ವರದಿ / ಚಿತ್ರ : ಸತೀಶ್ ಕಾಪಿಕಾಡ್
ಮಂಗಳೂರು, ಮಾ.1 : ದೇಶದಲ್ಲಿ ಮರುಮತಾಂತರ ಮಾಡಿಯೇ ಸಿದ್ಧ. ಇದರಿಂದ ದೇಶದ ಹಿಂದುಗಳ ಸಂಖ್ಯೆ 125 ಕೋಟಿಗೆ ತಲುಪಲಿದೆ ಎಂದು ವಿಶ್ವ ಹಿಂದು ಪರಿಷತ್ ಕೇಂದ್ರೀಯ ಮಾರ್ಗದರ್ಶಕ ಮಂಡಳಿ ಸದಸ್ಯೆ ಮಧ್ಯ ಪ್ರದೇಶದ ಸಾಧ್ವಿ ಬಾಲಿಕಾ ಸರಸ್ವತಿ ಹೇಳಿದರು.
ಅವರು ಭಾನುವಾರ ಮಂಗಳೂರಿನ ಕೇಂದ್ರ ಮೈದಾನದಲ್ಲಿ ಕರ್ನಾಟಕದಲ್ಲಿ ವಿಶ್ವ ಹಿಂದೂ ಪರಿಷತ್ತನ್ನು ಬೆಳೆಸಿದ ದಿ| ಸದಾನಂದ ಕಾಕಡೆ ಅವರ ಹೆಸರಿನಲ್ಲಿ ನಿರ್ಮಿಸಲಾದ 13 ಅಡಿ ಎತ್ತರ , 52 ಅಡಿ ಅಗಲದ ಬೃಹತ್ ವೇದಿಕೆಯಲ್ಲಿ ಬೃಹತ್ ಹಿಂದು ಸಮಾಜೋತ್ಸವದ ದಿಕ್ಸೂಚಿ ಭಾಷಣ ಮಾಡಿದರು.
ಭಾರತದಲ್ಲಿ ಅನ್ಯ ಮತೀಯರು ಮತಾಂತರ ಮಾಡುವಾಗ ಮೌನವಾಗಿರುವ ಸರಕಾರ, ಮಾಧ್ಯಮಗಳು ಮತಾಂತರಗೊಂಡವರನ್ನು ಮರು ಮತಾಂತರ ಮಾಡುವಾಗ ಘರ್ಜಿಸುವ ಅವಶ್ಯಕತೆ ಏನು? ನಿಮ್ಮ ತಾಯಿ, ಸಹೋದರ, ಸಹೋದರಿಯರನ್ನು ಇತರ ಧರ್ಮಕ್ಕೆ ಮತಾಂತರ ಮಾಡುವುದು ಸರಿಯೇ ಎಂದು ಪ್ರಶ್ನಿಸಿದರು.
ಭಾರತ ಹಿಂದುಗಳ ರಾಷ್ಟ್ರ. ಇಲ್ಲಿ ಹಿಂದುಗಳು ಯಾವತ್ತೂ ಇರುತ್ತಾರೆ. ವಿಶ್ವ ಹಿಂದು ಪರಿಷತ್ ಎಲ್ಲ ಹಿಂದುಗಳನ್ನು ಪರಸ್ಪರ ಜೋಡಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಾ ಬರುತ್ತಿದೆ. ಭಾರತದ ಹಿಂದುಗಳ ಮೇಲೆ ಯಾವುದೇ ಶಕ್ತಿ ಕೈಮಾಡುವ ಬಗ್ಗೆ ಯೋಚಿಸಲು ಸಾಧ್ಯವಿಲ್ಲದಷ್ಟು ಕೆಲಸವನ್ನು ವಿಶ್ವ ಹಿಂದು ಪರಿಷತ್ ಮಾಡಿದೆ ಎಂದರು.
ಭಾರತ ದೇಶವನ್ನು ಭ್ರಷ್ಟಾಚಾರ, ಅನಾಚಾರ, ಲವ್ಜಿಹಾದ್, ಗೋಹತ್ಯೆ ಮುಕ್ತಮಾಡಿ ಹಿಂದು ರಾಷ್ಟ್ರವನ್ನಾಗಿಸುವ ಮೂಲಕ ವಿಶ್ವ ಗುರು ಸ್ಥಾನ ಪ್ರತಿಷ್ಠಾಪನೆ ಮಾಡುವ ಸಂಕಲ್ಪಮಾಡಬೇಕು.. ಹಿಂದು ರಾಷ್ಟ್ರನಿರ್ಮಾಣ ಮಾಡುವ ಸಂಕಲ್ಪವನ್ನು ನಾವೆಲ್ಲರೂ ಮಾಡಬೇಕು. ಭಾರತದಲ್ಲಿದ್ದವರೆಲ್ಲರೂ ‘ಒಂದೇ ಮಾತರಂ’ ಹೇಳಬೇಕು ಎಂದರು.
ರಾಮ ಮಂದಿರ ನಿರ್ಮಾಣ : ಆಯೋಧ್ಯೆ ಹಿಂದುಗಳ ಶ್ರದ್ಧಾ ಕೇಂದ್ರ. ಅಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಮಾಡಿಯೆ ಸಿದ್ಧ. ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಇಡೀ ಪಾಕಿಸ್ತಾನ ಬಂದರೂ ಅದನ್ನು ತಡೆಯಲು ಅಸಾಧ್ಯ. ಹೆಚ್ಚು ಮಾತನಾಡಿದರೆ ಎರಡನೇ ರಾಮ ಮಂದಿರವನ್ನು ಇಸ್ಲಾಮಾಬಾದ್ನಲ್ಲಿ ನಿರ್ಮಿಸುತ್ತೇವೆ. ಮುಂದಿನ ರಾಮ ನವಮಿಯನ್ನು ಅಯೋಧ್ಯೆಯಲ್ಲಿಯೇ ಆಚರಿಸುವಂತಾಗಬೇಕು ಎಂದರು.
