ಕನ್ನಡ ವಾರ್ತೆಗಳು

ಕಥೆ: ದಾಳಿ

Pinterest LinkedIn Tumblr

dali

-ಡಾ. ಮಿರ್ಜಾ ಬಷೀರ್

ಸಕೀನಾಬಿ ಸುಂದರಿಯರಲ್ಲಿ ಸುಂದರಿ. ವಿಶ್ವಸುಂದರಿ, ಭುವನ ಸುಂದರಿ ಸ್ಪರ್ಧೆಯ ತೀರ್ಪುಗಾರರು ಸಕೀನಾಳನ್ನು ನೋಡಿದರೆ ನಾಚಿಕೊಳ್ಳುವ ಹಾಗಿದ್ದಾಳೆ. ಅಂಥ ಚೆಲುವೆ ಸಾಗ್ಗೆರೆ ಗ್ರಾಮದ ಸಾಹುಕಾರ ಉಸ್ಮಾನ್ ಸಾಹೇಬರ ಮನೆಯ ಹಿತ್ತಲಲ್ಲಿ ರಾಶಿ ರಾಶಿ ಮುಸುರೆ ಪಾತ್ರೆಗಳನ್ನು ತೊಳೆಯುತ್ತ ಕುಳಿತಿದ್ದಾಳೆ.

ಈಗಷ್ಟೇ ಒಂದು ಬೆಟ್ಟದಷ್ಟು ಬಟ್ಟೆಗಳನ್ನು ಒಗೆದು ಒಣಹಾಕಿದ್ದಾಳೆ. ಇದಾದ ಮೇಲೆ ಸಾಹುಕಾರರ ವಿಶಾಲವಾದ ಮನೆ ಗುಡಿಸಬೇಕು, ಸಾರಿಸಬೇಕು, ಬಾವಿಯಿಂದ ನೀರು ಸೇದಿ ತರಬೇಕು. ಇದರ ಮಧ್ಯೆ ಅಡಿಗೆಮನೆ ಊಟದ ಮನೆಯಿಂದ ಕರೆ ಬರಬಹುದು. ಮನೆ ಮಂದಿಯ ಹಾಗೂ ಅತಿಥಿಗಳ ಸತ್ಕಾರದಲ್ಲಿ ಹೆಚ್ಚು ಕಡಿಮೆಯಾಗದಂತೆ ಸರಿದೂಗಿಸಬೇಕು. ದಿನವಿಡೀ ಅವಳು ಉಸ್ಮಾನ ಸಾಹೇಬರ ಮನೆ ಬಿಟ್ಟು ಕದಲುವುದಿಲ್ಲ.

ಅವಳ ಒಬ್ಬಳೇ ಮಗಳು ನಾಲ್ಕು ವರ್ಷದ ರಜಿಯ, ಇಡೀ ದಿನ ತನ್ನಮ್ಮನ ಹಿಂದೆ ಮುಂದೆ ಓಡಾಡುತ್ತಾ ಕಾಲ ಕಳೆಯತ್ತಾಳೆ. ನಿದ್ದೆ ಬಂದರೆ ತಾಯಿಗೆ ಕಿರಿಕಿರಿ ಆಗದಂತೆ ಮನೆಯ ಯಾವುದಾದರೊಂದು ಮೂಲೆಯಲ್ಲಿ ನೆಲದ ಮೇಲೆ ಮಲಗಿ ನಿದ್ರಿಸುತ್ತಾಳೆ. ಕೆಲಸಗಳ ನಡುವೆಯೇ ಒಂದರೆಗಳಿಗೆ ಬಿಡುವು ಮಾಡಿಕೊಂಡು ಸಕೀನ ಮಗಳ ಆರೈಕೆ ಮಾಡುತ್ತಾಳೆ. ಆ ಪುಟ್ಟ ಮಗುವಿಗೂ ತಾವು ಜವಾನರೆಂದು ತಿಳಿದಿದೆ.

ತಗ್ಗಿ ಬಗ್ಗಿ ನಡೆಯುವುದನ್ನು ಅದು ಈಗಾಗಲೇ ಕಲಿತಿದೆ. ಹಸಿದರೆ ಏನನ್ನೂ ಕೇಳುವುದಿಲ್ಲ, ಎಡವಿ ಬಿದ್ದರೆ ಅಳುವುದಿಲ್ಲ. ಅಳು ಬಂದರೆ ಬಿಗಿ ಹಿಡಿಯುತ್ತದೆ. ಉಸಿರು ಬಿಡುವುದಿಲ್ಲ. ಇದನ್ನು ಕಂಡರೆ ತಾಯಿಗೆ ಕರುಳಲ್ಲಿ ಕತ್ತರಿ ಆಡಿಸಿದಂತಾಗುತ್ತದೆ. ದುಃಖ ಒತ್ತರಿಸಿ ಬರುತ್ತದೆ. ಸದ್ದಿಲ್ಲದೆ ಬಿಕ್ಕುತ್ತಾಳೆ. ತಾಯಿ ಮಗುವಿಗೆ ಗಟ್ಟಿಯಾಗಿ ಅಳಲೂ ಸ್ವಾತಂತ್ರ್ಯವಿಲ್ಲ. ತಾಯಿ ಮಗಳ ಕಣ್ಣೀರು ಸದ್ದಿಲ್ಲದೆ ನೆಲಕ್ಕೆ ಉರುಳಿ ಬೀಳುತ್ತವೆ.

ಗಂಡನನ್ನು ಎಂದೋ ಕಳೆದುಕೊಂಡಿರುವ ಕುಟುಕು ಜೀವದ ಖಾತೂನ್‌ಬಿ ಹೈದರ್‌ನ ತಾಯಿ ಮತ್ತು ಸಕೀನಾಳ ಅತ್ತೆ. ಅವಳೂ ಉಸ್ಮಾನ್ ಸಾಹೇಬರ ಮನೆಯಲ್ಲಿ ದುಡಿದು ಶಕ್ತಿಯೆಲ್ಲ ಇಂಗಿಹೋದಮೇಲೆ ಮೂಲೆ ಸೇರಿದ್ದಾಳೆ. ದಿನವಿಡೀ ದುಡಿದು ಹಣ್ಣಾಗಿ ರಾತ್ರಿ ನಿದ್ದೆ ಎಳೆಯುತ್ತಿರುವಾಗ ಸಕೀನಾ ತಮ್ಮ ಗುಡಿಸಲು ಮನೆಯಲ್ಲಿ ಅತ್ತೆ ಖಾತೂನಳನ್ನು ಈ ದುಡಿತಕ್ಕೆ ಬಡತನಕ್ಕೆ ಕೊನೆ ಎಂಬುದಿಲ್ಲವೇ ಎಂದು ಪ್ರಶ್ನಿಸುತ್ತಾಳೆ.

ಚಿಮಣಿ ಬುಡ್ಡಿಯ ಮಬ್ಬು ಬೆಳಕಿನಲ್ಲಿ ಸಾಯವಂತಿರುವ ಖಾತೂನಬಿ ‘ಕೈಯ್ಯಲ್ಲಾಗದಾಗ ದುಡಿತಕ್ಕೆ ಕೊನೆ ಇದೆ ಮಗಳೆ, ಬಡತನಕ್ಕೆ ಕೊನೆ ಇಲ್ಲ. ಅದು ವೃದ್ಧಾಪ್ಯದಲ್ಲಿ ದ್ವಿಗುಣಗೊಳ್ಳುತ್ತದೆ’ ಎಂದು ಉತ್ತರಿಸಿ ಸಕೀನಾಳ ಯೌವನದ ದೇಹವನ್ನು ಗಮನಿಸಿ ನಿಟ್ಟಿಸಿರು ಬಿಡುತ್ತಾಳೆ, ನಮ್ಮಂತಹವರಿಗೆ ಸಿರಿ ಕೊಡದೆ ಹೋದರೂ ದೇಹಸಿರಿ ಕೊಡದಿರು ದೇವರೆ ಎಂದು ಮನಸ್ಸಿನಲ್ಲಿಯೇ ದುವಾ ಮಾಡುತ್ತಾಳೆ.

