ಮಂಗಳೂರು, ಮಾರ್ಚ್. 10: ಆಂಧ್ರ ಪ್ರದೇಶದ ವಿಜಯವಾಡ ಮೂಲದ ಅಗ್ರಿಗೋಲ್ಡ್ ಫಾರ್ಮ್ ಎಸ್ಟೇಟ್ ಇಂಡಿಯಾ ಸಂಸ್ಥೆ ಕರಾವಳಿಯ 30 ಸಾವಿರಕ್ಕೂ ಅಧಿಕ ಗ್ರಾಹಕರಿಗೆ ವಂಚಿಸಿದೆ ಎಂದು ಅಗ್ರಿಗೋಲ್ಡ್ ಕಸ್ಟಮರ್ಸ್ ಆ್ಯಂಡ್ ಏಜೆಂಟ್ಸ್ ವೆಲ್‌ಫೆರ್ ಅಸೋಸಿಯೇಶನ್‌ನ ಅಧ್ಯಕ್ಷ ನಾರಾಯಣ ಶೆಟ್ಟಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.
ಅಗ್ರಿಗೋಲ್ಡ್ ಸಂಸ್ಥೆಯಲ್ಲಿ ಗ್ರಾಹಕರು ನಂಬಿಕೆ ಯಿಂದ ಹಣ ತೊಡಗಿಸಿದ್ದರು. ಕರಾವಳಿಯಲ್ಲಿ 300 ಕೋಟಿ ರೂ. ವಂಚನೆ ನಡೆದಿದೆ. ತಲಪಾಡಿ ಗ್ರಾಮದಲ್ಲಿ ಸುಮಾರು 12 ಎಕರೆಯಷ್ಟು ಕನ್ವರ್ಷನ್ ಆದ ಸ್ಥಳ ಹಾಗೂ ಕಿನ್ಯಾದಲ್ಲಿ 44.49 ಎಕರೆಯಷ್ಟು ಕೃಷಿ ಭೂಮಿಯನ್ನು ಗ್ರಾಹಕರಿಂದ ಸಂಗ್ರಹಿಸಿದ ಹಣದಿಂದ ಸಂಸ್ಥೆ ಖರೀದಿಸಿದೆ. ಆದರೆ ಇತ್ತೀಚಿಗೆ ತಲಪಾಡಿಯಲ್ಲಿರುವ ಜಾಗವನ್ನು ಮಾರಲಾಗಿದೆ. ಜಿಲ್ಲೆಯ ಸಂಬಂಧಪಟ್ಟ ಅಧಿಕಾರಿಗಳು ಈ ನಿಟ್ಟಿನಲ್ಲಿ ಮುತುವರ್ಜಿ ವಹಿಸಬೇಕು ಎಂದು ನಾರಾಯಣ ಶೆಟ್ಟಿ ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಪದಾಧಿಕಾರಿಗಳಾದ ನಾರಾಯಣ ನಾಯ್ಕಿ, ಚಂದ್ರಶೇಖರ ಸನಿಲ್, ರಾಘವೇಂದ್ರ ಕುಂಬ್ಳೆ, ರಾಜಣ್ಣ ಉಪಸ್ಥಿತರಿದ್ದರು.
