಳೂರು ಸಂಚಾರಿ ಪೊಲೀಸರು ನಿರ್ದಾಕ್ಷಣ್ಯ ಕ್ರಮ ಕೈಗೊಂಡು ತಾತ್ಕಾಲಿಕ ಮುಕ್ತಿಯನ್ನು ನೀಡಿ ಬಸ್‍ಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನಗರದ ಹಂಪನಕಟ್ಟೆ ಸರ್ಕಾರಿ ಕಾಲೇಜು, ಶಿಕ್ಷಣ ಸಂಸ್ಥೆಗಳಿರುವ ಕೊಡಿಯಾಲ್‍ಬೈಲ್, ಕೆ.ಎಸ್.ರಾವ್.ನಗರ, ಆಸ್ಪತ್ರೆಗಳಿರುವ ಫಳ್ನಿರ್ ರಸ್ತೆಯಲ್ಲಿ ಕರ್ಕಶವಾಗಿ ಹಾರ್ನ್ ಹಾಕುತ್ತಿದ್ದ ಸಿಟಿ ಬಸ್‍ಗಳನ್ನು ತಪಾಸಣೆ ನಡೆಸಿ ಅದರಲ್ಲಿದ್ದ ವ್ಯಾಕ್ಯೂಮ್ ಹಾರ್ನ್‍ಗಳನ್ನು ಕಿತ್ತು ತೆಗೆದು ದಂಡ ವಸೂಲಿ ಮಾಡಿರುವ ಸಂಚಾರಿ ಪೊಲೀಸರ ಈ ಕಾರ್ಯಾಚರಣೆಯನ್ನು ನಾಗರಿಕರು ಮುಕ್ತವಾಗಿ ಸ್ವಾಗತಿಸಿದ್ದಾರೆ.
ನಗರದ ಅನೇಕ ಶಿಕ್ಷಣ ಸಂಸ್ಥೆಗಳಿರುವ ಪ್ರದೇಶದಲ್ಲಿ ಇಂತಹ ಹಾರ್ನ್‍ಗಳಿಗೆ ನಿಷೇದ ವಿದ್ದರು. ಬಸ್ ಚಾಲಕರು ವಿನಾಕಾರಣ ಕರ್ಕಶವಾಗಿ ಹಾರ್ನ್‍ನ್ನು ಬಳಸುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಬಗ್ಗೆ ಶಿಕ್ಷಣ ಸಂಸ್ಥೆಗಳ ಪ್ರಮುಖರು ಹಾಗೂ ನಾಗರಿಕರು ಸಂಚಾರಿ ಠಾಣಾ ಪೊಲೀಸರಿಗೆ ದೂರು ನೀಡಿದ್ದರಿಂದ ಈ ಕಾರ್ಯಾಚರಣೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂಚಾರಿ ಪೊಲೀಸ್ ಅಧಿಕಾರಿಗಳಾದ ಶಿವಪ್ರಸಾದ್, ಎಚ್.ಬಾಬು, ಪ್ರದೀಪ್ ಇನ್ನಿತರ ಸಿಬ್ಬಂದಿಗಳು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.