ಎಚ್ಚರ : ನಿಮ್ಮ ಸಹೋದರಿಯರನ್ನು ಚುಡಾಯಿಸಲು ಬಂದರೆ, ಅದಕ್ಕೆ ಸೂಕ್ತ ಉತ್ತರ ನೀಡಲು ಕೈಯಲ್ಲಿ ಆಯುಧ ಕೊಡಿ. ಲವ್ ಜಿಹಾದ್ಗೆ ಈ ಮೂಲಕ ಸೂಕ್ತ ಉತ್ತರ ನೀಡಿ ಎಂದು ಸಾಧ್ವಿ ಹೇಳಿದರು.
ಶಾಂತಿಗಾಗಿ ಶಸ್ತ್ರ : ದೇಶದಲ್ಲಿ ಶಾಂತಿಗಾಗಿ ಶಸ್ತ್ರ ಹಿಡಿಯುವ ಕಾಲ ಬಂದಿದೆ. ದಿನದಲ್ಲಿ ಐದು ಬಾರಿ ನಮಾಜ್ ಮಾಡಲು ಸಂಚರಿಸುವ ರಸ್ತೆಯನ್ನೇ ಕೆಲವು ಕಡೆ ಬಂದ್ ಮಾಡಲಾಗುತ್ತಿದೆ. ಇದಕ್ಕೆ ಕೋರ್ಟ್ ತಡೆ ನೀಡಿದರೂ, ಲೆಕ್ಕಿಸದೆ ನಮಾಜ್ ಮಾಡುತ್ತಾರೆ. ರಾಜಕೀಯ, ಅಧಿಕಾರ, ವೋಟ್ಬ್ಯಾಂಕ್ಗಾಗಿ ಇವರನ್ನು ಪೋಷಿಸುವ ಕೆಲಸವನ್ನು ಸರಕಾರಗಳು ಮಾಡುತ್ತಿವೆ. ಗಲ್ಲಿ ಗಲ್ಲಿಯಲ್ಲಿ ಮಸೀದಿ ಕಟ್ಟಲು ನೆರವು ನೀಡಲಾಗುತ್ತಿದೆ. ಭಾರತೀಯ ಸಂಸ್ಕೃತಿಯನ್ನು, ಹಿಂದುಗಳನ್ನು ಚಲನಚಿತ್ರದಲ್ಲಿ ಹೀನಾಯವಾಗಿ ತೋರಿಸಲು ಪಾಕಿಸ್ತಾನದಿಂದ ಹಣ ಹರಿದು ಬರುತ್ತಿವೆ. ಇದು ನಮ್ಮ ಭೂಮಿ, ನಮ್ಮ ಮಣ್ಣು, ಇಲ್ಲಿ ನಾವು ಹೇಗೆ ಬೇಕೋ ಹಾಗಿರುತ್ತೇವೆ. ಅದಕ್ಕಾಗಿ ಬಿಲ್ಲೆತ್ತುವ ಕಾಲ ಕೂಡಿ ಬಂದಿದೆ ಎಂದರು.
ಓವೈಸಿಗೆ ಸವಾಲು : ಹೈದರಾಬಾದ್ನಲ್ಲಿ ಗುಹೆಯೊಳಗಿದ್ದು, ಪ್ರಚೋದನಾತ್ಮಕವಾಗಿ ಮಾತನಾಡುವ ಓವೈಸಿ ತಾಕತ್ತಿದ್ದರೆ ಮಂಗಳೂರಿನ ಮಣ್ಣಿಗೆ ಬಂದು ಮಾತನಾಡಲಿ. ಇಲ್ಲಿನ ಜನಸ್ತೋಮ ಓವೈಸಿಗೆ ತಕ್ಕ ಉತ್ತರ ನೀಡಲಿದೆ ಎಂದರು.
‘ನಾನು ಸ್ವಾಮಿ ಪರಂಪರೆಯವಳು ಅಲ್ಲ. ಒಂದು ಕೆನ್ನೆಗೆ ಪೆಟ್ಟು ಕೊಟ್ಟರೆ, ಇನ್ನೊಂದು ಕೆನ್ನೆ ತೋರಿಸುವ ಕಾಲ ಇದಲ್ಲ. ಇಲ್ಲಿನ ನೀರು, ಆಹಾರ ಸೇವಿಸಿ ಪಾಕಿಸ್ತಾನಕ್ಕೆ ಜಿಂದಾಬಾದ್ ಹೇಳುವವರಿಗೆ ತಕ್ಕ ಪಾಠ ಕಲಿಸಿ’ ಎಂದು ಸಾಧ್ವಿ ಬಾಲಿಕಾ ಸರಸ್ವತಿ ಹೇಳಿದರು.
ಗೋವು ಮಾರಾಟ ಬೇಡ : ಹಿಂದುಗಳು ಗೋ ಮಾತೆಯನ್ನು ಮಾರಾಟ ಮಾಡುವುದರಿಂದ ಅವರು ಗೋವುಗಳನ್ನು ಕಡಿಯುತ್ತಾರೆ. ಗೋ ಹತ್ಯೆ ನಿಷೇಧ ಕಾನೂನ್ನು ಸರಕಾರ ಮಾಡುತ್ತಿಲ್ಲ. ಯಾಕೆಂದರೆ ಇದರಿಂದ ಸರಕಾರಕ್ಕೆ ಸಾಕಷ್ಟು ವರಮಾನ ಬರುತ್ತದೆ. ಹಣದ ಎದುರು ತಾಯಿ ಕಾಣುವುದಿಲ್ಲ. ಇದಕ್ಕಾಗಿ ಗೋವುಗಳನ್ನು ಮಾರುವ ಬದಲು ಸಾಕುವ ಮೂಲಕ ಗೋ ಹತ್ಯೆಯನ್ನು ತಡೆಯಲು ಹಿಂದುಗಳು ಪ್ರತಿಜ್ಞೆ ಮಾಡಬೇಕು ಎಂದರು.
