ಕನ್ನಡ ವಾರ್ತೆಗಳು

ಕೊಂಕಣಿಯಲ್ಲೊಂದು ವಿಭಿನ್ನ ಪ್ರಯೋಗ : ಎ.ಟಿ. ಲೋಬೊ ಅವರ ಒಂದು ಕಾವ್ಯಮಯ ಪಯಣ ಪುಸ್ತಕ ಸ್ಮಶಾನದಲ್ಲಿ ಬಿಡುಗಡೆ.

Pinterest LinkedIn Tumblr

pt_lobolo_book_1

ಮಂಗಳೂರು,ಮಾರ್ಚ್.03: ಕೊಂಕಣಿ ಕವಿತೆ ಬಲ ಪಡೆದುಕೊಳ್ಳುತ್ತಿದೆ. ಕವಿತಾ ಟ್ರಸ್ಟ್‌ನಂತಹಾ ಸಮರ್ಪಿತ ವಿಶ್ವಸ್ಥ ಮಂಡಳಿಯು ಕೊಂಕಣಿ ಕವಿತೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೇರಿಸುವ ಕೈಂಕರ್ಯವನ್ನು ಕಳೆದ 15  ವರ್ಷಗಳಿಂದ ನಿಷ್ಟೆಯಿಂದ, ಪ್ರಾಮಾಣಿಕತೆಯಿಂದ ಮಾಡುತ್ತಿದೆ. ಕವಿಗೋಷ್ಟಿಗಳು, ಕವಿತಾ ವಾಚನ ಸ್ಫರ್ಧೆಗಳು, ಉಪನ್ಯಾಸಗಳು, ಪುಸ್ತಕ ಪ್ರಕಟಣೆಗಳು ಕವಿತಾ ಫೆಸ್ತ್ ಎಂಬ ವಾರ್ಷಿಕ ಸಂಭ್ರಮ ಇವೆಲ್ಲವುಗಳ ಫಲವಾಗಿ ಕೊಂಕಣಿ ಕವಿತೆಯೆಡೆಗೆ ಯುವ ಪೀಳಿಗೆಯ ಆಕರ್ಷಣೆ ಬೆಳೆಯುತ್ತಿದೆ. ವಿವಿಧ ಪ್ರಯೋಗಗಳು ನಡೆಯುತ್ತಿವೆ.

ಎ.ಟಿ. ಲೋಬೊ ಕಾವ್ಯನಾಮದಿಂದ ಪರಿಚಿತರಾಗಿರುವ ದಿವಂಗತ ಆಪೊಲ್ಲೊ ತೋಮಸ್ ಲೋಬೊ ಕೊಂಕಣಿ ಸಾಹಿತ್ಯದ ಪಂಚಪಾಂಡವರಲ್ಲಿ ಒಬ್ಬರು. ನಾಟಕ ಕ್ಷೇತ್ರದಲ್ಲಿ ಕೂಡಾ ಅದ್ವೀತೀಯರು. ಇದೇ ಮಾರ್ಚ್ 02 ರಂದು ಅವರು ಈ ಪ್ರಪಂಚಕ್ಕೆ ಬಂದು ೯೫ ವರ್ಷಗಳಾದವು. `ಎ.ಟಿ. ಲೋಬೊ – ಒಂದು ಕಾವ್ಯಮಯ ಪಯಣ‘ವನ್ನು ವಿಭಿನ್ನ ರೀತಿಯಲ್ಲಿ ಕವಿತಾ ಟ್ರಸ್ಟ್ ಆಯೋಜಿಸಿತ್ತು. ಎ.ಟಿ. ಲೋಬೊ ಅವರ ಕುಟುಂಬಸ್ಥರ ಮನೆಯಲ್ಲಿ, ಮಿತ್ರರ ಮನೆಯಲ್ಲಿ ಹಾಗೂ ಅವರು ನಿರಂತರವಾಗಿ ಜೀವಿಸುತ್ತಿರುವ ಬಿಜಯ್ ಚರ್ಚಿನ ಸಮಾಧಿ ಸ್ಥಳದಲ್ಲಿ ಅವರ ಕವಿತೆಗಳ ಪುಸ್ತಕ ಬಿಡುಗಡೆ, ಸಂವಾದ, ಕಾವ್ಯವಾಚನ ಹೀಗೆ ಮೂರು ಸ್ಥಳಗಳಲ್ಲಿ ಈ ಕಾರ್ಯಕ್ರಮ ನಡೆಯಿತು.

