ಕನ್ನಡ ವಾರ್ತೆಗಳು

ವ್ಯಾಟ್ಸ ಆ್ಯಪ್ ಫೋಟೊ ವಿವಾದ: ವಿದ್ಯಾರ್ಥಿಗೆ ಹಲ್ಲೆ, ಪ್ರಾರ್ಥನ ಮಂದಿರಕ್ಕೆ ಕಲ್ಲು ತೂರಾಟ.

Pinterest LinkedIn Tumblr

wtsup_photo_litigation_3

ಮಂಗಳೂರು,ಫೆ.23: ಸಾಮಾಜಿಕ ಜಾಲ ತಾಣ ವ್ಯಾಟ್ಸ್ ಆ್ಯಪ್ ಮೂಲಕ ಶನಿವಾರ ಹರಿದಾಡಿದ ಚಿತ್ರವೊಂದಕ್ಕೆ ಸಂಬಂಧಿಸಿ ಕುಳಾಯಿಯಲ್ಲಿ ಪ್ರಾರ್ಥನಾ ಮಂದಿರವೊಂದಕ್ಕೆ ಕಿಡಿಗೇಡಿಗಳು ಶನಿವಾರ ರಾತ್ರಿ ಕಲ್ಲು ಬಿಸಾಡಿ ಗಾಜು ಪುಡಿಗೊಳಿಸಿದ್ದು, ಗಣೇಶಪುರ ಬಳಿ ಯುವಕರ ತಂಡವೊಂದು ಚಿತ್ರದಲ್ಲಿದ್ದ ವಿದ್ಯಾರ್ಥಿ ಮೊಹಮ್ಮದ್ ರಿಯಾಜ್ ಗೆ ಭಾನುವಾರ ಹಲ್ಲೆ ನಡೆಸಿದೆ.

ಭಾನುವಾರ ಬೆಳಗ್ಗೆ ಸುಮಾರು 11.30ರ ಸಮಯಕ್ಕೆ ಚಿತ್ರದಲ್ಲಿದ್ದ ವಿದ್ಯಾರ್ಥಿ, ಸುರತ್ಕಲ್ ನಿವಾಸಿ ಮೊಹಮ್ಮದ್ ರಿಯಾಜ್ ಎಂಬಾತನ್ನು ಆತನ ಕ್ಲಾಸ್‌ಮೇಟ್‌ಗಳಾದ ವಿನೀತ್ ಮತ್ತು ರಿತೇಶ್ ಆಗಮಿಸಿ ಕಾಟಿಪಳ್ಳ ಗಣೇಶ್‌ಪುರ ಎಂಬಲ್ಲಿನ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋದಾಗ ಕಾರಿನಲ್ಲಿ ಬಂದ ಅಪರಿಚಿತ ನಾಲ್ವರು ಹಾಗೂ ಸ್ಥಳದಲ್ಲಿ ಆಗಾಗಲೇ ಹಾಜರಿದ್ದ ಐದು ಮಂದಿಯ ತಂಡ ಥಳಿಸಿದೆ. ಬಳಿಕ ಕಾರಿನಲ್ಲಿ ಅಪಹರಿಸಿಕೊಂಡು ಹೋದ ತಂಡ ಸುಮಾರು 3.30ರ ಹೊತ್ತಿಗೆ ಸುರತ್ಕಲ್ ಮುಕ್ಕ ಬಳಿ ವಿದ್ಯಾರ್ಥಿಯನ್ನು ಬಿಟ್ಟು ಹೋಗಿದೆ. ಆತ ತನ್ನ ಮನೆಯವರಿಗೆ ಮೊಬೈಲ್ ಮೂಲಕ ಕರೆ ಮಾಡಿ ತಿಳಿಸಿದ್ದು, ತಕ್ಷಣ ಮುಕ್ಕದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಹೆಚ್ಚಿನ ಚಿಕಿತ್ಸೆಗಾಗಿ ವಿದ್ಯಾರ್ಥಿಯನ್ನು ನಗರದ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ.

