ಮಂಗಳೂರುಫೆ.18 :ಬಿಲ್ಲವರ ಯೂನಿಯನ್‍ನ ಮಾತೃಸಂಘದಲ್ಲಿ ಬಿಲ್ಲವರಿಗೆ ಸದಸ್ಯತನವನ್ನು ನೀಡುವಂತೆ ಅಖಿಲ ಭಾರತ ಬಿಲ್ಲವ ಏಕೀಕರಣ ಸಮಿತಿಯ ಸಸಸ್ಯರು ಕುದ್ರೋಳಿ ನಾರಾಯಣ ಗುರು ಕಾಲೇಜು ಬಳಿ ಬಾಯಿಗೆ ಕಪ್ಪುಪಟ್ಟಿ ಧರಿಸಿ ಮೌನ ಪ್ರತಿಭಟನೆ ನಡೆಸಿದರು.
ಮಂಗಳೂರಿನಲ್ಲಿ ನಡೆಯುತ್ತಿರುವ ಅಖಿಲ ಭಾರತ ಬಿಲ್ಲವ ಯೂನಿಯನ್‍ನ ಮಹಾಸಭೆ ಮತ್ತೆ ವಿವಾದಕ್ಕೀಡಾಗಿದೆ. ಕಳೆದ 22 ವರ್ಷಗಳಿಂದ ಬಿಲ್ಲವ ಯೂನಿಯನ್ ಅಧ್ಯಕ್ಷರಾಗಿರುವ ನವೀನ್ ಚಂದ್ರ ಡಿ. ಸುವರ್ಣ ತಮ್ಮ ಸ್ವಹಿತಕ್ಕೋಸ್ಕರ ಸಮುದಾಯದ ಹಿತಾಸಕ್ತಿಯನ್ನು ಬಲಿಕೊಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕುದ್ರೋಳಿ ದೇವಸ್ಥಾನದಲ್ಲಿ ಶಾಶ್ವತ ಪೂಜೆ ನಡೆಸುವ ಬಿಲ್ಲವರನ್ನು ಯೂನಿಯನ್ನಿಂದ ಹೊರಗಿಡಲಾಗಿದೆ. ಗ್ರಾಮ ಸಮಿತಿಗಳಿಗೂ ಅವಕಾಶ ನಿರಾಕರಿಸಲಾಗುತ್ತಿದೆ. ಕುಟುಂಬ ಸದಸ್ಯರು ಮತ್ತು ತಮ್ಮ ಸಿಬ್ಬಂದಿಯನ್ನು ಮಾತ್ರ ಸದಸ್ಯರನ್ನಾಗಿ ಮಾಡಿರುವ ನವೀನ್ ಚಂದ್ರ ಡಿ. ಸುವರ್ಣ ಅವರು ಹಣ ಮತ್ತು ರಾಜಕೀಯ ಪ್ರಭಾವ ಬಳಸಿ ಯೂನಿಯನ್‍ನಲ್ಲಿ ತಮ್ಮ ಪಾರಮ್ಯ ಕಾಪಾಡಿಕೊಂಡು ಬರುತ್ತಿದ್ದಾರೆ ಎಂದು ಪ್ರತಿಭಟನಕಾರರು ಆರೋಪಿಸಿದರು.
ಸದಸ್ಯತ್ವಕ್ಕೆ ಅರ್ಜಿ ನೀಡಿದರೂ ಪರಿಶೀಲನೆ ಇಲ್ಲದೆ ತಿರಸ್ಕರಿಸಲಾಗುತ್ತದೆ. ಜಿಲ್ಲೆಯಲ್ಲಿ 4 ಲಕ್ಷಕ್ಕೂ ಅಧಿಕ ಬಿಲ್ಲವರಿದ್ದಾರೆ. ಆದರೆ ಬೆರಳೆಣಿಕೆಯಷ್ಟು ಸದಸ್ಯರಿದ್ದಾರೆ. ಈ ಪರಿಸ್ಥಿತಿ ಮುಂದಿನ ದಿನದಲ್ಲಾದರೂ ಬದಲಾಗಬೇಕು. ಇಲ್ಲದಿದ್ದರೆ ತೀವ್ರ ಸ್ವರೂಪದ ಪ್ರತಿಭಟನೆ ನಡೆಸುವುದಾಗಿ ಬಿಲ್ಲವ ಕಾರ್ಯಕರ್ತರು ಎಚ್ಚರಿಕೆ ನೀಡಿದ್ದಾರೆ.
ಸಮಿತಿಯ ಪ್ರಮುಖರಾದ ದೀಪಕ್ ಕೋಟ್ಯಾನ್, ಸುರೇಶ್ ಪೂಜಾರಿ, ವಸಂತ ಪೂಜಾರಿ ಸೇರಿದಂತೆ ನೂರಕ್ಕೂ ಅಧಿಕ ಸದಸ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.