ಕನ್ನಡ ವಾರ್ತೆಗಳು

ಮಲ್ಲಿಕಟ್ಟ ಜಂಕ್ಷನ್ ಕಾಂಕ್ರಿಟ್ ರಸ್ತೆ ಕಾಮಗಾರಿಗಳಿಗೆ ಶಿಲಾನ್ಯಾಸ.

Pinterest LinkedIn Tumblr

kakanady_bus_stop_1

ಮಂಗಳೂರು,ಫೆ.17 : ನಗರದ ಸೈಂಟ್ ಆ್ಯಗ್ನೇಸ್ ವೃತ್ತದಿಂದ ಮಲ್ಲಿಕಟ್ಟ ಜಂಕ್ಷನ್ ಮತ್ತು ಕದ್ರಿ ಜಂಕ್ಷನ್‌ನಿಂದ ನಂತೂರು ಜಿಮ್ಮೀಸ್ ತನಕದ ಕಾಂಕ್ರಿಟ್ ಕಾಮಗಾರಿಗೆ ಶಾಸಕ ಜೆ.ಆರ್.ಲೋಬೊ ಸೋಮವಾರ ಗುದ್ದಲಿ ಪೂಜೆ ನೆರವೇರಿಸಿದರು.

ಆಗ್ನೇಸ್-ಮಲ್ಲಿಕಟ್ಟ ಜಂಕ್ಷನ್ ರಸ್ತೆಯನ್ನು 2013-14ನೇ ಸಾಲಿನ ಎಸ್‌ಎಫ್‌ಸಿ ಅನುದಾನದ 1.4 ಕೋಟಿ ರೂ. ವೆಚ್ಚದಲ್ಲಿ ಚತುಷ್ಪಥವಾಗಿ ಕಾಂಕ್ರಿಟೀಕರಣ ಮಾಡಲಾಗುತ್ತಿದೆ. ಈ ರಸ್ತೆಯು 255 ಮೀ. ಉದ್ದ ಹಾಗೂ 15 ಮೀ. ಅಗಲವಿರಲಿದೆ. ಎರಡೂ ಕಡೆಯಲ್ಲಿ 1.5 ಮೀ. ಅಗಲದ ಚರಂಡಿ ನಿರ್ಮಿಸಲಿದ್ದು, 60 ದಿನದಲ್ಲಿ ಮುಗಿಸಲಿದ್ದು, ಗುತ್ತಿಗೆದಾರ ಎಂ.ಜಿ.ಹುಸೇನ್ ನಿರ್ವಹಿಸಲಿದ್ದಾರೆ.

kakanady_bus_stop_2a

ಕದ್ರಿ ಜಂಕ್ಷನ್‌ನಿಂದ ನಂತೂರು ಜಂಕ್ಷನ್ ತನಕದ ರಸ್ತೆಯನ್ನು 13ನೇ ಹಣಕಾಸು ಅನುದಾನದ 1.42 ಕೋಟಿ ರೂ. ವೆಚ್ಚದಲ್ಲಿ ಚತುಷ್ಪಥವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. 240 ಮೀ. ಉದ್ದದ ರಸ್ತೆಯನ್ನು 15 ಮೀ. ಅಗಲ ಮತ್ತು 1.5 ಮೀ. ಚರಂಡಿ ಸಹಿತ ನಿರ್ಮಿಸಲಾಗುತ್ತಿದೆ. ಜಿಮ್ಮೀಸ್‌ನಿಂದ ನಂತೂರು ಜಂಕ್ಷನ್ ತನಕದ ರಸ್ತೆಯನ್ನು 2.85 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲು ಅನುಮೋದನೆ ಸಿಕ್ಕಿದ್ದು, ಶೀಘ್ರ ಟೆಂಡರ್ ಕರೆಯಲಾಗುತ್ತಿದೆ. 1.85 ಕೋಟಿ ರೂ. ವೆಚ್ಚದಲ್ಲಿ ಕದ್ರಿ ಸ್ವಾಗತ ಗೋಪುರದಿಂದ ಕದ್ರಿ ದೇವಸ್ಥಾನ ತನಕ ಕಾಂಕ್ರಿಟೀಕರಣ ಮಾಡುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಶಾಸಕ ಲೋಬೊ ಹೇಳಿದರು.

kakanady_bus_stop_3a

ಮೇಯರ್ ಮಹಾಬಲ ಮಾರ್ಲ ಮಾತನಾಡಿ, ಇಡೀ ಮಂಗಳೂರಿನ ರಸ್ತೆಯನ್ನು ವ್ಯವಸ್ಥಿತವಾಗಿ ಕಾಂಕ್ರಿಟೀಕರಣ ಮಾಡಲಾಗುತ್ತಿದೆ. ಹಣಕಾಸಿನ ಸಮಸ್ಯೆ ಇಲ್ಲದಿದ್ದರೂ ಕೆಲವು ತಾಂತ್ರಿಕ ಸಮಸ್ಯೆಯಿಂದ ವಿಳಂಬವಾಗುತ್ತಿದ್ದು, ಕಾನೂನು ಸಡಿಲಿಕೆ ಮಾಡಲು ಸರಕಾರಕ್ಕೆ ಮನವಿ ಮಾಡಲಾಗಿದೆ. ಎಲ್ಲ ಯೋಜನೆ ಅನುಷ್ಠಾನಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ ಎಂದರು.

ಕಾರ್ಪೊರೇಟರ್‌ಗಳಾದ ಸಬಿತಾ ಮಿಸ್ಕಿತ್, ನವೀನ್ ಡಿಸೋಜ, ಶಶಿಧರ ಹೆಗ್ಡೆ, ಅಖಿಲಾ ಆಳ್ವ, ಕಾಂಗ್ರೆಸ್ ಮುಖಂಡರಾದ ಪಿ.ವಿ.ಮೋಹನ್, ವಿಶ್ವಾಸ್ ಕುಮಾರ್‌ದಾಸ್ ಮತ್ತಿತರರು ಉಪಸ್ಥಿತರಿದ್ದರು. ಈ ಸಂದರ್ಭ ಮರೋಳಿ ವಾರ್ಡ್‌ನ ನೂತನ ರಸ್ತೆ ಹಾಗೂ ಕಂಕನಾಡಿಯಲ್ಲಿ ನಿರ್ಮಿಸಿರುವ ಬಸ್ ತಂಗುದಾಣವನ್ನು ಮೇಯರ್ ಮಹಾಬಲ ಮಾರ್ಲ ಉದ್ಘಾಟಿಸಿದರು.

Write A Comment