ಭಾಷಣ ಆರಂಭಿಸಿದ ಸಾಧ್ವಿ, ಕನ್ನಡಲ್ಲೇ ‘ಎಲ್ಲರಿಗೂ ನನ್ನ ಸಮಸ್ಕಾರ’ ಎಂದಾಗ ಸಭೆಯಲ್ಲಿ ಕರತಾಡನ. ಕಾರ್ಯಕ್ರಮ ಆರಂಭವಾದಾಗ ಮಳೆ ಸಿಂಚನವಾದುದನ್ನು ಉಲ್ಲೇಖಿಸಿದ ಅವರು, ಇದು ಮಳೆ ನೀರಲ್ಲ. ಇದು ಭಗವಂತನ ಆಶೀರ್ವಾದ. ಹಿಂದು ಧರ್ಮದ ಘರ್ಜನೆ ಎಂದರು.
ವಿಶ್ವ ಹಿಂದೂ ಪರಿಷತ್ನ ಸುವರ್ಣ ಮಹೋತ್ಸವದ ಅಂಗವಾಗಿ ಮಂಗಳೂರಿನಲ್ಲಿ ರವಿವಾರ ನಡೆದ ಬೃಹತ್ ಹಿಂದೂ ಸಮಾಜೋತ್ಸವದ ಸಮಾವೇಶದಲ್ಲಿ ಸುಮಾರು 1 ಲಕ್ಷಕ್ಕಿಂತಲೂ ಅಧಿಕ ಮಂದಿ ಭಾಗವಹಿಸಿದ್ದರು.
ಮೊದಲಿಗೆ ವೇದಿಕೆ ಬಳಿ ಗೋಮಾತೆಗೆ ಪೂಜೆ ಸಲ್ಲಿಸುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಅಪರೂಪ ಹಾಗೂ ಸೋಜಿಗ ಎನ್ನುವಂತೆ ವರುಣದೇವ ಸಂತೃಪ್ತಗೊಂಡು ಒಂದಿಷ್ಟು ವರ್ಷಧಾರೆ ಸುರಿಸಿದ್ದು, ಎಲ್ಲರನ್ನೂ ಬೆರಗುಗೊಳಿಸಿತ್ತು.ಜೊತೆಗೆ ಎಲ್ಲರಿಗೂ ಬಿಸಿಲಿನ ಝಳದಿಂದ ಮುಕ್ತಗೊಳಿಸಿ ತಂಪೆರೆಯಿತು.
ಹಿಂದು ಧರ್ಮದ ಘನತೆ, ಗೌರವ ಕಾಪಾಡಿ :ಪೇಜಾವರ ಶ್ರೀ
ಸಮಾವೇಶದಲ್ಲಿ ಭಾಗವಹಿಸಿದ್ದ ಸಾಧು ಸಂತರು ಹಾಗೂ ವಿವಿಧ ಮಠಾಧೀಶರ ಪರವಾಗಿ ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಅವರು ಆಶೀರ್ವಚನ ನೀಡಿದರು.
ಸಮಾಜೋತ್ಸವದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಯುವಜನತೆ ಭಾಗವಹಿಸುತ್ತಿದ್ದು, ಚರ್ಚ್ ಸೇರಿದಂತೆ ಇತರರ ಪ್ರಾರ್ಥನಾ ಮಂದಿರಗಳಿಗೆ ಕಲ್ಲೆಸೆದು ಪುಂಡಾಟಿಕೆ ಮಾಡದೆ, ಹಿಂದು ಧರ್ಮದ ಘನತೆ, ಗೌರವ ಕಾಪಾಡಿ ಎಂದು ಸ್ವಾಮೀಜಿ ಹೇಳಿದರು.
ಸ್ವಧರ್ಮ ನಿಷ್ಠೆ, ಪರಧರ್ಮ ಸಹಿಷ್ಣುತೆಯೇ ಹಿಂದು ಧರ್ಮದ ತಿರುಳು. ನಾವು ಎಂದೂ ಕೋಮುವಾದಿಗಳಲ್ಲ, ಪ್ರೇಮವಾದಿಗಳು. ಸಂಕುಚಿರಾಗುವ ಬದಲು, ಸಂಘಟಿತರಾಗಿ ತಮ್ಮ ಶಕ್ತಿಯನ್ನು ದೀನ ದಲಿತರ ಸೇವೆಗಾಗಿ ಬಳಸಿಕೊಳ್ಳಿ ಎಂದು ಸ್ವಾಮೀಜಿ ಸಲಹೆ ಮಾಡಿದರು.
ಪಾಶ್ಚಾತ್ಯರಿಗಿಂತ, ಪಾಶ್ಚಾತ್ಯರಿಂದ ಪ್ರಭಾವಿತ ಬುದ್ಧಿಜೀವಿಗಳಿಂದ ಹಿಂದು ಧರ್ಮಕ್ಕೆ ಸಂಕಟ ಬಂದಿರುವುದು ಆಘಾತಕರ. ಅಂಥವರು ಭಗವದ್ಗೀತೆ ಸುಡಲು ಹೇಳುತ್ತಿರುವುದು ಖೇದಕರ. ಅವರನ್ನು ಸುಡಬೆಕಾಗಿಲ್ಲ, ಅವರ ಅಜ್ಞಾನವನ್ನು ಸುಡುವ ಕಾರ್ಯ ನಡೆಯಬೇಕು ಎಂದು ಅವರು ಹೇಳಿದರು.
