ಕನ್ನಡ ವಾರ್ತೆಗಳು

ಕುವೈತ್-ಮಂಗಳೂರು ಏರ್ ಇಂಡಿಯಾದ ಹಿಂದಿನ ಪ್ರಯಾಣ ಅವಧಿ ಜಾರಿಗೆ ಗಲ್ಫ್ ಎನ್‌ಆರ್‌ಐ ಫೋರಂ ಆಗ್ರಹ

Pinterest LinkedIn Tumblr

Gulf_Air_Press_1

ಮಂಗಳೂರು, ಫೆ. 17: ಕುವೈತ್ – ಮಂಗಳೂರು ನಡುವಿನ ಏರ್ ಇಂಡಿಯಾದ ಹಿಂದಿನ ಪ್ರಯಾಣ ಅವಧಿಯನ್ನು ಜಾರಿಗೊಳಿಸುವ ಮೂಲಕ ಅನಿವಾಸಿ ಭಾರತೀಯ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಬೇಕು ಎಂದು ಕುವೈತ್‌ನ ಗಲ್ಫ್ ಎನ್‌ಆರ್‌ಐ ಫೋರಂ ಆಗ್ರಹಿಸಿದೆ.

ಸೋಮವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಫೋರಂನ ಅಧ್ಯಕ್ಷ ಪಿ.ಬಿ. ಪಿಂಟೊ, ಪ್ರಸಕ್ತ ಪ್ರಯಾಣದ ಅವಧಿಯ ಪ್ರಕಾರ ಕುವೈತ್‌ನ ಕಾಲಮಾನದಂತೆ ಮಧ್ಯಾಹ್ನ 12:15ಕ್ಕೆ ಹೊರಡುವ ಏರ್ ಇಂಡಿಯಾ ವಿಮಾನ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಭಾರತೀಯ ಕಾಲಮಾನ ರಾತ್ರಿ 7:30ಕ್ಕೆ ತಲುಪುತ್ತಿದೆ. ಕೆಲವೊಮ್ಮೆ ವಿಳಂಬವಾಗಿ ತಲುಪುವುದರಿಂದ ರಾತ್ರಿ ಹೊತ್ತು ದೂರದ ಊರುಗಳಿಗೆ ತೆರಳಬೇಕಾದ ಪ್ರಯಾಣಿಕರು ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಹೇಳಿದರು.

Gulf_Air_Press_2

ಹಿಂದಿನ ಪ್ರಯಾಣದ ಅವಧಿಯಂತೆ ಕುವೈತ್ ಕಾಲಮಾನ ರಾತ್ರಿ 12:15ಕ್ಕೆ ಹೊರಟ ವಿಮಾನ ಮಂಗಳೂರು ನಿಲ್ದಾಣಕ್ಕೆ ಭಾರತೀಯ ಕಾಲಮಾನ ಬೆಳಗ್ಗೆ 7:15ರ ವೇಳೆಗೆ ತಲುಪುತ್ತಿತ್ತು. (ಪ್ರಯಾಣದ ಅವಧಿ ಸುಮಾರು ನಾಲ್ಕೂವರೆ ಗಂಟೆ) ರಾತ್ರಿ ಊಟ ಮಾಡಿ ವಿಮಾನವೇರುತ್ತಿದ್ದ ಪ್ರಯಾಣಿಕರು ಬೆಳಗ್ಗೆ ಚಹಾದ ವೇಳೆಗೆ ಮಂಗಳೂರು ತಲುಪಲಾಗುತ್ತಿತ್ತು. ಇದರಿಂದ ಹೆಚ್ಚಿನ ಸಮಯ ವ್ಯರ್ಥವಾಗುತ್ತಿರಲಿಲ್ಲ. ಆದರೆ ಈಗಿನ ಪ್ರಯಾಣ ಅವಧಿಯಿಂದ ತೊಂದರೆಯಾಗುತ್ತಿರುವುದರಿಂದ ಹಿಂದಿನ ಪ್ರಯಾಣದ ಅವಧಿಯನ್ನು ಜಾರಿಗೊಳಿಸಬೇಕು ಎಂದು ಈಗಾಗಲೇ ಸಂಬಂಧಪಟ್ಟವರಿಗೆ ಮನವಿ ಮಾಡಲಾಗಿದೆ ಎಂದು ಅವರು ಹೇಳಿದರು.

