ಕನ್ನಡ ವಾರ್ತೆಗಳು

ಪೆನ್ನು ಹಿಡಿಯುವ ಕೈ ಸೌಟು ಹಿಡಿಯಿತು; ಇವರು ಪಾಠ ಕೇಳೋಕು ಸೈ, ಅಡುಗೆ ಮಾಡೋಕು ಸೈ..!

Pinterest LinkedIn Tumblr

ಮಕ್ಕಳಿಂದಲೇ ತಯಾರಾಯ್ತು ಚಪಾತಿ, ಸಾಗು, ಪಾನಕ

ಕುಂದಾಪುರ: ಸಂಸ್ಕಾರಯುತ ಶಿಕ್ಷಣವೆಂದರೆ ಕೇವಲ ಪಠ್ಯಗಳ ಬೋಧನೆಯಲ್ಲ. ಜೀವನದ ದಿನ ನಿತ್ಯದ ಕ್ರೀಯೆಗಳಾದ ಸ್ವಚ್ಛತೆ, ಭೋಜನ, ಅಡುಗೆ, ಆಟ ಇತ್ಯಾದಿಗಳಲ್ಲಿ ಶಿಸ್ತು, ಅನುಷ್ಠಾನಗಳನ್ನು ಕಲಿಸುವುದು ಸಂಸ್ಕಾರಯುತ ಶಿಕ್ಷಣದ ಒಂದು ಭಾಗ. ಈ ದಿಶೆಯಲ್ಲಿ ಸಹಭೋಜನ ಅಥವಾ ಸಾಮೂಹಿಕ ಭೋಜನದ ಪಾತ್ರ ಮಹತ್ವದ್ದು. ಸಾಮೂಹಿಕ ಭೋಜನದಲ್ಲಿ ಎಲ್ಲರೂ ತಮ್ಮ-ತಮ್ಮ ಮನೆಯಿಂದ ಮಾಡಿ ತಂದ ಭಕ್ಷ್ಯಗಳನ್ನು ಒಂದೆಡೆ ಕುಳಿತು ಸೇವಿಸುವುದು ಒಂದು ಭಾಗವಾದರೆ ಮಕ್ಕಳೇ ಸೇರಿ ತಾಯಂದಿರ ಸಹಾಯದಿಂದ ಸಾಮೂಹಿಕವಾಗಿ ಭೋಜನವನ್ನು ತಯಾರಿಸಿ, ಬಡಿಸಿ, ಭೋಜನ ಸ್ವೀಕರಿಸುವುದು ವಿಭಿನ್ನ ಚಿಂತನೆ.

Seva Sangama-School_Students. (6) Seva Sangama-School_Students. (1)

ಹೌದು  ತೆಕ್ಕಟ್ಟೆ ಸೇವಾ ಸಂಗಮ ವಿದ್ಯಾಕೇಂದ್ರದ 6 ಮತ್ತು 7ನೇ ಕನ್ನಡ ಮತ್ತು ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಶಾಲೆಯ ಅಡುಗೆ ಕೋಣೆ ಹೊಕ್ಕಿದ್ದರು. ಪೆನ್ನು-ಪುಸ್ತಕ ಹಿಡಿಯುವ ಕೈ ಅಡುಗೆ ಸಾಮಾಗ್ರಿಗಳನ್ನು ಹಿಡಿದಿತ್ತು.

ಸುಮಾರು 55 ಮಂದಿ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಹಾಗೂ 15 ಮಂದಿ ಪೋಷಕರು (ತಾಯಂದಿರು) ಸಹಾಯದಿಂದ ೫೦೦ ಚಪಾತಿ ಹಾಗೂ ಅದಕ್ಕೆ ಬೇಕಾಗುವಷ್ಟು ಆಲೂಗಡ್ಡೆ ಪಲ್ಯ ಮತ್ತು ಕಾಳುಮೆಣಸಿನ ನಿಂಬೆಯ ಪಾನಕವನ್ನು ತಯಾರಿಸಲಾಗಿತ್ತು.

ಮಕ್ಕಳನ್ನು ಭೋಜನ ತಯಾರಿಸುವಲ್ಲಿ ತೊಡಗಿಸುವುದರಿಂದ ಒಲೆಯ ಮುಂದಿನ ಕಾರ್ಯಗಳನ್ನು ಸ್ವತಂತ್ರವಾಗಿ ನಿರ್ವಹಿಸುವಲ್ಲಿ ಶಕ್ತರಾಗುತ್ತಾರೆ. ಅಡುಗೆ ತಯಾರಿಕೆಯ ಮೊದಲಿನಿಂದ ಕೊನೆಯವರೆಗೆ ಸ್ವಚ್ಛತೆ, ಶುದ್ಧತೆಯ ಬಗ್ಗೆ ಗಮನ ನೀಡುವುದರಿಂದ ಮಕ್ಕಳು ಸ್ವಚ್ಛತೆಯ ಮಹತ್ವ ಅರಿಯುತ್ತಾರೆ ಎನ್ನುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