wtsup_photo_litigation_1

ಕುಳಾಯಿ ಬಳಿಯ ಪ್ರಾರ್ಥನಾ ಮಂದಿರವೊಂದಕ್ಕೆ ಕೆಲವು ಕಿಡಿಗೇಡಿಗಳು ಶನಿವಾರ ರಾತ್ರಿ ಕಲ್ಲು ಬಿಸಾಡಿ ಗಾಜು ಪುಡಿಗೈದಿರುವ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ. ಇಲ್ಲಿನ ಕಾಲೇಜೊಂದರಲ್ಲಿ ವಿದ್ಯಾರ್ಥಿನಿಯರ ತೊಡೆಯಲ್ಲಿ ವಿದ್ಯಾರ್ಥಿಯೊಬ್ಬ ಮಲಗಿದ್ದ ದೃಶ್ಯ ವ್ಯಾಟ್ಸ ಆ್ಯಪ್ ನಲ್ಲಿ ಪ್ರಸಾರವಾಗಿರುವುದೇ ಇದಕ್ಕೆಲ್ಲ ಕಾರಣ ಎಂಬ ಶಂಕೆ ವ್ಯಕ್ತವಾಗಿದ್ದು, ಘಟನೆ ಬಳಿಕ ಸುರತ್ಕಲ್ ಪರಿಸರದಲ್ಲಿ ಬಿಗು ಪೊಲೀಸ್ ಬಂದೋಬಸ್ತ್ ಹಾಕಲಾಗಿದೆ.

wtsup_photo_litigation_2a

ಚಿತ್ರದಲ್ಲಿರುವ ಐದು ಮಂದಿ ಹುಡುಗಿಯರು ಮತ್ತು ಯುವಕ ಫೋಟೋ ತೆಗೆಯುತ್ತಿದ್ದ ಸಂದರ್ಭ ತಾನು ಪಕ್ಕದ ಬೆಂಚ್‌ನಲ್ಲಿ ಕುಳಿತಿದ್ದೆ. ಚಿತ್ರಕ್ಕೂ ತನಗೂ ಯಾವುದೇ ಸಂಬಂಧವಿಲ್ಲ ಎಂದು ವಿದ್ಯಾರ್ಥಿ ರಿಯಾಜ್ ತಿಳಿಸಿದ್ದಾನೆ. ವ್ಯಾಟ್ಸ ಆ್ಯಪ್ ಚಿತ್ರ ಪ್ರಸಾರವಾಗುತ್ತಿದ್ದಂತೆ ಪೊಲೀಸರು ಈ ವಿದ್ಯಾರ್ಥಿನಿಯರನ್ನು ಮತ್ತು ಅವರ ಹೆತ್ತವರನ್ನು ಶನಿವಾರ ರಾತ್ರಿ ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದಾರೆ.

ವ್ಯಾಟ್ಸ್ ಆ್ಯಪ್ ಮತ್ತು ಅಂತರ್ಜಾಲದ ಮೂಲಕ ಚಿತ್ರ ಹರಿದಾಡಿದ ಹಿನ್ನೆಲೆಯಲ್ಲಿ ಘರ್ಷಣೆ ನಡೆದಿರುವ ಹಿನ್ನೆಲೆಯಲ್ಲಿ ಚಿತ್ರಗಳು ಮೊಬೈಲ್‌ನಿಂದ ಮೊಬೈಲ್‌ಗೆ ಹರಿದಾಡುತ್ತಿರುವ ಕಾರಣ ಸೈಬರ್ ಕ್ರೈಮ್ ವಿಭಾಗದ ಪೊಲೀಸರು ಚಿತ್ರ ಶೇರ್ ಮಾಡುತ್ತಿರುವವರು ಮತ್ತು ಚಿತ್ರ ಇಟ್ಟುಕೊಂಡವರ ಮೇಲೆ ನಿಗಾವಹಿಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ವಿನೀತ್ ಎಂಬಾತ ಫೋಟೋ ಕ್ಲಿಕ್ಕಿಸಿದಾತ ಹಾಗೂ ರಿತೇಶ್ ಎಂಬಾತ ಕೂಡಾ ಚಿತ್ರದಲ್ಲಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಸೌಹಾರ್ದತೆ ರಕ್ಷಿಸಿ: ಈ ಪೈಕಿ ಓರ್ವ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ದಶ್ಯ ಭಾನುವಾರ ಮತ್ತೆ ಇದೇ ವಾಟ್ಸಪ್ ನಲ್ಲಿ ಪ್ರಸಾರವಾಗಿದ್ದು ಇದು ಸತ್ಯಕ್ಕೆ ದೂರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಮುಕ್ಕದಲ್ಲಿ ಭಾನುವಾರ ಸಂಜೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಶಾಸಕ ಮೊದೀನ್ ಬಾವಾ, ಸುಳ್ಳು ವದಂತಿಗಳಿಗೆ ಕಿವಿ ಕೊಡಬಾರದು  ಯಾವುದೇ ಸಂದರ್ಭ ಸೌರ್ಹಾದತೆ ಕಾಯ್ದುಕೊಳ್ಳಬೇಕು ಎಂದು ವಿನಂತಿಸಿದರು.

Write A Comment