ಸ್ವಂತ ತಮ್ಮನ ಮಗಳನ್ನು ಸೊಸೆಯಾಗಿ ತಂದುಕೊಂಡಿದ್ದ ಖಾತೂನ್‌ಬಿ ಸಕೀನಾಗೆ ‘ಹುಶಾರು ಮಗಳೇ, ಉಸ್ಮಾನ್ ಒಳ್ಳೆಯವನಲ್ಲ’ ಎಂದು ಎರಡು ವಾಕ್ಯಗಳನ್ನು ಉಸುರುವಷ್ಟರಲ್ಲಿ ಏದುಸಿರು ಶುರುವಾಗುತ್ತದೆ. ಅವಳ ಕಣ್ಣಂಚಿನಲ್ಲಿ ಸಾಹುಕಾರರ ಮನೆಯಲ್ಲಿ ಜೀವ ತೇಯ್ದ ಎಷ್ಟೋ ಜನ ಆಳುಕಾಳುಗಳು ಹಾದು ಹೋಗುತ್ತಾರೆ.

ಖಾತೂನಳ ಮಾತುಕೇಳಿ ಸಕೀನಾಗೆ ನಿದ್ದೆ ಎಗರಿಹೋಯಿತು. ಅಡುಗೆಕೋಣೆ, ಊಟದಕೋಣೆ ಎಲ್ಲಿ ಇದ್ದರಲ್ಲಿಗೆ ಹಿಂಬಾಲಿಸಿಕೊಂಡು ಬರುವ, ಮುಸುರೆ ತೊಳೆಯುವಲ್ಲಿ, ಬಟ್ಟೆ ಒಗೆಯುವಲ್ಲಿ, ಕಸ ಗುಡಿಸುವಲ್ಲಿ ಠಳಾಯಿಸುವ ಉಸ್ಮಾನನದು ಅತ್ಯಂತ ಕೊಳಕು ಮನಸ್ಸು ಎಂಬುದು ಸಕೀನಾಳಿಗೆ ಚೆನ್ನಾಗಿ ಗೊತ್ತು. ಯಾವ ಗಂಡಸು ತನ್ನ ದೇಹದ ಯಾವ ಭಾಗವನ್ನು ಯಾವ ಭಾವದಿಂದ ನೋಡುತ್ತಿದ್ದಾನೆನ್ನುವುದು ಸಕೀನಾಳು ಕಣ್ಣು ಮುಚ್ಚಿಕೊಂಡು ಹೇಳಬಲ್ಲವಳಾಗಿದ್ದಳು.

ಉಸ್ಮಾನ್ ಸಾಹೇಬನ ಒರಟು ವ್ಯಕ್ತಿತ್ವ, ಭಂಡ ಧೈರ್ಯ, ಎಲ್ಲವನ್ನೂ ತಿಂದು ತೇಗುವ ಸ್ವಾರ್ಥವನ್ನು ಬಲ್ಲ ಸಕೀನ ಅವನ ಬಗ್ಗೆ ಮೊದಲಿಂದಲೂ ಎಚ್ಚರ ವಹಿಸಿದವಳೇ. ಅವನ ಸಾನ್ನಿಧ್ಯವೇ ಅವಳಿಗೆ ವಾಕರಿಕೆ ತರುತ್ತಿತ್ತು. ಆದರೆ ಕೆಟ್ಟ ಬಡತನ ಅವಳನ್ನು ಅವನ ಮನೆಯ ಕೂಲಿಗೆ ತಳ್ಳಿತ್ತು. ಮೊದಮೊದಲು ಸಾಹುಕಾರರ ಮನೆಯಲ್ಲಿ ಸಕೀನಾಳ ಜೊತೆಗೆ ಅತ್ತೆ ಖಾತೂನ್‌ಬಿ ಇರುತ್ತಿದ್ದಳು. ಅಲ್ಲಿಯವರೆಗೆ ಉಸ್ಮಾನ್ ಹತ್ತಿರ ಸುಳಿಯುತ್ತಿರಲಿಲ್ಲ.

ಆದರೆ ಅತ್ತೆ ಮೂಲೆ ಸೇರಿದ ಮೇಲೆ ಉಸ್ಮಾನ್‌ನ ಹಾವಳಿ ಶುರುವಾಯಿತು. ಸಕೀನಾ ಆದಷ್ಟೂ ಅನಾಕರ್ಷಕವಾಗಿ ಕಾಣಲು ಪ್ರಯತ್ನಿಸುತ್ತಿದ್ದಳು, ಮಾಸಿದ ಬಟ್ಟೆಗಳಲ್ಲಿರುತ್ತಿದ್ದಳು. ನಕ್ಕರೆ ತಿದಿ ಒತ್ತಿದ ಕೆಂಡದಂತೆ ಸೌಂದರ್ಯ ಪ್ರಜ್ವಲಿಸುತ್ತದೆಂದು ಸಾಹುಕಾರರ ಮನೆಯಲ್ಲಿ ನಗುವುದನ್ನು ಬಿಟ್ಟಿದ್ದಳು. ನಿಗಿನಿಗಿ ಕೆಂಡವನ್ನು ಕತ್ತಲಲ್ಲಿಟ್ಟರೆ ಮತ್ತಷ್ಟು ಪ್ರಕಾಶಮಾನವಾಗಿ ಕಾಣುವುದಿಲ್ಲವೇ? ಅವಳ ಮುಖ ಕತ್ತು ತೋಳುಗಳಿಂದ ಜೀವ ಉಕ್ಕುತ್ತಿತ್ತು.

ಅವಳ ಚರ್ಮದ ಹೊಳಪು ಎಂಥವರನ್ನೂ ಬಿಡದೆ ಕಾಡುತ್ತಿತ್ತು. ಅವಳು ರಸ್ತೆಯಲ್ಲಿ ಓಡಾಡುತ್ತಿದ್ದರೆ ಮಾತಾಡುತ್ತಿದ್ದ ಗಂಡಸರು ತೊದಲತೊಡಗುತ್ತಿದ್ದರು. ಮಾತುಗಳು ಅಪೂರ್ಣವಾಗಿಯೂ ಅಸಂಬದ್ಧವಾಗಿಯೂ ಕೊನೆಗೊಳ್ಳುತ್ತಿದ್ದವು. ಜನರ ಹಾವಭಾವಗಳೇ ಬದಲಾಗುತ್ತಿದ್ದವು. ದಿನವೂ ಗಂಡಸರ ಕೆಟ್ಟನೋಟ, ಕುಹಕ, ಪೋಲಿ–ಪೂಸಿ ಮಾತುಗಳಿಂದ ರೇಜಿಗೆಯಾಗುತ್ತಿತ್ತು. ಅವಳ ಸೌಂದರ್ಯವೇ ಅವಳಿಗೆ ಶಾಪವಾಗಿತ್ತು.

ಸಕೀನಾಳ ಗಂಡ ಹೈದರ್ ನಿಧಾನಸ್ಥ ಮತ್ತು ಮಂದಮತಿಯಾದ್ದರಿಂದ ಅವನು ಬುದ್ಧು ಎಂತಲೂ ಪ್ರಸಿದ್ಧಿಯಾಗಿದ್ದನು. ಅವನು ಸಂಪೂರ್ಣ ಅನಕ್ಷರಸ್ಥನಾಗಿದ್ದನು. ಅವನಿಗೆ ಜಗತ್ತಿನಲ್ಲಿಯ ಸಕಲ ಚರಾಚರ ವಸ್ತುಗಳು ಕವಿಗೆ ಕಂಡಂತೆ ಅದ್ಭುತವಾಗಿ ಕಾಣುತ್ತಿದ್ದವು. ಅವನಲ್ಲಿ ಮುಗ್ಧತೆ ಮತ್ತು ಶಿಶುಸಹಜ ಕುತೂಹಲಗಳು ಮನೆಮಾಡಿದ್ದವು. ಅವನಿಗೆ ಸ್ವಂತ ನಿರ್ಧಾರ ಎಂಬುದೇ ಇರಲಿಲ್ಲವಾದ್ದರಿಂದ ತನ್ನ ಸುತ್ತ ಇರುವವರು ಏನೇ ಹೇಳಲಿ ಅದರಂತೆ ನಡೆದುಕೊಳ್ಳುತ್ತಿದ್ದನು.