ಭಗವದ್ಗೀತೆ ಸಮಾನತೆ ಸಾರಿದೆ. ಅದು ವೃತ್ತಿ ಆಧಾರದಲ್ಲಿ ಅಲ್ಲ, ಸ್ವಭಾವದ ಆಧಾರದಲ್ಲಿ ಚಾತುರ್ವಣ್ಯವನ್ನು ಹೇಳಿರುವುದು. ಎಲ್ಲ ವೃತ್ತಿಗಳೂ ಶ್ರೇಷ್ಠ, ಯಾವುದೂ ಕನಿಷ್ಠ ಅಲ್ಲ. ಭಗವದ್ಗೀತೆಯಲ್ಲಿ ಎಲ್ಲೂ ಅಸಮಾನತೆ ಸಂದೇಶ ಇಲ್ಲ. ಅದನ್ನು ತಾವು ಎಲ್ಲಿ ಕೂಡಾ ಸಮರ್ಥಿಸಲು ಸಿದ್ಧ. ಕುರಾನ್, ಬೈಬಲ್ ಬಗ್ಗೆ ಮಾತೆತ್ತದವರು ಗೀತೆ ಬಗ್ಗೆ ಮಾತ್ರ ಮಾತನಾಡುವುದು ಖೇದಕರ ಎಂದು ಸ್ವಾಮೀಜಿ ಹೇಳಿದರು.
ದೇಶದಲ್ಲಿ ಇಷ್ಟೊಂದು ಆಮಿಷ, ಬಲಾತ್ಕಾರದ ಮತಾಂತರ ನಡೆಯುತ್ತಿದ್ದರೂ ಸೊಲ್ಲೆತ್ತದವರು ಮರು ಮತಾಂತರ ಮಾಡುವ ಘರ್ ವಾಪಸಿ ಬಗ್ಗೆ ಯಾಕೆ ಗದ್ದಲ ಎಬ್ಬಿಸುತ್ತಾರೆ. ಮರುಮತಾಂತರ ನಡೆದವರಿಗೆ ಯಾವ ಸ್ಥಾನ ನೀಡುತ್ತೀರಿ ಎಂದು ಪ್ರಶ್ನಿಸುತ್ತಾರೆ. ನಮ್ಮಲ್ಲಿ ದಲಿತರು, ಸವರ್ಣೀಯರು, ಪಂಚಮರು ಎಂಬುದಿಲ್ಲ. ಅವರಿಗೂ ನಾವು ಸಮಾನ ಸ್ಥಾನ ನೀಡುತ್ತೇವೆ ಎಂದು ಸ್ವಾಮೀಜಿ ಘೋಷಿಸಿದರು.
ಸಮಾಜೋತ್ಸವ ದಿಕ್ಸೂಚಿ:
ಸಮಾವೇಶದ ಅಧ್ಯಕ್ಷತೆ ವಹಿಸಿದ್ದ ವಿ.ಹಿಂ.ಪ. ರಾಷ್ಟ್ರೀಯ ಸ್ವರ್ಣ ಜಯಂತಿ ಉತ್ಸವ ಸಮಿತಿ ಅಧ್ಯಕ್ಷ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ಮಾತನಾಡಿ, ಸಮಾಜೋತ್ಸವ ನಡೆಸುವುದು ಸಂಭ್ರಮಿಸಲಲ್ಲ. ಇದು ಮುಂದಿನ ಕಾರ್ಯಕ್ರಮಗಳಿಗೆ ದಿಕ್ಸೂಚಿ. ನಾವು ಅಶಕ್ತರು, ಪ್ರತೀಕಾರ ಮಾಡುವವರು ಎಂದು ಯೋಚಿಸುತ್ತಿದ್ದರೆ ಕೆಲಸ ಆಗುವುದಿಲ್ಲ. ನಾವು ದುರ್ಬಲರಲ್ಲಎಂದು ತೋರಿಸಲು ಸಮಾಜೋತ್ಸವ ಎಂದರು.
ಛಿದ್ರವಾಗಿದ್ದ ಭಾರತ, ಸ್ವಾತಂತ್ರ್ಯದ ಬಳಿಕ ಸಮಗ್ರ ಹಿಂದು ಧರ್ಮದ ಏಕತೆಯನ್ನು ಕಂಡಿದೆ. ಆದರೂ ಜಾತಿಗಳ ಮಧ್ಯೆ ಇದ್ದ ಕಂದಕವನ್ನು ವಿಶ್ವ ಹಿಂದು ಪರಿಷತ್ ತೊಡೆದು ಹಾಕಿದೆ. ಸಂತರ ಏಕತೆಯಿಂದ ಜನರ ಬಿನ್ನತೆ ಕಡಿಮೆಯಾಗಿದೆ. 50 ವರ್ಷದಲ್ಲಿ ಜನರಲ್ಲಿ ಆರ್ಥಿಕ, ಧಾರ್ಮಿಕ ಸಮಾನತೆ ಸಾಧ್ಯವಾಗಿದೆ. ಸಾಕಷ್ಟು ಬದಲಾವಣೆ ಆಗಿದೆ ಎಂದು ಅವರು ಹೇಳಿದರು.