Seva Sangama-School_Students. (5) Seva Sangama-School_Students. (2) Seva Sangama-School_Students. Seva Sangama-School_Students. (3) Seva Sangama-School_Students. (4)

ಎಲ್ಲರೂ ಸಹಭೋಜನ ಮಾಡುವುದರಿಂದ ಸಹಭೋಜನ ಮಾಡುವುದರಿಂದ ಮಕ್ಕಳು ಭೋಜನ ತಯಾರಿಸುವ, ಬಡಿಸುವ ಹಾಗೂ ಅತಿಥಿ ಸತ್ಕಾರ ಪ್ರಾಥಮಿಕ ವಿಚಾರಗಳನ್ನು ಅರಿಯುತ್ತಾರೆ. ಸಹಬೋಜನ ಪರಿಕಲ್ಪನೆಯಲ್ಲಿ ಆಹಾರದ ಮಹತ್ವವನ್ನು ಮತ್ತು ಹಂಚಿ ತಿನ್ನುವುದರ ಖುಷಿಯನ್ನು ಮಕ್ಕಳು ಅನುಭವಿಸಿದರು.

ಸಹಭೋಜನದ ಕೊನೆಯಲ್ಲಿ ಸಮಾರಂಭವನ್ನು ಆಯೋಜಿಸಲಾಗಿದ್ದು ಮಕ್ಕಳೇ ಅದಕ್ಕೆ ವೇದಿಕೆಯ ಅಲಂಕಾರ ಮತ್ತು ಕಾರ್ಯಕ್ರಮದ ನಿರೂಪಣೆಯನ್ನು ಶಿಕ್ಷಕಿಯರ ಮಾರ್ಗದರ್ಶನದಲ್ಲಿ ಅಚ್ಚುಕಟ್ಟಾಗಿ ಮಾಡಿದರು.

ಒಟ್ಟಿನಲ್ಲಿ ಮಕ್ಕಳನ್ನು ಸಂಸ್ಕಾರ ಕ್ಷಮತೆಯ ದೃಷ್ಠಿಯಿಂದ ಸಂಪನ್ನರಾಗಿಸುವಲ್ಲಿ ಭೋಜನ ಮಾಡುವ ಕುಶಲತೆ ಮತ್ತು ಭೋಜನದ ಬಗ್ಗೆ ಉಚಿತ ದೃಷ್ಠಿಕೋನ ಇವೆರಡು ಬಹಳ ಮಹತ್ವಪೂರಕವಾದ ವಿಷಯವಾಗಿದ್ದು, ತೆಕ್ಕಟ್ಟೆ ಸೇವಾಸಂಗಮ ಶಾಲೆಯಲ್ಲಿ ನಡೆದ ಕಾರ್ಯಕ್ರಮ ಎಲ್ಲರಿಗೂ ಮಾದರಿಯಾಗಿತ್ತು.

ಮಕ್ಕಳು ಸಂತಸದಿಂದ ಈ ಅಡುಗೆ ಚಟುವಟಿಕೆಯಲ್ಲಿ ಭಾಗವಿಸಿದ್ದು, ಇದಕ್ಕೆ ಪಾಲಕರ ಸಹಕಾರವು ಅತ್ಯುತ್ತಮವಾಗಿತ್ತು.
ಶಕಿಲಾ ಮಾತಾಜಿ (ಸಹ ಶಿಕ್ಷಕಿ)

ಶಾಲೆಯಲ್ಲಿ ಮಾಡುವ ಈ ರೀತಿಯ ಚಟುವಟಿಕೆಗಳಿಂದ ಮಕ್ಕಳಿಗೆ ಕೆಲಸ ಕಲಿಯಲು ಸ್ಫೂರ್ತಿಯಾಗುತ್ತದೆ ಮತ್ತು ಇದು ಮಕ್ಕಳ ವಿಕಾಸಕ್ಕೆ ಅಗತ್ಯ.
– ಇಂದಿರಾ ಗಣಪತಿ ಭಟ್ (ಪಾಲಕರು)

ಅಡುಗೆ ಒಂದು ಕಲೆ. ಇದರ ಕಷ್ಟ ಮತ್ತು ಅಡುಗೆ ತಯಾರಿಸುವ ವಿಧಾನ ಇಂದು ತಿಳಿಯಿತು, ಅಡುಗೆಯನ್ನು ನಾವು ಕಲಿತದದ್ದು ಸಂತೋಷವಾಯಿತು. ಈ ಕಾರ್ಯಕ್ರಮದ ಮೂಲಕ ನಮ್ಮ ಮುಂದಿನ ಏಳಿಗೆಗೂ ಸಹಕಾರಿಯಾಗಿದೆ.
ರಿತೇಶ್ ಕುಂದರ್ ಮತ್ತು ಸುಶ್ಮಿತಾ (ವಿದ್ಯಾರ್ಥಿಗಳು).

Write A Comment