ವಿಟ್ಲ,ಮಾರ್ಚ್.09 : ಅಪರಹಣಕ್ಕೊಳಗಾಗಿದ್ದ ಸರ್ಕಾರಿ ಕಾಲೇಜಿನ ವಿದ್ಯಾರ್ಥಿನಿ ಕರೋಪಾಡಿ ಗ್ರಾಮದ ಅರಸಳಿಕೆ ನಿವಾಸಿ ಇಸ್ಮಾಯಿಲ್ ಪುತ್ರಿ ಅಪ್ರಾಪ್ತ ಕಲಂದರ್ ಬೀಬಿ ಸುಮಯ್ಯ(17) ಕೇರಳದ ತಿರುವನಂತಪುರದಲ್ಲಿ ಪತ್ತೆಯಾಗಿದ್ದು, ಆರೋಪಿ ಕನ್ಯಾನ ಗ್ರಾಮದ ಪೊಯ್ಯಗದ್ದೆ ನಿವಾಸಿ ಇಬ್ರಾಹಿಂ ಅವರ ಪುತ್ರ ಇಕ್ಕು ಯಾನೆ ಇಕ್ಬಾಲ್ ಪರಾರಿಯಾಗಿ ದ್ದಾನೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದ್ದು, ಈ ಬಗ್ಗೆ ಪೊಲೀಸರು ಅಧಿಕೃತ ಮಾಹಿತಿ ಇನ್ನೂ ಹೊರಹಾಕಿಲ್ಲ.
ಆರೋಪಿ ಈ ಹಿಂದೆ ತಿರುವನಂತಪುರದಲ್ಲಿ ಜ್ಯೂಸ್ ಅಂಗಡಿಯೊಂದರಲ್ಲಿ ಕೆಲಸಕ್ಕಿದ್ದು, ಬಳಿಕ ಊರಿಗೆ ಮರಳಿದ್ದ ಅಲ್ಲಿಯ ಸ್ನೇಹಿತರ ಸಹಾಯದಲ್ಲಿ ಆತ ಗುರುವಾರ ಬಾಲಕಿಯನ್ನು ಪುಸಾಲಾಯಿಸಿ ನೇರವಾಗಿ ತಿರುವನಂತಪುರಕ್ಕೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಈತನಿಗೆ ಅಲ್ಲಿ ಕೆಲಸಕ್ಕಿರುವ ಕನ್ಯಾನದ ಕೆಲ ಸ್ನೇಹಿತರ ಸಂಪೂರ್ಣ ಬೆಂಬಲದಿಂದ ಒಂದು ರೂಮ್ ಮಾಡಿ ಅಲ್ಲಿಯೇ ವಾಸವಾಗಿದ್ದರು.
ವಿಟ್ಲದಲ್ಲಿ ಕಿಡ್ನ್ಯಾಪ್ ಪ್ರಕರಣ ಬಾರೀ ವಿವಾದ ಎದ್ದಿತ್ತು. ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಅವರ ಪತ್ತೆಗಾಗಿ ಬಲೆ ಬೀಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಟ್ಲದಲ್ಲಿ ಹಲವರನ್ನು ವಿಟ್ಲ ಪೊಲೀಸರು ವಶಪಡಿಸಿಕೊಂಡು ತನಿಖೆ ನಡೆಸಿದ್ದರು. ಈ ಬಗ್ಗೆ ಅಲ್ಲಿಯ ಆತನ ಸ್ನೇಹಿತರಿಗೆ ಮಾಹಿತಿ ದೊರಕಿದೆ. ಪೊಲೀಸರು ತಿರುವನಂತಪುರಕ್ಕೆ ಬರುವ ಬಗ್ಗೆ ಮಾಹಿತಿ ಪಡೆದ ಅಲ್ಲಿಯ ಇಕ್ಬಾಲ್‍ನ ಸ್ನೇಹಿತರು ನಮ್ಮನ್ನು ಪೊಲೀಸರು ಬಂಧಿಸಬಹುದು ಎಂಬ ಭಯದಿಂದ ಬಾಲಕಿ ಹಾಗೂ ಇಕ್ಬಾಲ್‍ನನ್ನು ಮೈಸೂರು ಕಡೆಗೆ ತೆರಳಲು ತಿಳಿಸಿದ್ದರು. ಅದರಂತೆ ಅವರು ತಿರುವನಂತಪುರ ರೈಲ್ವೆ ನಿಲ್ದಾಣಕ್ಕೆ ಬಂದಿದ್ದರು. ಅವರು ಅಲ್ಲಿಗೆ ಬರುವಷ್ಟರಲ್ಲಿ ರೈಲು ತೆರಳಿತ್ತು.
