ಮಂಜೇಶ್ವರ, ಮಾ.16: ಹಳೆ ವೈಷಮ್ಯವೊಂದಕ್ಕೆ ಸಂಬಂಧಿಸಿ ವ್ಯಕ್ತಿಯೊಬ್ಬರನ್ನು ಚೂರಿಯಿಂದ ಇರಿದು ಕೊಲೆಗೈದ ಘಟನೆ ಹೊಸಂಗಡಿ ಪೇಟೆಯಲ್ಲಿ ಸೋಮವಾರ ಅಪರಾಹ್ನ 2:30ರ ಸುಮಾರಿಗೆ ನಡೆದಿದೆ.
ಉದ್ಯಾವರ ತೋಟ ನಿವಾಸಿ ಸುರೇಶ್(46) ಹತ್ಯೆ ಗೀಡಾದವರು. ಬಡಾಜೆ ನಿವಾಸಿ ಮದ್ಯ ವ್ಯಸನಿ ಅಬ್ಬಾ ಪಿಟ್ಟ ಯಾನೆ ಖಲೀಲ್ ಕೊಲೆ ಆರೋಪಿ. ಹೊಸಂಗಡಿಯಲ್ಲಿ ವಾಚ್ ಅಂಗಡಿ ಹೊಂದಿದ್ದ ಸುರೇಶ್‌ರಿಗೆ ಇಂದು ಅಪರಾಹ್ನ ಖಲೀಲ್ ಚೂರಿಯಿಂದ ತೀವ್ರವಾಗಿ ಇರಿದು ಗಾಯಗೊಳಿಸಿದನೆನ್ನಲಾಗಿದೆ. ಇದರಿಂದ ಗಂಭೀರ ಗಾಯಗೊಂಡಿದ್ದ ಸುರೇಶ್ ಆಸ್ಪತ್ರೆಗೆ ಕರೆದೊಯ್ಯುವ ದಾರಿಮಧ್ಯೆ ಮೃತಪಟ್ಟರು ಎಂದು ತಿಳಿದುಬಂದಿದೆ.
ಇದೇ ವೇಳೆ ಕೊಲೆ ಆರೋಪಿ ಖಲೀಲ್‌ನನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಖಲೀಲ್ ಹಲವು ಪ್ರಕರಣಗಳಲ್ಲಿನ ಆರೋಪಿಯಾಗಿದ್ದು, ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಸುರೇಶ್‌ರನ್ನು ಹತ್ಯೆಗೈದಿದ್ದಾನೆ ಎಂದು ಹೇಳಲಾಗಿದೆ.
ಹರತಾಳಕ್ಕೆ ಕರೆ:
ಸುರೇಶ್ ಕೊಲೆ ಹಿನ್ನೆಲೆಯಲ್ಲಿ ಹೊಸಂಗಡಿಯ ಪೇಟೆಯಲ್ಲಿ ಸರ್ವಪಕ್ಷ ಹಾಗೂ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿಯು ಮಂಗಳವಾರ 3 ಗಂಟೆಯ ತನಕ ಹರತಳಾಕ್ಕೆ ಕರೆ ನೀಡಿದೆ. ಮೃತರು ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಮಂಜೇಶ್ವರ ಘಟಕದ ಸದಸ್ಯರಾಗಿದ್ದರು. ಬಸ್ ಸಂಚಾರ ಮೊಟಕು: ಘಟನೆಯ ಹಿನ್ನೆಲೆಯಲ್ಲಿ ಹೊಸಂಗಡಿ- ಆನೆಕಲ್ಲು, ಮೀಯ ಪದವು ಹೊಸಂಗಡಿ ಸಂಚಾರ ನಡೆಸುವ ಎಲ್ಲಾ ಬಸ್‌ಗಳು ಸಂಚಾರ ಮೊಟಕುಗೊಳಿಸಿದೆ.