ಸಣ್ಣ ವಿಷಯಗಳಿಗೂ ಹೆದರುತ್ತಿದ್ದ ಅವನು ಉಸ್ಮಾನ್ ಸಾಹೇಬರ ಮನೆ ಕಡೆ ಬಹಳ ಅನಿವಾರ್ಯತೆಯಿದ್ದಾಗ ಮಾತ್ರ ಹೋಗುತ್ತಿದ್ದ. ಒಂದು ಕಾಲಕ್ಕೆ ಅವನೂ ಉಸ್ಮಾನ್ ಸಾಹೇಬರ ಮನೆಯಲ್ಲಿ ಕೆಲಸಕ್ಕಿದ್ದವನೇ. ಸಾಹುಕಾರರು ಇವನನ್ನು ಹೊಲ, ತೋಟದ ಕೆಲಸಕ್ಕೆ ಹಚ್ಚಿ ಎಷ್ಟು ಒರಟಾಗಿ ಮತ್ತು ಕ್ರೂರವಾಗಿ ನಡೆಸಿಕೊಂಡರೆಂದರೆ ಸ್ವಲ್ಪ ದಿನದಲ್ಲಿಯೇ ಅವರ ಮನೆಗೆ ಹೋಗುವುದನ್ನು ನಿಲ್ಲಿಸಿ ಬೇರೆ ಕಡೆ ಕೆಲಸಕ್ಕೆ ಹೋಗತೊಡಗಿದನು.

ಸದ್ಯಕ್ಕೆ ಹೈದರ್ ತನ್ನ ಊರಾದ ಸಾಗ್ಗೆರೆಗೆ ಹತ್ತಿರದ ದೊಡ್ಡ ಊರಾದ ಸಂಪಿಗೆಯ ಹಯಾತ್ ಸಾಹೇಬರ ಮಟನ್ ಸ್ಟಾಲ್‌ನಲ್ಲಿ ಕೆಲಸಕ್ಕೆ ಸೇರಿ ಹಲವಾರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾನೆ. ಬೆಳಿಗ್ಗೆ ಐದು ಗಂಟೆಗೆಲ್ಲಾ ಎದ್ದು ಕುರಿ ಮೇಕೆಗಳನ್ನು ಬಿಗಿ ಹಿಡಿದುಕೊಂಡು ಮುಲ್ಲಾ ಸಾಹೇಬರು ಹಲಾಲು ಮಾಡಲು ಸಹಕರಿಸುತ್ತಿದ್ದ.

ನಂತರ ಕುರಿ ಅಥವಾ ಮೇಕೆಯ ದೇಹವನ್ನು ಎತ್ತರದ ಕೊಕ್ಕೆಗೆ ಸಿಕ್ಕಿಸಿ ಏಕಾಗ್ರತೆಯಿಂದ ಚರ್ಮ ಪ್ರತ್ಯೇಕಿಸಿ, ಹೊಟ್ಟೆಯೊಳಗಿನ ಕಳ್ಳುಪಚ್ಚಿಗಳನ್ನು ತೆಗೆದು ತೊಳೆದು ಬೇರೆ ಕಡೆ ಹಾಕಿ, ಮಾರಾಟ ಮಾಡಲು ಸಿದ್ಧವಿದ್ದ ಮಾಂಸವನ್ನು ಗಿರಾಕಿಗಳ ಬಾಯಲ್ಲಿ ನೀರೂರುವಂತೆ ಹೊಗಳುತ್ತಿದ್ದ. ಗಿರಾಕಿ ಬಂದರೆ ತಲೆಕಾಲುಗಳನ್ನು ಸುಟ್ಟು ಸಂಸ್ಕರಿಸಿ ವಿಲೆ ಮಾಡುತ್ತಿದ್ದ. ಅವನಿಗೆ ದುಡ್ಡು ಕಾಸಿನ ಲೆಕ್ಕ ಸಿಗುವುದಿಲ್ಲವಾದ್ದರಿಂದ ವ್ಯಾಪಾರದ ತಂಟೆಗೆ ಹೋಗುವುದಿಲ್ಲ.

ಅದನ್ನೆಲ್ಲ ಹಯಾತ್ ಸಾಹೇಬರು ಅಥವಾ ಅವರ ಮಕ್ಕಳು ನೋಡಿಕೊಳ್ಳುತ್ತಾರೆ. ಹಯಾತ್ ಸಾಹೇಬರ ಪ್ರಕಾರ ಹೈದರ್ ಇದುವರೆಗೆ ಒಂದು ಸುಳ್ಳು ಹೇಳಿಲ್ಲ ಮತ್ತು ಮೋಸ ತಟವಟಗಳು ಅವನಿಗೆ ಗೊತ್ತೇ ಇಲ್ಲ. ತಾನು ಮಾಡುವ ಕೆಲಸದಲ್ಲಿ ಹೈದರನಿಗೆ ಎಷ್ಟು ಜವಾಬ್ದಾರಿ ಕಾಳಜಿ ಎಂದರೆ ಅವನು ರಾತ್ರಿ ತನ್ನ ಮನೆಗೆ ಹೋಗುವುದಿಲ್ಲ. ಮಟನ್ ಸ್ಟಾಲ್‌ನಲ್ಲಿಯೇ ಮಲಗಿ ಬೆಳಗಿನ ಜಾವಕ್ಕೆ ಎದ್ದು ಕೆಲಸ ಪ್ರಾರಂಭಿಸುತ್ತಿದ್ದ.

ಸೋಮವಾರ ಸ್ಟಾಲ್‌ಗೆ ರಜೆ ಇರುವುದರಿಂದ ಭಾನುವಾರ ಸಾಯಂಕಾಲ ತನ್ನ ಮನೆಗೆ ಹೋಗಿ ಮಂಗಳವಾರ ಬೆಳಗಿನ ಜಾವಕ್ಕೆ ಬಂದು ಮಟನ್ ಸ್ಟಾಲ್‌ನಲ್ಲಿ ಕೆಲಸಕ್ಕೆ ಹಾಜರಾಗುತ್ತಿದ್ದ.
ಸಕೀನಾಳಿಗೆ ಒಬ್ಬ ಪೆಕರನಂಥ ಗಂಡ ಇದ್ದದ್ದು ಮತ್ತು ರಾತ್ರಿಗಳಲ್ಲಿ ಮನೆಯಲ್ಲಿ ಅವನ ಗೈರು ಹಾಜರಿಯು ಉಸ್ಮಾನ್ ಸಾಹೇಬ್ ಮತ್ತು ಗ್ರಾಮ ಪಂಚಾಯ್ತಿ ಅಧ್ಯಕ್ಷ ತೇಜಪ್ಪನಂಥವರ ಗಂಡಸುತನಕ್ಕೆ ಹಾಕಿದ ಸವಾಲಿನಂತಿತ್ತು.

ಬಹಿರಂಗಕ್ಕೆ ತಾನಾಯಿತು ತನ್ನ ಮಟನ್ ಸ್ಟಾಲ್‌ಯಾಯಿತು ಎಂಬಂತಿದ್ದ ಹೈದರ್ ಅಂತರಂಗದಲ್ಲಿ ತನ್ನ ಕುಟುಂಬ ಮತ್ತದರ ಯೋಗಕ್ಷೇಮವನ್ನು ತುಂಬಿಕೊಂಡಿದ್ದ. ತನ್ನಮ್ಮನಿಗೆ ಹುಷಾರಿಲ್ಲದಿರುವುದರಿಂದ ಇನ್ನು ಮುಂದೆ ಪ್ರತಿ ದಿನವೂ ರಾತ್ರಿ ಮನೆಗೆ ಬಂದು ಮಲಗಬೇಕೆಂದು ನಿಶ್ಚಯಿಸಿದ್ದ. ತಾನು ದುಡಿದ ಅಲ್ಪಸ್ವಲ್ಪ ದುಡ್ಡನ್ನು ನಿಯತ್ತಾಗಿ ಸಕೀನಾಳಿಗೆ ತಂದೊಪ್ಪಿಸುತ್ತಿದ್ದ. ಸಕೀನಾಳನ್ನು ಸೇರಿದ ದುಡ್ಡು ಪೋಲಾಗದೆ ಸುರಕ್ಷಿತವಾಗಿರುತ್ತಿತ್ತು.

