ಕುಂದಾಪುರ: ನಮ್ಮ ಭಾಷೆ ಹಾಗೂ ನೆಲದ ಬಗ್ಗೆ ಅಭಿಮಾನ ಬೆಳೆದರೆ, ನಮ್ಮ ಸಂಸ್ಕೃತಿ ಅರಳುತ್ತದೆ ಹಾಗೂ ಬೆಳೆಯುತ್ತಿದೆ. ಸಂಸ್ಕೃತಿ ಉಳಿಯುವುದರಿಂದ ಸಮಾಜದಲ್ಲಿನ ಬಾಂಧವ್ಯ ವೃದ್ದಿಸುತ್ತದೆ ಎಂದು ಮೂಡಬಿದಿರಿ ಆಳ್ವಾಸ್ ಫೌಂಡೇಶನ್‌ನ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವಾ ಅಭಿಪ್ರಾಯ ವ್ಯಕ್ತಪಡಿಸಿದರು
ಬೈಂದೂರಿನ ಗಾಂಧಿ ಮೈದಾನದಲ್ಲಿ ನಡೆದ ಆಳ್ವಾಸ್ ಸಾಂಸ್ಕೃತಿಕ ವೈಭವ-೨೦೧೫ ರ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಮಾಜದ ಎಲ್ಲ ಜಾತಿ ಹಾಗೂ ಧರ್ಮದ ಮಕ್ಕಳಿಗೂ ಶಿಕ್ಷಣದ ಅವಕಾಶಗಳು ದೊರಕಬೇಕು ಎನ್ನುವ ಚಿಂತನೆಗಳಿಗೆ ಆಳ್ವಾಸ್ ಶಿಕ್ಷಣ ಸಂಸ್ಥೆ ಬದ್ದವಾಗಿದೆ. ಬಹು ಭಾಷೆ ಹಾಗೂ ಬಹು ಸಂಸ್ಕೃತಿಗಳ ತವರಾಗಿರುವ ಭಾರತದಲ್ಲಿನ ಪ್ರತಿಯೊಂದು ಭಾಷೆ ಹಾಗೂ ಸಂಸ್ಕೃತಿಗಳಿಗೂ, ತನ್ನದೆ ಆದ ವೈಶಿಷ್ಠ್ಯಗಳಿವೆ. ನಮ್ಮ ನೆಲದ ಸಂಸ್ಕೃತಿಯ ಸೊಗಡ ಹಾಗೂ ಪರಂಪರೆಯನ್ನು, ಉಳಿಸುವ ಹಾಗೂ ಬೆಳೆಸುವ ಸದುದ್ದೇಶದಿಂದ ಆಳ್ವಾಸ್ ಫೌಂಡೇಶನ್, ಕಳೆದ ಹಲವು ವರ್ಷಗಳಿಂದ, ದೇಶ-ವಿದೇಶಗಳಲ್ಲಿ ಸಾಂಸ್ಕೃತಿಕ ಮೌಲ್ಯಗಳನ್ನು ಪ್ರತಿಬಿಂಬಿಸುವ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ ಎಂದರು. ದೇಶ-ವಿದೇಶದ, ಬೇರೆ ಬೇರೆ ಭಾಷೆಗಳನ್ನು ಆಡುವ, ವಿಭಿನ್ನ ಸಂಸ್ಕೃತಿಗಳನ್ನು ನೆಚ್ಚಿಕೊಂಡಿರುವ ಲಕ್ಷಾಂತರ ಮಂದಿ ವಿದ್ಯಾರ್ಥಿಗಳಿಗೆ, ಆಳ್ವಾಸ ಶಿಕ್ಷಣ ಸಂಸ್ಥೆ ಸಾಧನೆಯ ವೇದಿಕೆಯಾಗಬೇಕು ಎನ್ನುವ ಕಲ್ಪನೆ ನಮ್ಮದು ಎಂದರು.
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಮಾಜಿ ಆಡಳಿತ ಧರ್ಮದರ್ಶಿ ಬಿ.ಎಂ. ಸುಕುಮಾರ್ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು.
ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ಅಧ್ಯಕ್ಷತೆ ವಹಿಸಿ ಮಾತನಾಡಿ ಕಾರ್ಯಕ್ರಮದ ಬಗ್ಗೆ ಸಂತಸತದ ಮಾತುಗಳನ್ನಾಡಿದರು.
ಕೊಲ್ಲೂರು ದೇವಳದ ಆಡಳಿತ ಧರ್ಮದರ್ಶಿ ಕೃಷ್ಣಪ್ರಸಾದ ಅಡ್ಯಂತಾಯ, ಪಡುವರಿ ಹೋಲಿಕ್ರಾಸ್ ಚರ್ಚ್‌ನ ಧರ್ಮಗುರು ಫಾ| ರೋನಾಲ್ಡ್ ಮಿರಾಂದ, ನಿವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಿ. ಜಗನ್ನಾಥ ಶೆಟ್ಟಿ, ಸ್ಥಳೀಯ ಮುಖಂಡರಾದ ರಾಜೂ ಪೂಜಾರಿ, ದೀಪಕ ಕುಮಾರ ಶೆಟ್ಟಿ, ಬಿ.ಎಸ್. ಸುರೇಶ್ ಶೆಟ್ಟಿ, ಗುರುರಾಜ ಶೆಟ್ಟಿ, ಸದಾಶಿವ ಪಡುವರಿ, ರಿಯಾಜ್ ಅಹ್ಮದ್ ಮೊದಲಾದವರಿದ್ದರು.
ಆಳ್ವಾಸ್ ನುಡಿಸಿರಿ ವಿರಾಸತ್ ಬೈಂದೂರು ಘಟಕದ ಅಧ್ಯಕ್ಷ ಸುಧಾಕರ ಪಿ. ಬೈಂದೂರು, ಗೌರವಾಧ್ಯಕ್ಷ ಓಗಣೇಶ್ ಉಪ್ಪುಂದ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಬಳಿಕ ಆಳ್ವಾಸ್ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳು, ಜೀವನ್‌ರಾಂ ಸುಳ್ಯ ಅವರ ನಿರ್ದೇಶನದ ನಾಟಕ ’ಬರ್ಬರಿಕ’ ಹಾಗೂ ಇತರ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು. ಸುಮಾರು ೩ ಗಂಟೆಗಳ ಕಾಲ ನಡೆದ ಈ ಸಾಂಸ್ಕೃತಿಕ ವೈಭಕ್ಕೆ ಸಾವಿರಾರು ಜನರು ಸಾಕ್ಷಿಯಾಗಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮಗಳು: ‘ಶಂಭೋ’ ಭರತನಾಟ್ಯ ಶಾಸ್ತ್ರೀಯ ನೃತ್ಯ, ಬಂಜಾರ ನೃತ್ಯ, ಮಣಿಪುರಿ ಸ್ಟಿಕ್ ಡ್ಯಾನ್ಸ್, ಶ್ರೀಲಂಕಾದ ಕ್ಯಾಂಡಿಯನ್ ನೃತ್ಯ, ಮಣಿಪುರಿ ದೋಲ್‌ಚಲಮ್, ಲಾವಣಿ ನೃತ್ಯ ಮೊದಲಾದವುಗಳು ಹತ್ತಾರು ನೃತ್ಯಗಳಿದ್ದವು.






