ಸೀಟ್ ಸೌಲಭ್ಯ ಉತ್ತಮವಾಗಿಲ್ಲ

ಕುವೈತ್‌ನಿಂದ ಮಂಗಳೂರು ನಡುವೆ ಸುಮಾರು ನಾಲ್ಕೂವರೆ ಗಂಟೆ ಕಾಲ ಕುಳಿತು ಪ್ರಯಾಣಿಸಬೇಕಾಗಿದೆ. ಆದರೆ ಏರ್ ಇಂಡಿಯಾ ವಿಮಾನದ ಸೀಟ್ ಕುಶನ್ ಹೊಂದಿಲ್ಲ. ಸೀಟ್‌ನ ಮೂವ್‌ಮೆಂಟ್ ಕೂಡಾ ಸಮರ್ಪಕವಾಗಿಲ್ಲ. ಇದರಿಂದ ಹಿರಿಯ ಪ್ರಯಾಣಿಕರು ಸೇರಿದಂತೆ ಪ್ರಯಾಣಿಕರು ಕಷ್ಟ ಪಡಬೇಕಾಗುತ್ತದೆ. ನೀಡುವ ಪ್ರಯಾಣ ದರಕ್ಕೆ ಯೋಗ್ಯವಾದ ಸೀಟು ವ್ಯವಸ್ಥೆಯನ್ನು ಏರ್ ಇಂಡಿಯಾ ಮಾಡಬೇಕು ಎಂದು ಅವರು ಆಗ್ರಹಿಸಿದರು.

Gulf_Air_Press_3

ಪ್ರಯಾಣ ದರ ಕೂಡಾ ಕಾಲದಿಂದ ಕಾಲಕ್ಕೆ ಬದಲಾಗುತ್ತಿರುತ್ತದೆ. ಕುವೈತ್‌ನಿಂದ ಮಂಗಳೂರಿಗೆ ಕೆಲವೊಮ್ಮೆ ಭಾರತೀಯ ರೂಪಾಯಿ ದರದಲ್ಲಿ 20,000 ರೂ.ಗಳಲ್ಲಿ ಪ್ರಯಾಣಿಸಬಹುದಾಗಿದ್ದರೆ, ಕೆಲವೊಮ್ಮೆ ಟಿಕೆಟ್ ದರ 40 ಸಾವಿರದಿಂದ 50,000 ರೂ.ವರೆಗೂ ತಲುಪಿರುತ್ತದೆ. ಈ ಬಗ್ಗೆ ಏರ್ ಇಂಡಿಯಾ ಗಮನ ಹರಿಸಬೇಕಾಗಿದೆ. ಕಡಿಮೆ ಸಿಬ್ಬಂದಿಯ ಹೊರತಾಗಿಯೂ ಏರ್ ಇಂಡಿಯಾ ಸಮರ್ಥವಾಗಿ ನಿರ್ವಹಿಸುತ್ತಿದೆ. ಆದರೆ ಭಾರತದಲ್ಲಿ ಡಿಜಿಸಿಎನಿಂದ ಸಮರ್ಪಕ ಬೆಂಬಲ ದೊರಕುತ್ತಿಲ್ಲ. ಕ್ರೆಡಿಟ್ ಕಾರ್ಡ್ ಪಾವತಿ ಸೌಲಭ್ಯವೂ ಸಮರ್ಪಕವಾಗಿಲ್ಲ ಎಂದು ಪಿ.ಬಿ. ಪಿಂಟೋ ಹೇಳಿದರು.

ಮೂಡ ಮಾಜಿ ಅಧ್ಯಕ್ಷ ತೇಜೋಮಯ, ಕೆಒಆರ್‌ಡಬ್ಲುಎ ಅಧ್ಯಕ್ಷ ಲೂಯಿಸ್ ಲೋಬೋ, ಎಡಪದವು ಜಿ.ಪಂ. ಸದಸ್ಯ ಜನಾರ್ದನ್ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Write A Comment