ಹೈದರ್ ಮತ್ತು ಸಕೀನ ಹೇಳಿ ಮಾಡಿಸಿದಂತಹ ದಂಪತಿಗಳಾಗಿದ್ದರು. ಹೈದರನು ಸಕೀನಾಳ ಒಳಹೊರ ವ್ಯಕ್ತಿತ್ವದ ಅಭಿಮಾನಿಯಾದರೆ ಸಕೀನಾಳು ಹೈದರ್‌ನ ಮುಗ್ಧತೆ ಮತ್ತು ಒಳ್ಳೆಯತನದ ಆರಾಧಕಳಾಗಿದ್ದಳು. ಒಬ್ಬರಿಗೊಬ್ಬರು ಎಷ್ಟು ಪ್ರೀತಿ ಮತ್ತು ಆಪ್ತತೆಯಿಂದ ಇದ್ದರೆಂದರೆ ಒಬ್ಬರ ಅಂತರಂಗ ಇನ್ನೊಬ್ಬರಿಗೆ ಕಾಣುವಂತೆ ಪಾರದರ್ಶಕವಾಗಿದ್ದರು. ಒಬ್ಬರ ಸಂತೋಷ ಇನ್ನೊಬ್ಬರ ಸಂತೋಷವಾಗಿಯೂ ಒಬ್ಬರ ದುಃಖ ಇನ್ನೊಬ್ಬರ ದುಃಖವಾಗಿಯೂ ಒಂದು ಆತ್ಮ ಎರಡು ದೇಹದಂತೆ ಅವರು ಮಾಗಿಬಿಟ್ಟಿದ್ದರು.

ಸಾಹುಕಾರ್ ಉಸ್ಮಾನ್ ಸಾಬ್ ಮತ್ತು ಅವನ ಮೂರ್ನಾಲ್ಕು ಜನ ಸ್ನೇಹಿತರು ಸಕೀನಾಳ ಸ್ನೇಹ ಬೆಳೆಸಲು ಅನೇಕ ಹುನ್ನಾರಗಳನ್ನು ಹಾಕುತ್ತಿದ್ದರು. ಇವರಲ್ಲಿ ಪಂಚಾಯ್ತಿ ಅಧ್ಯಕ್ಷ ತೇಜಪ್ಪನದು ಎತ್ತಿದ ಕೈ. ಅನೇಕ ಗಂಡುಳ್ಳ ಗರತಿಯರನ್ನು ವಿವಿಧ ಪ್ರಲೋಭನೆಗಳ ಬಲೆ ಬೀಸಿ ಕೆಡವಿಕೊಂಡಿದ್ದ. ಅಂಥ ಕೆಲವು ಹೆಣ್ಣು ಮಕ್ಕಳ ಗಂಡಂದಿರು ಮರ್ಯಾದೆಗೆ ಅಂಜಿ ಸುಮ್ಮನಾಗಿದ್ದರು. ಇನ್ನು ಕೆಲವರು ಊರು ಬಿಟ್ಟು ಓಟ ಕಿತ್ತಿದ್ದರು.

ಮತ್ತೆ ಕೆಲವು ಕುಟುಂಬಗಳು ಕಲಹದಲ್ಲಿ ಮುಳುಗಿ ಸರ್ವನಾಶವಾಗಿದ್ದವು. ತೇಜಪ್ಪನ ಸಹಕಾರದಿಂದ ಮಾತ್ರ ಸಕೀನಾಳ ಸಂಗ ಸಾಧ್ಯವೆಂದು ಉಸ್ಮಾನ್ ಸಾಹೇಬ್ ತೀರ್ಮಾನಿಸಿದ್ದ. ಉಸ್ಮಾನ್ ತೇಜಪ್ಪ ಮತ್ತಿಬ್ಬರು ಪ್ರಭಾವಿ ಮರಿ ಪುಢಾರಿಗಳು ವಾರಕ್ಕೆ ಒಂದೆರಡು ಬಾರಿ ಉಸ್ಮಾನ್ ತೋಟದ ಮನೆಯಲ್ಲಿ ಅಡ್ಡೆ ಹಾಕುತ್ತಿದ್ದರು. ರಾತ್ರಿ ಊರೆಲ್ಲ ಮಲಗಿದ ಮೇಲೆ ಇವರ ಪಾರ್ಟಿಗಳು ಶುರುವಾದರೆ ಬೆಳಗಿನ ಜಾವದವರೆಗೆ ಅವು ಸಾಂಗೋಪಾಂಗವಾಗಿ ಜರುಗುತ್ತಿದ್ದವು.

ಸಕೀನಾಳ ಮೈಸಿರಿಯನ್ನು ಜಿದ್ದಿಗೆ ಬಿದ್ದವರಂತೆ ವರ್ಣಿಸುವುದು, ಅವಳನ್ನು ತಮ್ಮ ಬಲೆಗೆ ಕೆಡವಿಕೊಳ್ಳುವ ಮಾರ್ಗೋಪಾಯಗಳ ಬಗ್ಗೆ ಚರ್ಚಿಸುವುದು, ಅವಳು ದಕ್ಕುತ್ತಿಲ್ಲವೆಂದು ಕೊರಗುತ್ತ ಮತ್ತಷ್ಟು ವಿಸ್ಕಿ, ರಮ್ಮು ಕುಡಿಯುವುದು ಮಾಡುತ್ತಿದ್ದರು. ಸಕೀನಾ ಸಿಗದೆ ಹೋದಷ್ಟೂ ಇವರ ತಹತಹ, ಅಲಭ್ಯವಾಗುತ್ತಿದ್ದಾಳೆ ಎನಿಸಿದಷ್ಟೂ ಅವಳನ್ನು ಪಡೆಯಲೇಬೇಕೆಂಬ ಹಪಾಪಿತನ ಹೆಚ್ಚುತ್ತ ಹೋಯಿತು. ಅವಳನ್ನು ಪಡೆಯಲು ಹಿಂಸೆಗೂ ಹಿಂಜರಿಯಬಾರದೆಂದು ಅವರು ಸಂಕಲ್ಪಿಸಿಕೊಂಡರು.

ಉಸ್ಮಾನ್ ಸಾಹೇಬರ ತೋಟದ ಮನೆ ದೊಡ್ಡದಾಗಿದ್ದು ಗ್ರಾಮದಿಂದ ಅರ್ಧ ಕಿಲೋಮೀಟರ್‌ನಷ್ಟು ದೂರದಲ್ಲಿತ್ತು. ಅಲ್ಲಿ ಒಂದು ನರಪಿಳ್ಳೆಯೂ ಸುಳಿದಾಡುವಂತಿರಲಿಲ್ಲ. ಅಲ್ಲಿ ನಿಶ್ಚಿತವಾಗಿ ಯಾರೊಬ್ಬರು ವಾಸಿಸದಿದ್ದರೂ ಸಹ ಒಂದು ಕುಟುಂಬಕ್ಕೆ ಬೇಕಾದ ಎಲ್ಲಾ ಸೌಕರ್ಯಗಳನ್ನು ಏರ್ಪಡಿಸಲಾಗಿತ್ತು. ಕುಡಿದದ್ದು ಹೆಚ್ಚಾದರೆ ಸ್ನೇಹಿತರೆಲ್ಲರೂ ಅಲ್ಲಿಯೇ ಸ್ವಸ್ಥ ಮಲಗಿ ಬಿಡುತ್ತಿದ್ದರು. ಗುಂಪಿನ ಸದಸ್ಯರೆಲ್ಲರೂ ಸೇರಿಕೊಂಡರೆ ಪಾರ್ಟಿಗಳು ರಂಗೇರಿ, ಸುಖವನ್ನು ಅದರ ಕತ್ತುಪಟ್ಟಿ ಹಿಡಿದು ಅನುಭವಿಸುತ್ತಿದ್ದರು.

ಅವರೆಲ್ಲ ಬೇರೆಬೇರೆ ತತ್ವ ಸಿದ್ಧಾಂತಗಳ ರಾಜಕೀಯ ಪಾರ್ಟಿಗಳಿಗೆ ಸೇರಿದ್ದರೂ ಅದೆಲ್ಲ ಗೌಣವಾಗಿ ಮತ್ತಿನ ಸುಖದಲ್ಲಿ ಮತ್ತು ಸಕೀನಾಳನ್ನು ಅನುಭವಿಸುವ ಕನಸಿನಲ್ಲಿ ತೇಲುತ್ತಿದ್ದರು.ಅದು ಭಾನುವಾರದ ಸಂಜೆ. ಸಕೀನಾಳು ಉಸ್ಮಾನ್ ಸಾಹೇಬರ ಮನೆಯ ಬಿಡುವಿರದ ಕೆಲಸ ಕಾರ್ಯಗಳಲ್ಲಿ ಮುಳುಗಿ ಹೋಗಿದ್ದಳು. ಮನೆಯ ಕೊಠಡಿಯೊಂದರಲ್ಲಿ ಉಸ್ಮಾನ್ ಸಾಹೇಬ್ ಮತ್ತು ಅವನ ಪಟಾಲಂ ಸೇರಿಕೊಂಡು ಏನೋ ಮಸಲತ್ತು ನಡೆಸಿದ ಹಾಗಿತ್ತು.

