ಕನ್ನಡ ವಾರ್ತೆಗಳು

ಮೀನುಗಾರಿಕೆ ಕ್ಷೇತ್ರದ ಖಾಸಗೀಕರಣಕ್ಕೆ ಎಎಪಿ ವಿರೋಧ

Pinterest LinkedIn Tumblr

aam_adami_fishenig

ಮಂಗಳೂರು, ಫೆ.21 : ಭಾರತದ ಮೀನುಗಾರಿಕಾ ಕ್ಷೇತ್ರವನ್ನು ಬಹುರಾಷ್ಟ್ರೀಯ ಸಂಸ್ಥೆಗಳಿಗೆ ಒಪ್ಪಿಸುವ ಕೇಂದ್ರ ಸರಕಾರದ ಧೋರಣೆಗೆ ವಿರೋಧ ವ್ಯಕ್ತಪಡಿಸಿರುವ ಆಮ್ ಆದ್ಮಿ ಪಕ್ಷ ತಕ್ಷಣ ಈ ನಿರ್ಧಾರವನ್ನು ಕೈ ಬಿಡಬೇಕು ಎಂದು ಆಗ್ರಹಿಸಿದೆ. ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿದ ಪಕ್ಷದ ಮುಖಂಡ ಅಲೆಕ್ಸಾಂಡರ್ ಡಿಸೋಜ ‘ಭಾರತೀಯ ಸಮುದ್ರ ತೀರದಲ್ಲಿ ಸಾಗರದಾಳದ ಮೀನುಗಾರಿಕೆ ನಡೆಸಲು ಕೇಂದ್ರ ಸರಕಾರ ಮಾಡಿರುವ ನಿರ್ಧಾರದಿಂದ ಮೀನುಗಾರರಿಗೆ ಮತ್ತವರ ಕುಟುಂಬಸ್ಥರಿಗೆ ದೊಡ್ಡ ಹೊಡೆತ ನೀಡಿದೆ’ಎಂದರು.

ಭಾರತೀಯ ಮೀನುಗಾರರಿಗೆ ಸಾಗರದಾಳದ ಮೀನುಗಾರಿಕೆ ನಡೆಸಲುಗೊತ್ತಿಲ್ಲ, ಇದರಿಂದಾಗಿ ಅಸಂಖ್ಯಾತ ಬೆಲೆ ಬಾಳುವ ದೊಡ್ಡ ಮೀನುಗಳು ಭಾರತದ ಗಡಿಯಾಚೆಗೆ ಹೋಗುತ್ತವೆ ಎಂಬ ಅಸಂಬದ್ಧ ಕಾರಣ ನೀಡಿರುವ ಕೇಂದ್ರ ಸರಕಾರವು ವಿದೇಶಿ ಸಂಸ್ಥೆಗಳಿಂದ ಮೀನುಗಾರರಿಗೆ ಹಾಗೂ ಜಲಚರ ವಾತಾವರಣಕ್ಕೆ ಆಗಬಹುದಾದ ಹಾನಿಯ ಬಗ್ಗೆ ನಿಗೂಢ ಮೌನ ವಹಿಸಿದೆ. ಕರ್ನಾಟಕದಲ್ಲಿ 320 ಕಿ.ಮೀ. ಉದ್ದದ ಸಮುದ್ರ ತೀರವಿದ್ದು, ಇಲ್ಲಿ ಸಾವಿರಾರು ಕುಟುಂಬಗಳು ಮೀನುಗಾರಿಕೆ ನಡೆಸುತ್ತಿದೆ. ಒಂದೆಡೆ ಯಥೇಚ್ಛ ಮೀನು ಸಿಗದ ಕಾರಣ ಮೀನಿನ ಬೆಲೆ ಗಗನಕ್ಕೇರಿದೆ. ಹವಾಮಾನ ವೈಪರೀತ್ಯದಿಂದ ಅನೇಕ ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಇದಕ್ಕೆ ಸ್ಪಂದಿಸಬೇಕಾಗಿದ್ದ ಸರಕಾರ ಮೀನುಗಾರಿಕಾ ಕ್ಷೇತ್ರವನ್ನು ಖಾಸಗೀಕರಣ ಮಾಡಲು ಮುಂದಾಗಿರುವುದು ವಿಪರ್ಯಾಸ ಎಂದು ಅಲೆಕ್ಸಾಂಡರ್ ಡಿಸೋಜ ತಿಳಿಸಿದರು.

ಕೇಂದ್ರ ಸರಕಾರಕ್ಕೆ ನಿಕಟವಾಗಿರುವ ಒಬ್ಬ ಉದ್ಯಮಿಗೆ ಆಸ್ಟ್ರೇಲಿಯಾದಲ್ಲಿ ಗಣಿಗಾರಿಕೆ ನಡೆಸಲು ಆರು ಸಾವಿರ ಕೋಟಿ ಸಾಲವನ್ನು ನೀಡುವಂತೆ ಎಸ್‌ಬಿಐಗೆ ಸೂಚಿಸಿದ್ದ ಪ್ರಧಾನಿ ಮೋದಿ ಸಂಕಷ್ಟದಲ್ಲಿರುವ ಭಾರತೀಯ ಬೆಸ್ತರಿಗೆ ಅನುಕೂಲ ಕಲ್ಪಿಸಲು ಹಿಂದೇಟು ಹಾಕುವುದು ಯಾತಕ್ಕೆ? ಎಂದು ಅಲೆಕ್ಸಾಂಡರ್ ಪ್ರಶ್ನಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ರಾಜೇಂದ್ರ ಕುಮಾರ್, ರಾಘವೇಂದ್ರ ಕುಲಕರ್ಣಿ, ಶ್ರೀಧರ್, ಗುರುದೇವ್ ಉಪಸ್ಥಿತರಿದ್ದರು.

Write A Comment