ಕನ್ನಡ ವಾರ್ತೆಗಳು

ಎರಡು ಪ್ರತ್ಯೇಕ ಅಪಘಾತ : ಒಂದು ಸಾವು – ಇನ್ನೊಂದು ಗಂಭೀರ

Pinterest LinkedIn Tumblr

accident_image2

ಕುಂದಾಪುರ: ನಗರದ ಹೊರವಲಯದಲ್ಲಿ ಬುಧವಾರ ರಾತ್ರಿ ನಡೆದ ಎರಡು ಪ್ರತ್ಯೇಕ ಅಪಘಾತಗಳಲ್ಲಿ ಓರ್ವ ಮೃತಪಟ್ಟು ಇನ್ನೋರ್ವ ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಮೃತಪಟ್ಟ ವ್ಯಕ್ತಿಯನ್ನು ಬೈಕ್ ಕುಂದಬಾರಂದಾಡಿಯ ನಿವಾಸಿ ಮಹೇಶ್ ಆಚಾರಿ(30) ಎಂದು ಗುರುತಿಸಲಾಗಿದ್ದರೆ, ಗಂಭೀರ ಗಾಯಗೊಂಡು ಜೀವನ್ಮರಣ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾದ ವ್ಯಕ್ತಿಯನ್ನು ಬೈಕ್ ಸವಾರ ವಂಡ್ಸೆ ಸಮೀಪದ ಅಡಿಕೆಕೊಡ್ಲು ನಿವಾಸಿ ಗಣೇಶ್ ದೇವಾಡಿಗ(20) ಎಂದು ಗುರುತಿಸಲಾಗಿದೆ.

Hakladi_Accident_March

ಬುಧವಾರ ರಾತ್ರಿ ಮಹೇಶ್ ಆಚಾರಿ ತನ್ನ ಬೈಕ್‌ನಲ್ಲಿ ಹಕ್ಲಾಡಿ ಕಡೆಯಿಂದ ಕುಂದಬಾರಂದಾಡಿ ಕಡೆಗೆ ಮುಳ್ಳಿಕಟ್ಟೆ ಆಲೂರು ರಸ್ತೆಯಲ್ಲಿ ಪ್ರಯಾಣಿಸುತ್ತದ್ದರು. ಹಕ್ಲಾಡಿ ಸಮೀಪ ಇರುವ ರೈಲ್ವೇ ಮೇಲ್ಸೇತುವೆಯ ತಿರುವಿನಲ್ಲಿ ಬರುತ್ತಿದ್ದಾಗ ಪಿಕ್‌ಅಪ್ ವಾಹನವೊಂದು ಅತೀ ವೇಗವಾಗಿ ಬಂದು ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಅಪಘಾತದ ತೀವ್ರತೆಗೆ ಬೈಕ್ ಸಂಪೂರ್ಣ ನುಜ್ಜುಗುಜ್ಜಾಗಿದ್ದು, ಬೈಕ್ ಸವಾರನ ಮುಖ ಸಂಪೂರ್ಣ ಜಜ್ಜಿ ಹೋಗಿತ್ತು. ಸುಮಾರು ಅರ್ಧ ಗಂಟೆಯ ವರೆಗೂ ಬೈಕ್ ಸವಾರನ ಗುರುತು ಪತ್ತೆಯಾಗದೇ ಇದ್ದಾಗ ವಾಹನ ದಾಖಲೆಗಳನ್ನು ಪರಿಶೀಲಿಸಿ ಮೃತ ಬೈಕ್ ಸವಾರನನ್ನು ಪತ್ತೆ ಹಚ್ಚಲಾಯಿತೆನ್ನಲಾಗಿದೆ.

ಇದೇ ಸಮಯದಲ್ಲಿ ಇನ್ನೊಂದು ಅಪಘಾತ ನಡೆದಿದ್ದು, ಅಡಿಕೆ ಕೊಡ್ಲು ನಿವಾಸಿ ಗಣೇಶ್ ದೇವಾಡಿಗ ಬೈಕಿನಲ್ಲಿ ಮನೆಯಿಂದ ಕೊಲ್ಲೂರು ವಂಡ್ಸೆ ರಾಜ್ಯ ಹೆದ್ದಾರಿಯಲ್ಲಿ ವಂಡ್ಸೆ ಪೇಟೆಗೆ ಬರುತ್ತಿದ್ದರೆನ್ನಲಾಗಿದೆ. ವಂಡ್ಸೆ ಸಮೀಪ ತಾ.ಪಂ.ಸದಸ್ಯ ಮಂಜಯ್ಯ ಶೆಟ್ಟಿ ಎಂಬುವರ ಮನೆ ಸಮೀಪ ರಸ್ತೆಯಲ್ಲಿ ಬರುತ್ತಿದ್ದ ವೇಳೆ ವಂಡ್ಸೆ ಕಡೆಯಿಂದ ವೇಗವಾಗಿ ಬರುತ್ತಿದ್ದ ಟಿಪ್ಪರ್ ವಾಹನವೊಂದು ಬೈಕಿಗೆ ಡಿಕ್ಕಿಯಾಗಿದೆ ಎನ್ನಲಾಗಿದೆ. ಡಿಕ್ಕಿ ರಭಸಕ್ಕೆ ರಸ್ತೆಗೆಸೆಯಲ್ಪಟ್ಟ ಬೈಕ್ ಸವಾರ ಗಣೇಶ್ ದೇವಾಡಿಗನ ತಲೆಗೆ ಗಂಭೀರ ಗಾಯಗಳಾಗಿದ್ದು, ಉಡುಪಿಯ ಖಾಸಗೀ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ. ಬೈಕಿನ ಹಿಂಬದಿಯಲ್ಲಿ ಇನ್ನೋರ್ವ ಕುಳಿತಿದ್ದು, ಆತನಿಗೂ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.

ಅಪಘಾತ ನಡೆದ ಎರಡೂ ಪ್ರದೇಶಗಳಲ್ಲಿ ಈ ಹಿಂದೆ ಹಲವು ಬಾರಿ ಅಪಘಾತಗಳು ಸಂಭವಿಸಿದ್ದು, ಈ ತಿರುವುಗಳನ್ನು ಅಪಘಾತ ವಲಯ ಎಂದು ಘೋಷಿಸಿ ಎಚ್ಚರಿಕೆ ಫಲಕ ಹಾಕಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Write A Comment