ಎರಡು ಮೂರು ಸಲ ಚಹ ತಂದುಕೊಡಲು ಹೇಳಿದರೂ ತಾನು ಹೋಗದೆ ಬೇರೆ ಆಳುಗಳನ್ನು ಕಳುಹಿಸಿ ಸಕೀನಾ ತಪ್ಪಿಸಿಕೊಂಡಿದ್ದಳು. ಅಂದು ಮಧ್ಯಾಹ್ನ ತನ್ನ ಗುಡಿಸಲು ಮನೆಗೆ ಹೋಗಿ ಅತ್ತೆಗೆ ಸ್ವಲ್ಪ ಗಂಜಿ ಕುಡಿಸಿ ಬಂದಿದ್ದಳು. ಅತ್ತೆಯ ಪರಿಸ್ಥಿತಿ ತೀರಾ ಚಿಂತಾಜನಕವಾಗಿದ್ದುದರಿಂದ ಅವಳು ದುಗುಡದಿಂದ ತುಂಬಿದ್ದಳು. ಅವಳ ಮಗು ಹಿಂದೆ ಮುಂದೆ ಓಡಾಡಿಕೊಂಡಿತ್ತು. ಖಾತೂನ್‌ಬಿಯು ಗುಡಿಸಲು ಮನೆಯಲ್ಲಿ ಹತ್ತಿರವಿದ್ದೂ ಸ್ಪರ್ಶಿಸದ ಸಾವಿಗಾಗಿ ಕನವರಿಸುತ್ತಿದ್ದಳು.

ಹೈದರನು ಮಟನ್ ಸ್ಟಾಲ್‌ನ ಕೆಲಸಗಳನ್ನೆಲ್ಲಾ ಮುಗಿಸಿ ಹಯಾತ್ ಸಾಹೇಬರ ಎದುರು ದೈನ್ಯತೆಯಿಂದ ತೆರಳಲು ಅನುಮತಿ ಹಾಗೂ ವಾರದ ಬಟವಾಡೆ ಪಡೆದು ಗುಜರಿಯಲ್ಲಿ ಕೊಂಡ ಸೈಕಲ್ಲೊಂದನ್ನು ಮನೆ ಕಡೆ ತುಳಿಯುತ್ತಿದ್ದ. ಅದರ ಪೆಡಲ್ಲೊಂದು ಮುರಿದು ಹೋಗಿ ಬರೀ ಕಂಬಿ ಮಾತ್ರ ಇದ್ದು ತುಳಿಯುವಾಗ ಪಾದಕ್ಕೆ ಒತ್ತಿ ವಿಪರೀತ ನೋವಾಗುತ್ತಿತ್ತು.

ಚಪ್ಪಲಿ ಹಾಕಿದರೆ ನಿನಗೆ ಒಳ್ಳೆಯದಾಗುವುದಿಲ್ಲವೆಂದು ಅವನಿಗೆ ಯಾರೋ ಹೇಳಿದ್ದರು, ಅದನ್ನು ಶಿರಸಾವಹಿಸಿ ಪಾಲಿಸುತ್ತಿದ್ದ ಹೈದರ್ ಯಾವಾಗಲೂ ಬರಿಗಾಲಲ್ಲೇ ಇರುತ್ತಿದ್ದ.ಹೈದರನು ಸಂಜೆಯ ಮಬ್ಬುಗತ್ತಲಿನಲ್ಲಿ ತನ್ನ ಗುಡಿಸಲು ಮನೆ ಪ್ರವೇಶಿಸಿದಾಗ ತನ್ನ ಹೆಂಡತಿ–ಮಗಳು ಇನ್ನೂ ಉಸ್ಮಾನ್ ಸಾಹೇಬರ ಮನೆಯಿಂದ ಹಿಂದಿರುಗಿರಲಿಲ್ಲ. ಚಿಮಣಿ ಬುಡ್ಡಿ ಹಚ್ಚಿಟ್ಟ.

ಮೂಲೆಯೊಂದರಲ್ಲಿ ಮುಲುಗುತ್ತಾ ಮಲಗಿದ್ದ ತಾಯಿಗೆ ಒಂದು ಬ್ರೆಡ್ಡಿನ ತುಂಡನ್ನು ನೀರಿನಲ್ಲದ್ದಿ ಬಾಯೊಳಗಿಟ್ಟ. ಹೋದವಾರಕ್ಕಿಂತ ನಿತ್ರಾಣಳಾಗಿದ್ದ ಅಮ್ಮನ ಬಗ್ಗೆ ಅವನಿಗೆ ಖೇದವೆನಿಸಿತು. ಖಾತೂನಮ್ಮನು ಕಣ್ಣುಗಳಲ್ಲಿ ಕರುಣೆ ತುಂಬಿಕೊಂಡು ಹೈದರ್‌ನನ್ನು ನೋಡಿದಳು. ಇಬ್ಬರ ಕಣ್ಣುಗಳೂ ಮಂಜು ಮಂಜಾದವು. ಇದ್ದಕ್ಕಿದ್ದಂತೆ ಹೈದರ್ ತನ್ನ ಎರಡು ಹಸ್ತಗಳನ್ನು ಎದೆಯ ಮೇಲೆ ಬೊಗಸೆ ರೀತಿಯಲ್ಲಿಟ್ಟುಕೊಂಡು ಅಲ್ಲಾಹುವಿನಲ್ಲಿ ತಾಯಿಗೋಸ್ಕರ ದುವಾ ಮಾಡಿದ.

ಅವನ ಮುಗ್ದ ಜೀವಕ್ಕೆ ಸ್ವಲ್ಪ ಸಮಾಧಾನವೆನಿಸಿತು. ಮಾತುಗಳು ವ್ಯರ್ಥವೆನಿಸಿದವು. ತಾಯಿಯ ಮುಖ ಕೈ ಕಾಲುಗಳನ್ನು ಮುಟ್ಟಿ ಹಗುರವಾಗಿ ಸವರಿದ. ಅವಳ ಕೊನೆಯ ಕ್ಷಣಗಳಿರಬೇಕೆನಿಸಿತು. ಒಂದು ಗಂಧದ ಕಡ್ಡಿಯನ್ನು ಹಚ್ಚಿಟ್ಟ. ಸಾಹುಕಾರರ ಮನೆಯಿಂದ ಕೂಡಲೇ ಸಕೀನ ಮತ್ತು ಮಗಳನ್ನು ಕರೆದುಕೊಂಡು ಬರಲು ಸೈಕಲ್ ಏರಿ ಹೊರಟ. ಆ ಕ್ಷಣದಲ್ಲಿ ಯಾರೇ ನೋಡಿದ್ದರೂ ಅವನನ್ನು ಮಂದಮತಿ ಎಂದಾಗಲೀ ಬುದ್ಧು ಎಂದಾಗಲೀ ಹೇಳಲು ಸಾಧ್ಯವಿರಲಿಲ್ಲ.

ಸಾಹುಕಾರರ ಮನೆಗೆ ಹೋಗುವಾಗ ಊರಬಾಗಿಲಲ್ಲಿ ಅನೇಕ ಜನ ಗ್ರಾಮಸ್ಥರು ನೆರೆದಿದ್ದರು. ಬೀಡಿ ಕೊಳ್ಳಲು ಬಂದವರಾರೋ, ದಿನಸಿ ಕೊಳ್ಳಲು ಬಂದವರಾರೋ, ದಿನವಿಡೀ ದುಡಿದು ಸಾಕಾಗಿ ಸಿಕ್ಕ ಸ್ನೇಹಿತರ ಜೊತೆ ಹರಟಿ ಹಗುರಾಗಲು ಬಂದವರಾರೋ, ಹೊತ್ತು ಇಳಿದಿದ್ದರಿಂದ ಪರಮಾತ್ಮನ ಸೇವೆಗೆ ಬಂದವರಾರೋ? ಹೀಗಿ ತರಹೇವಾರಿ ಜನ ಅಲ್ಲಿದ್ದರು.