ದೇವಸ್ಥಾನ, ದೈವಸ್ಥಾನಗಳ ಜೀರ್ಣೋದ್ಧಾರ, ಭೂತಗಳಿಗೂ ಶ್ರೇಷ್ಠತೆ ಬಂದಿರುವಾಗ ಮನುಷ್ಯನಿಗೂ ದೈವತ್ವ ಬರಬೇಕು. ಗ್ರಾಮಗಳಲ್ಲಿ ಸಂಸ್ಕಾರ ಬೆಳೆಸುವ ಕೆಲಸ ನಡೆಯಬೇಕು. ದುಶ್ಚಟಮುಕ್ತ ಸಮಾಜ ನಿರ್ಮಾಣ ಆದರೆ, ಸಮಾಜ ಸ್ಥಿತಿವಂತವಾಗುತ್ತದೆ. ಮದ್ಯವರ್ಜನ ಮೂಲಕ ಯುವಜನತೆ ಹೊಸ ಚಿಂತನೆ ಬೆಳೆಸಬೇಕು. ಸಂತರ, ಸಮಾಜದ ಸೇವೆ ಮಾಡಬೇಕು ಎಂದರು.
ಗೋ ರಕ್ಷಣೆ, ಗಂಗೆ ರಕ್ಷಣೆಯ ರಾಷ್ಟ್ರೀಯ ಕಲ್ಪನೆ ಬೆಳೆಯುತ್ತಿದೆ. ಇದನ್ನು ಮೊದಲು ನೀವು ಮಾಡಬೇಕು. ನಂತರ ಇತರರಿಗೆ ತಿಳಿಸಬೇಕು. ಉದ್ರೇಕಕಾರಿ ಭಾವನೆ ಅದುಮಿಡಬೇಕು. ಅಶಕ್ತರಂತೆ ದೈನ್ಯತೆ ಬಿಟ್ಟು, ಕಾಲ ಬಂದಾಗ ಶಕ್ತಿ, ತೇಜಸ್ಸು ತೋರಿಸಿ. ಹಿಂದು ನಾವೆಲ್ಲಾ ಒಂದು ಎಂದು ತೋರಿಸಿದ್ದು, ಆತ್ಮವಿಶ್ವಾಸ, ತೆಜಸ್ಸಿನಿಂದ ಪರಿವರ್ತನೆಗೆ ಸಜ್ಜಾಗಿ, ಆತ್ಮಶಕ್ತಿ ಸಾಕ್ಷಾತ್ಕಾರ ಆಗಲಿ, ಇನ್ನೊಬ್ಬರ ಮೇಲೆ ಪರಿಣಾಮ ಬೀರಲಿ. ಹಿಂದು ಸಮಾಜೋತ್ಸವ ನಡೆಯುವಾಗ ನಾಲ್ಕು ಸಾವಿರ ಪೊಲೀಸರನ್ನು ನೇಮಿಸುವ ಪರಿಸ್ಥಿತಿ ಬಾರದಿರಲಿ. ಹಿಂದುತ್ವದ ರಕ್ಷಣೆಯ ಕಾರ್ಯಕ್ಕೆ ಧರ್ಮಸ್ಥಳ ಕ್ಷೇತ್ರ ಸದಾ ಸಿದ್ಧ ಎಂದು ಹೇಳಿದರು.
ವಿಶ್ವ ಹಿಂದು ಪರಿಷತ್ ಸ್ವರ್ಣ ಜಯಂತಿ ಉತ್ಸವ ಸಮಿತಿ ಅಧ್ಯಕ್ಷ ವಿಜಯನಾಥ ವಿಠಲ ಶೆಟ್ಟಿ ಮಾತನಾಡಿ, ತಾನು ಹಿಂದುವಾಗಿ ಸಮಾಜೋತ್ಸವಕ್ಕೆ ಬಂದಿದ್ದು, ನನ್ನ ಧರ್ಮಕ್ಕೆ ಮೊದಲ ಗೌರವ. ಎಲ್ಲ ಅಡೆ ತಡೆ ದಾಟಿ ಇಲ್ಲಿಗೆ ಬಂದಿದ್ದೇನೆ. ಎಲ್ಲದರಲ್ಲೂ ದೇವರನ್ನು ಕಾಣುವುದು ಹಿಂದು ಧರ್ಮದ ವೈಶಿಷ್ಟ್ಯ. ಧರ್ಮ ರಕ್ಷಣೆಗಾಗಿ ಯಾರನ್ನೂ ಬಯ್ಯುವ ಅಗತ್ಯವಿಲ್ಲ ಎಂದರು.
ಕೊಲ್ಯ ಶ್ರೀ ರಾಜಯೋಗಿ ಶ್ರೀ ರಮಾನಂದ ಸ್ವಾಮೀಜಿ, ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ, ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಆದಿಚುಂಚನಗಿರಿ ಶ್ರೀ ಧರ್ಮಪಾಲನಾಥ ಸ್ವಾಮೀಜಿ, ಗುರುಪುರ ಶ್ರೀ ರಾಜಶೇಖರಾನಂದ ಸ್ವಾಮೀಜಿ, ಚಿಕ್ಕಮಗಳೂರು ಶ್ರೀ ನಿತ್ಯಾನಂದ ಸ್ವಾಮೀಜಿ, ಗುರುಪುರ ಜಂಗಮ ಮಠದ ಶ್ರೀ ಮಹಾರುದ್ರಮುನಿ ಸ್ವಾಮೀಜಿ, ಕೊಂಡೆವೂರು ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ, ಕನ್ಯಾಡಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ, ಮರಕಡದ ಶ್ರೀ ನರೇಂದ್ರನಾಥ ಯೋಗೀಶ್ವರೇಶ್ವರ ಸ್ವಾಮೀಜಿ, ಕದ್ರಿ ಜೋಗಿ ಮಠದ ಶ್ರೀ ಸಂಧ್ಯಾನಾಥಜೀ ಮಹಾರಾಜ್, ಬಲ್ಯೊಟ್ಟು ಶ್ರೀ ವಿಖ್ಯಾತಾನಂದ ಸ್ವಾಮೀಜಿ, ಕೆರಿಂಜೆ ಮಠದ ಶ್ರೀ ಮುಕ್ತಾನಂದ ಸ್ವಾಮೀಜಿ, ಪೊಳಲಿ ಶ್ರೀ ವಿವೇಕ ಚೈತನ್ಯ ಸ್ವಾಮೀಜಿ, ಬಾಳೆಕೋಡಿ ಶ್ರೀ ಶಶಿಕಾಂತ ಮಣಿ ಸ್ವಾಮೀಜಿ ಉಪಸ್ಥಿತರಿದ್ದರು.