pt_lobolo_book_2a

ಎ.ಟಿ. ಲೋಬೊ ಅವರ ತಮ್ಮ ಲೊರೆನ್ಸ್ ಲೋಬೊ ಅವರ ಮನೆಯಲ್ಲಿ ಮೊದಲಾಗಿ ಭಾಷೆಯ ಕುರಿತಾದ ಕಾವ್ಯ ವಾಚನದ ಮುಖಾಂತರ ಕಾರ್ಯಕ್ರಮ ಆರಂಭವಾಯಿತು. ನಂತರ ಪ್ರಸಿದ್ಧ ಗಾಯಕ ಅನಿಲ್ ಪತ್ರಾವೊ ಮತ್ತು ಬಳಗದಿಂದ ಲೋಬೊ ಅವರ ಖವಾಲಿಗಳನ್ನು ಪ್ರಸ್ತುತ ಪಡಿಸಲಾಯಿತು. ಲಾರೆನ್ಸ್ ಮತ್ತು ಅವರ ಸೋದರಿ ಮೊಂತಿ ಇವರು ಕವಿತಾ ಟ್ರಸ್ಟ್ ಪ್ರಕಟಿಸಿದ `ಎ.ಟಿ. ಲೋಬೊ-ಏಕ್ ಕಾವ್ಯಾಳ್ ಪಯ್ಣ್’ ಕವಿತೆ, ಶಾಯರಿ, ಖವಾಲಿಗಳ ಸಂಗ್ರಹವನ್ನು ಹಳೆಪುಸ್ತಕಗಳ ರಾಶಿಯಿಂದ ಹುಡುಕಿ ತೆಗೆಯುವ ಮೂಲಕ ಲೋಕಾರ್ಪಣೆಗೊಳಿ ಸಿದರು. “ಕೊಂಕಣಿ ಸಾಹಿತ್ಯ ಕ್ಷೇತ್ರಕ್ಕೆ ಶಾಯರಿ, ಖವಾಲಿ ಪರಿಚಿತವಾದದ್ದೇ ಲೋಬೊ ಅವರಿಂದ. ಈ ಸಂಗ್ರಹ ಕೊಂಕಣಿಗೆ ಬಹು ಮೌಲ್ಯಯುತ, ತುಲನಾತ್ಮಕ ಕೃತಿ” ಎಂದು ಕವಿತಾ ಟ್ರಸ್ಟ್ ಅಧ್ಯಕ್ಷ್ಷ ಮೆಲ್ವಿನ್ ರೊಡ್ರಿಗಸ್ ಅಭಿಪ್ರಾಯಪಟ್ಟರು.

ನಂತರ ಅವರು ಸಂವಾದ ನಡೆಸಿಕೊಟ್ಟರು. ತಮ್ಮ ಅಣ್ಣ ಕಷ್ಟಕಾಲದಲ್ಲಿ ಕುಟುಂಬವನ್ನು ಮುನ್ನಡೆಸಿದ ರೀತಿ, ಕಿರಿಯರಿಗೆ ನೀಡಿದ ಮಾರ್ಗದರ್ಶನ, ಮುಂಬಯಿಯಲ್ಲಿ ಕೆಲಸ ಮಾಡುತ್ತಾ 50-60ರ ದಶಕದಲ್ಲಿ ಕೊಂಕಣಿ ಸಾಹಿತ್ಯಕ್ಕೆ ನೀಡಿದ ದೇಣಿಗೆ ಇತ್ಯಾದಿಗಳನ್ನು ಮೆಲುಕು ಹಾಕಿದರು. ನಂತರ ಅವರ ವಿವಿಧ ಪ್ರಕಾರದ ಕಾವ್ಯಗಳ ವಾಚನ ನಡೆಯಿತು. ನಂತರ ಎ.ಟಿ. ಲೋಬೊ ಅವರ ಮಿತ್ರ ರೇಮಂಡ್ ಲೋಬೊ ಅವರ ಮನೆಯಲ್ಲಿ ಎಲ್ಲರೂ ಜತೆಗೂಡಿದರು. ಲೋಬೊ ಅವರು ತಮ್ಮ ಮಿತ್ರರೊಡಗೂಡಿ ಹರಟೆ ಹೊಡೆಯುತ್ತಿದ್ದ ಕೊಟ್ಟಾರ ಕ್ರಾಸ್ ಬಳಿ ಇದ್ದ ಹರಟೆ ಕಟ್ಟೆಯ ನೆನಪುಗಳನ್ನು ನಾಟಕಕಾರ ಫೆಲಿಕ್ಸ್ ಸಲ್ಡಾನ್ಹಾ ಮತ್ತು ನಟಿ ಕಾರ್ಮೆಲಿಟಾ ಗೋವಿಯಸ್ ಹಂಚಿಕೊಂಡರು. ಓರ್ವ ನಾಟಕಕಾರನಾಗಿ ಲೋಬೊ ಅವರನ್ನು ವಿಶ್ಲೇಷಿಸಲಾಯಿತು. ಅವರ ನಾಟಕಗಳಿಂದ ಆಯ್ದ ಕವಿತೆಗಳ ವಾಚನ ನಡೆಯಿತು.