ಸೈಕಲ್ ಏರಿ ಸಾಗುತ್ತಿದ್ದ ಹೈದರ್‌ನನ್ನು ಕೆಲವರು ಹಿಡಿದು ನಿಲ್ಲಿಸಿ ಎಂದಿನಂತೆ ತಮಾಷೆ ಮಾಡತೊಡಗಿದರು. ಸಿಟ್ಟೇ ಬರದ ಹೈದರ್ ಎಷ್ಟು ರೇಗಿಸಿದರೂ ರೇಗದೆ ತಡವಾಗುತ್ತಿದೆಯೆಂದು ಚಡಪಡಿಸತೊಡಗಿದ. ಆದರೆ ಅವನನ್ನು ಬಲ್ಲವರು ಅಷ್ಟು ಸುಲಭದಲ್ಲಿ ಬಿಟ್ಟುಕೊಡಲು ತಯಾರಿರಲಿಲ್ಲ. ರಸ್ತೆಯ ಪಕ್ಕದಲ್ಲಿಯೇ ಇದ್ದ ದೇವಸ್ಥಾನದ ಕಟ್ಟೆಯ ಮೇಲೆ ಎಳೆದು ಕೂಡಿಸಿಕೊಂಡವರೇ, ‘ಮಕ್ಳು ಹೆಂಗಾಗ್ತವಲೇ ಹೈದ್ರ’ ಎಂದು ಪೋಲಿ ಪ್ರಶ್ನೆ ಎಸೆದರು.‘ಥೂ ಹೋಗ್ರಲೇ ಹೋಗ್ರಿ’ ಎಂದು ಕೊಸರಿಕೊಂಡು ಸೈಕಲ್ ಏರಲು ಅಣಿಯಾದ ಹೈದರ್.

ಅಷ್ಟರಲ್ಲಿ ಎಲ್ಲಿಂದಲೋ ಧುತ್ತನೆ ಅವತರಿಸಿದ ಗುಂಪೊಂದು ಸೈಕಲನ್ನು ಅತ್ತ ದೂಡಿ ಹೈದರ್‌ನನ್ನು ಹಿಡಿದು ಬಾರಿಸತೊಡಗಿತು. ಹೈದರ್‌ನ ಮೇಲೆರಗಿ ಬಂದವರೆಲ್ಲ ಪರ ಊರಿನವರೂ ಅಪರಿಚಯಸ್ಥರೂ ಆಗಿದ್ದರು. ಇದುವರೆಗೆ ಹೈದರ್‌ನನ್ನು ರೇಗಿಸುತ್ತಿದ್ದವರೆಲ್ಲ ಆಗಂತುಕರನ್ನು ಹಿಡಿಯಲೂ ಹೊಡೆಯಲೂ ಪ್ರಯತ್ನಿಸಿದರು. ಆದರೆ ಆಗಂತುಕರು ದೊಣ್ಣೆಗಳನ್ನು ಹಿಡಿದು ಸಶಸ್ತ್ರರಾಗಿ ಬಂದಿದ್ದರು ಮತ್ತು ಮಿಂಚಿನ ವೇಗದಲ್ಲಿ ದಾಳಿ ನಡೆಸಿದ್ದರು.

ಇದರಿಂದ ಹೈದರ್‌ನ ಕಡೆಯವರಿಗೆ ಪ್ರತಿಯಾಗಿ ಏನನ್ನೂ ಮಾಡಲಾಗಲಿಲ್ಲ. ಅಷ್ಟೇ ಅಲ್ಲ, ಅವರಲ್ಲಿ ಒಬ್ಬಿಬ್ಬರಿಗೆ ಏಟು ಸಹ ಬಿದ್ದವು. ಅವರಿಗೆಲ್ಲ ಕಕ್ಕಾಬಿಕ್ಕಿಯಾಯಿತು. ಹೈದರ್‌ನ ಸೈಕಲ್ ನೆಲಕ್ಕೆ ಬಿದ್ದ ಕೂಡಲೇ ಅದರ ಹ್ಯಾಂಡಲ್‌ಗೆ ಸಿಕ್ಕಿಸಿದ ಚೀಲದಿಂದ ಒಂದು ಬಿಸ್ಕತ್ ಪೊಟ್ಟಣ ಮತ್ತು ಪ್ಲಾಸ್ಟಿಕ್ ಕವರ್ ಈಚೆ ಬಂದವು. ಪ್ಲಾಸ್ಟಿಕ್ ಕವರ್‌ನ ಒಳಗಿಂದ ಮಾಂಸದ ತುಂಡುಗಳು ಎಗರಿ ಬಿದ್ದವು.

ಮಾಂಸದ ತುಂಡುಗಳು ಕಾಣಿಸಿದ್ದೇ ತಡ ಆಗಂತುಕನೊಬ್ಬ ‘ನೋಡ್ರಿ, ಈ ಲೋಫರ್ ಮಾಡಿರುವ ಕೆಲಸ, ನಮ್ಮ ದೇವಸ್ಥಾನಕ್ಕೆ ದನದ ಮಾಂಸ ತಂದು ಅಪವಿತ್ರಗೊಳಿಸಲು ಸ್ಕೆಚ್ ಹಾಕಿದ್ದಾನೆ. ಏಯ್ ಸಾಬಿಸೂಳೆಮಗನೆ…’ ಎಂದು ಅಬ್ಬರಿಸುತ್ತ ಹೈದರ್‌ನ ಮೇಲೇರಿ ಹೋಗಿ ಮತ್ತೆ ಹೊಡೆದ. ಹೈದರ್‌ನ ಪರವಾಗಿದ್ದ ಗ್ರಾಮದ ಜನ ಗರಬಡಿದಂತೆ ತಟಸ್ಥರಾದರು. ಅವರಿಗೆ ಹೈದರ್ ಮಾಂಸವನ್ನು ಹಿಡಿದುಕೊಂಡು ಓಡಾಡುತ್ತಿರುವುದು ಪರಮಾಶ್ಚರ್ಯವಾಗಿಯೂ ಆಘಾತಕಾರಿಯಾಗಿಯೂ ಕಂಡಿತು.

ಹೈದರನು ದನದ ಮಾಂಸವನ್ನು ಸೈಕಲಲ್ಲಿ ತಂದಿರುವ ಉದ್ದೇಶವಾದರೂ ಏನು? ಅವನು ದಿನವೂ ಕೆಲಸಕ್ಕೆ ಹೋಗುವ ಸಂಪಿಗೆ ಗ್ರಾಮದಲ್ಲಿ ಯಾವ ತರಹದ ಜನರ ಸಂಪರ್ಕದಲ್ಲಿದ್ದಾನೆ? ನೋಡಲು ಏನೂ ಅರಿಯದ ಮುಗ್ಧ! ಗುಂಪಿನಲ್ಲಿ ಯಾರೋ ಕೂಗಿದರು– ಉಗ್ರಗಾಮಿಗಳು ಏನೂ ಅರಿಯದವರಂತೆ ತೋರಿಸಿಕೊಳ್ಳುತ್ತಾರೆ.

ಅಷ್ಟರಲ್ಲಿ ಕತ್ತಲಾಗಿ ಮಂಕು ಬೆಳಕಿನಲ್ಲಿ ಒಬ್ಬರ ಮುಖ ಒಬ್ಬರಿಗೆ ಸರಿಯಾಗಿ ಕಾಣಿಸುತ್ತಿರಲಿಲ್ಲ, ಅಷ್ಟು ಜನರ ನೂಕುನುಗ್ಗಲು ಮತ್ತು ಎಳೆದಾಟದಲ್ಲಿ ವಿಪರೀತ ಧೂಳು ಎದ್ದು ಕೆಲವರು ಕೆಮ್ಮುತ್ತಿದ್ದರು. ಮತ್ತಾರೋ ಕೂಗಿದರು– ’ದಿನವೂ ಪೇಪರಲ್ಲಿ ಇದೇ ಸುದ್ದಿ. ಹೈದ್ರ ಉಗ್ರಗಾಮಿಯೇ ಇರಬೇಕು’.