ಸಮಿತಿ ಕಾರ್ಯಾಧ್ಯಕ್ಷ ಜಗದೀಪ್ ಡಿ. ಸುವರ್ಣ, ಜಿಲ್ಲಾಧ್ಯಕ್ಷ ಜಗದೀಶ್ ಶೇಣವ, ಬಜರಂಗ ದಳದ ಪ್ರಾಂತ ಸಂಯೋಜಕ ಶರಣ್ ಪಂಪ್ವೆಲ್,ಕೋಶಾಧಿಕಾರಿ ಮನೋಹರ್ ಸುವರ್ಣ, ವಿ.ಹಿಂ.ಪ. ಕಾರ್ಯದರ್ಶಿ ಗೋಪಾಲ್ ಕುತ್ತಾರ್, ಆರ್.ಎಸ್.ಎಸ್.ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್, ಮೆರವಣಿಗೆ ಸಮಿತಿಯ ಸಂಚಾಲಕ ರಾಜಗೋಪಾಲ ರೈ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿಹಿಂಪ ಪ್ರಾಂತ ಕಾರ್ಯಾಧ್ಯಕ್ಷ ಪ್ರೊ.ಎಂ.ಬಿ.ಪುರಾಣಿಕ್ ಪ್ರಾಸ್ತಾವಿಕ ಮಾತನಾಡಿದರು. ಸಂಘಟಕ ಹಾಗೂ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕೊಟ್ಟಾರಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಶಿವಾನಂದ ಮೆಂಡನ್ ವಂದಿಸಿದರು.
ಹಿಂದೂ ಸಮಾಜೋತ್ಸವ ಸಮಿತಿಯ ಗೌರವ ಅಧ್ಯಕ್ಷ ಎಸ್. ಗಣೇಶ್ ರಾವ್ ಸ್ವಾಗತಿಸಿ, ಪ್ರಸ್ತಾವನೆಗೈದರು. ಬಹು ಸಂಖ್ಯಾಕರಾದ ಹಿಂದೂಗಳನ್ನು ಎರಡನೇ ದರ್ಜೆ ಪ್ರಜೆಗಳಾಗಿ ಕಾಣಲಾಗುತ್ತಿದೆ ಎಂಬ ಭಾವನೆ ಕೆಲವು ಮಂದಿ ಯುವಜನರಲ್ಲಿದೆ. ವಿ.ಹಿಂ. ಪರಿಷತ್ನ 50 ವರ್ಷಗಳ ಸಾಧನೆಯ ಅವಲೋಕನ ಹಾಗೂ ಭವಿಷ್ಯದಲ್ಲಿ ಎದುರಾಗುವ ಸವಾಲು ಎದುರಿಸಲು ಸಿದ್ಧತೆ ನಡೆಸುವುದು ಮತ್ತು ಹಿಂದೂಗಳಲ್ಲಿ ಧೈರ್ಯ ತುಂಬುವುದು ಸಮಾಜೋತ್ಸವದ ಉದ್ದೇಶ. ಸಮಾಜೋತ್ಸವ ಶಕ್ತಿಯ ಪ್ರದರ್ಶನವಲ್ಲ; ದಬ್ಟಾಳಿಕೆ ಪ್ರಯತ್ನವಲ್ಲ. ಆಕ್ರಮಣ ಧೋರಣೆ ನಮಗಿಲ್ಲ. ಎಲ್ಲರೂ ಸಮಾನತೆಯಿಂದ, ಸಹಬಾಳ್ವೆಯಿಂದ, ಸ್ವಾಭಿಮಾನದಿಂದ ಬದುಕಬೇಕೆನ್ನುವುದು ನಮ್ಮ ಚಿಂತನೆ ಎಂದು ಗಣೇಶ್ ರಾವ್ ಈ ಸಂದರ್ಭದಲ್ಲಿ ಹೇಳಿದರು.
ಹಿಂದು ಸಮಾಜೋತ್ಸವದ ನಿರ್ಣಯಗಳು :
ಸಮಾಜೋತ್ಸವ ದಲ್ಲಿ ಪ್ರಮುಖ ಎರಡು ನಿರ್ಣಯಗಳನ್ನು ಸಂಘಟನಾ ಸಮಿತಿ ಉಪಾಧ್ಯಕ್ಷ ಜಗದೀಶ್ ಶೇಣವ ಮಂಡಿಸಿದರು. ನಿರ್ಣಯವನ್ನು ಮೂರು ಬಾರಿ ಕೈ ಎತ್ತಿ ‘ಓಂ’ ಎಂದು ಹೇಳುವ ಮೂಲಕ ಅಂಗೀಕರಿಸಲಾಯಿತು.
* ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯುವ ಜನಾಂಗವು ಮಾದಕ ದ್ರವ್ಯ ಜಾಲಕ್ಕೆ ಬಲಿ ಬಿದ್ದು ಆರೋಗ್ಯಕರ ಹಿಂದು ಚಿಂತನೆ ಹಾಗೂ ಜೀವನ ಪದ್ಧತಿಯಿಂದ ವಿಮುಖರಾಗಿ ದುರ್ಬಲರಾಗಿರುವುದನ್ನು ತಡೆಯಲು ಮಾದಕದ್ರವ್ಯ ನಿಷೇಧ ಕಾನೂನುನ್ನು ಸಂಪೂರ್ಣವಾಗಿ ಜಾರಿಗೊಳಿಸಿ ಜಿಲ್ಲೆಯನ್ನು ಮಾದಕದ್ರವ್ಯ ಮುಕ್ತ ಜಿಲ್ಲೆಯನ್ನಾಗಿಸಬೇಕು.
* ದೇಶಾದ್ಯಂತ ಹಿಂಸಾತ್ಮಕ ಗೋಸಾಗಾಟ, ಗೋಹತ್ಯೆಯನ್ನು ಹಾಗೂ ಮತಾಂತರವನ್ನು ನಿಷೇಧಿಸುವ ಪ್ರಬಲವಾದ ಕಾನೂನನ್ನು ಕೇಂದ್ರ ಸರಕಾರವು ತಕ್ಷಣ ಜಾರಿಗೆ ತರಬೇಕು .
ಹಿಂದೂ ಸಮಾಜೋತ್ಸವ ಪ್ರಯುಕ್ತ ಮಂಗಳೂರು ನಗರ ಮತ್ತು ಸುತ್ತಮುತ್ತಲ ಪ್ರದೇಶಗಳು ಕೇಸರಿ ತೋರಣ ಮತ್ತು ಭಗವಾಧ್ವಜಗಳಿಂದ ಶೃಂಗಾರಗೊಳಿಸಲಾಗಿತ್ತು.
ಆಕರ್ಷಕ ಶೋಭಾ ಯಾತ್ರೆ :
ಸಮಾಜೋತ್ಸವವದ ಅಂಗವಾಗಿ ಮಧ್ಯಾಹ್ನ 2 ಗಂಟೆಗೆ ನಗರದ ಅಂಬೇಡ್ಕರ್ (ಜ್ಯೋತಿ) ವೃತ್ತದಿಂದ ಕೇಂದ್ರ ಮೈದಾನಿಗೆ ಆಕರ್ಷಕ ಶೋಭಾ ಯಾತ್ರೆ ನಡೆಯಿತು. ಸ್ತಬ್ದ ಚಿತ್ರ ವಾಹನಗಳು, ಚೆಂಡೆ ವಾದನ, ಭಜನಾ ತಂಡಗಳು, ಸಾಂಸ್ಕೃತಿಕ ಮತ್ತು ರಾಷ್ಟ್ರ ಪ್ರೇಮವನ್ನು ಬಿಂಬಿಸುವ ವೇಷ ಭೂಷಣಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು. ವೇದಿಕೆಯಲ್ಲಿ ಮಧ್ಯಾಹ್ನ 3 ಗಂಟೆಗೆ ದೇಶ ಭಕ್ತಿ ಗೀತೆ ಹಾಗೂ 4 ಗಂಟೆಗೆ ಸಭಾ ಕಾರ್ಯಕ್ರಮ ಆರಂಭವಾಯಿತು.
ಪಾನಕ, ನೀರು, ಬನ್ ವ್ಯವಸ್ಥೆ
ಸಮಾಜೋತ್ಸವದಲ್ಲಿ ಭಾಗವಹಿಸುವ ಸಾರ್ವಜನಿಕರಿಗೆ ಶೋಭಾ ಯಾತ್ರೆಯಲ್ಲಿ ಮತ್ತು ಕೇಂದ್ರ ಮೈದಾನದಲ್ಲಿ ನೀರು, ಪಾನಕ ಮತ್ತು ಬನ್ ವಿತರಿಸಲಾಯಿತು. ಸಮಾಜೋತ್ಸವದ ಯಶಸ್ವಿಯಾಗಿ 3,000ಕ್ಕೂ ಮಿಕ್ಕಿ ಕಾರ್ಯಕರ್ತರು ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸಿದರು.
ದೀಪಾವಳಿ ಮಾದರಿ ಸಂಭ್ರಮ
ಸಮಾಜೋತ್ಸವದ ಅಂಗವಾಗಿ ಎಲ್ಲೆಡೆ ದೀಪಾವಳಿ ಆಚರಣೆ ಮಾದರಿಯ ಸಂಭ್ರಮದ ವಾತಾವರಣ ನಿರ್ಮಾಣವಾಗಿತ್ತು.
500 ಬಸ್ಸುಗಳು :
ಸಮಾಜೋತ್ಸವದಲ್ಲಿ ಭಾಗವಹಿಸುವ ಸಾರ್ವಜನಿಕರನ್ನು ಸಾಗಿಸಲು ಸಮಿತಿ ವತಿಯಿಂದ 500 ಬಸ್ಸುಗಳ ವ್ಯವಸ್ಥೆ ಮಾಡಲಾಗಿತ್ತು.
ಮಂಗಳೂರಿನಲ್ಲಿ ಅಘೋಷಿತ ಕರ್ಫ್ಯೂ !
ಅಂಗಡಿ ಮುಂಗಟ್ಟು, ಮಾಲ್, ಹೋಟೆಲ್ಗಳು, ಹಾಲು, ಮೆಡಿಕಲ್ ಶಾಪ್ಗಳೂ ಬಂದ್! ಬಸ್ ಸೇರಿದಂತೆ ಸಾರ್ವಜನಿಕ ವಾಹನಗಳೂ ಇಲ್ಲ. ಒಟ್ಟಿನಲ್ಲಿ ಅಘೋಷಿತ ಕರ್ಫ್ಯೂ!
