(ಕೊಲೆಯಾದ ಪೊಲೀಸ್ ಪೇದೆ ಶ್ರೀಧರ್)
ಕುಂದಾಪುರ: 5 ವರ್ಷಗಳ ಹಿಂದೆ ಕುಂದಾಪುರದ ಸಂಗಂ ಡಂಪಿಂಗ್ ಯಾರ್ಡ್ ಸಮೀಪದಲ್ಲಿ ನಡೆದ ಪೊಲೀಸು ಸಿಬ್ಬಂದಿ ಶ್ರೀಧರ್ ಅವರ ಕೊಲೆ ಹಾಗೂ ವೃತ್ತನಿರೀಕ್ಷಕ ಕಾಂತರಾಜು ಅವರ ಮೇಲಿನ ಹಲ್ಲೆಗೆ ಸಂಬಂಧಿಸಿದಂತೆ ಬುಧವಾರ ಇಬ್ಬರು ಆರೋಪಿಗಳ ಕೃತ್ಯ ಸಾಭೀತಾಗಿದ್ದು ಗುರುವಾರ ನಡೆದ ಕೋರ್ಟ್ ಕಲಾಪದಲ್ಲಿ ಇಬ್ಬರು ನಟೋರಿಯಸ್ ದರೋಡೆಕೋರರಿಗೆ ಶಿಕ್ಷೆ ಪ್ರಕಟವಾಗಿದೆ. ಪ್ರಕರಣ ಪ್ರಮುಖ ಆರೋಪಿ ಕೇರಳದ ಕೊಟ್ಟಾಯಂ ನಿವಾಸಿ ರಘು ಎಂಬಾತನಿಗೆ ಜೀವಾವಧಿ ಶಿಕ್ಷೆ ಹಾಗೂ ಇನ್ನೋರ್ವ ಆರೋಪಿ ಕೊಟ್ಟಾಯಂ ನಿವಾಸಿ ರಾಜೇಶ ಎಂಬಾತನಿಗೆ 5 ವರ್ಷ ಜೈಲು ಹಾಗೂ 10 ಸಾವಿರ ದಂಡ ವಿಧಿಸುವ ಮೂಲಕ ಕುಂದಾಪುರದ ಜಿಲ್ಲಾ ಮತ್ತು ಹೆಚ್ಚುವರಿ ಸತ್ರ ನ್ಯಾಯಾಲಯವು ಮಹತ್ವದ ತೀರ್ಪು ನೀಡಿದೆ. ಸರಕಾರದ ಪರವಾಗಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಕುಂದಾಪುರದ ಖ್ಯಾತ ನ್ಯಾಯವಾದಿ ರವಿಕಿರಣ್ ಈ ಕೇಸಿನಲ್ಲಿ ವಾದಿಸಿದ್ದರು.
(ಪೊಲೀಸರು ಬಂಧಿಸಿದ ವೇಳೆ ಆರೋಪಿಗಳು- ಫೈಲ್ ಚಿತ್ರ)
ಹೀಗಾಗಿತ್ತು ಶ್ರೀಧರ್ ಕೊಲೆ: ಕಳೆದ ಐದು ವರ್ಷಗಳ ಹಿಂದೆ ಕುಂದಾಪುರ ಸೇರಿದಂತೆ ಉಡುಪಿ ಜಿಲ್ಲೆಯನ್ನೇ ಬೆಚ್ಚಿಬೀಳಿಸಿದ ಘಟನೆಯಿದು. 2010 ಮೇ 31 ರ ಬೆಳಿಗ್ಗೆನ ಜಾವ ಸಂಗಂ ಸಮೀಪದ ಕುಂದಾಪುರ ಡಂಪಿಂಗ್ ಯಾರ್ಡಿನಲ್ಲಿ ಪೊಲೀಸು ಸಿಬ್ಬಂದಿಯೋರ್ವರು ನಟೋರಿಯಸ್ ದರೋಡೆಕೋರರು ಹಾಕಿದ ಚೂರಿಗೆ ಅಸುನೀಗಿದ್ದರು. ದರೋಡೆಕೋರರ ಬೇಟೆಗೆಂದು ಬಂದ ಅಂದಿನ ಬೈಂದೂರು ವೃತ್ತನಿರೀಕ್ಷಕ ಕಾಂತರಾಜು ಅವರ ಜೀಪು ಚಾಲಕರಾಗಿ ಬಂದಿದ್ದ ಪ್ರಾಮಾಣಿಕ ಪೊಲೀಸು ಸಿಬ್ಬಂದಿಯಾಗಿದ್ದ ಶ್ರೀಧರ್ ಅವರೇ ದುಷ್ಕರ್ಮಿಗಳ ಚೂರಿ ಇರಿತಕ್ಕೆ ಒಳಗಾಗಿ ಈ ಲೋಕವನ್ನು ತ್ಯಜಿಸಿದ್ದರು.