ಮರುದಿನ ಮೈಸೂರಿಗೆ ಹೋಗುವ ಎಂದು ಹೇಳಿ ಒಂದು ಹೋಟೆಲ್‍ನಲ್ಲಿ ರೂಮ್ ಮಾಡಲು ಮುಂದಾಗಿದ್ದರು. ರೂಮ್ ಮಾಡಲು ಇಬ್ಬರಲ್ಲಿ ಗುರುತು ಚೀಟಿ ಬೇಕಿತ್ತು. ಆದರೆ ಬಾಲಕಿಯಲ್ಲಿ ಯಾವುದೇ ಗುರುತು ಚೀಟಿ ಇರಲಿಲ್ಲ. ಈ ಬಗ್ಗೆ ಸಂಶಯಗೊಂಡ ಅಲ್ಲಿಯ ಸಿಬ್ಬಂದಿಗಳು ಅವರಿಬ್ಬರನ್ನು ತೀವ್ರ ವಿಚಾರಣೆ ನಡೆಸಿದಾಗ ಸತ್ಯಾಂಶ ಹೊರಬಿದ್ದಿದೆ. ಬಳಿಕ ಇಬ್ಬರನ್ನು ಪರಸ್ಪರ ರೂಮಿನಲ್ಲಿ ಕೂಡಿ ಹಾಕಿ ವಿಟ್ಲ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸಕಾಲೇಶಪುರದಲ್ಲಿದ್ದ ಪೊಲೀಸ್ ತಂಡ ನೇರವಾಗಿ ತಿರುವನಂತಪುರಕ್ಕೆ ತೆರಳಿದೆ. ಪೊಲೀಸರು ಅಲ್ಲಿಗೆ ತೆರಳವಷ್ಟರಲ್ಲಿ ಆರೋಪಿ ಇಕ್ಬಾಲ್ ರೂಮಿನಿಂದ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾನೆ. ಪೊಲೀಸ್ ತಂಡಕ್ಕೆ ಸುಮಯ್ಯ ಮಾತ್ರ ಸಿಕ್ಕಿದ್ದು, ಆಕೆಯನ್ನು ತಡರಾತ್ರಿ ವಿಟ್ಲ ಠಾಣೆಗೆ ಕರೆತಂದಿದ್ದಾರೆ ಎಂದು ತಿಳಿದುಬಂದಿದೆ.
ಒಂದು ವೇಳೆ ಇಕ್ಬಾಲ್ ಪೊಲೀಸರಿಗೆ ಸೆರೆ ಸಿಕ್ಕಿದರೆ ಆತನಿಗೆ ಉಳಿಗಾಲವಿಲ್ಲ ಎಂಬ ಉದ್ದೇಶದಿಂದ ಸ್ವತಃ ಆತ ಪರಾರಿಯಾಗಿರಬಹುದು ಅಥವಾ ಯಾರಾದರೂ ಬಚಾವ್ ಮಾಡಿರಬಹುದು ಎಂದು ಹೇಳಲಾಗುತ್ತಿದೆ. ಆರೋಪಿ ಪರಾರಿಯಾಗಿದ್ದರ ಹಿಂದೆ ವ್ಯವಸ್ಥಿತ ಷಡ್ಯಂತ್ರ ಅಡಗಿದೆ ಎಂದು ಸಾರ್ವಜನಿಕರು ಮಾತನಾಡುತ್ತಿದ್ದಾರೆ. ಸುಮಯ್ಯ ಪತ್ತೆಯಾದ ಬಗ್ಗೆ ಹಾಗೂ ಇಕ್ಬಾಲ್ ಪರಾರಿಯಾಗಿರುವ ಬಗ್ಗೆ ಪೊಲೀಸರಲ್ಲಿ ಕೇಳಿದಾಗ ಅವರು ಮಾಹಿತಿ ಹೊರಹಾಕಲು ಹಿಂದೇಟು ಹಾಕಿದ್ದು, ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಅವರಿಂದ ಲಭ್ಯವಾಗಿಲ್ಲ. ಅಂತೂ ಸುಮಯ್ಯ ಪತ್ತೆಯಾಗಿದ್ದು, ಅವರ ಪೋಷಕರು ಹಾಗೂ ಪೊಲೀಸರು ನಿಟ್ಟುಸಿರು ಬಿಡುವಷ್ಟರಲ್ಲಿ ಇದೀಗ ಆರೋಪಿ ಇಕ್ಬಾಲ್ ಪರಾರಿಯಾಗಿರುವ ವಿಚಾರ ಪೊಲೀಸರಿಗೆ ಹಾಗೂ ಅವರ ಪೋಷಕರಿಗೆ ನುಂಗಲಾಗದ ತುತ್ತಾಗಿ ಪರಿಣಾಮಿಸಿದೆ ಎಂದು ತಿಳಿದು ಬಂದಿದೆ. ಬಾಲಕಿಯಿಂದ ಹೇಳಿಕೆಯ ಪಡೆದ ಬಳಿಕವಷ್ಟೇ ಈ ಘಟನೆಯ ಹಿಂದಿನ ರಹಸ್ಯ ಹೊರಬೀಳಲಿದೆ.