ಒಬ್ಬ ಆಗಂತುಕ ‘ಉಗ್ರಗಾಮಿಗಳು ಸಿಟಿಗಳನ್ನು ಬಿಟ್ಟು ಹಳ್ಳಿಗಳತ್ತ ಹೊರಟಿದ್ದಾರೆ’, ಮತ್ತೊಬ್ಬ ಆಗಂತುಕ ‘ಹೈದ್ರ ಇವತ್ತು ಸೈಕಲಲ್ಲಿ ಮಾಂಸ ತಂದಿದ್ದಾನೆ, ನಾಳೆ ಬಾಂಬು ಕಟ್ಟಿಕೊಂಡು ಬರುತ್ತಾನೆ’.ಜನರೆಲ್ಲ ಹಿಂದೆ ಸರಿದರು, ಹೈದ್ರನ ದೊಗಳೆ ಇಜಾರದಲ್ಲಿ ಬಾಂಬಿದ್ದರೆ! ಎಂದು ಅವರಿಗೆಲ್ಲ ದಿಗಿಲಾಯಿತು.

ಹೈದರ್‌ನ ಟೋಪಿ ನೆಲಕ್ಕೆ ಬಿದ್ದು ಕಾಲ್ತುಳಿತಕ್ಕೆ ಸಿಕ್ಕು ಮಣ್ಣಾಗಿ ಹೋಗಿತ್ತು. ಎಳೆದಾಡಿದ್ದರಿಂದ ಗುಂಡಿಗಳೆಲ್ಲ ಕಿತ್ತು ಹೋಗಿ ಅಂಗಿ ಜೋತಾಡುತ್ತಿತ್ತು. ಬಟ್ಟೆ ಗಡ್ಡ ಮೀಸೆಗಳೆಲ್ಲ ಮಣ್ಣಾಗಿದ್ದವು. ಯಾರೋ ಕಡ್ಡಿ ಗೀರಿ ಬೀಡಿ ಹಚ್ಚಿದರು. ಹೈದರ್‌ನ ಒಂದೆರಡು ಹಲುಗಳು ಬಿದ್ದು ತುಟಿ ಊದಿಕೊಂಡು ರಕ್ತ ಜಿನುಗುತ್ತಿತ್ತು. ಅವನ ಕಣ್ಣುಗಳು ಭಯ, ಅವಮಾನ ಮತ್ತು ನೋವಿನಿಂದ ತುಂಬಿ ಹೋಗಿದ್ದವು.

ಕೈ ಮುಗಿಯುತ್ತ ನಿಂತ ಅವನು ಆಡಿದ ಒಂದೆರಡು ಮಾತುಗಳಲ್ಲಿ ಸ್ಪಷ್ಟತೆಯಾಗಲೀ, ಸುಸಂಬದ್ಧತೆಯಾಗಲೀ ಇರಲಿಲ್ಲ ಅವನ ಪುಟ್ಟ ಮುಗ್ಧ ನಿಷ್ಕಳಂಕ ಲೋಕ ಅಲ್ಲೊಲ್ಲಕಲ್ಲೋಲವಾಗಿತ್ತು, ಘಾಸಿಗೊಳಗಾಗಿತ್ತು.ಆಗ ಎಲ್ಲಿಂದಲೋ ಒಂದು ಜೀಪು ಬಂದಿತು, ಆಗಂತುಕರು ಹೈದರನನ್ನು ಎತ್ತಿ ಜೀಪಿನಲ್ಲಿ ತುರುಕಿ, ತಾವೂ ಏರಿ, ಕ್ಷಣಾರ್ಧದಲ್ಲಿ ಮಾಯವಾದರು. ಆಗಂತುಕರು ‘ಪೊಲೀಸ್ ಸ್ಟೇಷನ್‌ಗೆ ನಡೆ’ ಎಂದು ಕೂಗುತ್ತಿದ್ದರು.

ಆಗಂತುಕರು ಯಾರು? ಜೀಪು ಯಾರದ್ದು? ಜೀಪು ಹೋದದ್ದು ಎಲ್ಲಿಗೆ? ಮುಂತಾದ ಬಿಡಿಸಲಾರದ ಪ್ರಶ್ನೆಗಳನ್ನು ಹೊತ್ತು ಜನರೆಲ್ಲ ಚದುರಿದರು. ಹೈದರ್‌ನ ಪರವಹಿಸಿ ಆಗಂತುಕರನ್ನು ತದುಕಿದ್ದವರು ಕೂಡಲೇ ಓಡಿಹೋಗಿ ಎಲ್ಲೆಲ್ಲೋ ಅವಿತುಕೊಂಡರು. ವಾರದ ತನಕ ಮನೆಯ ಕಡೆ ತಲೆ ಹಾಕದೇ ಇರಲು ನಿರ್ಧರಿಸಿಕೊಂಡಿದ್ದರು.

ಊರೆಲ್ಲ ಸುದ್ದಿ ಹಬ್ಬಿತು, ಹೈದರ್ ಒಬ್ಬ ಉಗ್ರಗಾಮಿ, ಹಳ್ಳಿಗೆ ನುಗ್ಗಿ ಹೈದರ್‌ನನ್ನು ಪೊಲೀಸರು ಒದ್ದು ಎತ್ತಲೋ ಒಯ್ದರು… ಇತ್ಯಾದಿ.ಆದರೆ ಅದು ಉಸ್ಮಾನ್ ಸಾಹೇಬ್, ತೇಜಪ್ಪ ಮುಂತಾದವರು ನಿರ್ದೇಶಿಸಿದ್ದ ನಾಟಕ ಎಂಬುದು ಯಾರಿಗೂ ಗೊತ್ತಾಗಲಿಲ್ಲ. ಅಸಲಿ ವಿಷಯವೆಂದರೆ ಪ್ರತಿ ಭಾನುವಾರ ಹೈದರನು ಮಟನ್ ಸ್ಟಾಲ್‌ನಿಂದ ಕೆಲಸ ಮುಗಿಸಿ ಮನೆಗೆ ಬರುವಾಗ ಹಯಾತ್ ಸಾಹೇಬರು ವಾರದ ಕೂಲಿ ಕೊಟ್ಟು ಜೊತೆಗೆ ಒಂದು ಕೇಜಿಯಷ್ಟು ಮಾಂಸವನ್ನು ಅಕ್ಕರೆಯಿಂದ ಕೊಟ್ಟು ಕಳುಹಿಸುತ್ತಿದ್ದರು.

ಹೈದರನು ತನ್ನ ಪ್ರೀತಿಯ ತಾಯಿ, ಹೆಂಡತಿ, ಮಗಳಿಗೆ ಮಾಂಸದೂಟ ಮಾಡಿಸುವ ಆಸೆಯಲ್ಲಿ ಮನೆಗೆ ಬರುತ್ತಿದ್ದನು. ಹಾಗೆಯೇ ಮಗಳಿಗೆ ಬಿಸ್ಕತ್ತು ತರುವುದನ್ನು ಮರೆಯುತ್ತಿರಲಿಲ್ಲ. ಈ ದಿನ ಮನೆಗೆ ಬಂದಾಗ ತಾಯಿಯ ಅನಾರೋಗ್ಯದ ಗಡಿಬಿಡಿಯಲ್ಲಿ ಹೈದರನು ಮಾಂಸವಿದ್ದ ಚೀಲವನ್ನು ಮನೆಯೊಳಗಿಡದೆ ಸೈಕಲ್ಲಿನ ಹ್ಯಾಂಡಲ್‌ನಲ್ಲಿಯೇ ಉಳಿದುಬಿಟ್ಟಿತ್ತು. ಅದೇ ಕುರಿ ಮಾಂಸ ಎಲ್ಲರಿಗೂ ದನದ ಮಾಂಸವಾಗಿ ಸಾಕ್ಷಿ ಒದಗಿಸಿತ್ತು.

ಸಕೀನಾಳಿಗೆ ಸುದ್ದಿಮುಟ್ಟಿ ಗಾಬರಿಯಲ್ಲಿ ಅಳುತ್ತ ಊರಬಾಗಿಲಿಗೆ ಬಂದಾಗ ಜೀಪು ಧೂಳೆಬ್ಬಿಸಿಕೊಂಡು ಹೊರಟುಹೋಗಿತ್ತು. ಯಾರಿಗೂ ಸರಿಯಾದ ಮಾಹಿತಿ ಗೊತ್ತಿರಲಿಲ್ಲ. ಹೈದರ್‌ನನ್ನು ಹೊಡೆದದ್ದು ಹೊತ್ತೊಯ್ದದ್ದು ಪೊಲೀಸರೋ ಮತ್ತ್ಯಾರೋ? ಒಯ್ದದ್ದಾದರೂ ಎಲ್ಲಿಗೆ? ಮಾಂಸವನ್ನು ದೇವಸ್ಥಾನದೊಳಗೆ ಹಾಕುವುದು ಮಗುವಿನ ಮನಸ್ಸಿನ ಹೈದರ್‌ಗೆ ಸಾಧ್ಯವೇ? ಅಂಥಹ ಕೆಲಸ ಹೈದರ್‌ನ ಊಹೆಗೂ ನಿಲುಕದ ವಿಷಯವಲ್ಲವೇ? ಸಿಕ್ಕಾಪಟ್ಟೆ ಹೊಡೆದಿದ್ದಾರಂತೆ, ಕೈಕಾಲು ಮುರಿದಿದ್ದರೇನು ಗತಿ? ಯಾಲ್ಲಾ!.