ನಟೋರಿಯಸ್ ದರೋಡೆಕೋರರು: 2010 ಮೇ.28 ರಂದು ಕೇರಳದಿಂದ ರೈಲು ಮೂಲಕವಾಗಿ ಬೈಂದೂರಿಗೆ ಆಗಮಿಸಿದ್ದ ಇವರು ಮೇ.29 ರಂದು ಬೈಂದೂರಿಗೆ ಆಗಮಿಸಿ ಇಲ್ಲಿ ಕೆಲವೊಂದು ಭಾಗಗಳಲ್ಲಿ ತಮ್ಮ ದರೋಡೆಕೋರತನ ನಡೆಸುವ ಕೃತ್ಯ ರೂಪಿಸಿ ಕೊಲ್ಲೂರಿನ ವಸತಿಗ್ರಹವೊಂದರಲ್ಲಿ ತಂಗಿದ್ದರು. ಅಂತೆಯೇ ಅಂದು ರಾತ್ರಿ ಬೈಂದೂರು ಪೆಟ್ರೋಲು ಪಂಪೊಂದರಲ್ಲಿ ಕಳ್ಳತನವನ್ನು ಎಸಗಿದ್ದರು. ಮಾರನೇ ದಿನ ಕುಂದಾಪುರ ಪೇಟೆಯಲ್ಲಿರುವ ಅಂಗಡಿಯೊಂದರಲ್ಲಿ ಪ್ರೆಸ್ಟಿಜ್ ಕಂಪೆನಿಯ ಚೂರಿಯೊಂದನ್ನು ಖರೀದಿಸಿದ ಅವರು ಕುಂದಾಪುರದಲ್ಲಿಯೂ ತಮ್ಮ ಕೃತ್ಯ ಎಸಗಲು ಹೊಂಚು ಹಾಕಿದ್ದರು. ಅಂದು ರಾತ್ರಿ ಕುಂದಾಪುರ ಪಾರಿಜಾತ ವೃತ್ತದಲ್ಲಿರುವ ಪೆಟ್ರೋಲು ಬಂಕೊಂದಕ್ಕೆ ನುಗ್ಗಿ ಅಲಿದ್ದವನೋರ್ವನ ಬಳಿ 500 ರೂ. ಹಾಗೂ ಮೊಬೈಲು ಫೋನು ಮತ್ತು ಇಲ್ಲಿಗೆ ಸಮೀಪದ ಖಾರ್ವಿಕೇರಿ ರಸ್ತೆಯಲ್ಲಿ ಇನ್ನೋರ್ವ ವ್ಯಕ್ತಿಯನ್ನು ಬೆದರಿಸಿ ಆತನ ಮೊಬೈಲ್ ಫೋನ್ ದೋಚಿದ್ದರು.
ಅಲ್ಲಿಂದ ಮುಂದೆ ಸಾಗಿದ ಅವರು ಬೆಳಗ್ಗಿನ ಜಾವ 3 ಗಂಟೆ ಸುಮಾರಿಗೆ ಕರ್ತವ್ಯದಲ್ಲಿದ್ದ ಅಂದಿನ ಕುಂದಾಪುರ ಎ.ಎಸ್.ಐ. ಸುಬ್ಬಣ್ಣ ಅವರಿದ್ದ ಸರಕಾರಿ ವಾಹನದ ಗಾಜು ಪುಡಿಗೈದಿದ್ದಲ್ಲದೇ ಸುಬ್ಬಣ್ಣ ಅವರ ಮೇಲೂ ಹಲ್ಲೆಗೆ ಮುಂದಾಗಿದ್ದರು.
