ಬೆಂಗಳೂರು,ಮಾರ್ಚ್.07 : ಜಿಂದಾಲ್ ಪ್ರಕೃತಿ ಚಿಕಿತ್ಸಾಲಯದಲ್ಲಿ ಆಮ್ ಆದ್ಮಿ ಮುಖಂಡ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ದೈನಂದಿನ ಖರ್ಚು ಸುಮಾರು 23 ಸಾವಿರದಷ್ಟಾಗುತ್ತದೆ. ಮಧುಮೇಹ ಹಾಗೂ ಕೆಮ್ಮಿನ ಸಮಸ್ಯೆ ಚಿಕಿತ್ಸೆಗೆ ಜಿಂದಾಲ್ ಕೇಂದ್ರಕ್ಕೆ ಬಂದಿರುವ ಕೇಜ್ರಿವಾಲ್, ತಮ್ಮ ಆಮ್ ಆದ್ಮಿ ಪ್ರಭಾವಳಿಗೆ ವಿರುದ್ಧವಾದ ವೆಚ್ಚವನ್ನು ಚಿಕಿತ್ಸೆಗಾಗಿ ಭರಿಸುತ್ತಿದ್ದಾರೆ. ಈ ವೆಚ್ಚವನ್ನು ಸರ್ಕಾರದ ಬೊಕ್ಕಸದಿಂದ ಭರಿಸಲಾಗುವುದೇ ಎಂಬುದು ತಿಳಿದುಬಂದಿಲ್ಲ. ಆದರೆ ತಂದೆ ಹಾಗೂ ತಾಯಿ ಜತೆ ಬಂದಿರುವ ದೆಹಲಿ ಮುಖ್ಯಮಂತ್ರಿ ಆರೋಗ್ಯ ಸುಧಾರಣೆಗೆ ಭರ್ಜರಿ ಪ್ರಯತ್ನ ನಡೆಸಿದ್ದಾರೆ.
ಕೇಜ್ರಿವಾಲ್ ಹಾಗೂ ಕುಟುಂಬದವರು ಜಿಂದಾಲ್ ಪ್ರಕೃತಿ ಚಿಕಿತ್ಸಾಲಯದಲ್ಲಿರುವ ನೆಸ್ಟ್ ನಲ್ಲಿ ವಾಸವಾಗಿದ್ದು, ಇದಕ್ಕಾಗಿ ಪ್ರತಿದಿನ ರು. 7 ಸಾವಿರ ನೀಡಬೇಕಾಗುತ್ತದೆ. ತಂದೆ ತಾಯಿಗಾಗಿ ಹೆಚ್ಚುವರಿ ರು. 10 ಸಾವಿರ ಭರಿಸಬೇಕಿದೆ. ಇದಲ್ಲದೇ ಆಯಾಗಳಿಗಾಗಿ ಪ್ರತಿ ದಿನ ರು. 1 ಸಾವಿರ ನೀಡಬೇಕು. ಒಟ್ಟಾರೆ ಒಂದು ದಿನದ ವಾಸ್ತವ್ಯಕ್ಕೆ ಸುಮಾರು ರು. 18 ಸಾವಿರ ಭರಿಸಬೇಕು. ಇನ್ನು ಚಿಕಿತ್ಸೆಗಾಗಿ ಪ್ರತಿ ದಿನ ರು. 4 ರಿಂದ ರು. 7 ಸಾವಿರ ಖರ್ಚಾಗುತ್ತದೆ. ವಿಶೇಷವಾಗಿ ಆಕ್ಯುಪಂಕ್ಚರ್, ಕಾಸ್ಟರ್ ಆಯಿಲ್ ಪ್ಯಾಕ್, ಹೈಡ್ರೋ ಥೆರಪಿ, ಫುಲ್ ಮಡ್ ಬಾತ್, ಹಾಟ್ ಸ್ಟೋನ್ ಥೆರಪಿ, ಯೋಗ ಕ್ರಿಯೇ, ಕೈರಲಿ ಥೆರಪಿ, ಮಸ್ಟರ್ಡ್ ಪ್ಯಾಕ್, ಆಯಿಲ್ ಥೆರಪಿ ಹಾಗೂ ಪಿಸಿಯೋಥೆರಪಿ ಚಿಕಿತ್ಸೆ ನೀಡಲಾಗುತ್ತಿದೆ. ದೈನಂದಿನ ಚಿಕಿತ್ಸಾ ವಿಧಾನ ಗಮನಿಸಿ ಮೇಲೆ ತಿಳಿಸಲಾದ ವಿಧಾನ ಬಳಸಲಾಗುತ್ತದೆ.