pt_lobolo_book_3

ಮುಂದಿನ ಪಯಣ ಬಿಜೈ ಚರ್ಚ್‌ನ ಸಮಾಧಿ ಸ್ಥಳಕ್ಕೆ. ಸಮಾಧಿ ಸ್ಥಳಗಳಲ್ಲಿ ಜನ ಅಳುತ್ತಾರೆ. ಪ್ರಾಥಿಸುತ್ತಾರೆ. ಮೌನವಾಗಿರುತ್ತಾರೆ. ಆದರೆ ಇಲ್ಲಿ ಎ.ಟಿ. ಲೋಬೊ ಅವರ ಸಮಾಧಿಯನ್ನು ಹೂಗಳಿಂದ ಅಲಂಕರಿಸಲಾಗಿತ್ತು. ಮರಣದ ನಂತರ ಓರ್ವ ವ್ಯಕ್ತಿ ಕಣ್ಮರೆಯಾದರೂ, ವ್ಯಕ್ತಿತ್ವ ಹೇಗೆ ನೂರಾರು ಜನರಲ್ಲಿ ಪುರ್ನಜನ್ಮ ಪಡೆಯುತ್ತದೆ. ತನ್ನ ಕೆಲಸದಿಂದ, ಸಾಹಿತ್ಯದಿಂದ ಹೇಗೆ ಅಮರರಾಗುತ್ತಾರೆ ಎಂದು ಕೆನರಾ ಸಂಪರ್ಕ ಕೇಂದ್ರದ ನಿರ್ದೇಶಕ ವಂ. ರಿಚರ್ಡ್ ಡಿಸೊಜಾ ವಿಶ್ಲೇಷಿಸಿದರು.

ನಂತರ ಎ.ಟಿ. ಲೋಬೊ ಮರಣದ ಬಗ್ಗೆ ಬರೆದ ಶಾಯರಿಗಳನ್ನು ವಾಚಿಸಲಾಯಿತು. ನಂತರ ಎಲ್ಲರೂ ಪುಷ್ಪಾರ್ಚನೆ ನಡೆಸಿದರು. ಹೀಗೆ 2 ಮಾರ್ಚ್ 1920ರಲ್ಲಿ ಈ ಪ್ರಪಂಚಕ್ಕೆ ಬಂದ ಎ.ಟಿ. ಲೋಬೊ ಎಂಬ ಮಹಾನ್ ಚೇತನಕ್ಕೆ ವಿಭಿನ್ನ ಹಾಗೂ ವಿಶಿಷ್ಟ ರೀತಿಯಲ್ಲಿ ಶೃದ್ಧಾಂಜಲಿ ಅರ್ಪಿಸಿ, ಅವರ ಸಾಹಿತ್ಯವನ್ನು ಸಂಭ್ರಮಿಸುವ ಈ ಪ್ರಯೋಗ ಜನಮನ ಸೂರೆಗೊಂಡಿತು.

Write A Comment