ಅಲರ್ಟ್ ಆದ ಪೊಲೀಸರು: ಕುಖ್ಯಾತ ಅಂತರಾಜ್ಯ ದರೋಡೇಕೋರರು ಕುಂದಾಪುರದಲ್ಲಿ ಅಟ್ಟಹಾಸ ನಡೆಸುತ್ತಿದ್ದಾರೆಂದು ಮಾಹಿತಿ ಬಂದಿದ್ದೇ ತಡ ಪೊಲೀಸ್
ಡಿಪಾರ್ಟ್‌ಮೆಂಟ್ ಅಲರ್ಟ್ ಆಗುತ್ತೆ. ಕುಂದಾಪುರ ಉಪವಿಭಾಗದದ ಎಲ್ಲಾ ಅಧಿಕಾರಿಗಳು ಕುಂದಾಪುರ ತಾಲೂಕು ಕೇಂದ್ರಕ್ಕೆ ಬರುತ್ತಾರೆ. ಆಗಲೇ ಈ ಪ್ರಕರಣದ ಸಲುವಾಗಿ ಬಂದವರು ಬೈಂದೂರು ವೃತ್ತನಿರೀಕ್ಷಕ ಕಾಂತರಾಜು. ಅಂದು ಅವರ ಜೀಪು ಚಾಲಕ ಇಲ್ಲದ ಕಾರಣ ಬದಲಿಯಾಗಿ ಅವರೊಂದಿಗೆ ಬಂದಿದ್ದು ಪೊಲೀಸು ಸಿಬ್ಬಂದಿ ಶ್ರೀಧರ್. ಇವರ ಜೀಪು ಕುಂದಾಪುರದತ್ತ ಬರುತ್ತಿರುವಾಗ ಕುಂದಾಪುರ ಸಂಗಂ ಪರಿಸರದಲ್ಲಿ ಇಬ್ಬರು ಅನುಮಾನಸ್ಪದ ವ್ಯಕ್ತಿಗಳು ತಮ್ಮ ಇರುವಿಕೆಯನ್ನು ಮರೆ ಮಾಚುವುದನ್ನು ಕಂಡು ವಿಚಾರಿಸಲು ತೆರಳುತ್ತಾರೆ. ಆವಾಗಲೇ ರಘು ಹಾಗೂ ರಾಜೇಶ್ ಇಬ್ಬರು ಪೊಲೀಸರ ಮೇಲೆಯೇ ಹರಿಯಾಯುತ್ತಾರೆ. ಅಲ್ಲದೇ ತಮ್ಮಲ್ಲಿದ್ದ ಮಾರಕಯುಧಗಳಿಂದ ದಾಳಿ ಮಾಡಲು ಬರುತ್ತಾರೆ. ಅವರ ಪೈಕಿ ರಾಜೇಶ್ ಎಂಬಾತ ವೃತ್ತನಿರೀಕ್ಷಕ ಕಾಂತರಾಜು ಅವರ ಮೇಲೆ ಹಲ್ಲೆಗೆ ಮುಂದಾಗುತ್ತಿರುವಾಗ ಕಾನ್ಸ್‌ಟೇಬಲ್ ಶ್ರೀಧರ್ ಆತನನ್ನು ಹಿಂಬದಿಯಿಂದ ಹಿಡಿಯಲು ಹೋಗುತ್ತಾರೆ, ಇದೇ ಸಂದರ್ಭದಲ್ಲಿ ರಘು ತಮ್ಮ ಕೈಯಲ್ಲಿದ್ದ ಚಾಕುವಿನಿಂದ ಶ್ರೀಧರ ಅವರ ಹೊಟ್ಟೆಗೆ ಬಲವಾಗಿ ಎರಡು ಬಾರೀ ಚುಚ್ಚುತ್ತಾನೆ. ಪರಿಸ್ಥಿತಿ ಗಂಭೀರತೆ ಅರಿತ ಕಾಂತರಾಜು ಅವರು ತಮ್ಮ ಕೈಯಲ್ಲಿದ್ದ ಸರ್ವೀಸ್ ರಿವಾಲ್ವರ್ ಮೂಲಕ ಫೈರ್ ಮಾಡಲು ಹೊರಟರಾದರೂ ರಿವಾಲ್ವರ್ ಸ್ಟ್ರಕ್ ಆದ ಕಾರಣ ಯಾವುದೇ ಪ್ರಯೋಜನವಾಗಿರಲಿಲ್ಲ. ಕೂಡಲೇ ಶ್ರೀಧರ್ ಅವರನ್ನು ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ಮಾಡಲಾಗಿತ್ತಾದರೂ ರಕ್ತಸ್ರಾವದಿಂದ ಮಾರ್ಗಮಧ್ಯೆ ಅವರು ಸಾವನ್ನಪ್ಪಿದ್ದರು. ಇದೇ ವೇಳೆ ಇಬ್ಬರು ದರೋಡೆಕೋರರು ತಪ್ಪಿಸಿಕೊಂಡು ಓಡಲು ಯತ್ನಿಸುವಾಗ ಪೊಲೀಸರು ಹಾಗೂ ಸಂಗಂ ಭಾಗದ ಕೆಚ್ಚೆದೆಯ ಯುವಕರ ಸಹಾಯದಿಂದ ಇಬ್ಬರನ್ನು ಹೆಡೆಮುಡಿ ಕಟ್ಟಿ ಬಂಧಿಸಲಾಗಿತ್ತು. ಕುಂದಾಪುರ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದರು.