ಕೈಯಲ್ಲಿಯ ಮಗು ಏನೋ ಅನಾಹುತವಾಗಿರುವ ವಾಸನೆ ಹತ್ತಿತೋ ಎಂಬಂತೆ ಕೊಸರಾಡುತ್ತ ಕಿರುಚತೊಡಗಿತು. ಸಕೀನಾಳ ಮನಸ್ಸಿನಲ್ಲಿ ಗೊಂದಲಗಳ ಮೆರವಣಿಗೆ ನಡೆಯುತ್ತಿತ್ತು. ಹೈದರ್‌ನನ್ನು ಕರೆತರುವವರಾರು? ಎಲ್ಲೆಂದು ಹುಡುಕುವುದು? ಮನೆಯಲ್ಲಿ ಅತ್ತೆಯ ಸ್ಥಿತಿ ಏನಾಗಿದೆಯೋ? ಸಕೀನಾಳಿಗೆ ಬದುಕು ಇಲ್ಲಿಗೆ ಮುಗಿಯಿತೆಂದೆನಿಸಿತು.ಆಗ ಸಮಯ ರಾತ್ರಿ ಒಂಬತ್ತು ಗಂಟೆಯಾಗಿತ್ತು.

ಉಸ್ಮಾನ್ ಸಾಹೇಬರ ಬಂಟನೊಬ್ಬ ಸಕೀನಾಳ ಕಿವಿಯಲ್ಲಿ– ‘ಹೈದರನು ಉಸ್ಮಾನ್ ಸಾಹೇಬರ ತೋಟದ ಮನೆಯಲ್ಲಿದ್ದಾನೆ.ಉಸ್ಮಾನ್ ಸಾಹೇಬರು, ತೇಜಪ್ಪ ಲಂಚಕೊಟ್ಟು ಅವನನ್ನು ಪೊಲೀಸರಿಂದ ಬಿಡಿಸಿಕೊಂಡು ಬಂದಿದ್ದಾರೆ. ಅವನು ಇನ್ನು ಆರು ತಿಂಗಳು ಈ ಊರಿನಲ್ಲಿ ಮುಖ ತೋರಿಸುವ ಹಾಗಿಲ್ಲವಂತೆ. ಅವನನ್ನು ಗುಲ್ಬರ್ಗದ ಉಸ್ಮಾನ್ ಸಾಹೇಬರ ನೆಂಟರ ಮನೆಗೆ ಕಳುಹಿಸಲು ಏರ್ಪಾಟು ಆಗಿದೆ. ಕೂಡಲೇ ನೀನು ಬಂದು ಹೈದರ್‌ನನ್ನು ನೋಡಿಕೊಂಡು ಬಂದು ಬಿಡು, ಹೈದರನೇ ಹೇಳಿ ಕಳುಹಿಸಿದ್ದಾನೆ’ ಎಂದು ಹೇಳಿದ.

ಸಕೀನಾಳಿಗೆ ತನ್ನ ಕಿವಿಗಳನ್ನು ನಂಬುವುದೋ ಬಿಡುವುದೋ ತಿಳಿಯಲಿಲ್ಲ, ಆಘಾತಕಾರಿಯಾಗಿ ಕಣ್ಮರೆಯಾಗಿದ್ದ ತನ್ನ ಪ್ರೀತಿಯ ಮುಗ್ಧ ಇಷ್ಟು ಸುಲಭದಲ್ಲಿ ಪ್ರತ್ಯಕ್ಷನಾದನೇ? ಕರುಣಾಳು ಅಲ್ಲಾಹುವೇ ನಿನಗೆ ಕೋಟಿ ನಮಸ್ಕಾರ. ಸಕೀನ ತೋಟದ ಮನೆಗೆ ದೌಡಾಯಿಸಿ ಬಂದಳು.

ಇಡೀ ಜಗತ್ತು ಕತ್ತಲನ್ನು ಮೆತ್ತಿಕೊಂಡು ಎಚ್ಚರ ತಪ್ಪಿ ಮಲಗಿತ್ತು. ಕೀಟಗಳ ಕಿಟರ್ ಎಂಬ ಶಬ್ದ ರಾತ್ರಿಯ ನೀರವತೆಯನ್ನು ಹಾಗೂ ಮನೆಯ ಸುತ್ತ ಗಸ್ತು ಹೊಡೆಯುತ್ತಿದ್ದ ಎರಡು ತೋಳದಂಥ ನಾಯಿಗಳ ಬೊಗಳು ಭೀಕರತೆಯನ್ನು ಹೆಚ್ಚಿಸಿದ್ದವು. ಹೊಸ ಹಾಗೂ ಭೀತಿ ಹುಟ್ಟಿಸುವ ಪರಿಸರದಲ್ಲಿ ಎತ್ತಿಕೊಂಡಿದ್ದ ಮಗು ಗಳಿಗೆಗೊಮ್ಮೆ ನಿಟ್ಟು ಬೀಳುತ್ತಿತ್ತು. ಸಕೀನಾಳಿಗೆ ತನ್ನ ಒಬ್ಬಂಟಿತನವಾಗಲೀ ಉಸ್ಮಾನ್ ತೇಜಪ್ಪರ ದುಷ್ಟತನವಾಗಲೀ ನೆನಪಿಗೆ ಬರಲಿಲ್ಲ.

ಕಳೆದುಹೋಗಿದ್ದ ತನ್ನ ನಿಷ್ಪಾಪಿ ಹೈದರ್ ಪ್ರತ್ಯಕ್ಷವಾಗಿರುವ ನಿಬ್ಬೆರಗನ್ನು, ಹಾತೊರೆಯುತ್ತಿದ್ದ ಮತ್ತು ಹಾರುತ್ತಿದ್ದ ಗುಂಡಿಗೆಯನ್ನು ಅದುಮಿಡುತ್ತ ತೋಟದ ಮನೆ ಪ್ರವೇಶಿಸಿದಳು. ಆ ಕ್ಷಣದ ಧ್ಯಾನದಲ್ಲಿದ್ದವೋ ಎಂಬಂತೆ ದೀಪಗಳು ಆರಿ ಹೋದವು. ಕಣ್ಣಿಗೆ ಕತ್ತಲು ತುಂಬಿಕೊಂಡಿದ್ದೇ ಮಗು ಚಿಟ್ಟನೆ ಚೀರಿತು. ಸಕೀನಾಳಿಗೆ ಕಾರ್ಗತ್ತಲ ಕಂದರದಲ್ಲಿ ಬಿದ್ದಂತಾಯಿತು.

ಮನೆಯೊಳಗಿಂದ ನಾಲ್ಕಾರು ಗಂಡಸರ ಧ್ವನಿಗಳು ಕೇಳಿ ಬಂದವು. ತಾನು ಮೋಸ ಹೋದದ್ದು ತಿಳಿದದ್ದೇ ಸಕೀನಾಳ ಯಾಲ್ಲಾ ಎಂಬ ಕೂಗಿಗೆ ಆ ಕಾರಿರುಳೇ ಹೆದರಿ ನಡುಗಿತು.ಇತ್ತ ಗುಡಿಸಲು ಮನೆಯಲ್ಲಿ, ಚಿಮಣಿ ಬುಡ್ಡಿಯ ಮಬ್ಬು ಬೆಳಕಿನಲ್ಲಿ ಖಾತೂನ್‌ಬಿ ತನ್ನ ಮಗ, ಸೊಸೆ, ಮೊಮ್ಮಗಳ ಒಳಿತಿಗಾಗಿ ಅಲ್ಲಾಹುವಿನಲ್ಲಿ ಬೇಡಿಕೊಳ್ಳುತ್ತ ಕೊನೆಯುಸಿರೆಳೆದು ಎಷ್ಟೋ ಹೊತ್ತಾಗಿತ್ತು.

Write A Comment