ಬೆಂಗಳೂರು,ಮಾರ್ಚ್.13 : 2015-16ನೇ ಸಾಲಿನ ಮುಂಗಡ ಪತ್ರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧದಲ್ಲಿ ಶುಕ್ರವಾರ ಮಂಡಿಸಿದ್ದು, ಯೋಜನಾ ಗಾತ್ರವನ್ನು ರಾಜ್ಯ ಸರ್ಕಾರ ರು. 72,597 ಕೋಟಿ ಎಂದು ನಿಗದಿಪಡಿಸಿದೆ. ಈ ಯೋಜನಾ ಗಾತ್ರದಲ್ಲಿ ರಾಜ್ಯ ಸರ್ಕಾರದ ಸಂಪನ್ಮೂಲಗಳು ರೂ 67,882 ಕೋಟಿ ಮತ್ತು ಸರ್ಕಾರಿ ಸ್ವಾಮ್ಯದ ಉದ್ಯಮಗಳ ಸಂಪನ್ಮೂಲ ರು. 8645 ಕೋಟಿ ಕೂಡ ಸೇರಿದೆ. ಕಳೆದ ಹಣಕಾಸು ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ಬಜೆಟ್‌ನ ಯೋಜನಾ ಗಾತ್ರ ಶೇ.10.67 ರಷ್ಟು ಹೆಚ್ಚಳವಾಗಿದೆ.
ತಂಬಾಕು ಬಳಕೆಯನ್ನು ನಿಯಂತ್ರಣಕ್ಕೆ ಕ್ರಮ ಕೈಗೊಂಡಿರುವ ರಾಜ್ಯ ಸರ್ಕಾರ ಬೀಡಿ, ಸಿಗರೇಟು, ಗುಟ್ಕಾ ಮತ್ತಿತರ ಉತ್ಪನ್ನಗಳ ಮೇಲಿನ ಮೌಲ್ಯವರ್ಧಿತ ತೆರಿಗೆಯನ್ನು ಶೇ.17 ರಿಂದ ಶೇ.20 ಕ್ಕೆ ಹೆಚ್ಚಳ ಮಾಡಿದೆ. ಇನ್ನು ಡೀಸೆಲ್ ಮತ್ತು ಪೆಟ್ರೋಲ್ ಮೇಲಿನ ತೆರಿಗೆ ದರ(ಸೆಸ್)ವನ್ನು ಶೇ.1 ರಷ್ಟು ಹೆಚ್ಚಿಸಲಾಗಿದೆ. 17 ಶ್ರೇಣಿಗಳ ಮೇಲಿನ ಅಬಕಾರಿ ಸುಂಕವನ್ನು ಶೇ. 6 ರಿಂದ ಶೇ 20ಕ್ಕೆ ಹೆಚ್ಚಿಸಲಾಗಿದ್ದು, ಇದರಿಂದ 2015-16 ರಲ್ಲಿ ರೂ 15,200 ಕೋಟಿ ತೆರಿಗೆ ಸಂಗ್ರಹಣೆ ಆಗಲಿದೆ. ರು.500 ವರೆಗಿನ ಪಾದರಕ್ಷೆಗಳಿಗೆ ತೆರಿಗೆ ವಿನಾಯ್ತಿ ನೀಡಲಾಗಿದ್ದು, ಸೀಮೆ ಎಣ್ಣೆ ಸ್ಟೌವ್ ಮೇಲಿನ ತೆರಿಗೆ ಶೇ 14.5ರಿಂದ ಶೇ 5.5ಕ್ಕೆ ಇಳಿಕೆ ಮಾಡಲಾಗಿದೆ.
ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ)ಯನ್ನು ಜಾರಿಗೆ ತರಲು ಅನುಕೂಲವಾಗುವಂತೆ ವಾಣಿಜ್ಯೋದ್ಯಮಗಳನ್ನು ಸಿದ್ಧಗೊಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕ್ರಮಕ್ಕೆ ಮುಂದಾಗಿದ್ದು, ಪ್ರಸಕ್ತ ಸಾಲಿಗೆ ವಾಣಿಜ್ಯ ತೆರಿಗೆಗಳ ಅಡಿಯಲ್ಲಿ ರ ರು.42 ಸಾವಿರ ಕೋಟಿ ತೆರಿಗೆ ಸಂಗ್ರಹಣೆ ಗುರಿ ನಿಗದಿಪಡಿಸಲಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.