ಈ ಪ್ರಕರಣದಲ್ಲಿ ಸರಕಾರದ ಪರವಾಗಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ಕುಂದಾಪುರ ನ್ಯಾಯವಾದಿ ರವಿಕಿರಣ ಮುರ್ಡೇಶ್ವರ ಅವರು ವಕಾಲತ್ತು ನಿರ್ವಹಿಸಿದ್ದರು. 5 ವರ್ಷಗಳಿಂದಲೂ ಆರೋಪಿಗಳಿಗೆ ಪ್ರಕರಣದಲ್ಲಿ ಜಾಮೀನು ದೊರಕಿರಲಿಲ್ಲ. 2015 ಮಾರ್ಚ್ 4 ರಂದು ಪ್ರಕರಣದ ವಿಚಾರಣೆ ನಡೆಸಿದ ಕುಂದಾಪುರದ ಜಿಲ್ಲಾ ಮತ್ತು ಹೆಚ್ಚುವರಿ ಸತ್ರ ನ್ಯಾಯಾಲಯ ಆರೋಪಿಗಳು ನಡೆಸಿದ ಕೃತ್ಯ ಸಾಭೀತಾಗಿದ್ದು ಅವರನ್ನು ಅಪರಾಧಿಗಳೆಂದು ಪ್ರಕಟಿಸಿತ್ತು. ಅಲ್ಲದೇ ತೀರ್ಪನ್ನು ಮಾ.5 ಗುರುವಾರಕ್ಕೆ ಕಾಯ್ದಿರಿಸಿತ್ತು. ಅದರಂತೆಯೇ ಗುರುವಾರ ನೀಡಿದ ಮಹತ್ವದ ತೀರ್ಪಿನಲ್ಲಿ ಪ್ರಮುಖ ಆರೋಪಿ ರಘು ಎಂಬಾತನಿಗೆ ಜೀವಾವಧಿ ಶಿಕ್ಷೆ ಹಾಗೂ ರಾಜೇಶ ಎಂಬಾತನಿಗೆ 5 ವರ್ಷ ಜೈಲು, 10 ಸಾವಿರ ದಂಡ ವಿಧಿಸಿದ್ದು ದಂಡ ಪಾವತಿ ಮಾಡದಿದ್ದಲ್ಲಿ ಪುನಃ 1 ವರ್ಷ ಜೈಲು ವಾಸ ಮಾಡುವಂತೆ ತೀರ್ಪು ನೀಡಿದೆ.
ಈ ಪ್ರಕರಣದಲ್ಲಿ ಗಮನಿಸಿದರೇ ಕುಂದಾಪುರ ಇತಿಹಾಸದಲ್ಲಿ ಪೊಲೀಸರೊಬ್ಬರ ಹತ್ಯೆ ಮಾಡಲಾಗಿತ್ತು. ಅಲ್ಲದೇ ಕುಂದಾಪುರದಲ್ಲಿ ಜಿಲ್ಲಾ ಹಾಗೂ ಹೆಚ್ಚುವರಿ ಸತ್ರ ನ್ಯಾಯಾಲಯವಾದ ಬಳಿಕ ಅಪರಾಧಿಗೆ ಜೀವಾವಧಿ ಶಿಕ್ಷೆ ಇದೇ ಮೊದಲ ಭಾರೀ ಸಿಕ್ಕಿದೆ.
ಒಟ್ಟಿನಲ್ಲಿ 5 ವರ್ಷದ ಬಳಿಕವಾದರೂ ಪೊಲೀಸು ಸಿಬ್ಬಂದಿಯನ್ನು ಕೊಂದ ಇಬ್ಬರು ನಟೋರಿಯಸ್ ಪಾತಕಿಗಳಿಗೆ ಶಿಕ್ಷೆ ಆದಂತಾಗಿದ್ದು, ನ್ಯಾಯ ಎಲ್ಲರ ಪಾಲಿಗೂ ಇದೆ ಎಂಬುದು ಮತ್ತೊಮ್ಮೆ ಸಾಭೀತಾಗಿದೆ.
2011 ರಲ್ಲಿ ಪ್ರಶಸ್ತಿ: ಕುಂದಾಪುರ ಠಾಣಾ ಸರಹದ್ದಿನಲ್ಲಿ ನಡೆದ ದರೋಡೆ ಪ್ರಕರಣದಲ್ಲಿ ಡಕಾಯತರೊಂದಿಗೆ ಸೆಣಸಾಡಿ ಉಡುಪಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಹಾಗೂ ಬೈಂದೂರು ಠಾಣೆಯಲ್ಲಿ ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶ್ರೀಧರ್ ಮೃತರಾಗಿದ್ದು, ೨೦೧೧ ರ ಸಾಲಿನಲ್ಲಿ ಗೌರವಾನ್ವಿತ ರಾಷ್ಟ್ರಪತಿಯವರ ಗ್ಯಾಲಂಟರಿ ಪ್ರಸಸ್ತಿ ದೊರಕಿರುತ್ತದೆ.