ಇದು ಹಿಂದು ಸಮಾಜೋತ್ಸವ ಸಂದರ್ಭದಲ್ಲಿ ಮಂಗಳೂರು ನಗರ ಹಾಗೂ ಆಸುಪಾಸಿನಲ್ಲಿ ಭಾನುವಾರ ಕಂಡುಬಂದ ದೃಶ್ಯ. ಹೆಚ್ಚಿನವರು ಸ್ವಯಂಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿದ್ದರೆ, ಕೆಲವೆಡೆ ಪೊಲೀಸರ ಸೂಚನೆ ಮೇರೆಗೆ ಬಂದ್ ಮಾಡಲಾಗಿತ್ತು.
ಕರ್ಫ್ಯೂನಂತೆ ಅಂಗಡಿ ಮುಂಗಟ್ಟು, ಹೋಟೆಲ್, ಮೆಡಿಕಲ್ಗಳನ್ನು ಮುಚ್ಚಿದ್ದರಿಂದ ಸಾರ್ವಜನಿಕರು ಪರದಾಡುವಂತಾಗಿತ್ತು. ಜನರು ಮಧ್ಯಾಹ್ನ ಊಟಕ್ಕಾಗಿ ಹೋಟೆಲ್ಗಳನ್ನು ಹುಡುಕುವ ದೃಶ್ಯ ಕಂಡುಬಂತು. ನಗರದ ಹಲವೆಡೆ ಬ್ಯಾರಿಕೇಡ್ ಹಾಕಿ ರಸ್ತೆಗಳನ್ನೂ ಮುಚ್ಚಲಾಗಿತ್ತು.
ಭಾರಿ ಪೊಲೀಸ್ ಬಂದೋಬಸ್ತ್
ಹಿಂದು ಸಮಜೋತ್ಸವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಭಾನುವಾರ ಅಧಿಕಾರಿಗಳು ಸೇರಿದಂತೆ ಒಟ್ಟು ನಾಲ್ಕು ಸಾವಿರ ಮಂದಿ ಪೊಲೀಸರನ್ನು ನೇಮಿಸಲಾಗಿತ್ತು. ಮಂಗಳೂರು ನಗರದಲ್ಲೇ ಎರಡು ಸಾವಿರ ಪೊಲೀಸರನ್ನು ನಿಯೋಜಿಸಲಾಗಿತ್ತು.
14 ಕೆಎಸ್ಆರ್ಪಿ, ಆರ್ಎಎಫ್ ಪ್ಲಟೂನ್, 14 ಕಡೆ ಸೆಕ್ಟರ್ ಮ್ಯಾಜಿಸ್ಟ್ರೇಟ್ಗಳು ಹಾಗೂ ಅವರ ಸಹಾಯಕ್ಕಾಗಿ 100 ಮಂದಿ ಅಧಿಕಾರಿಗಳನ್ನು ನೇಮಿಸಿದ್ದು, ಎಲ್ಲೆಡೆ ಧಾರ್ಮಿಕ ಕೇಂದ್ರಗಳಿಗೆ ರಕ್ಷಣೆ ನೀಡಲಾಗಿತ್ತು. ಪ್ರಮುಖ ಸ್ಥಳಗಳಲ್ಲಿ 200 ವೀಡಿಯೊ ಕ್ಯಾಮೆರಾ, 360 ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿತ್ತು.
ಯಾವುದೇ ಘಟನೆ ಸಂಭವಿಸಿದರೆ ಅದನ್ನು ಎದುರಿಸಲು ಕಂಟ್ರೋಲ್ ರೂಂ ಸ್ಥಾಪನೆ, ಯಾವುದೇ ಫೋನ್ಗೆ ತಕ್ಷಣ ಸ್ಪಂದಿಸಲು ವ್ಯವಸ್ಥೆ ಮಾಡಿದ್ದು, ಕೆಲವೆಡೆ ರಸ್ತೆಗಳನ್ನು ಹಾಗೂ ಅಂಗಡಿಗಳನ್ನು ಮುಚ್ಚಿಸಿದ್ದೇವೆ. ಇದರಿಂದ ಜನರಿಗೆ ಅನಾನುಕೂಲ ಆಗಿದೆ. ಜನರು ಇಂಥದನ್ನು ನಗುಮುಖದಿಂದ ಸ್ವೀಕರಿಸಬೇಕು ಎಂದು ಪೊಲೀಸ್ ಆಯುಕ್ತ ಎಸ್.ಮುರುಗನ್ ಹೇಳಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂಥ ಕಾರ್ಯಕ್ರಮಗಳಿಗೆ ಅನುಮತಿ ನೀಡದೇ ಇರಲು ಸಾಧ್ಯವಿಲ್ಲ. ಆದರೂ ನಮ್ಮ ಕಡೆಯಿಂದ ಎಲ್ಲ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದೇವೆ. ಕೆಲವು ಅಕ್ಷೇಪಾರ್ಹ ಬ್ಯಾನರ್ಗಳಿದ್ದು, ಅದನ್ನು ತೆಗೆಸಿದ್ದೇವೆ, ಜತೆಗೆ ಸಂಘಟಕ ಗಮನಕ್ಕೆ ಅದನ್ನು ತಂದಿದ್ದೇವೆ ಎಂದು ಆಯುಕ್ತರು ಮಾಹಿತಿ ನೀಡಿದರು
























































































