ಕನ್ನಡ ವಾರ್ತೆಗಳು

ಅಕ್ಷರ ಸಂತ ಹರೇಕಳ ಹಾಜಬ್ಬರ ಆರೋಗ್ಯದಲ್ಲಿ ಏರುಪೇರು : ಅಬುಧಾಬಿ ಕಾರ್ಯಕ್ರಮಕ್ಕೆ ಗೈರು ಸಂಭವ

Pinterest LinkedIn Tumblr

Harekala_Hajabba_photo

ಮಂಗಳೂರು, ಫೆ.26: ಅಕ್ಷರ ಸಂತ ಹರೇಕಳ ಹಾಜಬ್ಬರ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿದ್ದು, ದೇರಳಕಟ್ಟೆಯ ಯೆನೆಪೊಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರವಿವಾರ ರಾತ್ರಿ ಪಾವೂರು ಸರಕಾರಿ ಪ್ರೌಢಶಾಲೆಯಲ್ಲಿ ನಡೆದ ಬ್ಯಾರಿ ಜಾನಪದ ಕ್ರೀಡೋತ್ಸವ-ಸಾಂಸ್ಕೃತಿಕ ಮೇಳದಲ್ಲಿ ಸನ್ಮಾನ ಸ್ವೀಕರಿಸಿ ಸಭಿಕರನ್ನು ಉದ್ದೇಶಿಸಿ ಲವಲವಿಕೆಯಿಂದ ಮಾತನಾಡಿದ್ದ ಹರೇಕಳ ಹಾಜಬ್ಬ, ಮಂಗಳವಾರ ಬೆಳಗ್ಗೆ ಅಸ್ವಸ್ಥರಾದರು. ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇದೀಗ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ.

ನಿಯಮಿತ ಆಹಾರ ಸೇವಿಸದ ಕಾರಣ ತೀವ್ರ ನಿಶ್ಶಕ್ತಿಯಿಂದ ಬಳಲುತ್ತಿರುವ ಹರೇಕಳ ಹಾಜಬ್ಬರು ಬುಧವಾರ ಆಸ್ಪತ್ರೆಗೆ ಭೇಟಿ ನೀಡಿದ ಮಾಧ್ಯಮ ಪ್ರತಿನಿಧಿಗಳ ಜೊತೆ ‘ಶಾಲೆ’ಯ ಬಗ್ಗೆಯೇ ಮಾತನಾಡಲು ಪ್ರಯತ್ನಿಸಿ ಎದೆಯುರಿಯಿಂದ ಮಾತನಾಡಲಾಗದೆ ಕಣ್ಣೀರಿಳಿಸಿದರು.

ಮೊದಲ ಬಾರಿಗೆ ವಿದೇಶಕ್ಕೆ:  ಮಂಗಳೂರಿನ ಬೀದಿ ಬೀದಿ ಅಲೆದಾಡಿ ಕಿತ್ತಳೆ ಹಣ್ಣು ಮಾರಾಟ ಮಾಡುತ್ತಲೇ ಶಿಕ್ಷಣದ ಬಗ್ಗೆ ಒಲವು ಬೆಳೆಸಿಕೊಂಡು ತನ್ನೂರಾದ ಹರೇಕಳದಲ್ಲಿ ಸರಕಾರಿ ಶಾಲೆ ತೆರೆದು ತಾಲೂಕು, ಜಿಲ್ಲೆ, ರಾಜ್ಯ, ರಾಷ್ಟ್ರದ ಗಮನ ಸೆಳೆದಿದ್ದ ಹಾಜಬ್ಬರನ್ನು ಅರಸಿಕೊಂಡು ಹಲವು ಪ್ರಶಸ್ತಿಗಳು ಬಂದಿತ್ತು. ಇದೀಗ ಮೊದಲ ಬಾರಿಗೆ ವಿದೇಶಕ್ಕೆ ತೆರಳುತ್ತಿದ್ದಾರೆ.

ಅಬುಧಾಬಿಯ ಬ್ಯಾರೀಸ್ ವೆಲ್ಫೇರ್ ಫೋರಂನ ದಶಮಾನೋತ್ಸವ ಕಾರ್ಯಕ್ರಮವು ಎ.17ರಂದು ಅಬುಧಾಬಿಯ ಇಂಡಿಯಾ ಸೋಶಿಯಲ್ ಸೆಂಟರ್‌ನಲ್ಲಿ ನಡೆಯಲಿದೆ. ಅದರಲ್ಲಿ ಅತಿಥಿಯಾಗಿ ಭಾಗವಹಿಸಲು ಹರೇಕಳ ಹಾಜಬ್ಬರಿಗೆ ಆಹ್ವಾನ ಬಂದಿದೆ. ಆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಹಾಜಬ್ಬ ತೀವ್ರ ಉತ್ಸುಕರಾಗಿದ್ದರೂ ಆರೋಗ್ಯ ಕೈ ಕೊಟ್ಟಿರುವುದರಿಂದ ಆತಂಕಿತರಾಗಿದ್ದಾರೆ.

Write A Comment