ಈ ಚಿಕಿತ್ಸೆಗಾಗಿ ಪ್ರತಿ ದಿನ ಸುಮಾರು ರು. 4 ರಿಂದ ರು. 7 ಸಾವಿರ ಖರ್ಚಾಗಲಿದೆ ಎನ್ನುವುದು ಜಿಂದಾಲ್ ವೆಬ್ಸೈಟ್ ಮೂಲಕ ತಿಳಿಯುತ್ತದೆ. ಚಿಕಿತ್ಸೆ ಆರಂಭಿಸಿದ ವೈದ್ಯರು ಮಧುಮೇಹ ಹಾಗೂ ಕೆಮ್ಮಿನ ಸಮಸ್ಯೆ ವಿಪರೀತವಾಗಿರುವುದು ಶುಕ್ರವಾರ ನಡೆಸಿದ ನಾನಾ ಪರೀಕ್ಷೆಗಳಿಂದ ತಿಳಿದುಬಂದಿದೆ. ಕೆಮ್ಮಿನ ಸಮಸ್ಯೆ ಹಾಗೂ ಕಫವನ್ನು ನಿರ್ಲಕ್ಷಿಸಿರುವುದರಿಂದ ಕಫವು ಗಟ್ಟಿಯಾಗಿದೆ ಎಂದು ಜಿಂದಾಲ್ನ ವೈದ್ಯರು ತಿಳಿಸಿದ್ದಾರೆ. ಸ್ಟೀಮ್ ಬಾತ್ ಹಾಗೂ ಹೈಡ್ರೋ ಥೆರಪಿಯಿಂದ ಇನ್ನು ಮೂರು ದಿನಗಳಲ್ಲಿ ಕಫವನ್ನು ಸಾಮಾನ್ಯ ಸ್ಥಿತಿಗೆ ತರುವುದು ವೈದ್ಯರಿಗೆ ದೊಡ್ಡ ಸಾಹಸ ವಾಗಲಿದೆ.
ಮುಖ್ಯ ವೈದ್ಯಾಧಿಕಾರಿ ಬಬಿನಾ ನಂದಕುಮಾರ್ ಅವರು ತಿಳಿಸಿದಂತೆ, ಕೇಜ್ರಿವಾಲ್ ಅವರು ಸಾಮಾನ್ಯ ಸ್ಥಿತಿಗೆ ಬರಲು ಇನ್ನು 3 ದಿನ ಬೇಕಾಗಬಹುದು. ನಂತರದ ಬೆಳವಣಿಗೆ ನೋಡಿಕೊಂಡು ಮುಂದಿನ ಚಿಕಿತ್ಸೆ ನಿರ್ಧರಿಸಲಾಗುವುದು.
ಈ ಸಂದರ್ಭದಲ್ಲಿ ಆಪ್ನ ಕಾರ್ಯಕರ್ತರು ಕೇಜ್ರಿವಾಲ್ ಭೇಟಿಗೆ ಹರಸಾಹಸ ಮಾಡಿದರು. ಮುಂದಿನ 10 ದಿನಗಳ ಕಾಲ ಯಾವುದೇ ಕಾರಣಕ್ಕೂ ಕೇಜ್ರಿವಾಲ್ ಭೇಟಿಗೆ ಅವಕಾಶವಿಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ ಹಿನ್ನೆಲೆಯಲ್ಲಿ ಕಾರ್ಯಕರ್ತರು ನಿರಾಶೆಯಿಂದ ಹಿಂತಿರುಗಿದರು.