ಬೆಂಗಳೂರು,ಮಾರ್ಚ್.14 : ವ್ಯಾಸಂಗ, ಪ್ರವಾಸ, ವೈದ್ಯಕೀಯ ಉದ್ದೇಶ ಸೇರಿ ನಾನಾ ಕಾರಣಗಳಿಗೆ ಭಾರತಕ್ಕೆ ಬಂದು ವೀಸಾ ಅವಧಿ ಮುಗಿದರೂ ನಗರದಲ್ಲಿ ಉಳಿದುಕೊಂಡಿರುವ ಎಲ್ಲ ವಿದೇಶೀಯರನ್ನು ಗಡಿಪಾರು ಮಾಡಲಾಗುವುದು ಎಂದು ಪೂರ್ವ ವಿಭಾಗ ಹೆಚ್ಚುವರಿ ಪೊಲೀಸ್ ಆಯುಕ್ತ ಪಿ.ಹರಿಶೇಖರನ್ ತಿಳಿಸಿದರು. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿವಿಧ ಉದ್ದೇಶಗಳಿಂದ ಆಫ್ರಿಕಾ ಸೇರಿ ನಾನಾ ರಾಷ್ಟ್ರಗಳಿಂದ ಬೆಂಗಳೂರಿಗೆ ಬಂದಿರುವ ವಿದೇಶೀಯರ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ.
ಅವಧಿ ಮುಗಿದರೂ ನಗರದಲ್ಲಿ ಉಳಿದುಕೊಂಡಿರುವವರನ್ನು ಪತ್ತೆ ಮಾಡಿ ಗಡಿಪಾರು ಮಾಡುತ್ತೇವೆ. ಪೂರ್ವ ಉಪವಿಭಾಗದಲ್ಲಿ 370, ಈಶಾನ್ಯ ಉಪವಿಭಾಗದಲ್ಲಿ 170 ಮಂದಿ ವೀಸಾ ಅವಧಿ ಉಳಿದುಕೊಂಡಿರುವ ಮಾಹಿತಿ ಇದೆ.
ಇಡೀ ಬೆಂಗಳೂರಿನಲ್ಲಿ ಎಷ್ಟು ವಿದೇಶೀಯರಿದ್ದಾರೆ. ವ್ಯಾಸಂಗ, ವೈದ್ಯಕೀಯ. ಪ್ರವಾಸ, ವ್ಯವಹಾರ ಸೇರಿ ನಾನಾ ಉದ್ದೇಶಗಳಿಂದ ಎಷ್ಟೆಷ್ಟು ಮಂದಿ ಬಂದಿದ್ದಾರೆ ಎನ್ನುವುದನ್ನು ಪತ್ತೆ ಹಚ್ಚಲಾಗುತ್ತಿದೆ ಎಂದರು.